Health Tips: ಈ ವೇಗದಲ್ಲಿ ನೀವು ವಾಕಿಂಗ್ ಮಾಡಿದರೆ ಮಧುಮೇಹ ನಿಮ್ಮ ಹತ್ತಿರವೂ ಸುಳಿಯದು
Diabetes: ಮಧುಮೇಹ ಈಗಿನ ಆಧುನಿಕ ಜೀವನದಲ್ಲಿ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಮಧುಮೇಹವು ಬೇರೆ ಅನೇಕ ರೋಗಗಳಿಗೆ ಆಹ್ವಾನ ನೀಡುವ ಕಾಯಿಲೆಯಾಗಿರೋದ್ರಿಂದ ಸಾಕಷ್ಟು ಜಾಗ್ರತೆ ಮುಖ್ಯ. ಇದೀಗ ಹೊರ ಬಂದಿರುವ ಹೊಸ ಅಧ್ಯಯನದ ಪ್ರಕಾರ ಟೈಪ್ 2 ಮಧುಮೇಹವನ್ನು ವಾಕಿಂಗ್ ಮೂಲಕವೇ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ.
ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುವುದು ಈಗಾಗಲೇ ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಅದರಲ್ಲೂ ಚುರುಕಾಗಿ ನಡೆಯುವುದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವೇಗವಾಗಿ ವಾಕಿಂಗ್ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯದ ಪಾರಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ವೇಗವಾದ ನಡಿಗೆಯು ನಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಈ ಅಧ್ಯಯನವು ಹೇಳಿದೆ.
ಟೈಪ್ 2 ಮಧುಮೇಹವು ವಿಶ್ವದ ಅತೀದೊಡ್ಡ ಮಾರಕ ಕಾಯಿಲೆಗಳಲ್ಲಿ ಒಂದಾಗಿದೆ. ಅದರಲ್ಲೂ ಭಾರತದಲ್ಲಿ ಅತೀ ಹೆಚ್ಚು ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಇದ್ದಾರೆ. ಇಂಡಿಯಾನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ಭಾರತದಲ್ಲಿ 100 ಮಿಲಿಯನ್ಗೂ ಅಧಿಕ ಜನರು ತಮ್ಮ ತಪ್ಪಾದ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಇತರೆ 136 ಮಿಲಿಯನ್ ಜನರು ಪ್ರಿಡಯಾಬಿಟಿಕ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಟೈಪ್ 2 ಡಯಾಬಿಟೀಸ್ನಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಹೆಚ್ಚಿನ ಇನ್ಸುಲಿನ್ ಉತ್ಪಾದನೆ ಆಗುವುದಿಲ್ಲ. ಅಥವಾ ಉತ್ಪತ್ತಿಯಾದ ಇನ್ಸುಲಿನ್ಗಳನ್ನು ದೇಹವು ಶಕ್ತಿಗಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಬಾಯಾರಿಕೆಯಾಗುತ್ತಿರುತ್ತದೆ, ಪದೇ ಪದೇ ಮೂತ್ರ ವಿಸರ್ಜನೆ, ಹಸಿವು, ಆಯಾಸ ಹಾಗೂ ದೃಷ್ಟಿ ಮಂದವಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಈ ಯಾವುದೇ ರೋಗಲಕ್ಷಣಗಳು ಇಲ್ಲದೇ ಇದ್ದರೂ ಸಹ ಅವರು ಟೈಪ್ 2 ಮಧುಮೇಹವನ್ನು ಹೊಂದಿರುತ್ತಾರೆ.
ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ
ಅಧ್ಯಯನ ಹೇಳುವುದಾದರೂ ಏನು?
ವಾಕಿಂಗ್, ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಹೊರ ಬಂದಿರುವ ಹೊಸ ಅಧ್ಯಯನದ ಫಲಿತಾಂಶದ ಪ್ರಕಾರ ವೇಗವಾಗಿ ವಾಕಿಂಗ್ ಮಾಡಿದವರು ಮಾತ್ರ ಟೈಪ್ 2 ಮಧುಮೇಹ ಸಮಸ್ಯೆಯಿಂದ ಆರೋಗ್ಯ ಸುಧಾರಣೆಗಳನ್ನು ಕಾಣುತ್ತಾರೆ ಎಂದು ತಿಳಿದು ಬಂದಿದೆ. ಬ್ರಿಟೀಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ವೇಗವಾಗಿ ನಡೆಯುವುದರಿಂದ ಮಧುಮೇಹದ ಅಪಾಯವನ್ನು 40 ಪ್ರತಿಶತದಷ್ಟು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಸಂಶೋಧಕರು 1999 ಹಾಗೂ 2022ರ ಅವಧಿಯಲ್ಲಿ 10 ಬಾರಿ ಅಧ್ಯಯನ ನಡೆಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಜಪಾನ್ನಲ್ಲಿ ವೇಗವಾಗಿ ವಾಕಿಂಗ್ ಮಾಡುವವರಲ್ಲಿ ಟೈಪ್ 2 ಮಧುಮೇಹದಲ್ಲಿ ಕಂಡು ಬಂದ ಸುಧಾರಣೆಗಳನ್ನು ಸಂಶೋಧಕರು ಗಮನಿಸಿದ್ದಾರೆ ಎನ್ನಲಾಗಿದೆ. ಒಂದು ಗಂಟೆ ಅವಧಿಯಲ್ಲಿ ನೀವು 3.2 ಕಿಲೋಮೀಟರ್ಗಿಂತಲೂ ಕಡಿಮೆ ದೂರ ಕ್ರಮಿಸಿದರೆ ಅದು ನಿಧಾನದ ನಡಿಗೆ ಎಂದು ಹೇಳಬಹುದಾಗಿದೆ. ಗಂಟೆಗೆ ನೀವು 4.8 ಕಿಲೋಮೀಟರ್ನಿಂದ 6.4 ಕಿಲೋಮೀಟರ್ಗಳವರೆಗೆ ಕ್ರಮಿಸಿದರೆ ಅದನ್ನು ಚುರುಕಾದ ನಡಿಗೆ ಎಂದು ವರ್ಗೀಕರಿಸಬಹುದಾಗಿದೆ. 6.4 ಕಿಲೋ ಮೀಟರ್ಗೂ ಅಧಿಕ ವೇಗದಲ್ಲಿ ನಡೆಯುವುದು ಮಿತಿ ಮೀರಿದ ವೇಗದ ನಡಿಗೆಯಾಗಿದ್ದು ಇಂಥವರಲ್ಲಿ ಮಧುಮೇಹದ ಅಪಾಯ ಉಳಿದವರಿಗೆ ಹೋಲಿಸಿದರೆ 9 ಪ್ರತಿಶತ ಕಡಿಮೆ ಇರುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ. ಗಂಟೆಗೆ ಆರು ಕಿಲೋಮೀಟರ್ ಅಥವಾ ಅದಕ್ಕೂ ಹೆಚ್ಚಿನ ವೇಗದಲ್ಲಿ ನಡೆಯುವವರು 40 ಪ್ರತಿಶತ ಮಧುಮೇಹದ ಅಪಾಯದಿಂದ ಪಾರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.