Healthy Food: ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು, ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Food: ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು, ಗಮನಿಸಿ

Healthy Food: ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು, ಗಮನಿಸಿ

ಫಾಸ್ಟ್‌ಫುಡ್ ಮತ್ತು ಪ್ಯಾಕ್‌ಡ್ ಫುಡ್‌ಗಳನ್ನು ಜನರು ಸೂಪರ್ ಮಾರ್ಕೆಟ್‌ನಿಂದ ರಾಶಿ ತಂದು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಸುಲಭದಲ್ಲಿ ಬೇಗನೆ ತಯಾರಾಗುತ್ತದೆ ಮತ್ತು ಆರೋಗ್ಯಕ್ಕೆ ಪೂರಕ ಎಂಬ ಜಾಹೀರಾತು ನೋಡಿರುತ್ತಾರೆ. ಆದರೆ ಅವುಗಳ ಸೇವನೆಯಿಂದ ಸಮಸ್ಯೆ ಉಂಟಾಗಬಹುದು.

ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು
ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು (Pixabay)

ಬ್ಯುಸಿ ಜೀವನ ಮತ್ತು ಕೆಲಸದ ಒತ್ತಡ, ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ ಎಂಬ ಭ್ರಮೆಗೆ ಬಿದ್ದಿರುವ ಜನರು, ಸೂಪರ್‌ಮಾರ್ಕೆಟ್‌ಗಳಲ್ಲಿ ದೊರಕುವ ವಿವಿಧ ರೀತಿಯ ಆಹಾರಗಳನ್ನು ತಂದು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ದಿಢೀರ್ ಆಗಿ ತಯಾರಿಸಬಹುದು ಮತ್ತು ಅರೋಗ್ಯಕರ ಎಂಬ ಭಾವನೆಯೂ ಅವರಲ್ಲಿರುತ್ತದೆ. ಹೀಗಾಗಿ ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಜತೆಗೆ ಸುಲಭದಲ್ಲಿ, ಕೇವಲ ಐದೇ ನಿಮಿಷದಲ್ಲೂ ತಯಾರಾಗುವುದರಿಂದ, ಹೆಚ್ಚು ಕೆಲಸವಿಲ್ಲ, ಕಷ್ಟಪಡಬೇಕಿಲ್ಲ. ಆದರೆ ಅಂತಹ ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವುಗಳಿಂದ ಪ್ರಯೋಜನ ದೊರೆಯುವ ಬದಲು, ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಅಡುಗೆ ಮನೆಯಲ್ಲಿ ಅಂತಹ ಆಹಾರವಿದ್ದರೆ, ಅವುಗಳ ಬಳಕೆಯನ್ನು ಬಿಟ್ಟುಬಿಡಿ, ಇಲ್ಲವಾದರೆ ಮುಂದೊಂದು ದಿನ ನಿಮಗೆ ಸಮಸ್ಯೆ ತರಬಹುದು.

ಟೀ ಬ್ಯಾಗ್

ಆರೋಗ್ಯಕ್ಕೆ ಪೂರಕ ಮತ್ತು ತೂಕ ಇಳಿಸಲು ಸಹಾಯಕವಾಗುತ್ತದೆ ಎಂದು ಜನರು ಗ್ರೀನ್ ಟೀ ಸೇವಿಸುತ್ತಾರೆ. ಆದರೆ ಅಂತಹ ಗ್ರೀನ್ ಟೀ ಸೇವನೆ, ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಗ್ರೀನ್ ಟೀ ಬ್ಯಾಗ್‌ನಲ್ಲಿರುವ ಕೆಲವೊಂದು ರಾಸಾಯನಿಕಗಳು ಖಂಡಿತವಾಗಿಯೂ ಆರೋಗ್ಯಕ್ಕೆ ಪೂರಕವಲ್ಲ, ಗ್ರೀನ್ ಟೀ ಬ್ಯಾಗ್ ಅನ್ನು ನೈಲಾನ್, ರೆಯಾನ್ ಮತ್ತು ಥರ್ಮೋಪ್ಲಾಸ್ಟಿಕ್ ಬಳಸಿ ತಯಾರಿಸುತ್ತಾರೆ. ಅವುಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿ, ಅದನ್ನು ಸೇವಿಸಿದಾಗ, ಮುಂದೆ ಯಕೃತ್ ಅಂದರೆ ಲಿವರ್‌ಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಅಂತಹ ಟೀ ಬ್ಯಾಗ್ ಬಳಕೆ ಒಳ್ಳೆಯದಲ್ಲ. ಅದರ ಬದಲು, ಚಿಲ್ಲರೆಯಾಗಿ ಪ್ಯಾಕ್‌ನಲ್ಲಿ ದೊರಕುವ ಗ್ರೀನ್ ಟೀಯನ್ನು ಸೇವಿಸಬಹುದು.

ರೆಡಿ ಫ್ರೂಟ್ ಜ್ಯೂಸ್

ಮಾರುಕಟ್ಟೆಯಲ್ಲಿ ಇಂದು ವಿವಿಧ ಫ್ಲೇವರ್, ಬಣ್ಣ ಮತ್ತು ರುಚಿಗಳ ಹಣ್ಣಿನ ಜ್ಯೂಸ್ ದೊರೆಯುತ್ತದೆ. ಬೆಳಗಿನ ಬ್ರೇಕ್‌ಫಾಸ್ಟ್ ಅದು ಉತ್ತಮ ಎಂದು ಬಿಂಬಿಸಲಾಗುತ್ತದೆ. ಆದರೆ ಅಂತಹ ಜ್ಯೂಸ್ ಪ್ಯಾಕೆಟ್‌ಗಳಲ್ಲಿ ನಿಜವಾದ ಹಣ್ಣಿನ ರಸದ ಬದಲು, ರಾಸಾಯನಿಕ ಬಳಸಿ ತಯಾರಿಸಿರುವ ಹಣ್ಣಿನ ಕೃತಕ ಜ್ಯೂಸ್ ಇರುತ್ತದೆ. ಅದರಲ್ಲಿ ಅಧಿಕ ಪ್ರಮಾಣದ ಬಣ್ಣ, ಸಕ್ಕರೆ ಇರಬಹುದು. ಅದರಿಂದ ಖಂಡಿತವಾಗಿಯೂ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಆರೋಗ್ಯ ಸಮಸ್ಯೆ ಬರುವ ಮೊದಲು ಅದನ್ನು ತ್ಯಜಿಸಿ, ನೈಜ ಹಣ್ಣಿನಿಂದ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ.

ಇದನ್ನೂ ಓದಿ: ಈ 5 ಪದಾರ್ಥಗಳನ್ನು ತಪ್ಪಿಯೂ ಔಷಧಿಗಳೊಂದಿಗೆ ಸೇವಿಸಬೇಡಿ, ಇದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು

ಚೀಸ್ ಮತ್ತು ಇನ್‌ಸ್ಟಂಟ್ ಸೂಪ್

ಬ್ರೇಕ್‌ಫಾಸ್ಟ್‌ನಲ್ಲಿ ಆರೋಗ್ಯಕ್ಕೆ ಪೂರಕ ಮತ್ತು ತೂಕ ಇಳಿಕೆಗೆ ಸಹಾಯಕ ಎಂದು ಚೀಸ್ ಬಳಸಿ ತಯಾರಿಸುವ ಆಹಾರ ಸೇವಿಸುವವರು ಇದ್ದಾರೆ. ಅಲ್ಲದೆ, ಇನ್‌ಸ್ಟಂಟ್ ಪ್ಯಾಕೆಟ್ ಸೂಪ್ ಕೂಡ ಕುಡಿಯುವವರು ಇರುತ್ತಾರೆ. ಬಿಸಿ ನೀರಿಗೆ ಹಾಕಿ ಕಲಸಿಕೊಂಡು ಕುಡಿಯುವ ಇದು, ಮುಂದೆ ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ. ಹೀಗಾಗಿ ಅವುಗಳ ಬಳಕೆ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ, ಆರೋಗ್ಯಕರ ಆಹಾರ ಸೇವಿಸಬೇಕು.

ಇದನ್ನೂ ಓದಿ: ಆರೋಗ್ಯಕರ ಜೀವನಶೈಲಿಗಾಗಿ ಈ 10 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಒತ್ತಡದ ಜೀವನಶೈಲಿ ಮತ್ತು ಕೆಲಸದ ತುರ್ತು ಇರುವ ಇಂದಿನ ದಿನಗಳಲ್ಲಿ ಇನ್‌ಸ್ಟಂಟ್ ಮತ್ತು ಫಾಸ್ಟ್‌ಫುಡ್ ಮೊರೆ ಹೋಗುತ್ತಿರುವ ಜನರು, ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆ ಕ್ಷಣಕ್ಕೆ ಅಂತಹ ಆಹಾರ ರುಚಿಕರ ಎನ್ನಿಸಿದರೂ, ಮುಂದೆ ಅದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದಿಢೀರ್ ಎಂದು ದೊರೆಯುವ ಆಹಾರಗಳನ್ನು ಸಾಧ್ಯವಾದಷ್ಟು ತ್ಯಜಿಸಿ, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Whats_app_banner