Health Tips: ಹಾಲು ಕುಡಿದರೆ ದಪ್ಪ ಆಗ್ತಾರಾ, ಮೊಡವೆಗಳು ಹೆಚ್ಚಾಗುತ್ತಾ; ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಹಾಲು ಕುಡಿದರೆ ದಪ್ಪ ಆಗ್ತಾರಾ, ಮೊಡವೆಗಳು ಹೆಚ್ಚಾಗುತ್ತಾ; ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು? ಇಲ್ಲಿದೆ ಉತ್ತರ

Health Tips: ಹಾಲು ಕುಡಿದರೆ ದಪ್ಪ ಆಗ್ತಾರಾ, ಮೊಡವೆಗಳು ಹೆಚ್ಚಾಗುತ್ತಾ; ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು? ಇಲ್ಲಿದೆ ಉತ್ತರ

Health Tips: ಪೌಷ್ಟಿಕಾಂಶದ ಉತ್ತಮ ಮೂಲವಾಗಿರುವ ಹಾಲು, ಭಾರತೀಯ ಆಹಾರ ಪದ್ಧತಿಯಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ. ದಿನ ನಿತ್ಯವೂ ಎರಡು ಬಾರಿಯಾದರೂ ಹಾಲು ಕುಡಿಯುವುದರಿಂದ ಮೂಳೆಗಳ ಆರೋಗ್ಯ ಉತ್ತಮವಾಗಲಿದೆ ಎಂಬುದನ್ನು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೂ ಹಾಲಿನ ಬಳಕೆಯ ಬಗ್ಗೆ ಕೆಲವೊಂದು ತಪ್ಪು ತಿಳುವಳಿಕೆ ಇದೆ.

ಹಾಲಿನ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು
ಹಾಲಿನ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು (PC: Pixabay)

Health Tips: ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹಾಗೂ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಈ ಕಾರಣಕ್ಕಾಗಿಯೇ ಹಾಲನ್ನು ದಿನಕ್ಕೆ ಎರಡು ಬಾರಿಯಾದರೂ ಸೇವಿಸುವ ರೂಢಿ ಬಹಳ ಒಳ್ಳೆಯದು. ಹಾಲಿನಲ್ಲಿ ಕ್ಯಾಲ್ಸಿಯಂ, ಖನಿಜ, ವಿಟಮಿನ್ ಬಿ 12, ವಿಟಮಿನ್ ಡಿ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ರಂಜಕ ಇದೆ. ಹಾಲು ಸೇವನೆ ಮಾಡಿದರೆ ಅದು ದುರ್ಬಲ ಮೂಳೆ ತೊಂದರೆ ನಿವಾರಿಸುತ್ತದೆ. ನಿದ್ರಾಹೀನತೆ ಸಮಸ್ಯೆ ನಿವಾರಿಸುತ್ತದೆ. ಮಧುಮೇಹ, ಹೃದ್ರೋಗ, ಹಲ್ಲಿನ ಆರೋಗ್ಯ ಕಾಪಾಡುತ್ತದೆ.

ಆದರೆ ಬಾಲ್ಯದಿಂದಲೂ, ನಾವು ಆಹಾರಕ್ಕೆ ಸಂಬಂಧಿಸಿದ ಅನೇಕ ಸುದ್ದಿಗಳನ್ನು, ಊಹಾಪೋಹಗಳನ್ನು ನಂಬುತ್ತೇವೆ. ರಾತ್ರಿ ಹಾಲು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಕೆಲವರು ಹೇಳಿದರೆ, ಮತ್ತು ಕೆಲವರು ಹಾಲು ಸೇವನೆ ಮೊಡವೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ. ಆದರೆ ಹಾಲಿಗೆ ಸಂಬಂಧಿಸಿದ ಈ ಎಲ್ಲಾ ವಿಷಯಗಳು ನಿಜವೋ ಅಥವಾ ಕೇವಲ ಊಹಾಪೋಹವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಅವುಗಳ ಹಿಂದಿನ ಸತ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಹಾಲು ಕುಡಿಯುವುದರಿಂದ ತೂಕ ಹೆಚ್ಚುವುದಾ?

ವೈದ್ಯರೇ ಹೇಳುವ ಪ್ರಕಾರ, ಹಾಲಿಗೆ ಸಂಬಂಧಿಸಿದ ಈ ಹೇಳಿಕೆ ತಪ್ಪಾಗಿದೆ. ಏಕೆಂದರೆ ಹಾಲಿನಲ್ಲಿರುವ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾಗಿದೆ. ಹಾಲು ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ನೀವು ಸೇವಿಸುವ ಹಾಲಿನ ಪ್ರಕಾರ ಮತ್ತು ಪ್ರಮಾಣವನ್ನು ಅವಲಂಬಿಸಿರುತ್ತದೆ. ಅಲ್ಲದೆ, ಕೆನೆ ತೆಗೆದ ನಂತರ ಹಾಲು ಸೇವಿಸಿದರೆ, ಅದರಲ್ಲಿರುವ ಕ್ಯಾಲೋರಿ ಅಂಶವು ಕಡಿಮೆಯಾಗುತ್ತದೆ ಮತ್ತು ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

ಹಾಲು ಕುಡಿದರೆ ಮೂಳೆಯಲ್ಲಿನ ಕ್ಯಾಲ್ಸಿಯಂ ಕಡಿಮೆ ಆಗುವುದಾ ?

ಹಾಲು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಹೊರ ಹಾಕುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಬರಿಯ ತಪ್ಪು ಕಲ್ಪನೆಯಷ್ಟೇ. ವಾಸ್ತವವಾಗಿ, ಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಮೂಳೆ ಆರೋಗ್ಯಕ್ಕೆ ಹಾಲು ಸೇವನೆ ಬಹಳ ಪ್ರಮುಖವಾಗಿದೆ. ಡೈರಿಯ ಉತ್ಪನ್ನಗಳ ನಿಯಮಿತ ಸೇವನೆಯು ಮೂಳೆಗಳನ್ನು ಮತ್ತಷ್ಟು ಬಲಗೊಳಿಸುತ್ತದೆ. ಅಲ್ಲದೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಹಾಲು ಮೊಡವೆಗಳನ್ನು ಉಂಟುಮಾಡುತ್ತದೆಯಂತೆ ಹೌದಾ?

ಹಾಲು ಕುಡಿಯುವುದರಿಂದ ಮೊಡವೆ ಉಂಟಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಆದರೆ ವೈಜ್ಞಾನಿಕ ಪುರಾವೆಗಳು ಹಾಲಿನ ಸೇವನೆ ಮತ್ತು ಮೊಡವೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಜೆನೆಟಿಕ್ಸ್, ಹಾರ್ಮೋನುಗಳು ಮತ್ತು ಒಟ್ಟಾರೆ ಆಹಾರದಂತಹ ಅಂಶಗಳು ಚರ್ಮದ ಆರೋಗ್ಯದಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತವೆಯೇ ವಿನಃ ಹಾಲಿನಿಂದ ಮೊಡವೆ ಆಗುವುದಿಲ್ಲ.

ಕಫ ಉತ್ಪತ್ತಿಯಾಗಲು ಹಾಲು ಕುಡಿಯುವುದೇ ಕಾರಣ?

ಹಾಲಿನ ಸೇವನೆಯು ಶರೀರದಲ್ಲಿ ಕಫ ಉತ್ಪತ್ತಿ ಮಾಡುತ್ತದೆಯೆಂದು ಕೆಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಶೀತದಲ್ಲಿ ಕೆಲವೊಂದು ಆಹಾರಗಳನ್ನು ತಪ್ಪಿಸಬೇಕಾಗುತ್ತದೆ. ಅಲರ್ಜಿ ಇರುವವರಲ್ಲಿ ಕೆಲವು ವಸ್ತುಗಳನ್ನು ತಿನ್ನುವುದರಿಂದ ಕೆಲವೊಮ್ಮೆ ಕಫದ ಸಮಸ್ಯೆ ಉಲ್ಬಣವಾಗಬಹುದು. ಆದರೆ ಹಾಲು, ಐಸ್ ಕ್ರೀಮ್ ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳನ್ನು ತಿನ್ನುವುದರಿಂದ ಶೀತದ ಸಮಸ್ಯೆ ಹೆಚ್ಚಾಗುವುದಿಲ್ಲ, ಕಫ ಉಂಟಾಗೋಗುವುದಿಲ್ಲ ಎಂದು ವಿಜ್ಞಾನವು ಹೇಳುತ್ತದೆ.

ಹಾಲನ್ನು ಅತಿಯಾಗಿ ಕುದಿಸುವುದರಿಂದ ಅದರ ಪೋಷಕಾಂಶಗಳು ನಷ್ಟವಾಗುತ್ತಾ ?

ಪದೇ ಪದೇ ಹಾಲು ಕುದಿಸುವುದರಿಂದ ಅದರ ಪೋಷಕಾಂಶಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಹಾಲಿಗೆ ಸಂಬಂಧಿಸಿದ ಈ ಮಾತು ನಿಜವಲ್ಲ. ಏಕೆಂದರೆ ಹಾಲು ಆರೋಗ್ಯಕರವಾಗಿಸಲು ಕುದಿಸುವುದು ಅವಶ್ಯಕ. ಹಾಲು ಕುದಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ. ಇದು ಬಹಳ ಆರೋಗ್ಯಕರ. ಅಲ್ಲದೆ, ಪದೇ ಪದೇ ಹಾಲು ಕುದಿಸುವುದರಿಂದ ಅದರ ಪೋಷಕಾಂಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ.

ಒಟ್ಟಿನಲ್ಲಿ ಕ್ಯಾಲ್ಸಿಯಂ, ಖನಿಜ, ವಿಟಮಿನ್ ಬಿ 12, ವಿಟಮಿನ್ ಡಿ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ರಂಜಕ ಸಮೃದ್ಧವಾಗಿರುವ ಹಾಲನ್ನು ನಿತ್ಯವೂ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದ್ದರಿಂದ ಹಾಲಿನ ಬಗೆಗೆ ಇರುವಂತಹ ಅನೇಕ ತಪ್ಪು ಕಲ್ಪನೆಗಳು, ಊಹಾಪೋಹಗಳನ್ನು ನಂಬಿ ಕುಳಿತರೆ ಆರೋಗ್ಯ ಕೆಡುವುದೇ ಹೊರತು ಮತ್ತೇನೂ ಇಲ್ಲ.

Whats_app_banner