Mood Disorders: ಪದೇ ಪದೇ ಮೂಡ್ ಚೇಂಜ್ ಆಗುತ್ತಾ, ವಿಟಮಿನ್ ಕೊರತೆಯು ಕಾರಣವಿರಬಹುದು, ನಿರ್ಲಕ್ಷ್ಯ ಮಾಡ್ಬೇಡಿ
ಮೂಡ್ ಅನ್ನೋದು ಯಾವಾಗ ಹೇಗಿರುತ್ತೆ ಹೇಳೋಕಾಗೊಲ್ಲ. ಒಮ್ಮೆ ಖುಷಿ ಇದ್ರೆ, ಸಡನ್ ಆಗಿ ಬೇಸರ ಆಗುತ್ತೆ, ಇನ್ನೂ ಕೆಲವೊಮ್ಮೆ ಆತಂಕ ಕಾಡುತ್ತೆ. ಪದೇ ಪದೇ ಮೂಡ್ ಚೇಂಜ್ ಆಗೋರ ಲಿಸ್ಟ್‌ನಲ್ಲಿ ನೀವೂ ಇದ್ದೀರಾ, ಇದಕ್ಕೆ ವಿಟಮಿನ್ ಕೊರತೆಯು ಕಾರಣವಿರಬಹುದು. ಹಾಗಾದ್ರೆ ಮಿಟಮಿನ್ ಕೊರತೆ, ಮೂಡ್ ಚೇಂಜ್ ಆಗೋದಕ್ಕೂ ಏನ್ ಸಂಬಂಧ ನೋಡಿ.

ಮಾನಸಿಕ ಆರೋಗ್ಯಕ್ಕೂ ದೈಹಿಕ ಆರೋಗ್ಯಕ್ಕೂ ಸಾಕಷ್ಟು ಕನೆಕ್ಷನ್‌ಗಳಿವೆ. ದೇಹದಲ್ಲಿನ ಪೋಷಕಾಂಶಗಳ ಕೊರತೆಯು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಇದು ಮನಸ್ಥಿತಿಗೂ ಸಂಬಂಧಿಸಿದೆ. ಪದೇ ಪದೇ ಮೂಡ್ ಚೇಂಜ್ ಆಗ್ತಾ ಇದ್ರೆ ಅದಕ್ಕೆ ವಿಟಮಿನ್ ಕೊರತೆಯೂ ಕಾರಣವಿರಬಹುದು. ವಿಟಮಿನ್ ಬಿ-12 ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ಮನಸ್ಥಿತಿ ಮತ್ತು ಇತರ ಮೆದುಳಿನ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ವಿಟಮಿನ್ ಬಿ-12 (ಕೋಬಾಲಾಮಿನ್ ಎಂದೂ ಕರೆಯುತ್ತಾರೆ) ಕೆಂಪು ರಕ್ತ ಕಣಗಳ ರಚನೆ, ಜೀವಕೋಶದ ಚಯಾಪಚಯ, ನರಗಳ ಕಾರ್ಯ ಮತ್ತು ಡಿಎನ್‌ಎ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ವಿಟಮಿನ್ ಬಿ 12 ಕೊರತೆಯ ಕೆಲವು ಸಾಮಾನ್ಯ ಲಕ್ಷಣಗಳು ಎಂದರೆ ವಿಚಿತ್ರ ಸಂವೇದನೆಗಳು, ಮರಗಟ್ಟುವಿಕೆ ಕೈಗಳು, ಕಾಲುಗಳು ಅಥವಾ ಪಾದಗಳಲ್ಲಿ ಜುಮ್ಮೆನ್ನುವುದು, ನಡೆಯಲು ತೊಂದರೆ (ದಿಗ್ಭ್ರಮೆಗೊಳಿಸುವಿಕೆ, ಸಮತೋಲನದ ಸಮಸ್ಯೆಗಳು), ರಕ್ತಹೀನತೆ, ಅರಿವಿನ ತೊಂದರೆಗಳು, ನೆನಪಿನ ಶಕ್ತಿ ಕುಂಠಿತವಾಗುವುದು, ದೌರ್ಬಲ್ಯ ಹಾಗೂ ಆಯಾಸದಂತಹ ಸಮಸ್ಯೆಗಳು ಕಾಡಬಹುದು.
ವಿಟಮಿನ್ ಬಿ-12 ಮನಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ವಿಟಮಿನ್ B-12 ಮತ್ತು ಇತರ B ಜೀವಸತ್ವಗಳು ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು ಮನಸ್ಥಿತಿ ಮತ್ತು ಇತರ ಮೆದುಳಿನ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ. ವಿಟಮಿನ್ 12, ಬಿ 6 ಮತ್ತು ಫೋಲೆಟ್‌ನಂತಹ ಬಿ ವಿಟಮಿನ್‌ಗಳ ಕೊರತೆಯು ಖಿನ್ನತೆಗೆ ಕಾರಣವಾಗಬಹುದು ಎಂದು ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಸರ್ ಗಂಗಾ ರಾಮ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ ಅನ್ಶು ರೋಹ್ಟಗಿ ಹೇಳಿದ್ದಾಗಿ ಇಂಡಿಯಾ ಡಾಟ್ ಕಾಮ್ ಉಲ್ಲೇಖಿಸಿದೆ.
ಕಳಪೆ ಆಹಾರ ಸೇವನೆ ಹಾಗೂ ವಿಟಮಿನ್ ಅಂಶವ ಸರಿಯಾಗಿ ದೇಹಕ್ಕೆ ಸೇರದೆ ಇದ್ದಾಗ ವಿಟಮಿನ್ ಬಿ ಅಂಶಗಳ ಕೊರತೆ ಕಾಡಬಹುದು. ಹಾಗಾಗಿ ದೇಹದಲ್ಲಿ ಸಾಕಷ್ಟು ವಿಟಮಿನ್ ಬಿ 12 ಅಂಶ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದು ನಮ್ಮ ಒಟ್ಟಾರೆ ಮನಸ್ಥಿತಿಯ ಸುಧಾರಣೆಗೂ ಬಹಳ ಮುಖ್ಯ. ವಿಟಮಿನ್ ಬಿ 12 ಮುಖ್ಯವಾಗಿ ಕೋಳಿ, ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದು ಔಷಧಿಗಳ ರೂಪದಲ್ಲೂ ಲಭ್ಯವಿದೆ.
ವಿಟಮಿನ್ ಬಿ-12 ಕೊರತೆಗೆ ಯಾರ ಹೆಚ್ಚು ಒಳಗಾಗ್ತಾರೆ?
ಸಸ್ಯಹಾರಿಗಳು ಹಾಗೂ ವೇಗನ್ ಡಯೆಟ್ ಕ್ರಮ ಪಾಲಿಸುವವರಲ್ಲಿ ವಿಟಮಿನ್ ಬಿ 12 ಕೊರತೆ ಕಾಣಿಸಬಹುದು. ವಯಸ್ಸಾದವರು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಜೀರ್ಣಾಂಗವ್ಯೂಹದ ಪರಿಸ್ಥಿತಿ ಹೊಂದಿರುವ ಜನರು ಸಹ ವಿಟಮಿನ್ ಬಿ -12 ಕೊರತೆಗೆ ಒಳಗಾಗುತ್ತಾರೆ. ವಿಟಮಿನ್ ಬಿ 12 ಸಿರೊಟೋನಿನ್ ನಂತಹ ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದು ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. B12 ಮಟ್ಟಗಳು ಕುಸಿದಾಗ, ಈ ರಾಸಾಯನಿಕಗಳು ಅಸಮತೋಲನಗೊಳ್ಳಬಹುದು, ಇದು ಮೂಡ್ ಸ್ವಿಂಗ್, ಕಿರಿಕಿರಿ ಮತ್ತು ಖಿನ್ನತೆಯಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ ಗುರುಪ್ರಸಾದ್ ಹೊಸೂರ್ಕರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ವಿಟಮಿನ್ ಬಿ 12 ಕೊರತೆಯಿಂದ ಪುರುಷರು ಹಾಗೂ ಮಹಿಳೆಯರು ಇಬ್ಬರು ಮೂಡ್ ಸ್ಪಿಂಗ್ ಅನ್ನು ಅನುಭವಿಸಬಹುದು.
́ʼವಿಟಮಿನ್ B12 ಕೊರತೆಯು ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು amp ನಂತಹ ಹಲವಾರು ನರವೈಜ್ಞಾನಿಕ ಲಕ್ಷಣಗಳನ್ನು ಉಂಟುಮಾಡುತ್ತದೆ. ಪಾದಗಳ ಸುಡುವಿಕೆ, ಅಸಮತೋಲನ, ಮೆಮೊರಿ ದುರ್ಬಲತೆ, ಮೂಡ್ ಡಿಸಾರ್ಡರ್ಸ್, ಸೈಕೋಸಿಸ್, ರೋಗಗ್ರಸ್ತವಾಗುವಿಕೆಗಳು ಮತ್ತು ಪಾರ್ಕಿನ್ಸೋನಿಸಂ ಇಂತಹ ಸಮಸ್ಯೆಗಳು ಕೂಡ ಎದುರಾಗಬಹುದುʼ ಎಂದು ಹೈದರಾಬಾದ್‌ನ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಡಾ. ಸುಧೀರ್ ಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನರವೈಜ್ಞಾನಿಕ ಅಥವಾ ಮನೋವೈದ್ಯಕೀಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಯಲ್ಲಿ, ವಿಟಮಿನ್ ಬಿ 12 ಕೊರತೆಯನ್ನು ಒಂದು ಕಾರಣವೆಂದು ಶಂಕಿಸಲಾಗಿದೆ. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ತ್ವರಿತವಾಗಿ ಪ್ರಾರಂಭಿಸುವುದು ರೋಗಿಯ ರೋಗಲಕ್ಷಣಗಳನ್ನು ತ್ವರಿತವಾಗಿ ಸುಧಾರಿಸುತ್ತದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸುವುದು, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ದೈಹಿಕವಾಗಿ ಸಕ್ರಿಯವಾಗಿರುವುದು, ಸಾಕಷ್ಟು ನಿದ್ರೆ ಪಡೆಯುವುದು ಮತ್ತು ಒತ್ತಡವನ್ನು ನಿರ್ವಹಿಸುವುದು ಕೂಡ ದೇಹದಲ್ಲಿ ವಿಟಮಿನ್ ಕೊರತೆಯನ್ನು ನೀಗಿಸಬಹುದು ಎಂದು ಅವರು ಹೇಳುತ್ತಾರೆ.
