Constipation: ಮಲಬದ್ಧತೆಗೆ ಮನೆಯಲ್ಲೇ ಇದೆ ನೈಸರ್ಗಿಕ ಪರಿಹಾರ; ಹಿರಿಯರು ಹೇಳಿಕೊಟ್ಟ ಸುಲಭ ಮನೆಮದ್ದುಗಳಿವು
ಅನಾರೋಗ್ಯಕರ ಆಹಾರ, ಜಡತ್ವ, ನೀರು ಕುಡಿಯದಿರುವುದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ, ಇದಕ್ಕೆ ಮನೆಯಲ್ಲೇ ಸುಲಭ ಪರಿಹಾರಗಳಿವೆ. ಅನಾದಿಕಾಲದಿಂದಲೂ ನಮ್ಮ ಹಿರಿಯರು ಮನೆಮದ್ದು ಮಾಡಿ ಪರಿಹಾರ ಕಂಡುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಮಲಬದ್ಧತೆ ಸಮಸ್ಯೆ ಮೇಲ್ನೋಟಕ್ಕೆ ಗಂಭೀರ ಎಂದು ಅನಿಸದಿದ್ದರೂ, ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುವಂಥಾ ಸಮಸ್ಯೆ. ನಿರ್ಜಲೀಕರಣ, ಜೀವನಶೈಲಿಯಲ್ಲಿನ ಬದಲಾವಣೆ ಸೇರಿದಂತೆ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದ ಮಲಬದ್ಧತೆ ಉಂಟಾಗುತ್ತದೆ. ವಾರಕ್ಕೆ ಮೂರು ಅಥವಾ ಅದಕ್ಕಿಂತಲೂ ಕಡಿಮೆ ಬಾರಿ ಮಲ ವಿಸರ್ಜನೆಯಾಗುವುದು, ಗಟ್ಟಿ ಮಲ ಹೊರಹಾಕುವುದು ಅಥವಾ ಶೌಚಕ್ರಿಯೆ ನಡೆಸಲು ತುಂಬಾ ಕಷ್ಟವಾಗುವುದು ಇದರ ಸಾಮಾನ್ಯ ಲಕ್ಷಣ. ಮಲಬದ್ಧತೆ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಶೌಚಾಲಯದಲ್ಲಿ ದೀರ್ಘಕಾಲ ಕುಳಿತುಕೊಳ್ಳಬೇಕಾಗುತ್ತದೆ. ಇಂಥಾ ಸಮಯದಲ್ಲಿ ಸುಲಭವಾಗಿ ಮಲಬದ್ಧತೆ ನಿವಾರಿಸೋದು ಹೇಗೆ ಎಂಬುದನ್ನು ತಿಳಿಯೋಣ.
ಭಾರತದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದೇ ಪರಿಹಾರ. ಮಲಬದ್ಧತೆಗೆ ಚಿಕಿತ್ಸೆ ನೀಡುವಲ್ಲೂ ಆಧುನಿಕ ಔಷಧ ಪದ್ಧತಿಗಿಂತ ಕೆಲವೊಂದು ಮನೆಮದ್ದೇ ಪರಿಣಾಮಕಾರಿ. ಮನೆಯಲ್ಲಿ ಇರುವ ಪದಾರ್ಥಗಳಿಂದ ಅಥವಾ ಸುಲಭವಾಗಿ ಸಿಗುವ ವಸ್ತುಗಳಿಂದ ಮಲಬದ್ಧತೆಗೆ ಪರಿಹಾರ ಕಂಡುಕೊಳ್ಳಬಹುದು. ಶುಂಠಿ, ನಿಂಬೆ ರಸ ಬೆರೆಸಿದ ನೀರು ಸೇರಿದಂತೆ ನೈಸರ್ಗಿಕ ವಿಧಾನದಿಂದ ಮಲಬದ್ಧತೆ ಪರಿಹಾರ ವಿಧಾನ ಇಲ್ಲಿದೆ ನೋಡಿ.
ಶುಂಠಿ
ಶುಂಠಿ ಜೀರ್ಣಕಾರಿ ಕ್ರಿಯೆಗೆ ಸಹಕಾರಿ. ಇದು ಕೆಳ ಕರುಳಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಮಲಬದ್ಧತೆ ಇದ್ದಾಗ ಶುಂಠಿ ಸೇವಿಸುವ ಮೂಲಕ ಕರುಳಿನ ಚಲನೆ ಸರಾಗವಾಗುತ್ತದೆ. ಇಷ್ಟೇ ಅಲ್ಲದೆ ಮಲಬದ್ದತೆ ಜೊತೆಗೆ ಕಾಣಿಸುವ ವಾಕರಿಕೆ, ಸೆಳೆತ ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಶುಂಠಿಯು ಗರ್ಭಿಣಿಯರು ಮತ್ತು ಮಕ್ಕಳ ಚಿಕಿತ್ಸೆಗೂ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಹಸಿ ಶುಂಠಿಯ ತುಂಡು ಮಾಡಿ, ಅದನ್ನು ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಅಗಿಯಬಹುದು. ಹೀಗೆ ಮಾಡಿದರೆ ಒಳ್ಳೆಯದು. ಒಂದು ವೇಳೆ ಶುಂಠಿ ರುಚಿ ನಿಮಗೆ ಹಿಡಿಸದಿದ್ದರೆ, ಶುಂಠಿಯನ್ನು ಚಹಾದೊಂದಿಗೆ ಕುದಿಸಿ ಕುಡಿಯಿರಿ. ಅಥವಾ ಬಿಸಿ ನೀರಿಗೆ ಶುಂಠಿ ಬೆರೆಸಿ ಕುಡಿಯಿರಿ.
ತುಪ್ಪ ಮತ್ತು ಹಾಲು
ಭಾರತದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಪ್ಪ ಮತ್ತು ಹಾಲು ಇದ್ದೇ ಇರುತ್ತದೆ. ಮಲಬದ್ಧತೆ ನಿವಾರಿಸಲು ಇವು ಮನೆಮದ್ದು. ಬಿಸಿ ಹಾಲು ಅಥವಾ ಬಿಸಿ ನೀರಿಗೆ ತುಪ್ಪವನ್ನು ಬೆರೆಸಿ ಮಲಗುವ ಮುನ್ನ ಕುಡಿದರೆ, ಮಲಬದ್ಧತೆಗೆ ಪರಿಹಾರ ಸಿಗುತ್ತದೆ. ಕೆಲವೊಬ್ಬರಿಗೆ ಡೈರಿ ಉತ್ಪನ್ನಗಳು ಇಷ್ಟ ಆಗುವುದಿಲ್ಲ. ಮಲಗುವ ಮುನ್ನ ಒಂದು ಸಣ್ಣ ಕಪ್ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಬಹುದು. ಅಂಥವರು ಈ ಪರಿಹಾರ ವಿಧಾನ ಅನುಸರಿಸದಿರುವುದೇ ಒಳ್ಳೆಯದು.
ನಿಂಬೆ ರಸದ ನೀರು
ನಿಂಬೆ ರಸದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ನೀರಿನಲ್ಲಿ ಕರಗುವ ಫೈಬರ್ ಅಂಶ ಇರುತ್ತದೆ. ಇದು ನಿಮ್ಮ ಕೊಲೊನ್ ಅನ್ನು ಉತ್ತೇಜಿಸಬಹುದು. ಹೀಗಾಗಿ ಕೆಲವರು ಮಲಬದ್ಧತೆ ಸಮಸ್ಯೆ ಉಂಟಾದಾಗ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುತ್ತಾರೆ. ಇದು ಮಕ್ಕಳಿಂದ ಹಿಡಿದು ಗರ್ಭಿಣಿಯರು ಕೂಡಾ ಅನುಸರಿಸಬಹುದಾದ ಪರಿಹಾರವಾಗಿದೆ.
ಸೋಂಪು ನೀರು
ನೀರಿಗೆ ಸೋಂಪು ಕಾಳು ಹಾಕಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಾಣಬಹುದು. ಇದರಲ್ಲಿ ನಾರಿನಂಶ ಹೆಚ್ಚಿದೆ. ಯಾರಿಗಾದರೂ ಮಲಬದ್ಧತೆಯ ಸಮಸ್ಯೆ ಇದ್ದರೆ ಅವರು ದಿನಕ್ಕೆ ಒಂದು ಬಾರಿ ಫೆನ್ನೆಲ್ ನೀರನ್ನು ಕುಡಿಯಬಹುದು.
ಗಿಡಮೂಲಿಕೆಯ ಚಹಾ
ತಗಚೆ, ಜೇಷ್ಠಮಧುವಿನಂತಹ ಬೇರು ಹಾಗೂ ಗಿಡಮೂಲಿಕೆಯ ಚಹಾ ಮಾಡಿ ಸೇವಿಸುವುದರಿಂದ ಮಲವಿಸರ್ಜನೆ ಸರಾಗವಾಗುತ್ತದೆ. ಇವು ನೈಸರ್ಗಿಕ ವಿರೇಚಕ ಗುಣವನ್ನು ಹೊಂದಿವೆ. ಅಲ್ಲದೆ ಕರುಳಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ.
ಅಗಸೆ ಬೀಜ
ಅಗಸೆ ಬೀಜದಲ್ಲಿ ನಾರಿನಾಂಶ ಹೇರಳವಾಗಿದೆ. ಇದರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಅಗಸೆ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಈ ಹಣ್ಣು ಪ್ರಯೋಜನಕಾರಿ. ಪಪ್ಪಾಯಿ ಹಣ್ಣಿನಲ್ಲಿ ಫೈಬರ್ ಹೇರಳವಾಗಿರುವುದರಿಂದ, ಕರುಳಿನ ಚಲನೆ ಸುಲಭಗೊಳಿಸುತ್ತದೆ. ಜೊತೆಗೆ ಅಜೀರ್ಣ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ.
ಇತರ ಪರಿಹಾರೋಪಾಯಗಳು
- ಸಾಕಷ್ಟು ನೀರು ಕುಡಿಯಿರಿ.
- ದೇಹವನ್ನು ಸಕ್ರಿಯವಾಗಿಡಿ, ವ್ಯಾಯಾಮ ಮಾಡಿ
- ಯೋಗಾಭ್ಯಾಸ ಮಾಡಿ.
- ಒಣದ್ರಾಕ್ಷಿ, ಸೇಬು, ಅಂಜೂರದ ಹಣ್ಣು, ಪಾಲಕ್‌ನಂಥ ಫೈಬರ್-ಭರಿತ ಆಹಾರ ಸೇವಿಸಿ.
- ಮನೆಮದ್ದು ಪ್ರಯತ್ನಿಸಿದ ಬಳಿಕವೂ ಪರಿಹಾರ ಸಿಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ