ಪೋಷಕಾಂಶಗಳ ಆಗರ ಈ ವಿಟಮಿನ್ ಸೊಪ್ಪು; ಇದರ ಪ್ರಯೋಜನ, ಇದರಿಂದ ತಯಾರಿಸಬಹುದಾದ ಖಾದ್ಯಗಳ ಮಾಹಿತಿ
ವಿಟಮಿನ್ ಸೊಪ್ಪು ಅಥವಾ ಚಕ್ರಮುನಿ ಸೊಪ್ಪು ಎಂದು ಕರೆಯುವ ಪೋಷಕಾಂಶಗಳ ಆಗರವಾಗಿರುವ ಈ ಎಲೆಗಳ ಪ್ರಯೋಜನ ಅನೇಕ. ಇದರಿಂದ ಮಾಡಿದ ಪದಾರ್ಥಗಳು ಕಾಣಲು ಹಸಿರಾಗಿಯೂ, ಬಾಯಿಗೆ ರುಚಿಯಾಗಿಯೂ ಇದು ಇರುತ್ತದೆ.
ವಿಟಮಿನ್ ಸೊಪ್ಪು, ಹೆಸರೇ ಸೂಚಿಸುವಂತೆ ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಗಿಡವನ್ನು ಬೆಳೆಸಲು ನೀವು ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ. ನೀರು ಗೊಬ್ಬರ ಉಣಬಡಿಸಬೇಕಿಲ್ಲ. ನಿಮ್ಮ ಹೂದೋಟದ ನಡುವೆಯೇ ಇದೊಂದು ಗಿಡವನ್ನು ನೆಟ್ಟುಕೊಳ್ಳಬಹುದು ಯಾಕೆಂದರೆ ಇದರಿಂದ ನೀವು ರುಚಿಕರವಾದ ಅಡುಗೆಯನ್ನು ಮಾಡಬಹುದು. ಈ ವಿಟಮಿನ್ ಸೊಪ್ಪನ್ನು ಚಕ್ರಮುನಿ ಸೊಪ್ಪು ಎಂದು ಸಹ ಕರೆಯುತ್ತಾರೆ. ಈ ಗಿಡದ ಸೊಪ್ಪು, ಚಿಗುರು ಮತ್ತು ಕಾಂಡ ಎಲ್ಲವನ್ನೂ ಬಳಸಿ ನೀವು ಅಡುಗೆ ಮಾಡಬಹುದು. ಇದರಿಂದ ಚಟ್ನಿ, ತಂಬುಳಿ ಹಾಗೂ ಪಲ್ಯವನ್ನು ತಯಾರಿಸಬಹುದು.
ಈ ಸೊಪ್ಪನ್ನು ನೀವು ಸುಲಭವಾಗಿ ಗುರುತಿಸಬಹುದು ಯಾಕೆಂದರೆ ಇದು ಕಾಣಲು ಕರಿಬೇವಿನ ಸೊಪ್ಪಿನ ರೀತಿಯಲ್ಲೇ ಇರುತ್ತದೆ.
ರಕ್ತ ಹೀನತೆ ಇದ್ದವರಿಗೆ ಒಳ್ಳೆಯದು
ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಈ ಸೊಪ್ಪು ರಕ್ತ ಹೀನತೆ ಇರುವವರಿಗೆ ತುಂಬಾ ಉಪಕಾರಿ ರಕ್ತಹೀನತೆ ಇರುವವರು ಈ ಸೊಪ್ಪಿನ ಪದಾರ್ಥ ಗಳನ್ನು ಸೇವಿಸಿದರೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮುಟ್ಟಿನ ದಿನದಲ್ಲಿ ಈ ಸೊಪ್ಪಿನ ಪದಾರ್ಥಗಳನ್ನ ಸೇವಿಸಬೇಕು ಯಾಕೆಂದರೆ ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿರುವುದರಿಂದ ದೇಹಕ್ಕೆ ಇನ್ನಷ್ಟು ಬಲ ನೀಡುತ್ತದೆ ಜೀವಕೋಶಗಳ ಅಭಿವೃದ್ಧಿ ಹಾಗೂ ಸ್ನಾಯುವಿನ ರಚನೆಗೆ ಇದು ಸಹಾಯ
ಪಲ್ಯ ಮಾಡುವ ವಿಧಾನ
ಇದರಿಂದ ನೀವು ಪಲ್ಯವನ್ನು ತಯಾರಿಸಬಹುದು. ಪಲ್ಯ ಮಾಡುವ ವಿಧಾನ ಇಲ್ಲಿದೆ. ಮೊದಲಿಗೆ ವಿಟಮಿನ್ ಸೊಪ್ಪನ್ನು ತೆಗೆದುಕೊಳ್ಳಿ. ನಂತರ ಎಲೆಗಳನ್ನು ಬಿಡಿಸಿ ಹೆಚ್ಚಿಕೊಳ್ಳಿ. ನಂತರ ಬಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಗೆ ಸ್ವಲ್ಪ ಅರಿಶಿನ ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಅದಾದ ಮೇಲೆ ಈ ಎಲ್ಲಾ ಸೊಪ್ಪುಗಳನ್ನು ಅದೇ ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದರ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪೇ ಸ್ವಲ್ಪ ಸಕ್ಕರೆ ಹಾಕಿ. ಇದು ಬಾಡುತ್ತದೆ ಬಾಡಿದ ನಂತರ ನೀವು ಇದನ್ನು ಬಡಿಸಿಕೊಂಡು ತಿನ್ನಬಹುದು.
ವಿಟಮಿನ್ ಸೊಪ್ಪಿನ ತಂಬುಳಿ
ವಿಟಮಿನ್ ಸೊಪ್ಪಿನ ತಂಬುಳಿ ಮಾಡುವ ವಿಧಾನ ಮೊದಲಿಗೆ ವಿಟಮಿನ್ ಸೊಪ್ಪುಗಳನ್ನು ಬಿಡಿಸಿಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ಬದಿಗಿಟ್ಟುಕೊಳ್ಳಿ. ನಂತರ ಬಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಗೂ ಸ್ವಲ್ಪ ಅರಿಶಿನ ಹಾಕಿ ನಂತರ ಪಕ್ಕದಲ್ಲಿ ತೆಗೆದಿಟ್ಟ ವಿಟಮಿನ್ ಸೊಪ್ಪುಗಳನ್ನು ಅದಕ್ಕೆ ಹಾಕಿ. ಚೆನ್ನಾಗಿ ಬಾಡಿಸಿಕೊಳ್ಳಿ. ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಕಾಯಿ ತುರಿಯನ್ನು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಇದು ಚೆನ್ನಾಗಿ ರುಬ್ಬಿದ ನಂತರ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮತ್ತೆ ಒಗ್ಗರಣೆ ಮಾಡಿ ಉಪ್ಪು ಸೇರಿಸಿ. ಬಿಸಿ ಅನ್ನದ ಜೊತೆ ಸವಿಯಿರಿ. ಕಾಣಲು ಹಸಿರಾಗಿಯೂ ಬಾಯಿಗೆ ರುಚಿಯಾಗಿಯೂ ಇದು ಇರುತ್ತದೆ.