Okra Water: ಬೆಂಡೆಕಾಯಿ ಬೇಡ ಅನ್ಬೇಡಿ; ಇದರ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರ ಸೇವನೆಯತ್ತ ಜನ ಹೆಚ್ಚು ಒಲವು ತೋರುತ್ತಿದ್ದಾರೆ. ಇದೀಗ ಬೆಂಡೆಕಾಯಿ ನೀರು ಸದ್ದು ಮಾಡುತ್ತಿದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಅನುಕೂಲಗಳಿವೆ ನೋಡಿ.
ಬೆಂಡೆಕಾಯಿ ಎಂದರೆ ಹಲವರಿಗೆ ಹಿಡಿಸುವುದಿಲ್ಲ. ಇದರಲ್ಲಿ ಲೋಳೆಯಂಶ ಹೆಚ್ಚಿರುವ ಕಾರಣ ಹಲವರು ತಿನ್ನಲು ಹಿಂಜರಿಕೆ ಮಾಡುತ್ತಾರೆ. ಆದರೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳಿರುವುದು ಸುಳ್ಳಲ್ಲ. ಇದೀಗ ಬೆಂಡೆಕಾಯಿ ನೀರು ಅಥವಾ ಬೆಂಡಿ ಪಾನಿ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಇದರ ಆರೋಗ್ಯ ಪ್ರಯೋಜನಗಳಿಂದಾಗಿ ಇದು ಸೂಪರ್‌ಫುಡ್‌ಗಳ ಸಾಲಿಗೆ ಸೇರಿದೆ. ಫಿಟ್‌ನೆಸ್ ಫಾಲೋ ಮಾಡುವವರು ಕೂಡ ಬೆಂಡಿ ಪಾನಿ ಕುಡಿಯುವ ಕ್ರಮ ರೂಢಿಸಿಕೊಳ್ಳುತ್ತಿದ್ದಾರೆ. ಪೋಷಕಾಂಶಗಳ ಜೊತೆಗೆ ಡಯೆಟ್‌ಗೂ ಇದು ಬೆಸ್ಟ್ ಅಂತಿದ್ದಾರೆ ತಜ್ಞರು. ಇದನ್ನು ತಯಾರಿಸುವುದು ಹೇಗೆ, ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಬೆಂಡೆಕಾಯಿ ಹೆಚ್ಚಿ, ನೀರಿನಲ್ಲಿ ಹಾಕಿ ಇಡೀ ರಾತ್ರಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಸೇವಿಸಿ.
ಬೆಂಡಿ ಪಾನೀಯದ ಪ್ರಯೋಜನಗಳು
ಪೌಷ್ಟಿಕಾಂಶ: ಬೆಂಡೆಕಾಯಿಯು ಕಡಿಮೆ ಕ್ಯಾಲೊರಿ ಅಂಶ ಹೊಂದಿರುವ ತರಕಾರಿಯಾಗಿದೆ. ಇದರಲ್ಲಿ ನಾರಿನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಖನಿಜಾಂಶಗಳು, ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳು ಲಭ್ಯವಾಗುತ್ತವೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ಬೆಂಡೆಕಾಯಿಯಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ಇದು ಜೀರ್ಣಕ್ರಿಯೆ ವೃದ್ಧಿಸಲು ಹೇಳಿ ಮಾಡಿಸಿದ್ದು. ಇದು ಮಲಬದ್ಧತೆ ನಿವಾರಣೆಗೂ ಸಹಾಯ ಮಾಡುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಮಲವಿರ್ಸಜನೆಯನ್ನು ಸರಾಗಗೊಳಿಸಲು ಇದು ಸಹಕಾರಿ.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುತ್ತದೆ: ಕೆಲವು ಪ್ರಾಥಮಿಕ ಅಧ್ಯಯನಗಳು ಬೆಂಡೆಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಿಸಲು ಧನಾತ್ಮಕ ಪರಿಣಾಮ ಬೀರಬಹುದು ಎಂದು ಸೂಚಿಸಿದೆ. ಬೆಂಡೆಕಾಯಿಯಲ್ಲಿರು ಕರಗುವ ನಾರಿನಾಂಶವಿದ್ದು, ಜೀರ್ಣಾಂಗದಲ್ಲಿ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶದ ನಿರ್ವಹಣೆಗೆ ಸಹಕಾರಿ.
ಹೈಡ್ರೇಷನ್: ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಇದು ನೀರಿಗೆ ಸೂಕ್ಷ್ಮವಾದ ರುಚಿಯನ್ನು ಕೂಡ ನೀಡುತ್ತದೆ, ಜೊತೆಗೆ ಇನ್ನಷ್ಟು ನೀರು ಕುಡಿಯುವಂತೆ ಉತ್ತೇಜಿಸುತ್ತದೆ.
ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಬೆಂಡೆಕಾಯಿಯು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿದ್ದು, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಫ್ರಿ ರಾಡಿಕಲ್ಸ್‌ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. ಉತ್ಕರ್ಷಣ ನಿರೋಧಕಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ದೇಹದ ಕಾರ್ಯಗಳಿಗೆ ಸಂಭಾವ್ಯ ಪ್ರಯೋಜನಗಳನ್ನು ನೀಡುತ್ತದೆ ಬೆಂಡೆಕಾಯಿ ನೀರು.
ಬೆಂಡೆಕಾಯಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಜ. ಆದರೆ ಕೆಲವರಿಗೆ ಬೆಂಡೆಕಾಯಿ ಅಲರ್ಜಿ ಉಂಟು ಮಾಡಬಹುದು. ಆ ಕಾರಣಕ್ಕೆ ಬೆಂಡೆ ಕಾಯಿ ನೀರು ಕುಡಿಯಲು ಅಭ್ಯಾಸ ಮಾಡುವ ಮುನ್ನ ತಜ್ಞರೊಂದಿಗೆ ಸಮಾಲೋಚಿಸಿ ನಂತರ ಕುಡಿಯುವುದು ಉತ್ತಮ.
ಇದನ್ನೂ ಓದಿ
Summer Drinks: ಬೇಸಿಗೆಯ ಬಿಸಿಗೆ ದೇಹ ತಂಪಾಗಿಸುವ ಪಾನೀಯಗಳಿವು, ಇವು ಆರೋಗ್ಯಕ್ಕೂ ಉತ್ತಮ
ಬೇಸಿಗೆಯಲ್ಲಿ ದೇಹ ತಂಪಾಗಿಸುವ ಪಾನೀಯಗಳನ್ನು ಸೇವಿಸಿದರೆ ಆಹಾ ಎನ್ನಿಸುವುದು ಸುಳ್ಳಲ್ಲ. ಈ ಕೆಲವು ಪಾನೀಯಗಳು ಬಿಸಿಲ ಧಗೆ ನೀಗಿಸುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ನೀಡುತ್ತವೆ. ಅಂತಹ ಪಾನೀಯಗಳ ವಿವರ ಇಲ್ಲಿದೆ.