ಪ್ರತಿದಿನ ಹಸಿ ಈರುಳ್ಳಿ ತಿನ್ನುವ ಅಭ್ಯಾಸ ನಿಮಗೂ ಇದ್ಯಾ, ಇದ್ರಿಂದ ಆರೋಗ್ಯಕ್ಕಾಗುವ ಅನುಕೂಲ, ಅನಾನುಕೂಲಗಳ ಬಗ್ಗೆ ತಿಳಿಯಿರಿ
ಭಾರತೀಯ ಅಡುಗೆಮನೆಯಲ್ಲಿ ಅಗ್ರಸ್ಥಾನ ಪಡೆದಿರುವ ಈರುಳ್ಳಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಆದರೆ ಇದನ್ನು ಪ್ರತಿದಿನ ಹಸಿಯಾಗಿ ತಿಂದ್ರೆ ಏನಾಗಬಹುದು ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಸಲಾಡ್ ರೂಪದಲ್ಲಿ, ಊಟದ ಜೊತೆ ನೆಂಜಿಕೊಂಡು ಹಸಿ ಈರುಳ್ಳಿ ತಿನ್ನುವವರ ಸಾಲಿಗೆ ನೀವು ಸೇರಿದ್ರೆ ಇದರಿಂದಾಗುವ ಪ್ರಯೋಜನ ಹಾಗೂ ಸಮಸ್ಯೆಗಳ ಬಗ್ಗೆ ತಿಳಿಯಿರಿ.

ಅಡುಗೆಮನೆಯಲ್ಲಿ ಅಗ್ರಸ್ಥಾನದಲ್ಲಿರುವುದು ಈರುಳ್ಳಿ ಹಾಗೂ ಟೊಮೆಟೊ. ಈ ಎರಡೂ ಇಲ್ಲ ಅಂದ್ರೆ ಅಡುಗೆಯನ್ನು ಊಹಿಸಿಕೊಳ್ಳುವುದು ಕಷ್ಟ. ಯಾವುದೇ ಅಡುಗೆಗೆ ವಿಶೇಷ ರುಚಿ ಕೊಡುವ ಈರುಳ್ಳಿಯನ್ನು ಸಾಮಾನ್ಯವಾಗಿ ಆಹಾರಗಳನ್ನು ತಯಾರಿಸುವಾಗ ಬಳಸುತ್ತೇವೆ. ಆದರೆ ಸಲಾಡ್‌ನಂತಹ ಖಾದ್ಯಗಳಿಗೆ ಈರುಳ್ಳಿಯನ್ನು ಹಸಿಯಾಗಿ ಕತ್ತರಿಸಿ ಹಾಕುತ್ತೇವೆ. ಇನ್ನು ಹಲವು ಭಾಗಗಳಲ್ಲಿ ಈರುಳ್ಳಿಯನ್ನು ಊಟದ ಜೊತೆ ಹಸಿಯಾಗಿ ತಿನ್ನುವ ಅಭ್ಯಾಸವಿದೆ. ಹಾಗಾದರೆ ಈರುಳ್ಳಿಯನ್ನು ಹಸಿಯಾಗಿ ತಿನ್ನೋದು ಒಳ್ಳೆಯದೇ, ಪ್ರತಿದಿನ ಹಸಿ ಈರುಳ್ಳಿ ತಿಂದ್ರೆ ಆರೋಗ್ಯಕ್ಕೆ ಏನಾಗಬಹುದು ಎಂಬ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ.
ಈರುಳ್ಳಿಯಲ್ಲಿರುವ ಪೋಷಕಾಂಶಗಳು
ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳು ಹಾಗೂ ಕ್ವೆರ್ಸೆಟಿನ್ ಸಮೃದ್ಧವಾಗಿವೆ. ಉತ್ಕರ್ಷಣ ನಿರೋಧಕ ಅಂಶ ಇದರಲ್ಲಿ ಹೇರಳವಾಗಿದೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡಿ, ನಮ್ಮ ಜೀವಕೋಶಗಳನ್ನು ರಕ್ಷಿಸುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ನಮ್ಮ ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ ಮತ್ತು ರಕ್ತಹೆಪ್ಪುಗಟ್ಟುವುದನ್ನು ತಡೆಯುತ್ತದೆ ಎನ್ನುತ್ತಾರೆ ಆಹಾರ ತಜ್ಞೆ ವೃತಿ ಶ್ರೀವಾಸ್ತವ್.
ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಸಂಯುಕ್ತಗಳು, ಕ್ವೆರ್ಸೆಟಿನ್ ಮತ್ತು ಖನಿಜ ಕ್ರೋಮಿಯಂ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತದೆ ಎಂದು ಅವರು ಹೇಳುತ್ತಾರೆ.
ಈರುಳ್ಳಿ ಜೊತೆ ನಿಂಬೆರಸ ಹಾಗೂ ಕಾಳುಮೆಣಸು ಸೇರಿಸಿ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕಾಯಿಲೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ವೃತಿ ಶ್ರೀವಾಸ್ತವ್. ಚೆನ್ನಾಗಿ ಜೀರ್ಣಿಸಿಕೊಳ್ಳ ಎಲ್ಲಾ ವ್ಯಕ್ತಿಗಳಿಗೂ ಈರುಳ್ಳಿ ತುಂಬಾ ಉತ್ತಮ ಎಂದು ಅವರು ಹೇಳುತ್ತಾರೆ.
ಈರುಳ್ಳಿಯಲ್ಲಿ ನಾರಿನ ಅಂಶ ಇರುವುದರಿಂದ ಅದು ಕರುಳಿನ ಬ್ಯಾಕ್ಟೀರಿಯಾಗಳಿಗೆ ಉತ್ತಮ ಆಹಾರವಾಗಿದೆ. ಇದು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ದೇಹಕ್ಕೆ ಕರುಳಿನ ಆರೋಗ್ಯ ಚೆನ್ನಾಗಿರುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.
ಹಸಿ ಈರುಳ್ಳಿ ತಿನ್ನುವುದರಿಂದಾಗುವ ಅಡ್ಡಪರಿಣಾಮಗಳು
ಈರುಳ್ಳಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆಯಾದರೂ ಅದನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದವರಿಗೆ ಇದು ಕೆಲವು ಜೀರ್ಣಕಾರಿ ತೊಂದರೆಗಳನ್ನು ಉಂಟುಮಾಡುತ್ತದೆ. ಆಮ್ಲದ ಮಟ್ಟ ಕಡಿಮೆ ಇರುವುದು, ಆಸಿಡ್ ರಿಫ್ಲಕ್ಸ್ ಅಥವಾ ಐಬಿಎಸ್‌ನಂತಹ ಸಮಸ್ಯೆ ಇರುವ ಜನರು ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಎದೆಯುರಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವೃತಿ ಹೇಳುತ್ತಾರೆ.
ಈರುಳ್ಳಿಯು ರಕ್ತ ತೆಳುಗೊಳಿಸುವ ಗುಣಗಳನ್ನು ಹೊಂದಿದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುವಲ್ಲಿ ಅವು ಪ್ರಯೋಜನಕಾರಿ ಎಂದು ಅವರು ಹೇಳುತ್ತಾರೆ. ಆದರೆ ಈಗಾಗಲೇ ರಕ್ತ ತೆಳುವಾಗಲು ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಂತಹವರು ಪ್ರತಿ ಹಸಿ ಈರುಳ್ಳಿ ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
ಪ್ರತಿದಿನ, ಒಬ್ಬ ವ್ಯಕ್ತಿಯು ತಮ್ಮ ಊಟದೊಂದಿಗೆ ಅರ್ಧದಿಂದ 1 ಹಸಿ ಈರುಳ್ಳಿಯನ್ನು ಸೇವಿಸಬಹುದು. ಪ್ರತಿಯೊಂದು ದೇಹವು ವಿಭಿನ್ನವಾಗಿರುವುದರಿಂದ ನಿಮ್ಮ ದೇಹಕ್ಕೆ ಸೂಕ್ತವಾದ ಪ್ರಮಾಣವನ್ನು ನಿರ್ಧರಿಸಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
