ಕೀಟನಾಶಕಗಳಿಂದ ಭಾರ ಲೋಹಗಳವರೆಗೆ, ರಕ್ತ ಕ್ಯಾನ್ಸರ್‌ನ ಪ್ರಮಾಣ ಹೆಚ್ಚಿಸುತ್ತಿವೆ ಪರಿಸರದ ವಿಷಾಂಶಗಳು; ಮುನ್ನೆಚ್ಚರಿಕೆ ಹೇಗೆ?
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಮಾಣದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಿರಬಹುದು. ಹೆಚ್ಚುತ್ತಿರುವ ರಕ್ತದ ಕ್ಯಾನ್ಸರ್‌ಗೆ ಪರಿಸರದಲ್ಲಿನ ಈ ಕೆಲವು ವಿಷಾಂಶಗಳು ಕಾರಣ ಎನ್ನುತ್ತಿದ್ದಾರೆ ಕ್ಯಾನ್ಸರ್ ತಜ್ಞರು. ಹಾಗಾದರೆ ಈ ಬಗ್ಗೆ ಮುನ್ನೆಚ್ಚರಿಕೆ ಹೇಗೆ, ಪರಿಸರದ ವಿಷಾಂಶಗಳು ರಕ್ತ ಕ್ಯಾನ್ಸರ್‌ಗೆ ಹೇಗೆ ಕಾರಣ ಎಂಬ ವಿವರ ಇಲ್ಲಿದೆ.

ಕ್ಯಾನ್ಸರ್‌ನಲ್ಲಿ ಅತಿ ಮಾರಕವಾಗಿರುವ ಬ್ಲಡ್ ಕ್ಯಾನ್ಸರ್ ಹರಡುವ ಪ್ರಮಾಣ ಏರಿಕೆಯಾಗುತ್ತಿದೆ. ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾದಂತಹ ಬ್ಲಡ್ ಕ್ಯಾನ್ಸರ್ ಬರಲು ಜೀವನಶೈಲಿ ಹಾಗೂ ಅನುವಂಶೀಯತೆ ಪ್ರಮುಖ ಕಾರಣವಾಗಿರುತ್ತದೆ. ಇದರೊಂದಿಗೆ ಇನ್ನೊಂದು ಅಂಶ ಅಂದರೆ ಮೂರನೇ ಅಂಶವೂ ರಕ್ತದ ಕ್ಯಾನ್ಸರ್ ಪ್ರಮಾಣ ಏರಿಕೆಯಾಗಲು ಕಾರಣವಾಗುತ್ತಿದೆ, ಅದುವೇ ಪರಿಸರದಲ್ಲಿನ ವಿಷಾಂಶಗಳು ಎನ್ನುತ್ತಾರೆ ಆಂಕ್ವೆಸ್ಟ್ ಲ್ಯಾಬೋರೇಟರೀಸ್‌ನ ಆಂಕೊಲಾಜಿಸ್ಟ್ ಡಾ. ಶಿವಾಲಿ ಅಹ್ಲಾವತ್. ಇವರು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
‘ಪರಿಸರದ ವಿಷಾಂಶಗಳು ದೇಹದ ಹೆಮಟೊಪಯಟಿಕ್ ವ್ಯವಸ್ಥೆಯಲ್ಲಿ ರೂಪಾಂತರಗಳು ಮತ್ತು ಅಡಚಣೆಗಳನ್ನು ಉಂಟುಮಾಡುತ್ತವೆ. ಈ ವರ್ಗದಲ್ಲಿ ಬೆಂಜೀನ್, ಕೀಟನಾಶಕಗಳು, ಭಾರ ಲೋಹಗಳು (ಆರ್ಸೆನಿಕ್ ಮತ್ತು ಸೀಸದಂತಹವು) ಮತ್ತು ವಿವಿಧ ಕೈಗಾರಿಕಾ ಮಾಲಿನ್ಯಕಾರಕಗಳು ಸೇರಿವೆ. ಈ ವಿಷಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಬಹುದು ಮತ್ತು ಡಿಎನ್ಎ ರೂಪಾಂತರಗಳಿಗೆ ಕಾರಣವಾಗಬಹುದು, ಇದು ರಕ್ತ ಕಣಗಳಲ್ಲಿ ಕ್ಯಾನ್ಸರ್ ಬದಲಾವಣೆಗಳಿಗೆ ಕಾರಣವಾಗಬಹುದು‘ ಎಂದು ಡಾ. ಶಿವಾನಿ ಹೇಳುತ್ತಾರೆ. ಪರಿಸರದ ವಿಷಗಳು ರಕ್ತದ ಕ್ಯಾನ್ಸರ್ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಆಕೆ ಇಲ್ಲಿ ವಿವರಿಸಿದ್ದಾರೆ.
ಬೆಂಜೀನ್ ಮತ್ತು ರಕ್ತ ಕ್ಯಾನ್ಸರ್
‘ಸಿಗರೇಟ್ ಹೊಗೆ, ವಾಹನಗಳ ಹೊರಸೂಸುವ ಹೊಗೆ ಮತ್ತು ಕೈಗಾರಿಕಾ ದ್ರಾವಕಗಳಲ್ಲಿ ಕಂಡುಬರುವ ಬೆಂಜೀನ್ ಒಂದು ಪ್ರಮುಖ ಕ್ಯಾನ್ಸರ್ ಕಾರಕವಾಗಿದೆ. ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಪ್ರಕಾರ, ಬೆಂಜೀನ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮೂಳೆ ಮಜ್ಜೆಯಲ್ಲಿನ ಹೆಮಟೊಪಯಟಿಕ್ ಕೋಶಗಳಿಗೆ ಹಾನಿಯಾಗುವ ಪರಿಣಾಮ ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ (AML) ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ರಕ್ತ ಕಣಗಳ ಉತ್ಪಾದನೆಯನ್ನು ಸಹ ದುರ್ಬಲಗೊಳಿಸಬಹುದು.
ಕೀಟನಾಶಕಗಳು ಮತ್ತು ರಕ್ತ ಕ್ಯಾನ್ಸರ್
ಕೃಷಿಗೆ ಬಳಸುವ ಕೀಟನಾಶಕಗಳು ಹಾಡ್ಗ್ಕಿನ್ ಅಲ್ಲದ ಲಿಂಫೋಮಾ ಮತ್ತು ಇತರ ರಕ್ತ ಕ್ಯಾನ್ಸರ್‌ಗಳ ಬೆಳವಣಿಗೆಯನ್ನು ಹೆಚ್ಚಿಸುವ ಸಂಭವವಿದೆ. ಅವು ಸಾಮಾನ್ಯ ಸೆಲ್ಯುಲಾರ್ ಸಿಗ್ನಲಿಂಗ್ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುತ್ತವೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಇದು ರೂಪಾಂತರಗಳಿಗೆ ಕಾರಣವಾಗುತ್ತದೆ ಎಂದು ಡಾ. ಶಿವಾನಿ ಹೇಳುತ್ತಾರೆ.
ಭಾರ ಲೋಹಗಳು ಮತ್ತು ವಿಕಿರಣ
‘ಆರ್ಸೆನಿಕ್ ಸೇರಿದಂತೆ ಭಾರ ಲೋಹಗಳು, ಕೈಗಾರಿಕಾ ಮೂಲಗಳು ಅಥವಾ ಮೆಡಿಕಲ್ ಇಮ್ಯಾಜಿಂಗ್ ಅಯಾನೀಕರಿಸುವ ವಿಕಿರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ವಿವಿಧ ರಕ್ತ ಕ್ಯಾನ್ಸರ್‌ಗಳ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ. ಇವು ದಿನನಿತ್ಯದ ಸೆಲ್ಯುಲಾರ್ ದುರಸ್ತಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತವೆ ಮತ್ತು ಜೀನೋಮ್‌ನೊಳಗೆ ಅಸ್ಥಿರತೆಯನ್ನು ಉತ್ತೇಜಿಸುತ್ತವೆ‘ ಎಂದು ವೈದ್ಯರು ವಿವರಿಸುತ್ತಾರೆ.
ಪರಿಸರ ವಿಷಗಳಿಂದ ರಕ್ಷಣೆ ಹೇಗೆ?
ಕ್ಯಾನ್ಸರ್‌ಕಾರಕಗಳಿಗೆ ಕಾರಣವಾಗುವಂತಹ ಅಂಶಗಳ ಪ್ರಮಾಣ ಹೆಚ್ಚಿರುವ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚಿನ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ರಕ್ಷಣಾತ್ಮಕ ಸಾಧನಗಳನ್ನು ಬಳಸುವ ಮೂಲಕ ಕ್ಯಾನ್ಸರ್ ಕಾರಕಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು. ವಿಶೇಷ ಕ್ಯಾನ್ಸರ್ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಲಭ್ಯವಿರುವ ನಿಯಮಿತ ತಪಾಸಣೆಗಳು ರಕ್ತದ ಅಸಹಜತೆಗಳನ್ನು ತ್ವರಿತವಾಗಿ ಗುರುತಿಸಲು ಅನುಕೂಲವಾಗುತ್ತವೆ, ಇದು ಫಲಿತಾಂಶಗಳನ್ನು ಸುಧಾರಿಸುತ್ತದೆ ಇದು ಸಹಾಯ ಮಾಡುತ್ತದೆ ಎಂದು ಡಾ. ಶಿವಾನಿ ಹೇಳುತ್ತಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
