ಹಾವು ಕಚ್ಚಿ ಸಾಯುವವರ ಸಂಖ್ಯೆಯಲ್ಲಿ ಭಾರತವೇ ಟಾಪ್; ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಇಲ್ಲಿದೆ ಮಾಹಿತಿ
ಭಾರತದಲ್ಲಿ ಹಾವು ಕಡಿತದಿಂದ ಸಾಯುವುವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದ್ದು, ಕಳವಳಕ್ಕೆ ಕಾರಣವಾಗಿದೆ. ಹಾವು ಕಚ್ಚಿದ ತಕ್ಷಣ ನಾವು ಅನುಸರಿಸುವ ಕೆಲಸ ಕ್ರಮಗಳು ಸಾವಿಗೆ ಕಾರಣವಾಗುತ್ತಿದೆ. ಹಾಗಾದರೆ ಹಾವು ಕಚ್ಚಿದ ತಕ್ಷಣ ಏನು ಮಾಡಬಾರದು ನೋಡಿ.
ಭಾರತದಲ್ಲಿ ಹಾವು ಕಚ್ಚುವುದರಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಷಪೂರಿತ ಹಾವು ಕಚ್ಚಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಗಳು ಸಾಯಬಹುದು. ಇನ್ನೂ ಕೆಲವು ಹಾವುಗಳು ಕಚ್ಚಿದ ನಂತರ ಕೆಲವು ಗಂಟೆಗಳ ಕಾಲ ಬದುಕಿ ಉಳಿಯುವ ಸಾಧ್ಯತೆ ಇದೆ. ಅದಕ್ಕೆ ಹಾವು ಕಚ್ಚಿದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.
ಆದರೆ ನಮ್ಮ ದೇಶದಲ್ಲಿ ಜನರು ಸ್ವಯಂ ಚಿಕಿತ್ಸೆಯ ಮೇಲೆ ಹೆಚ್ಚು ಗಮನಹರಿಸುತ್ತಾರೆ. ನಮ್ಮಲ್ಲಿ ಅನುಸರಿಸುವ ಕೆಲವು ಕ್ರಮಗಳು ಹಾವು ಕಚ್ಚಿದ ನಂತರ ಪ್ರಾಣ ಉಳಿಯುವ ಬದಲು ಪ್ರಾಣ ಹೋಗುವಂತೆ ಮಾಡುತ್ತಿದೆ. ಹಾವು ಕಚ್ಚಿದಾಗ ಬಹುತೇಕರು ಅನುಸರಿಸುವ ಈ ಕ್ರಮಗಳು ಪ್ರಾಣ ಹೋಗಲು ಕಾರಣವಾಗಬಹುದು ಎಚ್ಚರ. ಆ ಕಾರಣಕ್ಕೆ ತಪ್ಪಿಯೂ ಹಾವು ಕಚ್ಚಿದಾಗ ಈ ಕೆಲಸಗಳನ್ನು ಮಾಡಬಾರದು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ 54 ಲಕ್ಷದಷ್ಟು ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಇದರಲ್ಲಿ ಹಲವರು ಸಾವನ್ನಪ್ಪುತ್ತಾರೆ. ಏಷ್ಯಾದಲ್ಲೇ ಅತಿ ಹೆಚ್ಚು ಜನ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಏಷ್ಯಾದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವವರನ್ನು ಕಾಣಬಹುದು. ವಿಶೇಷವಾಗಿ ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹಾವು ಕಡಿತದಿಂದ ಹೆಚ್ಚಿನ ಜನರು ಸಾಯುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷ 50 ಸಾವಿರ ಜನರು ಹಾವು ಕಡಿತದಿಂದ ಸಾಯುತ್ತಾರೆ. ವಿಶ್ವದಲ್ಲೇ ಅತಿ ಹೆಚ್ಚು ಹಾವು ಕಡಿತದಿಂದ ಸಾವನ್ನಪ್ಪಿದವರ ಸಂಖ್ಯೆ ಭಾರತ. ಈ ಸಂದರ್ಭದಲ್ಲಿ ಹಾವು ಕಚ್ಚಿದಾಗ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ಕುರಿತ ಮಾಹಿತಿ ಇಲ್ಲಿದೆ.
ಹಾವು ಕಚ್ಚಿದಾಗ ಏನು ಮಾಡಬೇಕು?
ಹೆಚ್ಚಿನ ಹಾವುಗಳು ಮನುಷ್ಯರಿಗೆ ಹಾನಿ ಮಾಡುವುದಿಲ್ಲ, ಆದರೆ ಕೆಲವು ಹಾವುಗಳ ವಿಷಕಾರಿಯಾಗಿರುತ್ತವೆ. ಬಹಳ ಅಪಾಯಕಾರಿಯಾಗಿರುವ ಈ ಹಾವುಗಳು ಕ್ಷಣ ಮಾತ್ರದಲ್ಲಿ ನಮ್ಮ ಪ್ರಾಣ ತೆಗೆಯಬಹುದು.
- ಮೊದಲೇ ಹೇಳಿದಂತೆ ಕೆಲವು ಹಾವುಗಳು ಕಚ್ಚಿದ ಕೆಲವು ಸಮಯದವರೆಗೆ ಬದುಕಿ ಉಳಿಯುವ ಅವಕಾಶ ಇರುತ್ತದೆ. ಅದಕ್ಕಾಗಿ ನೀವು ಹಾವು ಕಚ್ಚಿದ ತಕ್ಷಣ 108ಗೆ ಕರೆ ಮಾಡಿ, ಆಸ್ಪತ್ರೆಗೆ ಹೋಗುವ ಪ್ರಯತ್ನ ಮಾಡಿ.
- ಹಾವು ಕಚ್ಚಿದ ಜಾಗದಲ್ಲಿ ಬಣ್ಣ ಬದಲಾದರೆ, ಊದಿಕೊಂಡಂತೆ ಕಂಡರೆ ಕೂಡಲೇ ಹಾವು ಕಚ್ಚಿಸಿಕೊಂಡ ಕೈಯಿಂದ ಉಂಗುರ, ಬಳೆಗಳನ್ನು ತೆಗೆಯಬೇಕು.
- ಹಾವು ಕಚ್ಚಿದ ಸ್ಥಳದಲ್ಲಿ ಸಾಮಾನ್ಯವಾಗಿ ತೀವ್ರವಾದ ನೋವು ಇರುತ್ತದೆ. ಇದು ಹಾವು ಕೆಚ್ಚಿದೆ ಎಂದು ಗುರುತಿಸಲು ಸಹಾಯ ಮಾಡುವ ಅಂಶವೂ ಹೌದು.
- ಹಾವು ಕಚ್ಚಿದ ವ್ಯಕ್ತಿಯನ್ನು ಶಾಂತವಾಗಿ ಮಲಗಿಸಬೇಕು. ಆ ವ್ಯಕ್ತಿ ರಿಲ್ಯಾಕ್ಸ್ ಆಗುವಂತೆ ಅವನನ್ನು ಮಲಗಿಸುವುದು ಅಥವಾ ಕುಳಿತುಕೊಳ್ಳಿಸುವುದು ಉತ್ತಮ.
- ಹಾವು ಕಚ್ಚಿದ ಜಾಗವನ್ನು ಸಾಬೂನು ಅಥವಾ ನೀರಿನಿಂದ ತೊಳೆಯಬೇಕು.
- ಈ ಎಲ್ಲಾ ಹಂತ ಮಾಡುವಾಗಲೇ ಆಸ್ಪತ್ರೆಗೆ ಕರೆದೊಯ್ಯಬೇಕು.
ಇದನ್ನೂ ಓದಿ: Home Gardening: ಮನೆಯ ಸುತ್ತ ಹಾವುಗಳು ಸುಳಿಯದಂತೆ ಮಾಡಲು ಈ ಸಸ್ಯಗಳನ್ನು ಬೆಳೆಸಿ; ನೆಮ್ಮದಿಯಾಗಿರಿ
ಹಾವು ಕಚ್ಚಿದಾಗ ಏನು ಮಾಡಬಾರದು
- ಕೆಲವರು ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷ ಹೊರ ತೆಗೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಇದು ಸೋಂಕು ಹೆಚ್ಚಲು, ಕೂಡಲೇ ಸಾಯಲು ಕಾರಣವಾಗಬಹುದು.
- ಸಾವು ಕಚ್ಚಿದ ವ್ಯಕ್ತಿ ಕಾಫಿ, ಮದ್ಯಪಾನ ಸೇವನೆ ಮಾಡಬಾರದು.
- ಸಾವು ಕಚ್ಚಿದ ವ್ಯಕ್ತಿ ಪೇನ್ ಕಿಲ್ಲರ್ ಔಷಧಿಗಳನ್ನು ಸೇವಿಸಬಾರದು.
- ನೋವು ನಿವಾರಕಗಳನ್ನು ನೀಡುವುದರಿಂದ ಕಚ್ಚಿದ ಸ್ಥಳದಲ್ಲಿ ಅಧಿಕ ರಕ್ತಸ್ರಾವವಾಗಬಹುದು.
- ಹಾವು ಕಚ್ಚಿದಾಗ ನಿಮಗೆ ಯಾವ ಹಾವು ಕಚ್ಚಿದ ಎಂದು ನೆನಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಯಾಕೆಂದರೆ ಚಿಕಿತ್ಸೆಯು ಹಾವಿನ ಪ್ರಕಾರವನ್ನು ಅವಲಂಬಿಸಿರುತ್ತದೆ.
- ಹಾವು ಕಚ್ಚಿದ ಜಾಗಕ್ಕೆ ಬಿಗಿಯಾಗಿ ಬಟ್ಟೆ ಕಟ್ಟಬಾರದು. ಇದರಿಂದ ವಿಷ ದೇಹ ಒಳಗೆ ಹೋಗುವುದನ್ನು ತಪ್ಪಿಸಬಹುದು ಎಂಬ ಅಂಶ ನಮ್ಮ ಮನದಲ್ಲಿ ಇದ್ದರೂ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ.
- ಹಾವು ಕಚ್ಚಿದ ಜಾಗಕ್ಕೆ ಐಸ್‌ಕ್ಯೂಬ್‌ಗಳನ್ನು ಹಚ್ಚಬೇಡಿ.
- ಆದಷ್ಟು ಬೇಗ ವೈದ್ಯಕೀಯ ಸಹಾಯ ಪಡೆದರೆ ವ್ಯಕ್ತಿ ಬದುಕುಳಿಯುವ ಅವಕಾಶವಿದೆ.
- ಹಾವಿನ ವಿಷವನ್ನು ಹೊರ ತೆಗೆಯಲು ಹಾವು ಕಚ್ಚಿದ ಜಾಗವನ್ನು ಕತ್ತರಿಸುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅಪಾಯ ಇನ್ನಷ್ಟು ಹೆಚ್ಚಬಹುದು.
- ಹಾವು ಕಚ್ಚಿದ ಜಾಗಕ್ಕೆ ಐಸ್‌ಕ್ಯೂಬ್ ಇರಿಸಬೇಡಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ: ಭಾರತದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಿವು
ವಿಭಾಗ