ಪಾದದಲ್ಲಿ ತುರಿಕೆ, ಹಿಮ್ಮಡಿ ಒಡೆದರೆ ಕಡೆಗಣಿಸದಿರಿ; ಇದು ಲಿವರ್‌ಗೆ ಆಗಿರೋ ಹಾನಿಯ ಲಕ್ಷಣ ಎನ್ನುತ್ತಾರೆ ವೈದ್ಯರು
ಪಾದದಲ್ಲಿ ತುರಿಕೆಯಾದರೆ, ಅಥವಾ ಹಿಮ್ಮಡಿ ಒಡೆದರೆ ಸಾಮಾನ್ಯವೆಂದು ಪರಿಗಣಿಸುತ್ತೇವೆ. ಆದರೆ, ದೇಹದ ಒಳಗಿರುವ ಪ್ರಮುಖ ಅಂಗವಾದ ಲಿವರ್‌ಗೂ ಪಾದಕ್ಕೂ ಸಂಬಂಧವಿದೆ ಎನ್ನುತ್ತಾರೆ ವೈದ್ಯರು. ಯಕೃತ್ತಿಗೆ ಏನಾದರೂ ಹಾನಿಯಾಗಿದ್ದರೆ, ಅದರ ಲಕ್ಷಣ ಪಾದದಲ್ಲಿ ಕಾಣಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಯಕೃತ್ತು ಅಥವಾ ಲಿವರ್ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಲಿವರ್‌ಗೆ ಯಾವುದೇ ರೀತಿಯ ಹಾನಿಯಾಗದಂತೆ ಕಾಪಾಡುವುದು ತುಂಬಾ ಮುಖ್ಯ. ಒಂದು ವೇಳೆ ಯಕೃತ್ತಿಗೆ ಏನಾದರೂ ಹಾನಿಯಾದರೆ, ಅದು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಆಗುವುದಿಲ್ಲ. ಕ್ರಮೇಣ ಇದು ಸಂಪೂರ್ಣ ದೇಹದ ಕಾರ್ಯವೈಖರಿ ಮೇಲೂ ಪ್ರಭಾವ ಬೀರುತ್ತದೆ. ಅಲ್ಲದೆ ಜೀವಕ್ಕೆ ಅಪಾಯವಾಗುವ ಸಂಭವವೂ ಇದೆ. ಹೀಗಾಗಿ ದೇಹದ ಆಂತರಿಕ ಭಾಗಗಳನ್ನು ಆಗಾಗ ಪರೀಕ್ಷೆ ನಡೆಸುವುದು ಅಗತ್ಯ. ನಿಮಗೆ ಯಕೃತ್ತಿನ ಹಾನಿಯ ಬಗ್ಗೆ ಆರಂಭಿಕ ಹಂತದಲ್ಲಿ ತಿಳಿದು ಬಂದರೆ, ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಹೆಚ್ಚಿನ ಅಪಾಯ ತಪ್ಪಿಸಲು ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆಯಬೇಕಾಗುತ್ತದೆ.
ದೇಹಕ್ಕೆ ಯಾವುದೇ ಅಪಾಯವಿದ್ದರೂ, ಅದನ್ನು ಪತ್ತೆಹಚ್ಚುವುದು ಮೊದಲ ಸವಾಲು. ಯಕೃತ್ತಿಗೆ ಹಾನಿಯಾದರೆ ಅದರ ಲಕ್ಷಣಗಳನ್ನು ಗುರುತಿಸುವುದು ಮೊದಲ ಹಂತವಾಗಿದೆ. ಇದನ್ನು ದೇಹದ ವಿವಿಧ ಭಾಗಗಳ ಮೂಲಕ ಮಾಡಬಹುದು. ನಿಮ್ಮ ಪಾದಗಳ ಮೂಲಕ ಲಿವರ್ ಡ್ಯಾಮೇಜ್ ಆಗಿರುವ ಕುರಿತು ಪತ್ತೆ ಮಾಡಬಹುದು.
ಯಕೃತ್ತಿನ ಆರೋಗ್ಯದ ಕುರಿತು ಡಾ.ಎರಿಕ್ ಬರ್ಗ್ ಅವರು ಮಾಹಿತಿ ನೀಡಿದ್ದಾರೆ. ಯಾರಿಗಾದರೂ ಯಕೃತ್ತಿನ ಕಾಯಿಲೆಯಿದ್ದರೆ ಅದು ಅವರ ಪಾದಗಳ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ. ದೇಹದ ಒಳಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ದೇಹದ ಕೆಲವು ಭಾಗಗಳು ಸಹಾಯ ಮಾಡುತ್ತವೆ. ಮುಖ್ಯವಾಗಿ ಪಾದವನ್ನು ನೋಡುವ ಮೂಲಕ ಲಿವರ್ ಆರೋಗ್ಯ ಹೇಗಿದೆ ಎಂಬ ಸುಳಿವು ಪಡೆಯಬಹುದು.
ಯಕೃತ್ತಿಗೆ ಆಗುವ ಹಾನಿಯ ಈ ಲಕ್ಷಣಗಳು ಪಾದದಲ್ಲಿ ಕಾಣುತ್ತದೆ
ಪಾದದಲ್ಲಿ ತುರಿಕೆ
ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸವು ತುಂಬಾ ದಪ್ಪಗಾದರೆ ಪಾದಗಳಲ್ಲಿ ತುರಿಕೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಪಿತ್ತರಸವು ಯಕೃತ್ತಿಗೆ ಹಿಂತಿರುಗುತ್ತದೆ ಮತ್ತು ನಂತರ ರಕ್ತಕ್ಕೆ ಹಿಂತಿರುಗುತ್ತದೆ. ರಕ್ತದಿಂದ ಅಂಗಾಂಶಗಳಿಗೆ ಹಿಂತಿರುಗಿದಾಗ ತುರಿಕೆಯ ರೂಪದಲ್ಲಿ ನಿಮಗೆ ಅನುಭವವಾಗಬಹುದು. ಪಾದಗಳಲ್ಲಿ ಅಸಹನೀಯ ತುರಿಕೆ ಶುರುವಾದರೆ ರಾತ್ರಿಯಿಡೀ ಕಿರಿಕಿರಿಯಾಗುತ್ತದೆ. ಹೀಗಾದರೆ ಆ ಸಮಸ್ಯೆ ಬಹುಶಃ ಪಾದಗಳಿಂದ ಅಲ್ಲ, ಯಕೃತ್ತಿನ ಸಮಸ್ಯೆಯಿಂದ ಈ ಲಕ್ಷಣ ಗೋಚರಿಸುತ್ತದೆ.
ಕೆಂಪು ಮತ್ತು ಕಂದು ಬಣ್ಣದ ಕಲೆಗಳು
ಸಕ್ಕರೆ ಕಾಯಿಲೆ ಇರುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಿದು. ಇದೇ ವೇಳೆ ಸಿರೋಸಿಸ್ ಅಥವಾ ಹೆಪಟೈಟಿಸ್ ಅಥವಾ ತೀವ್ರವಾದ ಕೊಬ್ಬಿನ ಯಕೃತ್ತು ಇದ್ದರೆ, ದೇಹದ ಕೆಳಭಾಗದಲ್ಲಿ ರಕ್ತಪರಿಚಲನೆಯು ಸರಿಯಾಗಿ ಆಗದಿದ್ದರೆ, ಕೆಂಪು ಮತ್ತು ಕಂದು ಬಣ್ಣದ ಚುಕ್ಕಿಗಳು ಪಾದಗಳಲ್ಲಿ ಕಾಣಿಸುತ್ತವೆ. ಯಕೃತ್ತು ವಿಟಮಿನ್ ಕೆ ಜೊತೆಗೆ ಬಹಳಷ್ಟು ಸಂಬಂಧ ಹೊಂದಿದೆ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದ ವಿವಿಧ ಭಾಗಗಳಲ್ಲಿ ಬಣ್ಣಬಣ್ಣದ ಕಲೆ ಕಾಣಿಸುತ್ತದೆ.
ಒಡೆದ ಮತ್ತು ಒಣ ಹಿಮ್ಮಡಿ
ಒಮೆಗಾ -3 ಕೊರತೆಯಾದಾಗ ಹಿಮ್ಮಡಿಯಲ್ಲಿ ಒಣಗಿದ ಮತ್ತು ಬಿರುಕು ಕಾಣಿಸುತ್ತದೆ. ದುರ್ಬಲ ಯಕೃತ್ತಿನ ಕಾರ್ಯದಲ್ಲಿ ವ್ಯತ್ಯಾಸಗಳಾಗುತ್ತವೆ. ಇದರ ಲಕ್ಷಣವಾಗಿ ಪಾದದ ಹಿಮ್ಮಡಿಯಲ್ಲಿ ಒಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.
ಕಾಲ್ಬೆರಳಿನ ಉಗುರು ಮತ್ತು ಲಿವರ್‌ಗಿದೆ ಸಂಬಂಧ
ಕಾಲಿನ ಉಗುರು ಸಮಸ್ಯೆಗಳು ಕೂಡಾ ಲಿವರ್ ಡ್ಯಾಮೇಜ್ ಬಗ್ಗೆ ಸುಳಿವು ನೀಡಬಲ್ಲದು. ಡಿಸ್ಟ್ರೋಫಿಕ್ ಉಗುರುಗಳು, ಒನಿಕೊಮೈಕೋಸಿಸ್, ಲ್ಯುಕೋನಿಚಿಯಾ, ಒನಿಕೊರೆಕ್ಸಿಸ್ ಮತ್ತು ಕ್ಲಬ್ ಉಗುರು ಯಕೃತ್ತಿನ ಹಾನಿಯ ಸುಳಿವು ಕೊಡುತ್ತದೆ ಎಂದು ಡಾಕ್ಟರ್ ಹೇಳುತ್ತಾರೆ. ಹೀಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ, ಒಮ್ಮೆ ವೈದ್ಯರನ್ನು ಸಂಪರ್ಕಿಸಿ.
(ಇದು ವೈದ್ಯರು ಹೇಳಿದ ಮಾಹಿತಿಯ ಆಧಾರದಲ್ಲಿ ನೀಡಲಾದ ಮಾಹಿತಿ. ಹೀಗಾಗಿ ಯಾವುದೇ ರೋಗಲಕ್ಷಣ ಕಂಡುಬಂದರೆ, ವೈದ್ಯರ ಸಲಹೆ ತೆಗೆದುಕೊಂಡ ಬಳಿಕ ಚಿಕಿತ್ಸೆ ಪಡೆಯುವ ನಿರ್ಧಾರಕ್ಕೆ ಬನ್ನಿ.)
ವಿಭಾಗ