ಕರ್ನಾಟಕ ಸೇರಿ ಭಾರತದಾದ್ಯಂತ ಏರಿಕೆಯಾಗ್ತಿದೆ ಕೋವಿಡ್ ಪ್ರಕರಣ; ಹೊಸ ರೂಪಾಂತರಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಅಂಶಗಳು
ಭಾರತದ ಹಲವು ರಾಜ್ಯಗಳು ಸೇರಿದಂತೆ ಏಷ್ಯಾದ ದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗ್ತಿವೆ. ಹೊಸ ಕೋವಿಡ್ ರೂಪಾಂತರಿ ಜೆಎನ್.1 ಅಪಾಯಕಾರಿಯೇ, ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಅಂಶಗಳು ಇಲ್ಲಿವೆ.

ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ನಿನ್ನೆ (ಮೇ 21)ಯ ವರದಿಯ ಪ್ರಕಾರ ಭಾರತದಲ್ಲಿ ಸದ್ಯ 257 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಸಕ್ರಿಯ ಪ‍್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿವೆ.
ಕಳೆದ ಕೆಲವು ವಾರಗಳಿಂದ ಏಷ್ಯಾದ ರಾಷ್ಟ್ರಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಸದ್ದು ಮಾಡುತ್ತಿವೆ. ಏಷ್ಯಾದ 2 ಪ್ರಮುಖ ದೇಶಗಳಾದ ಹಾಂಗ್‌ಕಾಂಗ್ ಮತ್ತು ಸಿಂಗಾಪುರದಲ್ಲಿ ಕೋವಿಡ್ ಹೊಸ ರೂಪಾಂತರಿ ಜೆಎನ್.1 ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರ, ಚೀನಾ ಮತ್ತು ಥೈಲ್ಯಾಂಡ್‌ನ ಆರೋಗ್ಯ ಅಧಿಕಾರಿಗಳು ಹೊಸ ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಹೊಸ ರೂಪಾಂತರಿ ಹರಡಲು ನಿರ್ದಿಷ್ಟ ಕಾರಣವಿಲ್ಲ
ಜನರಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯು ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆಗೆ ಪ್ರಮುಖ ಕಾರಣವಾದರೂ ಈ ರೂಪಾಂತರಿಗಳು ಹೆಚ್ಚು ಹರಡುವ ಮತ್ತು ಪ್ರಕರಣಗಳು ತೀವ್ರಗೊಳ್ಳುವ ವಿಚಾರದಲ್ಲಿ ಬೇರೆ ಇತರ ಅಂಶಗಳು ಸದ್ಯಕ್ಕೆ ಕಾರಣವಾಗುತ್ತಿಲ್ಲ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಹೊಸ ಪ್ರಕರಣಗಳ ವರದಿ
ಭಾರತದಲ್ಲಿ 257 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ಜಾಗರೂಕತೆಯೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೊಸ ಕೋವಿಡ್ ಪ್ರಕರಣಗಳು ಸೌಮ್ಯ ಥರನಾಗಿದ್ದು, ತೀವ್ರತೆ ಹಾಗೂ ಜೀವಹಾನಿಯ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ವರದಿ ತಿಳಿಸಿದೆ.
ಹೊಸ ರೂಪಾಂತರಿ ನಿಜವೇ?
ಓಮಿಕ್ರಾನ್ ಕುಟುಂಬಕ್ಕೆ ಸೇರಿದ ಜೆಎನ್.1 (JN.1) ರೂಪಾಂತರಿ ಮತ್ತು ಅದರ ಸಂಬಂಧಿತ ವೈರಸ್‌ಗಳು ಏಷ್ಯಾದಾದ್ಯಂತ ಕೋವಿಡ್ -19 ಪ್ರಕರಣಗಳ ಈ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.
ಸಿಂಗಾಪುರ ಆರೋಗ್ಯ ಅಧಿಕಾರಿಗಳ ಪ್ರಕಾರ, ಜೆಎನ್.1 ರೂಪಾಂತರಿಯ ವಂಶಸ್ಥರಾದ ಎಲ್‌ಎಫ್.7 ಮತ್ತು ಎನ್‌ಬಿ.1.8 ಎಂಬ ಹೊಸ ರೂಪಾಂತರಿಗಳು ವೇಗವಾಗಿ ಹರಡುತ್ತಿವೆ.
ಜೆಎನ್.1 ಬಗ್ಗೆ
ಜೆಎನ್.1 ತಳಿಯು ಬಿಎ.2.86 ರೂಪಾಂತರದ (ಒಮಿಕ್ರಾನ್ ಉಪ-ರೂಪಾಂತರ) ವಂಶಸ್ಥವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಜೆನ್.1 ಕೋವಿಡ್ ರೂಪಾಂತರಿಯನ್ನು ‘ಆಸಕ್ತಿಯ ರೂಪಾಂತರ‘ (variant of interest) ಎಂದು ವರ್ಗೀಕರಿಸಿದೆ ಮತ್ತು ಈವರೆಗೆ ಇದು ‘ಕಾಳಜಿಯ ರೂಪಾಂತರ‘ (variant of concern) ಎಂದು ವರ್ಗೀಕರಣ ಮಾಡಲಾಗಿಲ್ಲ . ಜೆಎನ್.1 ನಿಂದ ಉಂಟಾಗುವ ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ.
ಜೆಎನ್.1 ರೂಪಾಂತರದ ಚಿಹ್ನೆಗಳು ಮತ್ತು ಲಕ್ಷಣಗಳು
ಹೊಸ ಕೋವಿಡ್ ರೂಪಾಂತರಿಯು ಸೌಮ್ಯವಾದ ಲಕ್ಷಣಗಳನ್ನು ಹೊಂದಿರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ತೀವ್ರವಾಗಿರುವುದಿಲ್ಲ. ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ತೀವ್ರ ಆಯಾಸ, ಸ್ನಾಯು ದೌರ್ಬಲ್ಯ, ಬಳಲಿಕೆ ಮತ್ತು ಸಣ್ಣ ಜಠರಗರುಳಿನ ಸಮಸ್ಯೆಗಳು ಸೇರಿವೆ. ಕೆಲವು ಸಂದರ್ಭಗಳಲ್ಲಿ, ಹೊಸ ರೂಪಾಂತರವು ಹಸಿವಿನ ಕೊರತೆ ಮತ್ತು ನಿರಂತರ ವಾಕರಿಕೆಯೊಂದಿಗೆ ಸಹ ಕಾಣಿಸಿಕೊಳ್ಳಬಹುದು.
ಈ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ ಮತ್ತು ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಕಾರಣ ವೈಯಕ್ತಿಕವಾಗಿ ನಮ್ಮ ಜಾಗೃತೆಯಲ್ಲಿ ನಾವಿರಬೇಕು. ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು, ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತವಾಗಿರಲು ಇತರ ಕೋವಿಡ್-19 ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಉತ್ತಮ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)