ನುಗ್ಗೇಕಾಯಿ ಪರಾಠ ರೆಸಿಪಿ; ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಫೇವರೆಟ್ ತಿಂಡಿ, ನೀವೂ ರುಚಿ ನೋಡಿ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಆನ್‌ಲೈನ್ ಸಂವಾದವೊಂದರ ವೇಳೆ ತಾವು, ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ನುಗ್ಗೇಕಾಯಿ ಪರಾಠ ತಿನ್ನಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ನುಗ್ಗೇಕಾಯಿ ಪರಾಠ ರೆಸಿಪಿ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಇಲ್ಲಿದೆ ನೋಡಿ ರೆಸಿಪಿ. (ಬರಹ: ಅರ್ಚನಾ ವಿ. ಭಟ್)
ಪ್ರಧಾನಿ ನರೇಂದ್ರ ಮೋದಿ ಸಸ್ಯಾಹಾರ ಪ್ರಿಯರು. ಜೊತೆಗೆ ದೇಸಿ ಆಹಾರಗಳೆಂದರೆ ಅವರಿಗೆ ಅಚ್ಚುಮೆಚ್ಚು. 2020ರಲ್ಲಿ ರಾಷ್ಟ್ರವ್ಯಾಪಿ ನಡೆದ ಫಿಟ್ ಇಂಡಿಯಾ ಮೂಮೆಂಟ್‌ನ ಮೊದಲ ವಾರ್ಷಿಕೋತ್ಸವದ ಆನ್‌ಲೈನ್ ಸಂವಾದದಲ್ಲಿ ಮೋದಿಯವರು ನುಗ್ಗೇಕಾಯಿಯಿಂದ ತಯಾರಿಸುವ ಪರಾಠದ ಬಗ್ಗೆ ಹೇಳಿದ್ದರು. ಆ ಸಂವಾದದಲ್ಲಿ ಅವರು ತಾನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಆ ಪರಾಠವನ್ನು ತಿನ್ನುತ್ತೇನೆ ಎಂದಿದ್ದರು. ಈ ಚರ್ಚೆಯ ನಂತರ ಹೊಸ ಪರಾಠದ ಬಗ್ಗೆ ಎಲ್ಲರಿಗೂ ಆಸಕ್ತಿ ಮೂಡುವಂತಾಯಿತು.
ಪರಾಠ ಎನ್ನುವುದು ಭಾರತೀಯ ಆಹಾರ ಪದ್ದತಿಯ ಒಂದು ಭಾಗ. ಬೇಸಿಗೆ ಅಥವಾ ಚಳಿಗಾಲ ಹೀಗೆ ಯಾವುದೇ ಋತುಮಾನವಿರಲಿ ಮನೆಯಲ್ಲಿಯೇ ತಯಾರಿಸಿದ ಪರಾಠ ಬೆಳಗಿನ ಪ್ರಮುಖ ತಿಂಡಿಯಾಗಿದೆ. ಇದನ್ನು ಮೊಸರು ಅಥವಾ ಬೆಣ್ಣೆಯ ಜೊತೆ ಸವಿಯಲಾಗುತ್ತದೆ. ಹಾಗಾದರೆ ಮೋದಿಯವರ ಮೆಚ್ಚಿನ ರೋಗ ನಿರೊಧಕ ಶಕ್ತಿ ಹೆಚ್ಚಿಸುವ ಪರಾಠವನ್ನು ಮನೆಯಲ್ಲಿಯೇ ಸುಲಭವಾಗಿ ಹೇಗೆ ತಯಾರಿಸುವುದು ಎಂದು ನೋಡೋಣ.
ನುಗ್ಗೇಕಾಯಿಯನ್ನು ಭಾರತದ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಹಿಂದಿಯಲ್ಲಿ ಸಹಜನ್ ಎಂದರೆ ಓಡಿಸ್ಸಾದವರು ಅದನ್ನು ಸಾಜಾನಾ ಎನ್ನುತ್ತಾರೆ. ಇದು ಉರಿಯೂತ ಶಮನಕಾರಿಯಾಗಿದ್ದು, ಆಂಟಿ ಬ್ಯಾಕ್ಟೀರಿಯಾ ಗುಣಲಕ್ಷಣವನ್ನು ಹೊಂದಿದೆ. ಅಸ್ತಮಾ, ಕೆಮ್ಮು ನಿಯಂತ್ರಿಸುವ ಇದನ್ನು ಉಸಿರಾಟದ ಸಮಸ್ಯೆಗಳ ಪರಿಹಾರಕ್ಕೆ ಬಳಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ನುಗ್ಗೇಕಾಯಿಯು ನೈಸರ್ಗಿಕ ಟಾನಿಕ್ ಎಂದು ಹೇಳಲಾಗುತ್ತದೆ.
ನುಗ್ಗೇಕಾಯಿ ಪರಾಠ ತಯಾರಿಸುವ ವಿಧಾನ
ನುಗ್ಗೇಕಾಯಿ ಪರಾಠವನ್ನು ಎಲೆಗಳು ಅಥವಾ ಎಳೆಯ ನುಗ್ಗೇಕಾಯಿಯಿಂದ ತಯಾರಿಸಲಾಗುತ್ತದೆ. ನಿಮಗೆ ಯಾವುದು ಲಭ್ಯವೋ ಅದನ್ನು ಆರಿಸಿಕೊಳ್ಳಿ.
ಪರಾಠಕ್ಕೆ ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು, ಉಪ್ಪು, ಜೀರಿಗೆ, ಅಚ್ಚ ಖಾರದ ಪುಡಿ, ಹಸಿಮೆಣಸು, ಅಜ್ವಾನ (ಓಂ ಕಾಳು), ರುಚಿಗೆ ತಕ್ಕಷ್ಟು ಉಪ್ಪು, ಕಲೆಸಲು ಎಣ್ಣೆ, ನುಗ್ಗೆಸೊಪ್ಪು ಅಥವಾ ಎಳೆಯ ನುಗ್ಗೇಕಾಯಿ.
ತಯಾರಿಸುವ ವಿಧಾನ
- ನುಗ್ಗೇಕಾಯಿಯ ಎಲೆಗಳನ್ನು ತೊಳೆದು ಸರಿಯಾಗಿ ಕುದಿಸಿ. ಅದು ಸಂಪೂರ್ಣವಾಗಿ ಆರಿದ ನಂತರ ಅದಕ್ಕೆ ಗೋಧೀ ಹಿಟ್ಟು, ಉಪ್ಪು, ಜೀರಿಗೆ, ಅಚ್ಚ ಖಾರದ ಪುಡಿ, ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಮತ್ತು ಅಜ್ವಾನ (ಓಂ ಕಾಳು) ಸೇರಿಸಿ ಪರಾಠ ಹಿಟ್ಟು ತಯಾರಿಸಿ. ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಲಟ್ಟಿಸಿ. ಪರಾಠವನ್ನು ಎರಡೂ ಕಡೆ ಹೊಂಬಣ್ಣ ಬರುವವರೆಗೆ ತುಪ್ಪ ಅಥವಾ ನೀವು ಬಳಸುವ ಅಡುಗೆ ಎಣ್ಣೆ ಸವರಿ ಬೇಯಿಸಿ. ಈಗ ನುಗ್ಗೇಕಾಯಿ ಎಲೆಗಳಿಂದ ತಯಾರಿಸಿದ ಪರಾಠ ಸವಿಯಲು ಸಿದ್ಧ.
- ನೀವು ಎಳೆಯ ನುಗ್ಗೇಕಾಯಿಯನ್ನು ಆಯ್ದುಕೊಂಡಿದ್ದರೆ, ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. ಚೆನ್ನಾಗಿ ಕುದಿಸಿ. ಆರಿದ ನಂತರ ನೀರು ಸೋಸಿಕೊಳ್ಳಿ. ನಂತರ ನುಗ್ಗೇಕಾಯಿಯ ಪಲ್ಪ್ (ಅಂದರೆ ತಿರುಳು) ಬೇರ್ಪಡಿಸಿ. ಗೋಧಿಹಿಟ್ಟು, ಉಪ್ಪು, ಜೀರಿಗೆ, ಅಚ್ಚ ಖಾರದ ಪುಡಿ, ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಮತ್ತು ಅಜವೈನ್ (ಓಂ ಕಾಳು) ಜೊತೆಗೆ ನುಗ್ಗೇಕಾಯಿಯ ಪಲ್ಪ್(ತಿರುಳು) ಸೇರಿಸಿ ಪರಾಠ ಹಿಟ್ಟು ತಯಾರಿಸಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಲಟ್ಟಿಸಿ. ತುಪ್ಪ ಅಥವಾ ನೀವು ಬಳಸುವ ಅಡುಗೆ ಎಣ್ಣೆ ಸವರಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಬಿಸಿ ಬಿಸಿ ಪರಾಠ ಈಗ ಸಿದ್ಧ.
ನುಗ್ಗೇಕಾಯಿಯ ಆರೋಗ್ಯ ಪ್ರಯೋಜನಗಳು
- ಇದು ಕೂದಲು ಮತ್ತು ತ್ವಚೆಗೆ ಪೋಷಣೆಯನ್ನು ನೀಡುತ್ತದೆ.
- ನೈಸರ್ಗಿಕವಾಗಿ ದೇಹದಲ್ಲಿರುವ ವಿಷ ಹೊರ ಹಾಕುವ ಅಂಶಗಳನ್ನು ಹೊಂದಿದೆ.
- ಇದು ದೀರ್ಘಕಾಲದ ಹೊಟ್ಟೆಯ ಕಾಯಿಲೆಗಳನ್ನು ತಡೆಯಬಲ್ಲದು.
- ಸಂಧೀವಾತ ಶಮನ ಮಾಡುವ ಗುಣ ಇದರಲ್ಲಿದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಕೊಲೆಸ್ಟ್ರಾಲ್ ಕಡಿಮೆ ಮಾಡಬಲ್ಲದು.
ನುಗ್ಗೇಕಾಯಿಯು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕ ಮುಂತಾದ ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಈ ಎಲೆಗಳನ್ನು ಉಪ್ಪು, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಎಣ್ಣೆಯಲ್ಲಿ ಹುರಿದು ಕೂಡಾ ಸವಿಯಬಹುದು. ಇನ್ನು ನುಗ್ಗೇಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿದಿ ಕೂಡಾ ಸೇವಿಸಬಹುದು. ನಮ್ಮ ಆರೋಗ್ಯಕ್ಕೆ ಉತ್ತಮವಾಗಿರುವ ನುಗ್ಗೇಕಾಯಿಯಿಂದ ನಿಮ್ಮಿಷ್ಟದ ಅಡುಗೆ ತಯಾರಿಸಿ ಸವಿಯಿರಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.
(ಬರಹ: ಅರ್ಚನಾ ವಿ. ಭಟ್)