ಕನ್ನಡ ಸುದ್ದಿ  /  Lifestyle  /  Health Tips Insomnia And Overweight Problem Change The Time Of Dinner After 8 Pm Health Problems Bgy

ರಾತ್ರಿ 8 ಗಂಟೆ ನಂತ್ರ ಊಟ ಮಾಡ್ತಾ ಇದೀರಾ, ಹಾಗಿದ್ರೆ ಇಂದೇ ಸ್ಟಾಪ್‌ ಮಾಡಿ; ಇದ್ರಿಂದ ಏನೆಲ್ಲಾ ಸಮಸ್ಯೆಯಾಗುತ್ತೆ ನೋಡಿ

ರಾತ್ರಿಯ ಊಟ ಶರೀರವನ್ನು ಹಗುರವಾಗಿಸುವಂತಿರಬೇಕು. ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಹೊಟ್ಟೆ ಬಿರಿಯುವಂತೆ ತಿನ್ನಬಾರದು. ಅದರಲ್ಲೂ ರಾತ್ರಿ 8 ಗಂಟೆಯ ನಂತರ ಆಹಾರ ಸೇವಿಸುವುದರಿಂದ ಹಲವಾರು ಅಪಾಯಗಳಿವೆ.

ರಾತ್ರಿ 8 ಗಂಟೆ ನಂತ್ರ ಊಟ ಮಾಡ್ತಾ ಇದೀರಾ, ಹಾಗಿದ್ರೆ ಇಂದೇ ಸ್ಟಾಪ್‌ ಮಾಡಿ; ಇದ್ರಿಂದ ಏನೆಲ್ಲಾ ಸಮಸ್ಯೆಯಾಗುತ್ತೆ ನೋಡಿ
ರಾತ್ರಿ 8 ಗಂಟೆ ನಂತ್ರ ಊಟ ಮಾಡ್ತಾ ಇದೀರಾ, ಹಾಗಿದ್ರೆ ಇಂದೇ ಸ್ಟಾಪ್‌ ಮಾಡಿ; ಇದ್ರಿಂದ ಏನೆಲ್ಲಾ ಸಮಸ್ಯೆಯಾಗುತ್ತೆ ನೋಡಿ

ನಮ್ಮ ಜೀವನಶೈಲಿ, ನಾವು ರೂಢಿಸಿಕೊಂಡಿರುವ ಅನೇಕ ಅಭ್ಯಾಸಗಳು ಹಲವು ಬಾರಿ ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮಗಳನ್ನು ಉಂಟುಮಾಡುತ್ತವೆ. ಸಾಮಾನ್ಯವಾಗಿ ರಾತ್ರಿ ಟಿವಿ ನೋಡುತ್ತಿರುವಾಗ ಹೊಟ್ಟೆ ತುಂಬಿದ್ದರೂ ಏನಾದರೂ ತಿನ್ನೋಣ, ಹಾಗೇ ಸುಮ್ಮನೆ ಒಂದು ಕಪ್‌ ಕಾಫಿ ಹೀರೋಣ ಅನ್ನಿಸಿಬಿಡುತ್ತದೆ. ಆದರೆ ಸಮಯದ ಪರಿವೆಯೇ ನಮಗಿರುವುದಿಲ್ಲ. ಕೆಲವೊಮ್ಮ ತಡರಾತ್ರಿಯವರೆಗೆ ಅದೆಷ್ಟು ಬಾರಿ ಹೀಗೆ ಪುನರಾವರ್ತನೆಯಾಗುವುದೋ ನಮಗೇ ತಿಳಿದಿರುವುದಿಲ್ಲ. ಆದರೆ ಇಂತಹ ಚಟವನ್ನು ಬೆಳೆಸಿಕೊಳ್ಳುವ ಮುನ್ನ ಹುಷಾರು! ಯಾಕೆಂದರೆ ತಡರಾತ್ರಿಯಲ್ಲಿ ತಿನ್ನುವುದು ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ನೀವು ರಾತ್ರಿ 8 ಗಂಟೆಯ ನಂತರ ತಿನ್ನುವ ಅಭ್ಯಾಸವಿರುವವರಾಗಿದ್ದರೆ ಪ್ರತಿದಿನ, ನಿಮ್ಮ ಊಟದ ಸಮಯವನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು.

ತಡರಾತ್ರಿಯಲ್ಲಿ ಆಹಾರ ಸೇವನೆಯು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ರಾತ್ರಿ 8 ಗಂಟೆಯ ನಂತರ ಆಹಾರ ಸೇವನೆಯು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ನಿದ್ರಾಹೀನತೆ ಅಥವಾ ಅಧಿಕ ತೂಕದ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ.

ರಾತ್ರಿ 8 ಗಂಟೆಯ ಆಹಾರ ಸೇವಿಸುವುದು ಅಪಾಯ

ರಾತ್ರಿ ವೇಳೆ ಅಧಿಕ ಕ್ಯಾಲೊರಿಯ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಅದರಲ್ಲೂ ರಾತ್ರಿ 8 ಗಂಟೆಯ ನಂತರ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅದು ತೊಂದರೆಯೊಡ್ಡಬಹುದು. ದೇಹದ ಚಯಾಪಚಯ ಕ್ರಿಯೆಯು ಸಂಜೆಯ ಸಮಯದಲ್ಲಿ ನಿಧಾನಗೊಳ್ಳುತ್ತದೆ, ಇದು ಜೀರ್ಣಕ್ರಿಯೆಯ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಆಸಿಡಿಟಿ ಹೆಚ್ಚಳದಿಂದಾಗಿ ನಿದ್ದೆಯ ಕೊರತೆ ಕಾಡಬಹುದು.

ಇನ್ನು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನಿರ್ಣಾಯಕವಾದ ಇನ್ಸುಲಿನ್, ತಡರಾತ್ರಿಯ ಊಟದಿಂದಾಗಿ ನಿಧಾನವಾಗಿ ಕಾರ್ಯನಿರ್ವಹಿಸಬಹುದು. ಇದರಿಂದಾಗಿ ಆರೋಗ್ಯ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾದೀತು. ಇದೆಲ್ಲದರ ಜೊತೆಗೆ ರಾತ್ರಿಯ ಸಮಯದಲ್ಲಿ ನಾವು ಸೇವಿಸಿರುವ ಆಹಾರದಿಂದ ಶರೀರವು ಪೋಷಕಾಂಶಗಳನ್ನು ಹೀರಿಕೊಳ್ಳಲು ಆಗದಿರುವ ಸಾಧ್ಯತೆಯಿದೆ. ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡಬಹುದು.

ರಾತ್ರಿ ಊಟ ಹಾಗೂ ನಿದ್ದೆಯ ನಡುವೆ ಎಷ್ಟು ಅಂತರವಿರಬೇಕು?

ಅಧ್ಯಯನವೊಂದರ ಪ್ರಕಾರ, ರಾತ್ರಿ ಊಟ ಹಾಗೂ ನಿದ್ರೆಯ ನಡುವೆ ಕನಿಷ್ಠ 2 ಗಂಟೆಗಳ ಅಂತರ ಅತ್ಯಗತ್ಯ. ಇದರಿಂದ ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ ರಾತ್ರಿ ವೇಳೆ ಕಡಿಮೆ ಪ್ರಮಾಣದ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಇದು ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿಯಾಗದಂತೆ ನಿಮ್ಮ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

ಉತ್ತಮ ನಿದ್ರೆಗಾಗಿ ಯಾವೆಲ್ಲಾ ಆಹಾರ, ಪಾನೀಯಗಳಿಂದ ದೂರವಿರಬೇಕು?

ನಿಮ್ಮ ಊಟದಲ್ಲಿ ನಿರ್ದಿಷ್ಟ ರೀತಿಯ ಆಹಾರಗಳನ್ನು ತಪ್ಪಿಸುವ ಮೂಲಕ ಒಳ್ಳೆಯ ನಿದ್ರೆ ನಿಮ್ಮದಾಗಬಹದು.

1. ಕೆಫಿನ್

ಕಾಫಿ, ಟೀ, ಮತ್ತು ಕೆಫಿನ್ ಅಂಶವಿರುವ ಪಾನೀಯಗಳನ್ನು ರಾತ್ರಿ ವೇಳೆ ಸೇವಿಸದಿರಿ. ಏಕೆಂದರೆ ಇದು ನಿದ್ದೆಗೆ ಅಡ್ಡಿಪಡಿಸುತ್ತದೆ.

2. ಮಸಾಲೆಯುಕ್ತ ಆಹಾರಗಳು

ಮಸಾಲೆಗಳು ಮತ್ತು ಮಸಾಲೆಯುಕ್ತ ಆಹಾರಗಳು ಅಜೀರ್ಣ ಅಥವಾ ಎದೆಯುರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಸಂಜೆಯ ನಂತರ ಜೀರ್ಣಕ್ರಿಯೆಗೆ ಸುಲಭವೆನ್ನುವ ಆಹಾರವನ್ನು ಮಿತವಾಗಿ ಸೇವಿಸುವ ಮೂಲಕ ನಿದ್ರಾಹೀನತೆಯಾಗದಂತೆ ನೋಡಿಕೊಳ್ಳಿ.

3. ಅಧಿಕ ಕೊಬ್ಬಿನ ಆಹಾರಗಳು

ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ರಾತ್ರಿ ಊಟದಲ್ಲಿ ಸೇವಿಸದಿರಿ. ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಮಲಗುವ ವೇಳೆ ಜಿಡ್ಡಿನ ಅಥವಾ ಕರಿದ ಆಹಾರವನ್ನು ತಪ್ಪಿಸಿ.

4. ಅತಿಯಾಗಿ ತಿನ್ನುವುದು

ತಡರಾತ್ರಿಯಲ್ಲಿ ಅತಿಯಾದ ಆಹಾರ ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದು ಅಜೀರ್ಣ ಹಾಗೂ ಅನಾರೋಗ್ಯವನ್ನುಂಟು ಮಾಡುತ್ತದೆ.

5. ಮದ್ಯ ಸೇವನೆ

ಆಲ್ಕೋಹಾಲ್ ನಿಮಗೆ ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ ಮತ್ತು ಮಲಗುವ ಸಮಯದ ಹತ್ತಿರವಿರುವಾಗ ತಪ್ಪಿಯೂ ಅದನ್ನು ಸೇವಿಸದಿರಿ.

6. ಆಮ್ಲೀಯ ಆಹಾರಗಳು

ಸಿಟ್ರಸ್ ಹಣ್ಣುಗಳು ಮತ್ತು ಆಮ್ಲೀಯ ಆಹಾರಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು. ಆದ್ದರಿಂದ ಸಂಜೆಯ ನಂತರ ಇವುಗಳನ್ನು ತಪ್ಪಿಸುವುದನ್ನು ಆರೋಗ್ಯದ ದೃಷ್ಟಿಯಿಂದ ಉತ್ತಮ.

ನಿದ್ರೆಯನ್ನು ಉತ್ತೇಜಿಸಲು ಉತ್ತಮ ಆಹಾರಗಳು

ಕೋಳಿ ಅಥವಾ ಮೀನುಗಳು ಪ್ರೊಟೀನ್‌ಗಳ ಆಗರವಾಗಿದ್ದು, ಶರೀರವನ್ನೂ ಹಗುರಾಗಿಸುತ್ತದೆ. ಬ್ರೌನ್ ರೈಸ್‌ನಂತಹ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಾಗಿದ್ದು, ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಇನ್ನು ಡೈರಿ ಉತ್ಪನ್ನಗಳು ಟ್ರಿಪ್ಟೊಫಾನ್ ಹಾಗೂ ಅಮೈನೋ ಆಮ್ಲವನ್ನು ಹೊಂದಿರುತ್ತವೆ. ಇದು ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದನೆಗೆ ಕೊಡುಗೆ ನೀಡುವ ಮೂಲಕ ನಿದ್ರೆಗೆ ಸಹಾಯ ಮಾಡುತ್ತದೆ. ಅಲ್ಲದೆ ಡ್ರೈ ಫ್ರುಟ್ಸ್‌ , ಅದರಲ್ಲೂ ಬಾದಾಮಿ, ವಾಲ್ನಟ್‌ ಮತ್ತು ಅಗಸೆಬೀಜಗಳು ಅಥವಾ ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು ನಿದ್ರಿಸಲು ಸಹಕಾರಿ.

ಒಟ್ಟಿನಲ್ಲಿ ರಾತ್ರಿ 8 ಗಂಟೆಗೂ ಮೊದಲು ಹಗುರಾದ ಆಹಾರ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಅಲ್ಲದೆ ನಿದ್ರಾಹೀನತೆ ಹಾಗೂ ಅಧಿಕ ಬೊಜ್ಜಿನ ಸಮಸ್ಯೆಯಿಂದಲೂ ದೂರ ಉಳಿಯಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)