ತೂಕ ಇಳಿಕೆಗೆ ಸಹಕಾರಿ ನಿಂಬೆ ಸಿಪ್ಪೆ, ರಸ ಹಿಂಡಿ ಬಿಸಾಕದೆ ಈ ರೀತಿ ಸಿಪ್ಪೆ ಬಳಸಿದ್ರೆ ಕರಗುತ್ತೆ ಬೊಜ್ಜು
lemon peel benefits: ನಿಂಬೆ ಹಣ್ಣಿನ ರಸ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ,ಬೊಜ್ಜು ಕಡಿಮೆ ಮಾಡಲು ನಿಂಬೆ ಹಣ್ಣಿನ ಸಿಪ್ಪೆಯೂ ಸಹಾಯ ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?ನಿಂಬೆ ಹಣ್ಣಿನ ಸಿಪ್ಪೆ ಎಸೆಯುವ ಮೊದಲು ಇದನ್ನೊಮ್ಮೆ ಓದಿ.
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯದ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ವ್ಯಾಯಾಮ ಮತ್ತು ಆಹಾರಾಭ್ಯಾಸಗಳ ವ್ಯತ್ಯಾಸವೇ ಈ ಸಮಸ್ಯೆಗೆ ಬಹುಮುಖ್ಯ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಸ್ಯೆಯಿಂದ ಹೊರಬರಲು ಕಷ್ಟಪಡುವವರನ್ನು ಕಾಣಬಹುದು. ಆದರೆ, ನಿರೀಕ್ಷಿತ ರೀತಿಯಲ್ಲಿ ತೂಕ ಇಳಿಕೆಯಾಗುವುದಿಲ್ಲ ಎಂಬ ಚಿಂತೆ ಕಾಡುತ್ತಿರುತ್ತದೆ. ನಮ್ಮಲ್ಲಿ ಹಲವರು ಬೇಗ ತೂಕ ಇಳಿಸಿಕೊಳ್ಳಬೇಕು ಎಂಬ ಬಯಕೆಯನ್ನು ಇಟ್ಟುಕೊಂಡಿರುತ್ತಾರೆ. ಅಂತಹವರಿಗೆ ನಿಂಬೆ ಹಣ್ಣು ಉತ್ತಮ ಆಯ್ಕೆಯಾಗಿದೆ. ನಿಂಬೆ ಹಣ್ಣು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಅನೇಕರಿಗೆ ತಿಳಿದಿದೆ. ಆದರೆ ನಿಂಬೆ ಸಿಪ್ಪೆಯೂ ಅಷ್ಟೇ ಪರಿಣಾಮಕಾರಿಯಾಗಿ ಬೊಜ್ಜು ಸಮಸ್ಯೆಯನ್ನು ದೂರಮಾಡಬಲ್ಲದು. ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ನಿಂಬೆ ಬಹಳ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಇದು ತೂಕ ಇಳಿಕೆಗೂ ತುಂಬಾ ಸಹಾಯ ಮಾಡುತ್ತದೆ. ಆದರೆ, ನಿಂಬೆ ರಸ ಬಳಸಿದ ನಂತರ ಆ ಸಿಪ್ಪೆಯನ್ನು ವ್ಯರ್ಥ ಎಂದು ಎಸೆಯಲಾಗುತ್ತದೆ. ಆದರೆ, ನಿಂಬೆ ಸಿಪ್ಪೆಯೂ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ನಿಂಬೆ ಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು
ನಿಂಬೆ ಹಣ್ಣಿನ ಸಿಪ್ಪೆ ಕಹಿ ರುಚಿಯನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಹೇಗೆ ಉಪಯುಕ್ತವಾಗಿದೆ ಎಂದು ನೀವು ಆಶ್ಚರ್ಯ ಪಡಬಹುದು. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಫೈಬರ್ ಸಮೃದ್ಧವಾಗಿದೆ. ಇದು ಹೆಚ್ಚು ಕಾಲ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಅಂದರೆ ಬೇಗ ಹಸಿವು ಉಂಟಾಗುವುದಿಲ್ಲ. ಇದಲ್ಲದೆ, ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪಾಲಿಫಿನಾಲ್ಸ್ ಎಂಬ ಪದಾರ್ಥಗಳಿವೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಅವು ಕೊಬ್ಬನ್ನು ಕರಗಿಸಲು ಬಹಳ ಪರಿಣಾಮಕಾರಿಯಾಗಿವೆ. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟ್ಯಾಸಿಯಂ ಮುಂತಾದ ಅನೇಕ ಪೋಷಕಾಂಶಗಳಿವೆ. ಇವು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.
ನಿಂಬೆ ಸಿಪ್ಪೆಯನ್ನು ಈ ರೀತಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು
ಚಹಾ ಮಾಡಿ ಕುಡಿಯಿರಿ: ತೂಕ ಇಳಿಕೆಗೆ ಸಹಾಯ ಮಾಡುವ ನಿಂಬೆ ಹಣ್ಣಿನ ಸಿಪ್ಪೆಯನ್ನು ಹಲವು ವಿಧಗಳಲ್ಲಿ ಸೇವಿಸಬಹುದಾಗಿದೆ. ಮೊದಲನೆಯದಾಗಿ ನಿಂಬೆ ಹಣ್ಣಿನ ಸಿಪ್ಪೆಯಿಂದ ಚಹಾ ತಯಾರಿಸಬಹುದು. ಇದಕ್ಕಾಗಿ ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನೀರು ಅರ್ಧ ಆಗುವಷ್ಟು ಕುದಿಯಲು ಬಿಡಿ. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಈ ಚಹಾವನ್ನು ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲೂ ಕುಡಿಯಬಹುದು. ಇದು ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಕೊಬ್ಬು ಕರಗಿಸಲು ಸಹಾಯಮಾಡುತ್ತದೆ.
ಒಣಗಿದ ಸಿಪ್ಪೆಯಿಂದಲೂ ಚಹಾ ಮಾಡಬಹುದು: ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಬಿಸಿ ನೀರಿಗೆ ಒಂದು ಚಮಚ ಪುಡಿಯನ್ನು ಸೇರಿಸಿ. ಸ್ವಲ್ಪ ಸಮಯದವರೆಗೆ ಚೆನ್ನಾಗಿ ಕುದಿಸಿ. ಇಷ್ಟು ಮಾಡಿದರೆ ಕೊಬ್ಬು ಕರಗಿಸುವ ಚಹಾ ಸಿದ್ಧ. ಅದು ಕಹಿ ರುಚಿಯಿರುವುದರಿಂದ, ಒಂದು ಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು.
ಸಲಾಡ್‌ಗಳಲ್ಲಿ ಸೇರಿಸಬಹುದು: ನಿಂಬೆ ಹಣ್ಣಿನ ಸಿಪ್ಪೆಯನ್ನು ಕೇವಲ ಪಾನೀಯಗಳಿಗೆ ಉಪಯೋಗಿಸಬೇಕೆಂದಿಲ್ಲ. ಅದನ್ನು ತರಕಾರಿ ಮತ್ತು ಸೊಪ್ಪುಗಳ ಸಲಾಡ್ ಅಥವಾ ಹಣ್ಣುಗಳಿಗೂ ಸೇರಿಸಿಬಹುದು. ನಿಂಬೆ ಹಣ್ಣಿನ ಸಿಪ್ಪೆಯ ಪುಡಿಗೆ ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಆ ಪುಡಿಯನ್ನು ಯಾವುದೇ ಸಲಾಡ್ ಅಥವಾ ಹಣ್ಣುಗಳ ಮೇಲೆ ಸಿಂಪಡಿಸಬಹುದು. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜತೆಗೆ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಸಹಾಯ ಮಾಡುವ ನಿಂಬೆ ಹಣ್ಣಿನ ಸಿಪ್ಪೆಯನ್ನು ನಿಮಗಿಷ್ಟ ಬಂದ ಆಹಾರದಲ್ಲಿ ಸೇರಿಸಿಕೊಳ್ಳಿ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.