Health Tips: ಮದ್ಯಪಾನ ತ್ಯಜಿಸಿದರೆ ನಿಮ್ಮ ದೇಹದಲ್ಲಿ ಎಷ್ಟೊಂದು ಬದಲಾವಣೆಗಳಾಗುತ್ತವೆ; ಇಲ್ಲಿದೆ ವೈದ್ಯರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಮದ್ಯಪಾನ ತ್ಯಜಿಸಿದರೆ ನಿಮ್ಮ ದೇಹದಲ್ಲಿ ಎಷ್ಟೊಂದು ಬದಲಾವಣೆಗಳಾಗುತ್ತವೆ; ಇಲ್ಲಿದೆ ವೈದ್ಯರ ಸಲಹೆ

Health Tips: ಮದ್ಯಪಾನ ತ್ಯಜಿಸಿದರೆ ನಿಮ್ಮ ದೇಹದಲ್ಲಿ ಎಷ್ಟೊಂದು ಬದಲಾವಣೆಗಳಾಗುತ್ತವೆ; ಇಲ್ಲಿದೆ ವೈದ್ಯರ ಸಲಹೆ

ಮದ್ಯಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ, ಕೆಲವರು ಅದನ್ನು ಬಿಡಲು ತಯಾರಿರುವುದಿಲ್ಲ. ಮದ್ಯ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಲವು ಪರಿಣಾಮಗಳು ಬೀರುತ್ತದೆ. ಮದ್ಯ ತ್ಯಜಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಲು ಈ ಬರಹ ಓದಿ.

ಮದ್ಯ ತ್ಯಜಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಮದ್ಯ ತ್ಯಜಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? (Pixabay)

ಮದ್ಯ ಸೇವಿಸುವುದು ಕೆಲವರಿಗೆ ಚಟವಾದರೆ ಇನ್ನು ಕೆಲವರಿಗೆ ಅಭ್ಯಾಸ, ಮತ್ತೆ ಕೆಲವರಿಗೆ ಪ್ರತಿಷ್ಠೆಯ ಸಂಗತಿ. ಹೀಗೆ ಹಲವು ಕಾರಣಗಳಿಗಾಗಿ ಮದ್ಯ ಸೇವಿಸುವವರು ಮತ್ತು ಅದನ್ನು ಸಮರ್ಥಿಸುವವರು ಕಾಣಸಿಗುತ್ತಾರೆ. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ, ಅದನ್ನು ಬಿಡಲು ಅವರು ತಯಾರಿಲ್ಲ. ಕೆಲವರಿಗೆ ಕುಡಿತದ ಚಟ ಹೇಗಿರುತ್ತದೆ ಎಂದರೆ, ಸಾಲ ಮಾಡಿಯಾದರೂ ಸರಿ, ಕುಡಿಯಲೇ ಬೇಕು ಎಂದಾಗಿರುತ್ತದೆ. ಆದರೆ ಕುಡಿತ ಬಿಡುವುದು ಎಂದರೆ ಜೀವನದಲ್ಲಿ ಮಹತ್ತರವಾಗಿರುವುದನ್ನು ಸಾಧಿಸಿದಂತೆ. ಕುಡಿತ ಬಿಡಲು ಹಲವು ದಾರಿಗಳಿವೆ. ಮದ್ಯಪಾನ ತ್ಯಜಿಸಿದ ಬಳಿಕ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಯನ್ನು ಉಂಟುಮಾಡಬಹುದು. ಆದರೆ, ಅಂತಿಮವಾಗಿ ಅವರ ದೇಹ ಮತ್ತು ಮನಸ್ಸು ಶಾಂತ, ಆರೋಗ್ಯಕರ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ವೈದ್ಯರು ಮತ್ತು ಹಿತೈಷಿಗಳು ಮದ್ಯಪಾನ ತ್ಯಜಿಸುವಂತೆ ಸಲಹೆ ನೀಡುತ್ತಾರೆ. ಮದ್ಯಪಾನ ಸೇವನೆ ನಿಲ್ಲಿಸುವುದರಿಂದ ಏನೆಲ್ಲಾ ಬದಲಾವಣೆಗಳಾಗುತ್ತವೆ ಮತ್ತು ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.

ಮದ್ಯ ತ್ಯಜಿಸಿದ ಸಂದರ್ಭದಲ್ಲಿ ಕಾಣಿಸುವ ಲಕ್ಷಣಗಳು

ದಿನನಿತ್ಯ ವಿಪರೀತ ಕುಡಿತದ ಚಟಕ್ಕೆ ಬಿದ್ದವರು, ಒಮ್ಮೆಗೆ ಮದ್ಯಪಾನ ತ್ಯಜಿಸಿದಾಗ, ಅವರಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ತೀವ್ರ ಆತಂಕ ಉಂಟಾದರೆ, ಇನ್ನು ಕೆಲವರಿಗೆ ಚಡಪಡಿಕೆ ಆಗಬಹುದು. ಮತ್ತೆ ಕೆಲವರಿಗೆ ಕೈಕಾಲಿನಲ್ಲಿ ನಡುಕ ಇರಬಹುದು. ಕೆಲವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಬರಬಹುದು ಮತ್ತು ಇನ್ನು ಕೆಲವರಿಗೆ ಕೆಲವು ದಿನಗಳವರೆಗೆ ಆ ಸಮಸ್ಯೆ ಮುಂದುವರಿಯಬಹುದು.

ನೀರಿನ ಅಂಶ ವೃದ್ಧಿ

ಮದ್ಯ ಸೇವಿಸುವುದನ್ನು ನಿಲ್ಲಿಸಿದ ಬಳಿಕ, ದೇಹದಲ್ಲಿ ನೀರಿನ ಅಂಶ ವೃದ್ಧಿಯಾಗಬಹುದು. ಮದ್ಯ ಸೇವನೆ ಮಾಡುವವರಲ್ಲಿ ನೀರಿನ ಅಂಶ ಕಡಿಮೆಯಾಗಿರುತ್ತದೆ. ಹೀಗಾಗಿ ಅವರು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಮದ್ಯಪಾನ ನಿಲ್ಲಿಸಿದಾಗ ದೇಹದಲ್ಲಿ ನೀರಿನ ಅಂಶ ವೃದ್ಧಿಯಾಗಿ, ಹೊಸ ಚೈತನ್ಯ ಮೂಡುತ್ತದೆ. ಚರ್ಮ ಕೂಡ ಆರೋಗ್ಯಕರವಾಗಿರುತ್ತದೆ.

ನಿದ್ರೆಯ ಗುಣಮಟ್ಟ ಹೆಚ್ಚಳ

ಮದ್ಯಪಾನ ಸೇವನೆಯಿಂದ ನಿದ್ರೆಗೆ ಹಲವರಿಗೆ ಸಮಸ್ಯೆಯಾಗಿರುತ್ತದೆ. ಅಂತಹವರು, ಮದ್ಯಪಾನ ತ್ಯಜಿಸಿದ ಬಳಿಕ ನಿದ್ರೆಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ತೂಕದಲ್ಲಿ ಇಳಿಕೆ

ಮದ್ಯ ಸೇವಿಸುವವರಲ್ಲಿ ಅಧಿಕ ಪ್ರಮಾಣದ ಕ್ಯಾಲೊರಿಗಳು ಶೇಖರವಾಗಿರುತ್ತದೆ. ಮದ್ಯಪಾನ ತ್ಯಜಿಸಿದರೆ, ದೇಹದಲ್ಲಿನ ಅನಗತ್ಯ ಕೊಬ್ಬು ಕರಗುತ್ತದೆ. ಇದರಿಂದ ದೇಹದ ತೂಕ ಸರಿದೂಗಿಸಲು ಸಹಕಾರಿ, ಜತೆಗೆ ಆರೋಗ್ಯಕರ ತೂಕ ನಮ್ಮದಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ

ಮದ್ಯ ಸೇವಿಸಿದಾಗ, ಯಕೃತ್‌ನ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುತ್ತದೆ. ಇದರಿಂದ ದೇಹದಲ್ಲಿರುವ ರಕ್ತದಲ್ಲಿ ಸಕ್ಕರೆ ಪ್ರಮಾಣದಲ್ಲಿ ವ್ಯತ್ಯಾಸವಾಗಿರುತ್ತದೆ. ಮದ್ಯಪಾನ ತ್ಯಜಿಸಿದರೆ, ಲಿವರ್ ಕಾರ್ಯ ಮರಳಿ ಯಥಾಸ್ಥಿತಿಗೆ ಬರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸುಧಾರಿಸುತ್ತದೆ.

ಯಕೃತ್ ಆರೋಗ್ಯಕ್ಕೆ ಸಹಕಾರಿ

ಮದ್ಯಪಾನದಿಂದ ಲಿವರ್ ಹಾಳಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಲಿವರ್‌ನಲ್ಲಿ ಕೊಬ್ಬು ಶೇಖರವಾಗುವುದು, ಹೆಪಟೈಟಿಸ್, ಸಿರೋಸಿಸ್‌ನಂತಹ ಕಾಯಿಲೆಗೆ ಅದು ದಾರಿಮಾಡಿಕೊಡಬಹುದು. ಮದ್ಯ ಸೇವನೆ ತ್ಯಜಿಸಿದರೆ, ಅದರಿಂದ ಲಿವರ್‌ನ ಆರೋಗ್ಯ ಸುಧಾರಿಸುತ್ತದೆ. ಅದರಿಂದ ಒಟ್ಟಾರೆ ದೇಹಕ್ಕೆ ಪ್ರಯೋಜನವಾಗುತ್ತದೆ.

ಇದನ್ನೂ ಓದಿ: ಒತ್ತಡ ತೊಡೆದುಹಾಕಿ ಒಳ್ಳೆಯ ನಿದ್ದೆ ಬರಲು ಈ ಪಾನೀಯಗಳನ್ನು ಸೇವಿಸಿ

ಹೃದಯದ ಆರೋಗ್ಯ

ಮದ್ಯ ಸೇವಿಸುವುದನ್ನು ಬಿಟ್ಟ ಬಳಿಕ, ಹೃದಯದ ಕಾರ್ಯನಿರ್ವಹಣೆಯಲ್ಲಿ ಕೂಡ ಗಮನಾರ್ಹ ಬದಲಾವಣೆಗಳಾಗುತ್ತದೆ. ಅಲ್ಲದೆ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಾಧ್ಯತೆಗಳು ಕೂಡ ಇಳಿಕೆಯಾಗುತ್ತದೆ.

ಕ್ಯಾನ್ಸರ್ ಸಮಸ್ಯೆ

ಮದ್ಯಪಾನ ಮಾಡುವುದರಿಂದ ವಿವಿಧ ರೀತಿಯ ಕ್ಯಾನ್ಸರ್ ನಮ್ಮ ದೇಹಕ್ಕೆ ಹಾನಿ ಮಾಡುವ ಸಾಧ್ಯತೆಯಿರುತ್ತದೆ. ಆದರೆ ಮದ್ಯ ಸೇವನೆ ತ್ಯಜಿಸಿದರೆ, ಅದರಿಂದ ಉತ್ತಮ ಮತ್ತು ಆರೋಗ್ಯಕರ ಜೀವನ ನಡೆಸಬಹುದು.

ಇದನ್ನೂ ಓದಿ: ಶೂ ಹಾಕಿದಾಗ ನಿಮ್ಮ ಪಾದದಲ್ಲಿ ಗುಳ್ಳೆ ಉಂಟಾಗಿ ತೊಂದರೆಯಾಗುತ್ತಿದೆಯೇ? ವೈದ್ಯರ ಸಲಹೆ ಇಲ್ಲಿದೆ

ಮಾನಸಿಕ ಆರೋಗ್ಯ

ದೈಹಿಕ ಆರೋಗ್ಯದ ಜತೆಗೆ, ಮಾನಸಿಕ ಆರೋಗ್ಯ ಕೂಡ ಸುಧಾರಿಸಲು ಮದ್ಯಪಾನ ತ್ಯಜಿಸಬೇಕು. ಆತಂಕ, ಖಿನ್ನತೆ ಮತ್ತು ಬೇಸರವನ್ನು ಇದು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ

ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಮದ್ಯಪಾನದಿಂದ ಪರಿಣಾಮ ಉಂಟಾಗಿರುತ್ತದೆ. ಮದ್ಯ ತ್ಯಜಿಸಿದರೆ, ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಮದ್ಯ ಸೇವನೆ ಬಿಟ್ಟುಬಿಡುವುದರಿಂದ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಹಲವು ಪ್ರಯೋಜನಗಳಾಗುತ್ತವೆ. ಹಣ ಉಳಿತಾಯವಾಗುತ್ತದೆ ಮತ್ತು ಮದ್ಯಪಾನಿ ಎಂಬ ಹಣೆಪಟ್ಟಿ ಕಳಚಿ, ಬಂಧುಗಳು- ಪ್ರೀತಿಪಾತ್ರರು ಹತ್ತಿರವಾಗುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner