ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ಈ 7 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿದ್ದರೆ, ಡಾಕ್ಟರ್‌ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ

Monsoon Health: ಮಳೆಗಾಲದಲ್ಲಿ ಈ 7 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿದ್ದರೆ, ಡಾಕ್ಟರ್‌ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ

ಮಾನ್ಸೂನ್‌ ಋತುವಿನಲ್ಲಿ ಶೀತ, ನೆಗಡಿ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಇವುಗಳ ನಿವಾರಣೆಗೆ ನೀವು ಡಾಕ್ಟರ್‌ ಬಳಿಗೆ ಹೋಗಬೇಕು ಎಂದೇನಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಈ 7 ಮಸಾಲೆಗಳು ಇದ್ದರೆ ಸಾಕು, ಎಲ್ಲಾ ಸಮಸ್ಯೆಗಳೂ ಮನೆಯಲ್ಲೇ ಉಪಶಮನವಾಗುತ್ತವೆ. (ಬರಹ: ಪ್ರಿಯಾಂಕ ಗೌಡ)

ಮಳೆಗಾಲದಲ್ಲಿ ಈ 7 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿದ್ದರೆ, ಡಾಕ್ಟರ್‌ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ
ಮಳೆಗಾಲದಲ್ಲಿ ಈ 7 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿದ್ದರೆ, ಡಾಕ್ಟರ್‌ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ

ಮಳೆ ಸುರಿಯುತ್ತಿರುವಾಗ ಖಾರ-ಖಾರವಾಗಿರುವ ಖಾದ್ಯಗಳನ್ನ ತಿನ್ನಬೇಕು ಅನ್ನಿಸೋದು ಸಹಜ. ನಮ್ಮ ನಾಲಿಗೆಯು ಮಸಾಲೆಯುಕ್ತ ಆಹಾರಕ್ಕಾಗಿ ಚಡಪಡಿಸುತ್ತದೆ. ಭಾರತೀಯ ಪಾಕಪದ್ಧತಿಯು ಮಸಾಲೆಗಳ ಸಮೃದ್ಧ ಶ್ರೇಣಿಗೆ ಹೆಸರುವಾಸಿಯಾಗಿದೆ. ಹೀಗಾಗಿ ನಮ್ಮ ದೇಶವನ್ನು ಮಸಾಲೆಗಳ ನಾಡು ಎಂದು ಕೂಡ ಕರೆಯುತ್ತಾರೆ. ಯಾಕೆಂದರೆ ಮಸಾಲೆಗಳು ಶತಮಾನಗಳಿಂದ ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಅವುಗಳ ಪ್ರಯೋಜನಗಳು ಭಕ್ಷ್ಯಗಳಿಗೆ ಮಾತ್ರವಲ್ಲದೆ ಅದಕ್ಕೂ ಮೀರಿ ವಿಸ್ತರಿಸುತ್ತವೆ. ಮಸಾಲೆಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಇವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ನಮ್ಮ ದೇಹಕ್ಕೆ ಅನೇಕ ಔಷಧೀಯ ಪ್ರಯೋಜನಗಳನ್ನು ನೀಡುತ್ತವೆ.

ಮಾನ್ಸೂನ್ ಋತುವು, ಬೇಸಿಗೆಯ ಶಾಖದಿಂದ ಪರಿಹಾರ ಒದಗಿಸುತ್ತದೆ. ಆದರೆ, ಹೆಚ್ಚಿದ ಆರ್ದ್ರತೆ ಮತ್ತು ತಾಪಮಾನದಲ್ಲಿನ ಹಠಾತ್ ಕುಸಿತದಿಂದಾಗಿ ಜೀರ್ಣಕ್ರಿಯೆ ಸಮಸ್ಯೆಗಳು, ಉಸಿರಾಟದ ಸೋಂಕುಗಳು ಮತ್ತು ರೋಗನಿರೋಧಕ ಶಕ್ತಿ ಕುಂಠಿತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ದಿನನಿತ್ಯ ನೀವು ಅಡುಗೆಗೆ ಬಳಸುವ ಮಸಾಲೆಗಳು ತಮ್ಮ ಪ್ರಬಲ ಚಿಕಿತ್ಸಕ ಗುಣಲಕ್ಷಣಗಳಿಂದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ಮಾನ್ಸೂನ್ ಋತುವಿನಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಏಳು ಮಸಾಲೆಗಳ ಬಗ್ಗೆ ಇಲ್ಲಿದೆ ಮಾಹಿತಿ..

ಟ್ರೆಂಡಿಂಗ್​ ಸುದ್ದಿ

ಶುಂಠಿ

ಶುಂಠಿಯು ಅದರ ಉಷ್ಣಗುಣ ಮತ್ತು ಔಷಧೀಯ ಗುಣಗಳಿಂದಾಗಿ ಮಾನ್ಸೂನ್ ಋತುವಿನಲ್ಲಿ ಹೊಂದಿರಲೇಬೇಕಾದ ಮಸಾಲೆಯಾಗಿದೆ. ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಶುಂಠಿಯು ಶೀತ, ಗಂಟಲು ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಚಹಾ, ಕಷಾಯ, ಸೂಪ್‌ಗಳು ಮುಂತಾದವುಗಳಿಗೆ ಶುಂಠಿಯನ್ನು ಬಳಸಬಹುದು. ಇದರ ಸೇವನೆಯಿಂದ ಆರಾಮದಾಯಕ ಅನುಭವ ಸಿಗುತ್ತದೆ. ತಾಜಾ, ಒಣಗಿದ ಅಥವಾ ಪುಡಿ ಮಾಡಿದ ಶುಂಠಿಯನ್ನು ಬಳಸಬಹುದು.

ಅರಸಿನ

ಅರಿಸಿನವು ಅದರ ಪ್ರಬಲ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಮಳೆಗಾಲದ ಸಮಯದಲ್ಲಿ ಪ್ರಯೋಜನಕಾರಿಯಾಗಿದೆ. ಅರಶಿನವು ತನ್ನ ಹಳದಿ ಬಣ್ಣ ಮತ್ತು ಮಣ್ಣಿನ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಅರಿಶಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಸೋಂಕುಗಳ ವಿರುದ್ಧ ಹೋರಾಡುವಲ್ಲಿ ನಿರ್ಣಾಯಕವಾಗಿದೆ. ಇದನ್ನು ಸಾಮಾನ್ಯವಾಗಿ ಸೂಪ್‌ಗಳು, ಸ್ಟ್ಯೂಗಳು ಮತ್ತು ಚಹಾಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ, ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ, ಇದು ಶೀತ, ಕೆಮ್ಮುವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಒಟ್ಟಾರೆ ಅರಶಿನವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಕಾಳುಮೆಣಸು

ಕರಿಮೆಣಸು (ಪೆಪ್ಪರ್) ಅನ್ನು ಮಳೆಗಾಲದಲ್ಲಿ ಶೇಖರಿಸಿಡುವುದು ತುಂಬಾನೇ ಮುಖ್ಯ. ಕೇವಲ ಆಹಾರದ ಬಳಕೆಗೆ ಮಾತ್ರವಲ್ಲ, ಇದನ್ನು ಕಷಾಯ ಮಾಡಿ ಕುಡಿಯಲು ಅಥವಾ ಪುಡಿ ಮಾಡಿ ಬೆಲ್ಲ ಅಥವಾ ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲು ನೋವು, ಕೆಮ್ಮು, ಕಫಕ್ಕೆ ಪರಿಣಾಮಕಾರಿಯಾಗಿದೆ. ಕರಿಮೆಣಸು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಲ್ಲದೆ, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದು ಕಟುವಾದ, ಮಸಾಲೆಯುಕ್ತ ರುಚಿಗೆ ಹೆಸರುವಾಸಿಯಾಗಿದೆ. ಇದನ್ನು ಸೂಪ್‌ಗಳು, ಸ್ಟ್ಯೂಗಳು, ಚಹಾ, ಸಲಾಡ್ ಮತ್ತು ಹಣ್ಣುಗಳಿಗೂ ಇದರ ಪುಡಿಯನ್ನು ಚಿಮುಕಿಸಿ ತಿನ್ನಬಹುದು. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಲವಂಗಗಳು

ಗಾಢ ಪರಿಮಳವನ್ನು ಹೊಂದಿರುವ ಲವಂಗವು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತದೆ. ಇದನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಚಹಾ, ಖಾರದ ಭಕ್ಷ್ಯ ಅಥವಾ ಸಿಹಿತಿಂಡಿಗಳಿಗೂ ಬಳಸಲಾಗುತ್ತದೆ. ಲವಂಗವು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ, ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಉಷ್ಣತೆಯನ್ನು ಒದಗಿಸುತ್ತದೆ.

ಸೋಂಪು

ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಳೆಗಾಲದಲ್ಲಿ ಉಂಟಾಗುವ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಇದು ರಾಮಬಾಣವಾಗಿದೆ. ಸೋಂಪುವಿನಲ್ಲಿರುವ ಕಾರ್ಮಿನೇಟಿವ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಹೊಟ್ಟೆ ಉಬ್ಬರ ಮತ್ತು ಅಜೀರ್ಣವನ್ನು ಸರಾಗಗೊಳಿಸುತ್ತದೆ. ಸೂಪ್‌ಗಳು, ಸ್ಟ್ಯೂಗಳು, ಮಾಂಸಾಹಾರಕ್ಕೂ ಇದನ್ನು ಬಳಸಲಾಗುತ್ತದೆ.

ದಾಲ್ಚಿನ್ನಿ

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಳೆಗಾಲದಲ್ಲಿ ನೆಗಡಿ, ಜ್ವರ ಬರುವುದು ಸಾಮಾನ್ಯವಾಗಿದ್ದು, ಇದನ್ನು ಎದುರಿಸಲು ದಾಲ್ಚಿನ್ನಿಯು ಸಹಾಯ ಮಾಡುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮಾನ್ಸೂನ್ ಪಾಕಪದ್ಧತಿಗೆ ಸೂಕ್ತವಾಗಿದೆ. ಸುವಾಸನೆ ಮತ್ತು ಉಷ್ಣತೆಯನ್ನು ಹೆಚ್ಚಿಸಲು ಚಹಾ, ಸಿಹಿತಿಂಡಿಗಳು ಮತ್ತು ಖಾರದ ಭಕ್ಷ್ಯಗಳಲ್ಲಿ ದಾಲ್ಚಿನ್ನಿ ಬಳಸಬಹುದು. ನಿಮ್ಮ ಬೆಳಗಿನ ಚಹಾ ಅಥವಾ ಕಾಫಿಯಲ್ಲಿ ದಾಲ್ಚಿನ್ನಿಯನ್ನು ಸೇರಿಸಿ.

ಜೀರಿಗೆ

ಜೀರಿಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ತನ್ನ ವಿಶಿಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ. ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಹಾಲಿನೊಂದಿಗೆ ಕುದಿಸಿ ಸೇವಿಸಬಹುದು. ಇದರಿಂದ ಜೀರ್ಣಕಾರಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೆ ಹೊಟ್ಟೆನೋವು ಮುಂತಾದ ಸಮಸ್ಯೆಗಳಿದ್ದಾಗ ಜೀರಿಗೆಯನ್ನು ತಿಂದು ಬಿಸಿ ನೀರು ಕುಡಿದರೂ ಕೂಡಲೇ ಶಮನವಾಗುತ್ತದೆ.