ಮಳೆಗಾಲದಲ್ಲಿ ಆರೋಗ್ಯ ಕಾಪಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಗಳಿವು; ವೈದ್ಯರಿಂದ ದೂರವಿರಲು ಪ್ರತಿದಿನ ಕುಡಿಯಿರಿ
ಮಳೆಗಾಲದಲ್ಲಿ ಬೇಡವೆಂದರೂ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಜ್ವರ, ಕೆಮ್ಮುವಿನಿಂದ ಹಿಡಿದು ಮಲೇರಿಯಾ ಡೆಂಗ್ಯೂವರೆಗೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ಕಷಾಯಗಳ ಸೇವನೆ ಉತ್ತಮ, ಈ ಕಷಾಯಗಳು ರೋಗನಿರೋಧಕ ಶಕ್ತಿ ಹೆಚ್ಚುವಲ್ಲು ಪ್ರಮುಖ ಪಾತ್ರ ವಹಿಸುತ್ತವೆ.
ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂತು. ಬಿರು ಬೇಸಿಗೆಯಿಂದ ಮಳೆಗಾಲದ ಶೀತ ವಾತಾವರಣಕ್ಕೆ ಬದಲಾದ ಕೂಡಲೇ ಆರೋಗ್ಯದಲ್ಲಿ ವ್ಯತ್ಯಯ ಕಾಣಿಸುವುದು ಸಹಜ. ಅದರಲ್ಲೂ ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಸಾಮಾನ್ಯ ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳ ನಿವಾರಣೆಗೆ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ. ಮನೆಯ ಅಕ್ಕಪಕ್ಕದಲ್ಲಿ ಸಿಗುವ ಅಥವಾ ಅಡುಗೆಮನೆಯಲ್ಲೇ ಇರುವ ಗಿಡಮೂಲಿಕೆಗಳಿಂದ ಕಷಾಯ ತಯಾರಿಸಿ ಕುಡಿಯಬಹುದು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಕಷಾಯ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ, ಮಾತ್ರವಲ್ಲ ಇಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಅಮೃತಬಳ್ಳಿ ಕಷಾಯ
ಬೇಕಾಗುವ ಸಾಮಗ್ರಿಗಳು: ಅಮೃತಬಳ್ಳಿ ಎಲೆ ಹಾಗೂ ಕಾಂಡ (ಲಭ್ಯವಿದ್ದರೆ)
ತಯಾರಿಸುವ ವಿಧಾನ: ಒಂದು ಲೋಟ ನೀರಿಗೆ ಅಮೃತಬಳ್ಳಿ ಎಲೆ ಅಥವಾ ಕಾಂಡವನ್ನು ಹಾಕಿ ಕುದಿಸಬೇಕು. ಒಂದು ಲೋಟ ನೀರು 4 ಲೋಟಕ್ಕೆ ಬರುವವರೆಗೂ ಕುದಿಸುತ್ತಲೇ ಇರಬೇಕು. ನಂತರ ಅದನ್ನು ಸೋಸಿ ಕುಡಿಯಬೇಕು. ಕಹಿ ಎನ್ನಿಸಿದರೆ ಕೊಂಚ ಜೇನುತುಪ್ಪ ಸೇರಿಸಿಕೊಳ್ಳಿ.
ದೊಡ್ಡಪತ್ರೆ ಕಷಾಯ
ಬೇಕಾಗುವ ಸಾಮಗ್ರಿಗಳು: ದೊಡ್ಡಪತ್ರೆ - 4, ತುಳಸಿ ದಳ - 2, ಶುಂಠಿ - ಅರ್ಧ ಇಂಚು, ಅರಿಸಿನ ಪುಡಿ - 1 ಚಮಚ
ತಯಾರಿಸುವ ವಿಧಾನ: ಒಂದು ಲೋಟ ನೀರಿಗೆ ದೊಡ್ಡಪತ್ರೆ ಎಲೆ, ತುಳಸಿ ದಳ, ಶುಂಠಿ, ಅರಿಸಿನ ಪುಡಿ ಸೇರಿಸಿ ಕುದಿಯಲು ಬಿಡಿ. ಒಂದು ಲೋಟ ನೀರು ಕಾಲು ಲೋಟಕ್ಕೆ ಬರುವವರೆಗೂ ಕುದಿಸಿ ಸೋಸಿ, ಇದನ್ನು ಬಿಸಿ ಇರುವಾಗಲೇ ಕುಡಿಯಬೇಕು.
ಶುಂಠಿ-ತುಳಸಿ ಕಷಾಯ
ಬೇಕಾಗುವ ಸಾಮಗ್ರಿಗಳು: ಶುಂಠಿ - 1 ಇಂಚು, ತುಳಸಿ ದಳ - 5, ಲಿಂಬು - ಅರ್ಧ, ಜೇನುತುಪ್ಪ - 2ಚಮಚ
ತಯಾರಿಸುವ ವಿಧಾನ: ಒಂದು ಲೋಟ ನೀರಿಗೆ ಶುಂಠಿ, ತುಳಸಿ ಎಲೆ ಹಾಕಿ ಕುದಿಸಿ ಕಾಲ ಲೋಟಕ್ಕೆ ಇಳಿಸಬೇಕು. ಸೋಸಿದ ನಂತರ ಲಿಂಬುರಸ ಹಾಗೂ ಜೇನುತುಪ್ಪ ಬೆರೆಸಿ ಕಲೆಸಿ ಕುಡಿಯಿರಿ.
ಕಾಳುಮೆಣಸಿನ ಕಷಾಯ
ಬೇಕಾಗುವ ಸಾಮಗ್ರಿಗಳು: ಕಾಳುಮೆಣಸು - 1 ಚಮಚ, ಜೀರಿಗೆ - 1 ಚಮಚ, ಕೊತ್ತಂಬರಿ ಬೀಜ - 1 ಚಮಚ, ಮೆಂತ್ಯೆ - ಕಾಲು ಚಮಚ, ಬೆಲ್ಲ - 1 ಚಮಚ
ತಯಾರಿಸುವ ವಿಧಾನ: ಒಂದು ಲೋಟ ನೀರಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಮೆಂತ್ಯೆ ಈ ಎಲ್ಲವನ್ನೂ ಸ್ವಲ್ಪ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧ ಲೋಟಕ್ಕೆ ಇಳಿದ ನಂತರ ಬೆಲ್ಲ ಸೇರಿಸಿ ಸ್ವಲ್ಪ ಕುದಿಸಿ. ಇದನ್ನು ಸೋಸಿ ಬಿಸಿ ಇರುವಾಗಲೇ ಕುಡಿಯಿರಿ.
ಈ ಕಷಾಯಗಳು ಗಂಟಲು ನೋವು, ಗಂಟಲು ಕೆರೆತ, ಜ್ವರ, ತಲೆಭಾರ, ಶೀತ, ನೆಗಡಿ ಇತ್ಯಾದಿ ಎಲ್ಲಾ ಸಮಸ್ಯೆಯನ್ನೂ ನಿವಾರಿಸುತ್ತವೆ. ಆದರೆ ಇದನ್ನು ಅತಿಯಾಗಿ ಕುಡಿದರೆ ಅಥವಾ ಪ್ರತಿನಿತ್ಯ ಕುಡಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಬಹುದು. ಕೆಲವು ಪದಾರ್ಥಗಳ ಅಲರ್ಜಿ ಇರುವವರು ಇದನ್ನು ಕುಡಿದ ನಂತರ ಯಾವುದೇ ಅಡ್ಡಪರಿಣಾಮಗಳು ಕಾಣಿಸಿದರೆ ತಕ್ಷಣಕ್ಕೆ ನಿಲ್ಲಿಸುವುದು ಉತ್ತಮ.