ಈ 5 ಕಾಯಿಲೆ ಇರುವವರು ಬಾದಾಮಿ ತಿನ್ನಬಾರದು, ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಚ್ಚರ
ಬಾದಾಮಿ ತಿನ್ನುವುದು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ, ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು ಅವುಗಳನ್ನು ತಿನ್ನುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಕಾರಕವಾಗಬಹುದು. ಈ ಐದು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರು ಬಾದಾಮಿಯನ್ನು ತ್ಯಜಿಸಬೇಕು ಎನ್ನುತ್ತಾರೆ ತಜ್ಞರು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಬಾದಾಮಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುವ ವಿಚಾರ. ಬಾಲ್ಯದಿಂದಲೂ ದಿನಕ್ಕೆ ಒಂದು ಹಿಡಿ ಬಾದಾಮಿಯನ್ನು ಜಗಿಯುವ ಅಭ್ಯಾಸವನ್ನು ನಾವು ರೂಢಿಸಿಕೊಂಡಿದ್ದೇವೆ. ಬಾದಾಮಿಯಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್‌ಗಳು, ಕ್ಯಾಲ್ಸಿಯಂ, ಒಮೆಗಾ ತ್ರೀ ಫ್ಯಾಟಿ ಆಸಿಡ್‌ಗಳಂತಹ ಅನೇಕ ಪೋಷಕಾಂಶಗಳಿವೆ. ಇವೆಲ್ಲವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಅದಕ್ಕಾಗಿಯೇ ವೈದ್ಯರು ಬಾದಾಮಿಯನ್ನು ದೈನಂದಿನ ಆಹಾರದಲ್ಲಿ ನಿಯತವಾಗಿ ಸೇರಿಸಲು ಶಿಫಾರಸು ಮಾಡುತ್ತಾರೆ. ಆದರೆ, ಎಲ್ಲ ರೀತಿಯಲ್ಲೂ ಪ್ರಯೋಜನಕಾರಿ ಎನಿಸುವ ಬಾದಾಮಿ ಕೆಲವರಿಗೆ ಹಾನಿ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಕೆಲವು ಕಾಯಿಲೆಗಳು ಮತ್ತು ಸಮಸ್ಯೆಗಳಿಂದ ಬಳಲುತ್ತಿರುವವರು ಬಾದಾಮಿ ತಿನ್ನುವುದು ಉತ್ತಮವಲ್ಲ. ಯಾವೆಲ್ಲಾ ಸಮಸ್ಯೆಯಿರುವವರು ಬಾದಾಮಿ ಸೇವಿಸಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಈ ಸಮಸ್ಯೆಯಿರುವವರು ಬಾದಾಮಿ ಸೇವನೆ ಮಾಡುವುದು ಉತ್ತಮವಲ್ಲ
ಮೈಗ್ರೇನ್: ಮೈಗ್ರೇನ್ ಸಮಸ್ಯೆ ಇರುವವರು ಬಾದಾಮಿ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ದೀರ್ಘಕಾಲದ ಮೈಗ್ರೇನ್‌ನಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಬಾದಾಮಿಯನ್ನು ಸೇರಿಸಬಾರದು. ಬಾದಾಮಿಯಲ್ಲಿ ವಿಟಮಿನ್-ಇ ಹೇರಳವಾಗಿದೆ. ಇದು ತಲೆನೋವು, ತಲೆತಿರುಗುವಿಕೆ, ವಾಂತಿ, ಆಯಾಸವನ್ನು ಉಂಟುಮಾಡುತ್ತದೆ. ಹೀಗಾಗಿ ಮೈಗ್ರೇನ್ ಸಮಸ್ಯೆ ಹೆಚ್ಚಾಗುತ್ತದೆ.
ಮೂತ್ರಪಿಂಡದ ಕಲ್ಲುಗಳು: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬಾದಾಮಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಬಾದಾಮಿಯಲ್ಲಿ ಆಕ್ಸಲೇಟ್ ಅಧಿಕವಾಗಿದೆ. ಇದು ಮೂತ್ರಪಿಂಡಗಳಿಗೆ ಹಾನಿ ಮಾಡುವ ಸಂಯುಕ್ತವಾಗಿದೆ. ಕ್ಯಾಲ್ಸಿಯಂ ಅನ್ನು ಮೂತ್ರಪಿಂಡದ ಕಲ್ಲುಗಳಾಗಿ ಪರಿವರ್ತಿಸುತ್ತದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ದಿನನಿತ್ಯ ಬಾದಾಮಿ ತಿನ್ನುವುದರಿಂದ ಕಲ್ಲಿನ ಗಾತ್ರ ಹೆಚ್ಚಬಹುದು. ಹೀಗಾಗಿ ವೈದ್ಯರ ಸಲಹೆಯಿಲ್ಲದೆ ಬಾದಾಮಿಯನ್ನು ಸೇವಿಸದಿರುವುದು ಉತ್ತಮ.
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡ ಇರುವವರು ಬಾದಾಮಿಯನ್ನು ಮಿತವಾಗಿ ಮಾತ್ರ ಸೇವಿಸಬೇಕು. ವೈದ್ಯರ ಸಲಹೆಯಿಲ್ಲದೆ ದಿನಚರಿಯಲ್ಲಿ ಸೇರಿಸಬೇಡಿ. ಬಾದಾಮಿ ಮೆಗ್ನೀಸಿಯಮ್‍ನಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡದ ಔಷಧಿಗಳೊಂದಿಗೆ ಬಾದಾಮಿ ಸೇವಿಸಿದರೆ, ಅದು ಖಂಡಿತವಾಗಿಯೂ ನಿಮಗೆ ಹಾನಿಕಾರಕವಾಗಬಹುದು.
ಆಮ್ಲೀಯತೆ, ಮಲಬದ್ಧತೆ: ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರ, ಮಲಬದ್ಧತೆ ಮುಂತಾದ ಜೀರ್ಣಕಾರಿ ಸಮಸ್ಯೆಗಳಿದ್ದರೆ ಬಾದಾಮಿಯನ್ನು ಮಿತವಾಗಿ ಸೇವಿಸಬೇಕು. ಜೀರ್ಣಕ್ರಿಯೆಯು ದುರ್ಬಲವಾಗಿದ್ದರೆ, ಬಾದಾಮಿಯನ್ನು ಜೀರ್ಣಿಸಿಕೊಳ್ಳಲು ಕಷ್ಟಪಡಬಹುದು. ಅಲ್ಲದೆ ಗ್ಯಾಸ್, ಹೊಟ್ಟೆ ಉಬ್ಬರ, ಅತಿಸಾರ ಮತ್ತು ಹೊಟ್ಟೆ ನೋವಿನಿಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ವೈದ್ಯರೊಂದಿಗೆ ಸಮಾಲೋಚಿಸಿದ ನಂತರವೇ ಬಾದಾಮಿ ತಿನ್ನುವುದು ಉತ್ತಮ.
ಅಧಿಕ ತೂಕ: ಅಧಿಕ ತೂಕದಿಂದ ಬಳಲುತ್ತಿರುವವರು ಸಹ ಬಾದಾಮಿ ತಿನ್ನುವ ಮೊದಲು ಯೋಚಿಸಬೇಕು. ಬಾದಾಮಿಯಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿದೆ. ಪ್ರತಿದಿನ ಒಂದು ಹಿಡಿ ಬಾದಾಮಿ ಸೇವಿಸುವುದರಿಂದ ಕೊಬ್ಬನ್ನು ಕಡಿಮೆ ಮಾಡಬಹುದು. ಸ್ಥೂಲಕಾಯತೆ ಸಮಸ್ಯೆಯಿದ್ದರೆ ಬಾದಾಮಿ ಸೇವಿಸದಿರುವುದು ಉತ್ತಮ. ಒಂದು ವೇಳೆ ಬಾದಾಮಿ ತಿನ್ನಲು ಬಯಸಿದರೆ ವೈದ್ಯರ ಸಲಹೆ ಪಡೆಯಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope