ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವಿರಾ; ಈ ಅಡ್ಡಪರಿಣಾಮಗಳು ಉಂಟಾಗಬಹುದು ಜೋಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವಿರಾ; ಈ ಅಡ್ಡಪರಿಣಾಮಗಳು ಉಂಟಾಗಬಹುದು ಜೋಕೆ

ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವಿರಾ; ಈ ಅಡ್ಡಪರಿಣಾಮಗಳು ಉಂಟಾಗಬಹುದು ಜೋಕೆ

ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳ ಕಾಲ ಮುಗಿದ ಮೇಲೆ ಲ್ಯಾಪ್‌ಟಾಪ್‌ಗಳ ಕುರಿತು ಜನರಿಗೆ ಒಲವು ಹೆಚ್ಚಿತ್ತು. ಅದರಲ್ಲೂ ಈಗ ಹೊಸ ಹೊಸ ತಾಂತ್ರಿಕ ವೈಶಿಷ್ಟ್ಯ ಮತ್ತು ಅಧಿಕ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ಲ್ಯಾಪ್‌ಟಾಪ್‌ಗಳು ಜನಪ್ರಿಯವಾಗಿದೆ. ಆದರೆ ಲ್ಯಾಪ್‌ಟಾಪ್‌ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡಿದರೆ ಸಮಸ್ಯೆಯಾಗುವುದು ಖಂಡಿತ.ಈ ಬಗ್ಗೆ ಇಲ್ಲಿದೆ ಮಾಹಿತಿ.

ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವಿರಾ ಜೋಕೆ
ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವಿರಾ ಜೋಕೆ (PC: Freepik)

ಲ್ಯಾಪ್‌ಟಾಪ್‌, ಹೆಸರೇ ಹೇಳುವಂತೆ ತೊಡೆಯ ಮೇಲೆ ಇರಿಸಿಕೊಂಡು ಬಳಸುವ ಕಂಪ್ಯೂಟರ್. ಆದರೆ ಅದರ ಹೆಸರಿಗೆ ಅನುಸಾರವಾಗಿ ಬಳಸಿದರೆ, ಖಂಡಿತ ನಿಮಗೆ ತೊಂದರೆ ತಪ್ಪಿದ್ದಲ್ಲ. ಅದರಲ್ಲೂ ಪುರುಷರು ಹೆಚ್ಚಿನ ಸಮಯ ಲ್ಯಾಪ್‌ಟಾಪ್‌ ಅನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ಅವರಿಗೆ ಲ್ಯಾಪ್‌ಟಾಪ್‌ ತೊಡೆಯ ಮೇಲಿರಿಸಿಕೊಂಡು ಕೆಲಸ ಮಾಡಿದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಅರಿವಿರುವುದಿಲ್ಲ. ಬೆಡ್ ಅಥವಾ ಸೋಫಾ ಮೇಲೆ ಕುಳಿತುಕೊಂಡು ಆರಾಮವಾಗಿ ಲ್ಯಾಪ್‌ಟಾಪ್‌ ತೊಡೆಯ ಮೇಲಿಟ್ಟುಕೊಂಡು ಕೆಲಸದಲ್ಲಿ ಅವರು ಮಗ್ನರಾಗುತ್ತಾರೆ. ಆದರೆ ಅದರಿಂದ ಖಂಡಿತವಾಗಿಯೂ ಮುಂದೆ ಸಮಸ್ಯೆಯಾಗುತ್ತದೆ. ಹಾಗಾಗದಂತೆ ಇರಲು ನೀವೇನು ಮಾಡಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಲ್ಯಾಪ್‌ಟಾಪ್‌ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದರ ಅಡ್ಡಪರಿಣಾಮಗಳು

ಬೆನ್ನು ಮತ್ತು ಕುತ್ತಿಗೆ ನೋವು: ಟೇಬಲ್ ಮತ್ತು ಕುರ್ಚಿ ಇಟ್ಟುಕೊಂಡು ಲ್ಯಾಪ್‌ಟಾಪ್‌ ಮೂಲಕ ಕೆಲಸ ಮಾಡುವುದಕ್ಕೂ, ಸೋಫಾ ಅಥವಾ ಬೆಡ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲಿರಿಸಿಕೊಂಡು ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸೋಫಾ ಅಥವಾ ಬೆಡ್‌ನಲ್ಲಿ ಕುಳಿತಾಗ, ನಿಮ್ಮ ದೃಷ್ಟಿ ಕೆಳಗಡೆ ಬಾಗಿದಂತೆ ಇರುವುದರಿಂದ, ಆ ಭಂಗಿಯಲ್ಲಿಯೇ ಕುಳಿತರೆ, ನಿಧಾನವಾಗಿ ನಿಮಗೆ ಬೆನ್ನು ನೋವು ಮತ್ತು ಕುತ್ತಿಗೆ ನೋವು ಬಾಧಿಸುತ್ತದೆ. ಹೀಗಾಗಿ ಲ್ಯಾಪ್‌ಟಾಪ್‌ ಅನ್ನು ತೊಡೆಯ ಮೇಲೆ ಇರಿಸಬೇಡಿ. ಸಾಧ್ಯವಾದಷ್ಟು ಕಾರು, ಬಸ್ಸಿನಲ್ಲಿ ಪ್ರಯಾಣ ಮಾಡುವಾಗಲೂ ಲ್ಯಾಪ್‌ಟಾಪ್ ತೊಡೆಯ ಮೇಲೆ ಇರಿಸಿಕೊಂಡು ಕೆಲಸ ಮಾಡುವುದನ್ನು ಬಿಟ್ಟುಬಿಡಿ. ತುರ್ತು ಅಗತ್ಯ ಎಂದು ಲ್ಯಾಪ್‌ಟಾಪ್ ತೊಡೆಯ ಮೇಲೆ ಇರಿಸಿಕೊಂಡು, ಅದರಲ್ಲೇ ಒಂದೆರಡು ಗಂಟೆ ದಿನಾ ಕಳೆದರೆ, ಮುಂದೆ ತೊಂದರೆ ತಪ್ಪಿದ್ದಲ್ಲ.

ಕ್ಯಾನ್ಸರ್ ಬರಬಹುದು: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಅದು ಬಿಸಿಯಾಗುವುದು ಸಾಮಾನ್ಯ. ತೊಡೆಯ ಮೇಲೆ‌ ಲ್ಯಾಪ್‌ಟಾಪ್‌ ಇರಿಸಿಕೊಂಡರೆ, ಅದರಿಂದ ನಿಮ್ಮ ಚರ್ಮಕ್ಕೆ ನೇರವಾಗಿ ಬಿಸಿ ಶಾಖ ವರ್ಗವಾವಣೆಯಾಗುತ್ತದೆ. ಮುಂದೆ ಅದರಿಂದ ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆಯಿದೆ. ತಜ್ಞವೈದ್ಯರು ಈಗಾಗಲೇ ಈ ಕುರಿತು ಎಚ್ಚರಿಕೆ ನೀಡಿದ್ದು, ಆರಂಭದಲ್ಲಿ ಯಾವುದೇ ತೊಂದರೆ ಕಾಣಿಸದಿದ್ದರೂ, ಮುಂದೆ ಸಮಸ್ಯೆಯಾಗುವ ಬಗ್ಗೆ ತಿಳಿಸಿದ್ದಾರೆ.

ನಿದ್ದೆಯ ಕೊರತೆ ಉಂಟಾಗಬಹುದು: ಲ್ಯಾಪ್‌ಟಾಪ್‌ ಮೂಲಕ ಕೆಲಸ ಮಾಡುವಾಗ ತೊಡೆಯ ಮೇಲೆ ಇರಿಸಿಕೊಂಡರೆ, ತೀರಾ ಹತ್ತಿರದಲ್ಲಿ ನೀವು ಲ್ಯಾಪ್‌ಟಾಪ್‌ ನೋಡುವುದರಿಂದ ಕಣ್ಣಿಗೆ ಸಮಸ್ಯೆಯಾಗುತ್ತದೆ. ಇದರಿಂದ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ರಾತ್ರಿ ಸಮಯದಲ್ಲಿ ಮಲಗುವ ಕನಿಷ್ಟ ಅರ್ಧ ಗಂಟೆ ಮುಂಚೆ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ನೋಡುವುದನ್ನು ಬಿಟ್ಟುಬಿಡಿ.‌

ಗರ್ಭಧಾರಣೆಯ ಸಮಸ್ಯೆ: ತೊಡೆಯ ಮೇಲೆ ಲ್ಯಾಪ್‌ಟಾಪ್‌ ಇರಿಸಿಕೊಂಡು ದೀರ್ಘಾವಧಿಯವರೆಗೆ ಕೆಲಸ ಮಾಡುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಹಿಳೆಯರಲ್ಲಿ ಅಂಡಾಣು ಉತ್ಪಾದನೆ ತಡವಾಗಬಹುದು ಅಥವಾ ಕಡಿಮೆಯಾಗಿ, ಗರ್ಭ ಧರಿಸಲು ಸಾಧ್ಯವಾಗದೇ ಇರಬಹುದು, ಹಾಗೆಯೇ ಪುರುಷರಲ್ಲಿ ವೀರ್ಯಾಣುವಿನ ಕೊರತೆ, ಗುಣಮಟ್ಟ ಇಳಿಕೆಯಾಗಬಹುದು. ಹೀಗಾಗಿ ಅಂತಹ ಸಮಸ್ಯೆಯಿಂದ ಪಾರಾಗಲು ಲ್ಯಾಪ್‌ಟಾಪ್‌ ಅನ್ನು ತೊಡೆಯ ಮೇಲೆ ಇರಿಸದಿರುವುದೇ ಉತ್ತಮ. ಹೀಗಾಗಿ ಐಟಿ-ಬಿಟಿ ಉದ್ಯೋಗಿಗಳು ಈ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ.

Whats_app_banner