ಸಿಟ್ರಸ್ ಹಣ್ಣುಗಳಿಂದ ಸಮುದ್ರಾಹಾರದವರೆಗೆ; ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ 5 ಆಹಾರಗಳನ್ನು ತಪ್ಪಿಯೂ ಸೇವಿಸಬಾರದು
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಟ್ರಸ್ ಹಣ್ಣುಗಳಿಂದ ಸಮುದ್ರಾಹಾರದವರೆಗೆ; ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ 5 ಆಹಾರಗಳನ್ನು ತಪ್ಪಿಯೂ ಸೇವಿಸಬಾರದು

ಸಿಟ್ರಸ್ ಹಣ್ಣುಗಳಿಂದ ಸಮುದ್ರಾಹಾರದವರೆಗೆ; ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ 5 ಆಹಾರಗಳನ್ನು ತಪ್ಪಿಯೂ ಸೇವಿಸಬಾರದು

ಆಯುರ್ವೇದವು ಕೆಲವೊಂದು ಆಹಾರಗಳ ಸಂಯೋಜನೆಯು ಆರೋಗ್ಯಕ್ಕೆ ಹಾನಿಕರ ಎಂದಿದೆ. ಹಾಲಿನೊಂದಿಗೆ ಈ ಕೆಲವು ಪದಾರ್ಥಗಳನ್ನು ಎಂದಿಗೂ ಸೇವಿಸಬಾರದು. ಇದರಿಂದ ಆರೋಗ್ಯ ಮೇಲೆ ಅಡ್ಡಪರಿಣಾಮಗಳು ಉಂಟಾಗುವುದು ಖಚಿತ. ಹಾಗಾದರೆ ಹಾಲಿನ ಜೊತೆ ಯಾವೆಲ್ಲಾ ಆಹಾರಗಳನ್ನು ಸೇವಿಸುವಂತಿಲ್ಲ ನೋಡಿ.

ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ 5 ಆಹಾರಗಳನ್ನು ತಪ್ಪಿಯೂ ಸೇವಿಸಬಾರದು
ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ 5 ಆಹಾರಗಳನ್ನು ತಪ್ಪಿಯೂ ಸೇವಿಸಬಾರದು

ಆಯುರ್ವೇದವು ನಾವು ಸೇವಿಸುವ ಆಹಾರಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬುದನ್ನ ನಮಗೆ ಮನನ ಮಾಡಿಸುತ್ತದೆ. ಆಯುರ್ವೇದದಲ್ಲಿ ಕೆಲವು ಆಹಾರಗಳ ಸಂಯೋಜನೆ ಅಥವಾ ಕಾಂಬಿನೇಷನ್‌ ಅನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ಹೇಳಲಾಗುತ್ತದೆ. ಆಹಾರಕ್ರಮದಲ್ಲಿ ವ್ಯತ್ಯಾಸವಾದರೆ ದೇಹದ ಮೂರು ಮುಖ್ಯ ಅಂಶಗಳಾದ ವಾತ, ಪಿತ್ತ ಮತ್ತು ಕಫಗಳ ಸಮತೋಲನಕ್ಕೆ ತೊಂದರೆ ಉಂಟಾಗಬಹುದು. ಇದರಿಂದಾಗಿ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗಬಹುದು.

ಈ ರೀತಿಯಲ್ಲಿ ಹಾಲಿನ ಸಂಯೋಜನೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದದ ಪ್ರಕಾರ, ಈ 5 ವಸ್ತುಗಳನ್ನು ಹಾಲಿನೊಂದಿಗೆ ಸೇವಿಸಿದರೆ, ಹಾಲಿನ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗಬಹುದು ಅಥವಾ ಜೀರ್ಣಕ್ರಿಯೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆರೋಗ್ಯ ಕೆಡಬಹುದು.

ಹಾಲಿನೊಂದಿಗೆ ತಿನ್ನಬಾರದಂತಹ 5 ಪದಾರ್ಥಗಳು

ಸಿಟ್ರಸ್ ಹಣ್ಣುಗಳು: ಆಯುರ್ವೇದದ ಪ್ರಕಾರ, ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಯಂತಹ ಹುಳಿ ಹಣ್ಣುಗಳನ್ನು ಎಂದಿಗೂ ಹಾಲಿನೊಂದಿಗೆ ಸೇವಿಸಬಾರದು. ಹುಳಿ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹುಳಿ ಹಣ್ಣುಗಳ ಆಮ್ಲೀಯತೆಯಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಈ ಆಹಾರ ಸಂಯೋಜನೆಯು ಹಾಲಿನ ಪೌಷ್ಟಿಕಾಂಶದ ಮೌಲ್ಯಗಳನ್ನು ಕಡಿಮೆ ಮಾಡುವ ಮೂಲಕ ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.

ಮಸಾಲೆಯುಕ್ತ ಆಹಾರ: ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ಹಾಲು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗುತ್ತದೆ. ಹಾಲಿನಲ್ಲಿ ಕಂಡುಬರುವ ಕ್ಯಾಸೀನ್ ಎಂಬ ಪ್ರೊಟೀನ್, ಜೀರ್ಣಕ್ರಿಯೆಯಲ್ಲಿ ಒಳಗೊಂಡಿರುವ ಕಿಣ್ವಗಳನ್ನು ದುರ್ಬಲಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹಾಲಿನ ಪ್ರೊಟೀನ್ ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ ಮಸಾಲೆಯುಕ್ತ ಆಹಾರವು ದೇಹದಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ ಮತ್ತು ಕರುಳಿನಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹಾಲು ಕುಡಿಯುವುದರಿಂದ ಈ ಸಮಸ್ಯೆ ಉಲ್ಬಣಿಸಬಹುದು.

ಸಮುದ್ರ ಆಹಾರ: ಹಾಲಿನೊಂದಿಗೆ ಮೀನಿನಂತಹ ಸಮುದ್ರ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಮೀನು ಮತ್ತು ಹಾಲಿನ ಸ್ವಭಾವವು ವಿಭಿನ್ನವಾಗಿರುವುದೇ ಇದಕ್ಕೆ ಕಾರಣ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ರಾಸಾಯನಿಕ ಅಸಮತೋಲನ ಉಂಟಾಗಬಹುದು, ಇದು ಅಜೀರ್ಣ ಮತ್ತು ಹೊಟ್ಟೆಯ ತೊಂದರೆಯನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತದೆ.

ಹೆಚ್ಚು ನಾರಿನಾಂಶ ಇರುವ ಆಹಾರಗಳು: ಹಾಲಿನೊಂದಿಗೆ ಹೆಚ್ಚಿನ ನಾರಿನಾಂಶ ಅಥವಾ ಫೈಬರ್ ಕಂಟೆಂಟ್ ಇರುವ ಆಹಾರಗಳನ್ನು ಸೇವಿಸುವುದರಿಂದ ಹಾಲಿನ ಜೀರ್ಣಕ್ರಿಯೆಯು ನಿಧಾನಗೊಳ್ಳಬಹುದು. ಇದರಿಂದ ಹೊಟ್ಟೆಯುಬ್ಬರ ಗ್ಯಾಸ್ಟ್ರಿಕ್‌ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು. ನಾರಿನಂಶವಿರುವ ಆಹಾರಗಳನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಭಾರವಾಗುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ.

ಸೊಪ್ಪು ತರಕಾರಿ: ಪಾಲಕ್ ಸೊಪ್ಪಿನಂತಹ ಸೊಪ್ಪಿನ ಆಹಾರಗಳಲ್ಲಿರುವ ಆಕ್ಸಾಲಿಕ್ ಆಮ್ಲವು ಹಾಲಿನಲ್ಲಿರುವ ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ರೂಪಿಸುತ್ತದೆ. ಈ ಸ್ಫಟಿಕವು ಮೂತ್ರಪಿಂಡಗಳು ಅಥವಾ ಮೂತ್ರನಾಳದಲ್ಲಿ ಅಡಚಣೆಯನ್ನು ಉಂಟುಮಾಡಬಹುದು.

Whats_app_banner