Ramadan Fasting: ರಂಜಾನ್ ಸಮಯದಲ್ಲಿ ಕಾಡದಿರಲಿ ನಿರ್ಜಲೀಕರಣ; ಉಪವಾಸದ ಹೊತ್ತಲ್ಲೂ ಹೈಡ್ರೇಟ್ ಆಗಿರಲು ಈ ಟಿಪ್ಸ್ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Ramadan Fasting: ರಂಜಾನ್ ಸಮಯದಲ್ಲಿ ಕಾಡದಿರಲಿ ನಿರ್ಜಲೀಕರಣ; ಉಪವಾಸದ ಹೊತ್ತಲ್ಲೂ ಹೈಡ್ರೇಟ್ ಆಗಿರಲು ಈ ಟಿಪ್ಸ್ ಪಾಲಿಸಿ

Ramadan Fasting: ರಂಜಾನ್ ಸಮಯದಲ್ಲಿ ಕಾಡದಿರಲಿ ನಿರ್ಜಲೀಕರಣ; ಉಪವಾಸದ ಹೊತ್ತಲ್ಲೂ ಹೈಡ್ರೇಟ್ ಆಗಿರಲು ಈ ಟಿಪ್ಸ್ ಪಾಲಿಸಿ

Ramadan Fasting: ಪ್ರಪಂಚದಾದ್ಯಂತ ಮುಸ್ಲೀಮರು ರಂಜಾನ್ ಉಪವಾಸ ಆಚರಿಸುತ್ತಿದ್ದಾರೆ. ಬೇಸಿಗೆಯ ಈ ದಿನಗಳಲ್ಲಿ ಉಪವಾಸದ ಸಮಯದಲ್ಲಿ ನಿರ್ಜಲೀಕರಣ ಕಾಡುವುದು ಸಹಜ. ಉಪವಾಸದ ಹೊತ್ತಿನಲ್ಲೂ ಹೈಡ್ರೇಟ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಪಾಲಿಸಿ.

ರಂಜಾನ್ ಉಪವಾಸದ ಸಮಯದಲ್ಲೂ ಹೈಡ್ರೇಟ್ ಆಗಿರಲು ಈ ಟಿಪ್ಸ್ ಪಾಲಿಸಿ
ರಂಜಾನ್ ಉಪವಾಸದ ಸಮಯದಲ್ಲೂ ಹೈಡ್ರೇಟ್ ಆಗಿರಲು ಈ ಟಿಪ್ಸ್ ಪಾಲಿಸಿ

Ramadan Fasting: ಮನುಷ್ಯ ದೇಹದ ಕಾರ್ಯಗಳು ಸುಗಮವಾಗಿ ಸಾಗಲು ನೀರು ಅತಿ ಅಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುವುದು, ತ್ಯಾಜ್ಯಗಳನ್ನು ಹೊರಹಾಕುವುದು, ಕೀಲುಗಳು ಮತ್ತು ಅಂಗಗಳನ್ನು ರಕ್ಷಿಸುವುದು ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ನಮ್ಮ ದೇಹದ ಹಲವು ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ದೇಹವನ್ನು ಹೈಡ್ರೇಟ್ ಮಾಡಲು ನೀರು ಅತ್ಯವಶ್ಯ.

ನಮ್ಮ ವೈಯಕ್ತಿಕ ಆರೋಗ್ಯ ಮತ್ತು ಚಟುವಟಿಕೆಯ ಮಟ್ಟಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯ. ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಪ್ರಮುಖ ಕ್ಲಿನಿಕಲ್ ಪೌಷ್ಟಿಕತಜ್ಞ ಪ್ರಾಚಿ ಚಂದ್ರ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ‘ಒಬ್ಬ ಮನುಷ್ಯ ಆರೋಗ್ಯದಿಂದ ಇರಲು ಪ್ರತಿದಿನ 8 ಗ್ಲಾಸ್ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಅವರ ದೇಹ ಸ್ಥಿತಿಗೆ ತಕ್ಕಂತೆ ನೀರು ಕುಡಿಯುವ ಪ್ರಮಾಣವೂ ಬದಲಾಗಬೇಕು‘ ಎಂದು ಅವರು ಹೇಳುತ್ತಾರೆ. ಅಲ್ಲದೇ ಸಾಕಷ್ಟು ನೀರು ಕುಡಿಯುವ ಪ್ರಯೋಜನಗಳ ಬಗ್ಗೆಯೂ ಅವರು ಇಲ್ಲಿ ವಿವರಿಸಿದ್ದಾರೆ. 

ನೀರು ಕುಡಿಯುವ ಪ್ರಯೋಜನಗಳು 

1. ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ನಮ್ಮ ದೇಹಕ್ಕೆ ನೀರು ಅತ್ಯಗತ್ಯ. ಸಾಕಷ್ಟು ನೀರು ದೇಹದಲ್ಲಿ ಇಲ್ಲ ಎಂದರೆ ನೀವು ಕರುಳಿನ ಚಲನೆಯಲ್ಲಿ ವ್ಯತ್ಯಾಸ, ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ಎದೆಯುರಿ ಮತ್ತು ಜೀವನದ ಗುಣಮಟ್ಟವನ್ನು ಕೆಡಿಸುವ ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

2. ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಟ್ರ್ಯಾಕ್‌ನಲ್ಲಿಡಲು ನೀರು ಆಹಾರದಿಂದ ಕರಗುವ ನಾರನ್ನು ಒಡೆಯಲು ಸಹಾಯ ಮಾಡುತ್ತದೆ.

3. ಬೆವರುವುದರಿಂದ ಎಲೆಕ್ಟ್ರೋಲೈಟ್‌ ನಷ್ಟ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಸೋಡಿಯಂ ಮತ್ತು ಮೆಗ್ನೀಸಿಯಮ್‌ನಿಂದ ಸಮೃದ್ಧವಾಗಿರುವ ಖನಿಜಯುಕ್ತ ನೀರು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

4. ನಿರ್ಜಲೀಕರಣವು ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ ಮತ್ತು ನಮ್ಮ ಮೆದುಳಿಗೆ ಆಮ್ಲಜನಕದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.

5. ನೀರಿನಾಂಶ ಕೊರತೆಯು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಇದರಿಂದ ಹೃದಯದ ಕಾರ್ಯನಿರ್ವಹಣೆಯಲ್ಲಿ ತೊಂದರೆ ಎದುರಾಗಬಹುದು.‌

6. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ದೇಹದ ತೂಕ, ದೇಹದ ದ್ರವ್ಯರಾಶಿ ಸೂಚ್ಯಂಕ ಮತ್ತು ದೇಹದ ಸಂಯೋಜನೆಯಲ್ಲಿ ಗಣನೀಯ ಇಳಿಕೆಗೆ ನೀರು ಸಹಾಯ ಮಾಡುತ್ತದೆ.

7. ದೇಹದಲ್ಲಿ ನೀರಿನಾಂಶ ಹೆಚ್ಚಿರುವುದು ಕೀಲುಗಳು ಚೆನ್ನಾಗಿ ನಯವಾಗಿರಲು ಸಹಾಯ ಮಾಡುತ್ತದೆ. ಇದು ಮೂಳೆಗಳ ನಡುವೆ ಹೆಚ್ಚು ‘ಕುಶನ್‘ ಅನ್ನು ಸೃಷ್ಟಿಸುವ ಮೂಲಕ ಘರ್ಷಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ಸರಾಗ ಚಲನೆ ಸಾಧ್ಯ ಮತ್ತು ಕೀಲು ನೋವಿನ ಸಮಸ್ಯೆ ಎದುರಾಗುವುದನ್ನು ತಡೆಯಬಹುದು. 

8.  ನಿರ್ಜಲೀಕರಣಗೊಂಡಾಗ ನಮ್ಮ ದೇಹವು ಹೆಚ್ಚಿನ ಶಾಖವನ್ನು ಸಂಗ್ರಹಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಬಿಸಿ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು.

9. ಸಾಕಷ್ಟು ನೀರು ಕುಡಿಯುವ ಮೂಲಕ ಹೈಡ್ರೇಟ್ ಆಗಿರುವುದರಿಂದ ಮೂತ್ರನಾಳದಲ್ಲಿನ ಖನಿಜಗಳ ಸಾಂದ್ರತೆಯನ್ನು ದುರ್ಬಲಗೊಳಿಸಲು ಸಹಾಯವಾಗುತ್ತದೆ. ಇದು ಮೂತ್ರಕೋಶದಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರನಾಳದ ಸೋಂಕುಗಳು ಮತ್ತು ಕಲ್ಲುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

10.  ನೀರು ನಮ್ಮ ದೇಹದ ನೈಸರ್ಗಿಕ ನಿರ್ವೀಶೀಕರಣ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ. ಇದು ಮೂತ್ರ ವಿಸರ್ಜನೆ, ಉಸಿರಾಟ, ಬೆವರು ಮತ್ತು ಕರುಳಿನ ಚಲನೆಯ ಮೂಲಕ ತ್ಯಾಜ್ಯ ಮತ್ತು ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ. ಸಾಕಷ್ಟು ನೀರು ಕುಡಿಯುವ ಮೂಲಕ ಹೈಡ್ರೇಟ್ ಆಗಿರುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಉಪವಾಸದ ದಿನಗಳಲ್ಲಿ ಹೈಡ್ರೇಟ್ ಆಗಿರುವುದು ಹೇಗೆ

ಪ್ರಾಚಿ ಚಂದ್ರ ಅವರ ಪ್ರಕಾರ, ವಿಶೇಷವಾಗಿ ಉಪವಾಸದ ಸಮಯದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ನೀವು ಬಯಸಿದರೆ ಇಲ್ಲಿ ಕೆಲವು ಪ್ರಾಯೋಗಿಕ ಸಲಹೆಗಳಿವೆ -

  • ಸುಹೂರ್ ಮತ್ತು ಇಫ್ತಾರ್ ಸಮಯದ ನಡುವೆ 8-10 ಗ್ಲಾಸ್ ನೀರು ಮತ್ತು ಕಡಿಮೆ ಕ್ಯಾಲೋರಿ ಪಾನೀಯಗಳನ್ನು (ಎಳನೀರು, ನಿಂಬೆ ರಸ, ತೆಳುವಾದ ಮಜ್ಜಿಗೆ, ಗಂಜಿ, ORS, ಖನಿಜಯುಕ್ತ ನೀರು, ಗಿಡಮೂಲಿಕೆ ಚಹಾಗಳು, ಸುವಾಸನೆಯ ಹಾಲು, ತರಕಾರಿ ಸೂಪ್‌ಗಳು ಅಥವಾ ತರಕಾರಿ ರಸಗಳು, ಸಾರುಗಳು ಇತ್ಯಾದಿ) ಕುಡಿಯಿರಿ.
  • ರಂಜಾನ್ ಸಮಯದಲ್ಲಿ ಪ್ರತಿ ಪ್ರಾರ್ಥನೆಯ ಮೊದಲು ಮತ್ತು ನಂತರ ಒಂದು ಲೋಟ ನೀರು/ಪಾನೀಯ ಸೇವಿಸಬೇಕು.
  • ನಿಮಗೆ ಬಾಯಾರಿಕೆಯಾಗಲಿ ಅಥವಾ ಇಲ್ಲದಿರಲಿ ಪ್ರತಿ ಅರ್ಧಗಂಟೆಗೊಮ್ಮೆ ಒಂದು ಲೋಟ ನೀರು/ಪಾನೀಯ ಕುಡಿಯಿರಿ.
  • ಉಪವಾಸ ಮುರಿಯುವ ಸಮಯದಲ್ಲಿ ಮತ್ತು ಊಟದ ಸಮಯದಲ್ಲಿ ನೀರಿನಾಂಶ ಸಮೃದ್ಧ ಹಣ್ಣು, ತರಕಾರಿಗಳನ್ನು ಸೇವಿಸಿ.
  • ತುಂಬಾ ಉಪ್ಪು, ತುಂಬಾ ಸಿಹಿ ಅಥವಾ ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಏಕೆಂದರೆ ಅವು ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸುತ್ತವೆ.
  • ಯಾವಾಗಲೂ ಒಣಗಿದ ಬೀಜಗಳು ಮತ್ತು ಒಣ ಹಣ್ಣುಗಳನ್ನು ನೆನೆಸಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.
  • ಕೆಫೀನ್ ಅಂಶ ಹೆಚ್ಚಿರುವ ಪಾನೀಯಗಳನ್ನು ಸೇವಿಸುವುದರಿಂದ ಹೆಚ್ಚು ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.  ಇದರಿಂದ ದೇಹದಲ್ಲಿ ದೇಹದಲ್ಲಿ ನೀರಿನಾಂಶವನ್ನು ಕಾಯ್ದುಕೊಳ್ಳಲು ಕಷ್ಟವಾಗಬಹುದು. ಇದು ನಿಮಗೆ ಆತಂಕ ಅಥವಾ ನಡುಕವನ್ನುಂಟು ಮಾಡಬಹುದು, ಆದ್ದರಿಂದ ಕೆಫೀನ್ ಹೊಂದಿರುವ ಪಾನೀಯಗಳ ಸೇವನೆಯನ್ನು ದಿನಕ್ಕೆ 1-2 ಕಪ್‌ಗಳಿಗೆ ಮಿತಿಗೊಳಿಸಿ.
  • ನೀರು ಅಥವಾ ಪಾನೀಯಗಳನ್ನು ನಿಧಾನವಾಗಿ ಕುಡಿಯಿರಿ, ಅಂದರೆ ಸಿಪ್ ಬೈ ಸಿಪ್ ಕುಡಿಯಿರಿ, 
  • ಇಫ್ತಾರ್‌ನ ಕೊನೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದಿನವಿಡೀ ಬಾಯಾರಿಕೆ ಕಡಿಮೆಯಾಗಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: Ramadan 2024: ರಂಜಾನ್ ಉಪವಾಸದ ಸಮಯದಲ್ಲಿ ಮಧುಮೇಹಿಗಳ ಆಹಾರ ಹೇಗಿರಬೇಕು; ಸೆಹ್ರಿ ವೇಳೆ ಸೇವಿಸಲು ಯೋಗ್ಯವಾದ 12 ಉಪಾಹಾರಗಳಿವು

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner