Seed oils: ನಿತ್ಯ ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಯುವ ಜನರಲ್ಲಿ ಕ್ಯಾನ್ಸರ್‌ ಹೆಚ್ಚಲು ಸೀಡ್‌ ಆಯಿಲ್‌ ಕಾರಣ ಎಂದ ಅಧ್ಯಯನ
ಕನ್ನಡ ಸುದ್ದಿ  /  ಜೀವನಶೈಲಿ  /  Seed Oils: ನಿತ್ಯ ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಯುವ ಜನರಲ್ಲಿ ಕ್ಯಾನ್ಸರ್‌ ಹೆಚ್ಚಲು ಸೀಡ್‌ ಆಯಿಲ್‌ ಕಾರಣ ಎಂದ ಅಧ್ಯಯನ

Seed oils: ನಿತ್ಯ ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಯುವ ಜನರಲ್ಲಿ ಕ್ಯಾನ್ಸರ್‌ ಹೆಚ್ಚಲು ಸೀಡ್‌ ಆಯಿಲ್‌ ಕಾರಣ ಎಂದ ಅಧ್ಯಯನ

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರವೇ ನಮಗೆ ವಿಷವಾಗಿ ಪರಿಣಮಿಸುತ್ತಿದೆ. ಇದೀಗ ಅಡುಗೆಎಣ್ಣೆ ಕೂಡ ಅಪಾಯಕಾರಿ ಎಂದು ಅಧ್ಯಯನವೊಂದು ತಿಳಿಸಿದೆ. ಬೀಜಗಳಿಂದ ತಯಾರಿಸುವ ಎಣ್ಣೆ ಉರಿಯೂತವನ್ನು ಉಂಟು ಮಾಡುತ್ತದೆ. ಇದು ಕ್ಯಾನ್ಸರ್ ಬೆಳವಣೆಗೆಗೆ ಕಾರಣವಾಗಬಹುದು ಎಂದು ಅಧ್ಯಯನ ತಿಳಿಸಿದೆ. ಏನಿದು ವರದಿ ನೋಡಿ.

ಯುವ ಜನರಲ್ಲಿ ಕ್ಯಾನ್ಸರ್‌ ಹೆಚ್ಚಲು ಸೀಡ್‌ ಆಯಿಲ್‌
ಯುವ ಜನರಲ್ಲಿ ಕ್ಯಾನ್ಸರ್‌ ಹೆಚ್ಚಲು ಸೀಡ್‌ ಆಯಿಲ್‌

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಕ್ಯಾನ್ಸರ್‌ಗೆ ಕಾರಣ ನಿಖರವಾಗಿ ತಿಳಿದಿಲ್ಲ ಎಂದರೂ ನಾವು ಸೇವಿಸುವ ಕೆಲವು ಆಹಾರಗಳು ಕ್ಯಾನ್ಸರ್‌ಗೆ ಮೂಲವಾಗುತ್ತಿವೆ ಎಂಬುದು ಸುಳ್ಳಲ್ಲ. ನಮ್ಮ ಅಡುಗೆಮನೆಯಲ್ಲಿ ಕ್ಯಾನ್ಸರ್‌ಕಾರಕ ವಸ್ತುಗಳಿವೆ ಎಂಬ ವಿಚಾರವು ಖಂಡಿತ ಆಘಾತಕಾರಿ.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಅಡುಗೆ ಎಣ್ಣೆ ಕ್ಯಾನ್ಸರ್‌ಗೆ ಕಾರಣ ಎಂಬ ಅಘಾತಕಾರಿ ಅಂಶವನ್ನು ಹೊರಹಾಕಿದೆ. ಅದರಲ್ಲೂ ಅತಿಯಾದ ಅಡುಗೆ ಎಣ್ಣೆ ಅದರಲ್ಲೂ ಬೀಜಗಳಿಂದ ಮಾಡಿದ ಅಡುಗೆಎಣ್ಣೆ ಬಳಕೆಯು ಯುವಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ ಎಂಬ ಅಂಶವನ್ನು ಬಹಿರಂಗ ಪಡಿಸಿದೆ. ವೈದ್ಯಕೀಯ ಜರ್ನಲ್ ಗಟ್‌ನಲ್ಲಿ ಪ್ರಕಟವಾದ ಅಧ್ಯಯನವು ಸೂರ್ಯಕಾಂತಿ, ಕ್ಯಾನೋಲಾ ಮತ್ತು ಕಾರ್ನ್‌ನಂತಹ ಬೀಜಗಳಿಂದ ತಯಾರಿಸಿದ ಎಣ್ಣೆಯ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಪರಿಶೋಧಿಸಿದೆ.

ಅಧ್ಯಯನದ ಸ್ವರೂಪ ಹೀಗಿತ್ತು

ಕರುಳಿನ ಕ್ಯಾನ್ಸರ್ ಹೊಂದಿರುವ 80 ರೋಗಿಗಳ ಮೇಲೆ ಈ ಅಧ್ಯಯನ ಮಾಡಲಾಗಿತ್ತು. ಅವರ ದೇಹದಲ್ಲಿ ಬೀಜಗಳಿಂದ ತಯಾರಿಸಿದ ಎಣ್ಣೆಗಳನ್ನು ವಿಭಜಿಸುವ ಮೂಲಕ ರೂಪುಗೊಳ್ಳುವ ಜೈವಿಕ ಸಕ್ರಿಯ ಲಿಪಿಡ್‌ಗಳ ಹೆಚ್ಚಿನ ಮಟ್ಟವನ್ನು ಅಧ್ಯಯನಕಾರರು ಗಮನಿಸಿದ್ದರು. 30 ರಿಂದ 85 ವರ್ಷ ವಯಸ್ಸಿನ ಜನರಲ್ಲಿ 81 ಗೆಡ್ಡೆಯ ಮಾದರಿಗಳನ್ನು ಈ ಅಧ್ಯಯನವು ಗಮನಿಸಿದೆ. ಅವರ ಕ್ಯಾನ್ಸರ್ ಗೆಡ್ಡೆಗಳಲ್ಲಿ ಹೆಚ್ಚಿನ ಪ್ರಮಾಣದ ಲಿಪಿಡ್ ಅಂಶವು ಬೀಜಗಳಿಂದ ತಯಾರಿಸಿದ ಎಣ್ಣೆಗಳಿಂದ ಉಂಟಾಗಿತ್ತು ಎಂಬುದನ್ನು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಆಹಾರೋದ್ಯಮದಲ್ಲಿ ಬೀಜದಿಂದ ತಯಾರಿಸುವ ಎಣ್ಣೆಗಳು ಹೊಸ ಸೇರ್ಪಡೆಯಾಗಿದೆ. 1900ರ ದಶಕದ ಆರಂಭದಲ್ಲಿ, ಮೇಣದಬತ್ತಿಗಳನ್ನು ತಯಾರಿಸುವ ವಿಲಿಯಂ ಪ್ರಾಕ್ಟರ್ ಸಾಬೂನಿನಲ್ಲಿರುವ ಪ್ರಾಣಿಗಳ ಕೊಬ್ಬುಗಳಿಗೆ ಅಗ್ಗದ ಪರ್ಯಾಯವಾಗಿ ಬೀಜದ ಎಣ್ಣೆಯನ್ನು ಕಂಡುಹಿಡಿದರು. ಶೀಘ್ರದಲ್ಲೇ ಇದು ಅಮೆರಿಕನ್ನರ ಆಹಾರದಲ್ಲಿ ಪ್ರಧಾನ ಪಾತ್ರ ಪಡೆದುಕೊಂಡಿತು. ನಂತರ ಪ್ರಪಂಚದ ಬಹುತೇಕ ದೇಶಗಳಲ್ಲಿ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸಲು ಆರಂಭಿಸಿದರು. 

ಬೀಜದ ಎಣ್ಣೆಗೂ ಕ್ಯಾನ್ಸರ್‌ಗೂ ಸಂಬಂಧ

ಈ ಹಿಂದೆಯು ನಡೆದ ಅಧ್ಯಯನಗಳಲ್ಲಿ ಬೀಜದ ಎಣ್ಣೆಗಳಿಂದ ಆರೋಗ್ಯದ ಮೇಲಾಗುವ ಹಾನಿಕಾರಕ ಪರಿಣಾಮಗಳನ್ನು ಕಂಡುಕೊಳ್ಳಲಾಗಿದೆ. ಇದು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಬೀಜದ ಎಣ್ಣೆಯ ವಿಭಜನೆಯಿಂದ ಉಂಟಾಗುವ ಈ ಜೈವಿಕ ಸಕ್ರಿಯ ಲಿಪಿಡ್‌ಗಳು ಕರುಳಿನ ಕ್ಯಾನ್ಸರ್ ಅನ್ನು ವೇಗವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ದೇಹವು ಗೆಡ್ಡೆಗಳ ವಿರುದ್ಧ ಹೋರಾಡುವುದನ್ನು ತಡೆಯುತ್ತದೆ. ಬೀಜದ ಎಣ್ಣೆಗಳು ಒಮೆಗಾ-6 ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಒಳಗೊಂಡಿರುತ್ತವೆ. ಮಧುಮೇಹ ಹಾಗೂ ಹೃದ್ರೋಗಗಳಿಗೆ ಇದರ ಸಂಬಂಧದ ತಿಳಿಯಲು ಅಧ್ಯಯನಗಳು ನಡೆಯುತ್ತಿವೆ.

ಸಂಶೋಧನಾ ಪ್ರಬಂಧದ ಪ್ರಕಾರ, ಬೀಜದ ಎಣ್ಣೆಗಳ ಅತಿಯಾದ ಸೇವನೆಯಿಂದ ಉಂಟಾಗುವ ದೀರ್ಘಕಾಲದ ಉರಿಯೂತವು ಕ್ಯಾನ್ಸರ್ ಅಭಿವೃದ್ಧಿಗೆ ಕಾರಣವಾಗುತ್ತದೆ‘ ಎಂದು ಈ ಅಧ್ಯಯನ ಹೇಳುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner