Lice Remedies: ತಲೆಯಲ್ಲಿ ಹೇನು ಬೆಳೆಯಲು ಕಾರಣವೇನು; ಹೇನುಗಳ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ತಲೆಯಲ್ಲಿ ಹೇನು ಆಗುವ ಸಮಸ್ಯೆಯನ್ನು ಹಲವರು ಎದುರಿಸುತ್ತಾರೆ. ಮಕ್ಕಳ ತಲೆಯಲ್ಲಿ ಹೇನು ಬೆಳೆಯುವುದು ಹೆಚ್ಚು. ಇದರ ನಿವಾರಣೆಗಾಗಿ ವಿಶೇಷ ಶಾಂಪೂಗಳನ್ನೂ ಬಳಸಲಾಗುತ್ತದೆ. ಅದರ ಬದಲು ಈ ಕೆಲವು ಮನೆ ಔಷಧಿಗಳನ್ನು ಬಳಸುವ ಮೂಲಕ ಹೇನಿಗೆ ಪರಿಹಾರ ಕಂಡುಕೊಳ್ಳಬಹುದು. ಇದು ಪರಿಣಾಮಕಾರಿ ಕೂಡ ಹೌದು.

ಚಳಿಗಾಲದಲ್ಲಿ ಶೀತ ವಾತಾವರಣದಿಂದ ತಪ್ಪಿಸಿಕೊಳ್ಳಲು ತಲೆಗೆ ಟೋಪಿ, ಮಫ್ಲರ್ ಧರಿಸುತ್ತೇವೆ. ಇದರೊಂದಿಗೆ ಶೀತ, ನೆಗಡಿ ಆಗಬಹುದು ಎನ್ನುವ ಭಯಕ್ಕೆ ತಲೆಸ್ನಾನ ಮಾಡುವುದು ಕಡಿಮೆ. ಆದರೆ ಇವೆಲ್ಲವೂ ಕೂದಲಿನಲ್ಲಿ ಶಿಲೀಂಧ್ರ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ತುರಿಕೆ ಮತ್ತು ಸುಡುವಿಕೆಗೆ ಕಾರಣವಾಗುತ್ತದೆ. ವಾಸ್ತವವಾಗಿ, ಸರಿಯಾದ ಕೂದಲ ಆರೈಕೆಯ ಕೊರತೆಯಿಂದಾಗಿ ಹೇನುಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ಪರಿಹಾರ ಪಡೆಯಲು, ಜನರು ನಿಯಮಿತವಾಗಿ ಹೇನು ವಿರೋಧಿ ಶಾಂಪೂಗಳನ್ನು ಬಳಸಿ ತಲೆಸ್ನಾನ ಮಾಡುತ್ತಾರೆ. ಆದರೆ ಇದರ ಹೊರತಾಗಿ, ಕೆಲವು ಮನೆಮದ್ದುಗಳು ಹೇನು ನಿವಾರಣೆಗೆ ಉಪಯುಕ್ತವಾಗಿವೆ. ಹೇನುಗಳಿಂದ ಪರಿಹಾರ ಪಡೆಯಲು ಸರಳ ಹಾಗೂ ಪರಿಣಾಮಕಾರಿ ಮನೆಮದ್ದುಗಳು ಯಾವುವು ನೋಡಿ.
ಹೇನು ಎಂದರೇನು ಮತ್ತು ಅವು ಹೇಗೆ ಬೆಳೆಯುತ್ತವೆ?
ಸಿಡಿಸಿ ಪ್ರಕಾರ, ಹೇನುಗಳು ಒಂದು ರೀತಿಯ ಪರಾವಲಂಬಿ ಮತ್ತು ಕೀಟಗಳಾಗಿವೆ. ಇವು ತಲೆ ಮತ್ತು ಪ್ಯುಬಿಕ್ ಪ್ರದೇಶದಲ್ಲಿ ಕಂಡುಬರುತ್ತವೆ. ಹೇನುಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ ಮತ್ತು ರಕ್ತ ಕುಡಿದು ಬದುಕುತ್ತವೆ. ಯಾವುದೇ ಚರ್ಮದ ಸೋಂಕು ಇದ್ದರೆ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದರೆ ಈ ಸಮಸ್ಯೆಯು ಹೆಚ್ಚಾಗುತ್ತದೆ. ಇದು ನಾಯಿಗಳು, ಬೆಕ್ಕುಗಳು ಮತ್ತು ಇತರ ಸಾಕುಪ್ರಾಣಿಗಳಿಂದ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗೆ ಒಡ್ಡಿಕೊಂಡಂತೆ ಅಪಾಯವು ಹೆಚ್ಚಾಗುತ್ತದೆ. ಇವು ಜಿಗಿಯುವ, ಹಾರುವ ಮತ್ತು ಹರಡುವ ಬದಲು ತೆವಳುವ ಮೂಲಕ ಚಲಿಸುತ್ತವೆ. ಹೇನುಗಳು ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ಬೇಗ ಹರಡುತ್ತವೆ.
ತಲೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು
ಒದ್ದೆ ಬಾಚಣಿಗೆ
ನೆತ್ತಿಯ ಮೇಲೆ ಬೆಳೆಯುವ ಹೇನುಗಳು ತುಂಬಾ ಚಿಕ್ಕದಾಗಿರುತ್ತವೆ. ಅವುಗಳನ್ನು ತೆಗೆದು ಹಾಕುವುದು ಬಹಳ ಕಷ್ಟ, ಚಿಕ್ಕ ಹೇನುಗಳು ನೆತ್ತಿಗೆ ಅಂಟಿಕೊಂಡಿರುತ್ತವೆ. ಇದನ್ನು ತೆಗೆದು ಹಾಕಲು ಉತ್ತಮ ಪರಿಹಾರ ಎಂದರೆ ಬಾಚಣಿಗೆಯನ್ನು ಒದ್ದೆ ಮಾಡಿ ಕೂದಲನ್ನು ಬಾಚಿಕೊಳ್ಳುವುದು. ಇದಲ್ಲದೆ, ಕೂದಲಿನ ಬುಡಕ್ಕೆ ನೀರು ಸಿಂಪಡಿಸಿ. ನಂತರ ಕೂದಲನ್ನು ಬುಡದಿಂದಲೇ ಬಾಚಿಕೊಳ್ಳಿ. ಇದರಿಂದ ನೆತ್ತಿ ಬುಡದಲ್ಲಿ ಅಂಟಿಕೊಂಡಿರುವ ಹೇನುಗಳನ್ನು ತೆಗೆದುಹಾಕಲು ಸಾಧ್ಯವಿದೆ.
ತುಳಸಿ ರಸ
ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳಿಂದ ಸಮೃದ್ಧವಾಗಿದ್ದು, ಕೂದಲನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಹಿಡಿ ತುಳಸಿ ಎಲೆಗಳನ್ನು ತೊಳೆದು ನುಣ್ಣಗೆ ಕತ್ತರಿಸಿ. ಈಗ ಅದರ ಪೇಸ್ಟ್ ತಯಾರಿಸಿ. ತಲೆಸ್ನಾನಕ್ಕೂ 30 ನಿಮಿಷಗಳ ಮೊದಲು ಅದನ್ನು ಹಚ್ಚಿ. ಇದು ಹೇನುಗಳ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಈರುಳ್ಳಿ ರಸವನ್ನು ಹಚ್ಚಿ
ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಮತ್ತು ಸಲ್ಫರ್ ಇದ್ದು, ಇದು ಕೂದಲಿನಲ್ಲಿ ಹೇನುಗಳು ಬೆಳೆಯುವುದನ್ನು ತಡೆಯುತ್ತದೆ. ಇದರ ಉರಿಯೂತ ನಿವಾರಕ ಗುಣಲಕ್ಷಣಗಳಿಂದಾಗಿ, ಊತ ಮತ್ತು ಉರಿಯೂತ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈರುಳ್ಳಿಯನ್ನು ಪೇಸ್ಟ್ ಮಾಡಿ ಅದರ ರಸವನ್ನು ಹೊರತೆಗೆದು ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ಈಗ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ಕರ್ಪೂರದ ಬಳಕೆ
ಕರ್ಪೂರವನ್ನು ನೆತ್ತಿಯ ನಿರ್ವಿಷಗೊಳಿಸುವ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ. ಕರ್ಪೂರವನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಹೇನುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿರುವುದು ಮಾತ್ರವಲ್ಲದೆ, ಇದರ ಬಲವಾದ ವಾಸನೆಯು ಹೇನುಗಳನ್ನು ಹಿಮ್ಮೆಟ್ಟಿಸಲು ಸಹ ಉಪಯುಕ್ತವಾಗಿದೆ. ಕರ್ಪೂರವನ್ನು ಪುಡಿಮಾಡಿ, ತೆಂಗಿನ ಎಣ್ಣೆಗೆ ಸೇರಿಸಿ ಕುದಿಸಿ. ಬೇಕಿದ್ದರೆ ಭೃಂಗರಾಜವನ್ನೂ ಸೇರಿಸಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ