ಈ ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದ್ರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ; ಆಲೂಗೆಡ್ಡೆಯಿಂದ ಸೊಪ್ಪಿನವರೆಗೆ
ಇದು ಬ್ಯುಸಿ ಜಮಾನ, ಇಲ್ಲಿ ಎಲ್ಲವೂ ಅರ್ಜೆಂಟ್‌ನಲ್ಲೇ ಆಗಬೇಕು. ಆ ಕಾರಣಕ್ಕೆ ಅನ್ನದಿಂದ ಹಿಡಿದು ತರಕಾರಿವರೆಗೆ ಎಲ್ಲವನ್ನೂ ಕುಕ್ಕರ್‌ನಲ್ಲೇ ಬೇಯಿಸಲಾಗುತ್ತದೆ. ಆದರೆ ಈ ಕೆಲವು ಆಹಾರಗಳನ್ನು ತಪ್ಪಿಯೂ ಕುಕ್ಕರ್‌ನಲ್ಲಿ ಬೇಯಿಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ.

ಇತ್ತೀಚಿನ ದಿನಗಳಲ್ಲಿ ಫ್ರೆಶರ್ ಕುಕ್ಕರ್ ಸೀಟಿ ಕೇಳದ ಮನೆಗಳೇ ಇಲ್ಲ. ಶೇ 90 ರಷ್ಟು ಮನೆಗಳಲ್ಲಿ ಫ್ರೆಶರ್ ಕುಕ್ಕರ್ ಬಳಸುತ್ತಾರೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಗೃಹಿಣಿಯರು ಇರುವ ಮನೆಗಳಲ್ಲಿ ಫ್ರೆಶರ್ ಕುಕ್ಕರ್ ಬಳಕೆ ಹೆಚ್ಚು. ಯಾಕೆಂದರೆ ಇದರಿಂದ ಸಮಯದೊಂದಿಗೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಆ ಕಾರಣಕ್ಕೆ ಅನ್ನದಿಂದ ತರಕಾರಿವರೆಗೆ ಎಲ್ಲವನ್ನೂ ಅದರಲ್ಲಿ ಬೇಯಿಸುತ್ತಾರೆ.
ಆದರೆ ಆರೋಗ್ಯ ತಜ್ಞರ ಪ್ರಕಾರ ಈ ಕೆಲವು ಆಹಾರಗಳನ್ನು ತಪ್ಪಿಯೂ ಫ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಈ ಕೆಲವು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ರುಚಿ ಹಾಳಾಗುವುದರ ಜೊತೆ ಆಹಾರದಲ್ಲಿನ ಪೋಷಕಾಂಶವೂ ನಷ್ಟವಾಗಬಹುದು. ನೀವು ಎಷ್ಟೇ ಬ್ಯುಸಿ ಇದ್ರೂ ಪ್ರೆಶರ್ ಕುಕ್ಕರ್‌ನಲ್ಲಿ ಈ ಕೆಲವು ಆಹಾರಗಳನ್ನು ಬೇಯಿಸಲೇಬೇಡಿ. ಬೇಯಿಸಿದ್ರೆ ನಿಮ್ಮ ಆರೋಗ್ಯವನ್ನು ನೀವೇ ಕೆಡಿಸಿಕೊಂಡಂತೆ.
ಯಾವ ಆಹಾರವನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು
ಬೀನ್ಸ್, ದ್ವಿದಳ ಧಾನ್ಯಗಳು..
ಕಡಲೆ, ಬಟಾಣಿ, ಮಸೂರ ಮತ್ತು ಬೀನ್ಸ್‌ನಂತಹ ದ್ವಿದಳ ಧಾನ್ಯಗಳು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಾಂಬಾರ್ ಆಗುವುದರೊಳಗೆ ಅದನ್ನು ಸೇರಿಸಬೇಕು ಎನ್ನುವ ಉದ್ದೇಶದಿಂದಲೂ ಕೂಡ ಇದನ್ನು ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ. ಆದರೆ ಈ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ ಅವುಗಳಲ್ಲಿ ಲೆಕ್ಟಿನ್ ಎಂಬ ಅಂಶ ಇರುತ್ತದೆ. ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದು ವಿಷಕಾರಿ ಅಂಶವಾಗಿ ಬದಲಾಗುತ್ತದೆ. ಹೆಚ್ಚುವರಿ ಸುವಾಸನೆಯೊಂದಿಗೆ ವ್ಯತ್ಯಾಸವು ಗಮನಾರ್ಹವಾಗಿದೆ. ಇವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ಫುಡ್ ಪಾಯಿಸನ್ ಉಂಟಾಗಬಹುದು. ಆದ್ದರಿಂದ ಸಮಯ ಹಿಡಿದರೂ ತೊಂದರೆಯಿಲ್ಲ ಇವುಗಳನ್ನು ಪಾತ್ರೆಯಲ್ಲಿಯೇ ಬೇಯಿಸಿ.
ಆಲೂಗಡ್ಡೆ
ಆಲೂಗಡ್ಡೆಯನ್ನು ಕೂಡ ಬೇಗ ಬೇಯಲಿ ಎನ್ನುವ ಕಾರಣಕ್ಕೆ ಕುಕ್ಕರ್‌ನಲ್ಲಿ ಹಾಕಲಾಗುತ್ತದೆ. ಈ ಅಭ್ಯಾಸ ನಿಮ್ಮಲ್ಲಿದ್ದರೆ ತಕ್ಷಣ ಬದಲಾಯಿಸಿಕೊಳ್ಳಿ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ. ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದು ಆರೋಗ್ಯಕ್ಕೆ ಹಾನಿಕಾರಕ. ಯಾಕೆಂದರೆ ಇವುಗಳಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಆಹಾರ ಮತ್ತು ಕೃಷಿ ವಿಜ್ಞಾನದ ಜನರಲ್ ನಡೆಸಿದ ಅಧ್ಯಯನದ ಪ್ರಕಾರ, ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಆಲೂಗಡ್ಡೆಯಲ್ಲಿರುವ ಪಿಷ್ಟವು ಆರೋಗ್ಯಕ್ಕೆ ಹಾನಿಕಾರಕವಾದ ಒಂದು ರೀತಿಯ ರಾಸಾಯನಿಕವನ್ನು ರೂಪಿಸುತ್ತದೆ. ಅಲ್ಲದೆ, ಅದರ ಪೌಷ್ಟಿಕಾಂಶದ ಮೌಲ್ಯವೂ ಕಡಿಮೆಯಾಗುತ್ತದೆ.
ಸೊಪ್ಪು
ಪಾಲಕ್ ಸೊಪ್ಪಿನಂತಹ ಇತರ ಸೊಪ್ಪುಗಳನ್ನು ಸಹ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಪ್ರೆಶರ್ ಕುಕ್ಕರ್‌ನಲ್ಲಿ ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಆಕ್ಸಲೇಟ್‌ಗಳು ಕರಗಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಇದಲ್ಲದೆ, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ತರಕಾರಿಗಳ ಪೋಷಕಾಂಶಗಳು ನಾಶವಾಗುತ್ತವೆ ಮತ್ತು ಅವುಗಳ ಬಣ್ಣ ಮತ್ತು ಸುವಾಸನೆಗೂ ಸಹ ಹಾನಿಗೊಳಿಸುತ್ತವೆ.
ಡೀಪ್ ಫ್ರೈಗೆ ಬಳಸದಿರಿ
ಆವಿಯಲ್ಲಿ ಬೇಯಿಸಿದ ಆಹಾರವನ್ನು ಬೇಯಿಸಲು ಮಾತ್ರ ಪ್ರೆಶರ್ ಕುಕ್ಕರ್ ಬಳಸಬೇಕು. ಅದರಲ್ಲಿ ಕರಿದ ಆಹಾರವನ್ನು ಬೇಯಿಸುವುದರಿಂದ ರುಚಿ ಹಾಳಾಗುವುದಲ್ಲದೆ, ನಿಮ್ಮ ಅಡುಗೆ ಅನುಭವವೂ ಹಾಳಾಗುತ್ತದೆ. ಡೀಪ್-ಫ್ರೈಯಿಂಗ್ ಪಾಕವಿಧಾನಗಳಿಗೆ ಪ್ರೆಶರ್ ಕುಕ್ಕರ್ ಅನ್ನು ಎಂದಿಗೂ ಬಳಸಬೇಡಿ. ಪ್ರೆಶರ್ ಕುಕ್ಕರ್ ಅನ್ನು ಹೆಚ್ಚಿನ ತಾಪಮಾನದಲ್ಲಿ ಎಣ್ಣೆಯನ್ನು ಬಿಸಿ ಮಾಡಲು ವಿನ್ಯಾಸಗೊಳಿಸಲಾಗಿಲ್ಲ. ಹೀಗೆ ಮಾಡುವುದರಿಂದ ಕರಿದ ಆಹಾರದ ರುಚಿ ಕೆಟ್ಟದಾಗುವುದಲ್ಲದೆ, ಪ್ರೆಶರ್ ಕುಕ್ಕರ್ ಕೂಡ ಹಾಳಾಗುತ್ತದೆ.
ಅಕ್ಕಿ
ಸಾಮಾನ್ಯವಾಗಿ ಶೇ 90 ರಷ್ಟು ಮಂದಿ ಅನ್ನವನ್ನು ಫ್ರೆಶರ್ ಕುಕ್ಕರ್‌ನಲ್ಲೇ ಮಾಡುತ್ತಾರೆ. ಆದರೆ ಇದು ಕೂಡ ಅಪಾಯಕಾರಿ. ಏಕೆಂದರೆ ಅಕ್ಕಿಯನ್ನು ಪ್ರೆಶರ್ ಕುಕಿಂಗ್ ಮಾಡುವಾಗ ಅದರಲ್ಲಿರುವ ಪಿಷ್ಟ ಅಂಶವಾದ ಅಕ್ರಿಲಾಮೈಡ್ ಎಂಬ ಹಾನಿಕಾರಕ ರಾಸಾಯನಿಕ ಬಿಡುಗಡೆಯಾಗುತ್ತದೆ. ಅನ್ನವನ್ನು ಯಾವಾಗಲೂ ಕಡಿಮೆ ಉರಿಯಲ್ಲಿ ಮತ್ತು ಗಾಳಿಯಾಡದ ಪಾತ್ರೆಯಲ್ಲಿ ಬೇಯಿಸಬೇಕು. ಆಗ ಮಾತ್ರ ಅದು ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
