ಯುವಜನರನ್ನು ಗಂಭೀರವಾಗಿ ಕಾಡುತ್ತಿದೆ ಮಲಬದ್ಧತೆ ಸಮಸ್ಯೆ; ಕರುಳಿನ ಆರೋಗ್ಯ ಕೆಡಲು ಇವೇ ಪ್ರಮುಖ ಕಾರಣ, ನಿರ್ಲಕ್ಷ್ಯ ಮಾಡದಿರಿ-health tips reason for constipation among youngsters constipation problem solution food for constipation rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಯುವಜನರನ್ನು ಗಂಭೀರವಾಗಿ ಕಾಡುತ್ತಿದೆ ಮಲಬದ್ಧತೆ ಸಮಸ್ಯೆ; ಕರುಳಿನ ಆರೋಗ್ಯ ಕೆಡಲು ಇವೇ ಪ್ರಮುಖ ಕಾರಣ, ನಿರ್ಲಕ್ಷ್ಯ ಮಾಡದಿರಿ

ಯುವಜನರನ್ನು ಗಂಭೀರವಾಗಿ ಕಾಡುತ್ತಿದೆ ಮಲಬದ್ಧತೆ ಸಮಸ್ಯೆ; ಕರುಳಿನ ಆರೋಗ್ಯ ಕೆಡಲು ಇವೇ ಪ್ರಮುಖ ಕಾರಣ, ನಿರ್ಲಕ್ಷ್ಯ ಮಾಡದಿರಿ

ಇತ್ತೀಚಿನ ದಿನಗಳಲ್ಲಿ ಯುವಜನರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆ ಕೂಡ ಒಂದು. ಇದರಿಂದ ವಿಪರೀತ ಹಿಂಸೆ ಅನುಭವಿಸುತ್ತಿದ್ದಾರೆ ಯುವಜನತೆ. ಇದರೊಂದಿಗೆ ಹೊಟ್ಟೆಯುರಿ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಕೂಡ ಎದುರಾಗುತ್ತಿವೆ. ಹಾಗಾದ್ರೆ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಲು ಕಾರಣ, ಇದಕ್ಕೆ ಪರಿಹಾರವೇನು ತಪ್ಪದೇ ತಿಳಿಯಬೇಕಾದ ಮಾಹಿತಿ

ಕಾಡುತ್ತಿದೆ ಮಲಬದ್ಧತೆ
ಕಾಡುತ್ತಿದೆ ಮಲಬದ್ಧತೆ (PC: Canva)

ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಪ್ರಮಾಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಧುಮೇಹ, ಅಧಿಕರಕ್ತದೊತ್ತಡ, ಥೈರಾಯ್ಡ್‌ ಸೇರಿದಂತೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಅದರಲ್ಲೂ ಇತ್ತೀಚಿನ ಯುವಜನರಲ್ಲಿ ಹಲವರು ಮಲಬದ್ಧತೆ ಸಮಸ್ಯೆ ಹೆಚ್ಚುತ್ತಿದೆ.

ಮಲ ಹಾದುಹೋಗಲು ಸಾಧ್ಯವಾಗದೇ ಇರುವುದು ಅಥವಾ ಕರುಳಿನ ಚಲನೆಯ ಆವರ್ತನ ಕಡಿಮೆಯಾಗುವುದನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ವಾರದಲ್ಲಿ ಮೂರು ಬಾರಿ ಕರುಳಿನ ಚಲನೆ ಹೊಂದಿರುತ್ತಾರೆ. ಇದು ಅಸಹನೆಯ ಭಾವದೊಂದಿಗೆ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಿಂದೆಲ್ಲಾ ವಯಸ್ಸಾದವರನ್ನು ಕಾಡುತ್ತಿದ್ದ ಮಲಬದ್ಧತೆ ಸಮಸ್ಯೆ ಇತ್ತೀಚೆಗೆ ಯುವಜನರನ್ನೂ ಕಾಡುತ್ತಿದೆ.

ಮಲಬದ್ಧತೆ ಕಾಡಲು ಪ್ರಮುಖ ಕಾರಣಗಳಿವು 

ಈ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ ಡಾ. ಅಂಜಲಿ ಮುಖರ್ಜಿ, ಈ ವಿಡಿಯೊದಲ್ಲಿ ಅವರು ವಯಸ್ಕರಲ್ಲಿ ಹೆಚ್ಚಿತ್ತಿರುವ ಕರುಳಿನ ಸಮಸ್ಯೆಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಇತ್ತೀಚಿನ ಯವಜನರಲ್ಲಿ ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಲು ಅಲ್ಟ್ರಾ-ಪ್ರೊಸೆಸ್ಟ್‌ ಫುಡ್‌, ಜಡ ಜೀವನಶೈಲಿ ಹಾಗೂ ಒತ್ತಡ ಕಾರಣ ಎಂದಿದ್ದಾರೆ.

ಅವರ ಪ್ರಕಾರ ಇತ್ತೀಚಿನ ಯುವಜನರು ಜಡಜೀವನಶೈಲಿ ಅನುಸರಿಸುತ್ತಿದ್ದಾರೆ. ಪ್ರತಿದಿನ ಗಂಟೆಗಳ ಕಾಲ ವ್ಯಾಯಾಮ ಮಾಡಿದರೂ ದಿನ ಸಾಕಷ್ಟು ಸಮಯ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ. ಸಾಮಾನ್ಯವಾಗಿ ಒಂದೇ ಜಾಗದಲ್ಲಿ ಕೂತು ಗಂಟೆಗಟ್ಟಲೆ ಫೋನ್ ನೋಡುತ್ತಾರೆ, ಹೆಚ್ಚಿನ ದೈಹಿಕ ಚಟುವಟಿಕೆ ಇಲ್ಲದೇ ತಡರಾತ್ರಿಯಲ್ಲಿ ಕಾರ್ಬೊಹೈಡ್ರೇಟ್ ಅಂಶ ಇರುವ ಆಹಾರಗಳನ್ನು ಸೇವಿಸುತ್ತಾರೆ. ಇದರೊಂದಿಗೆ ಅತಿಯಾದ ಒತ್ತಡವು ಯುವಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅತಿಯಾದ ಒತ್ತಡವು ಸಿಹಿ ತಿಂಡಿ ತಿನ್ನಲು ಪ್ರೇರೇಪಿಸುತ್ತದೆ. ಇದರಿಂದ ಧೂಮಪಾನ ಹಾಗೂ ಮಧ್ಯಪಾನದ ಅಭ್ಯಾಸಗಳನ್ನೂ ಮಾಡಿಕೊಳ್ಳುತ್ತಾರೆ. ತಡವಾಗಿ ತಿಂದು ತಡವಾಗಿ ಮಲಗುವುದು ಕೂಡ ಕರುಳಿನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಕರುಳಿನ ಆರೋಗ್ಯ ಸಮಸ್ಯೆಗಳು ಕಾಣಿಸಲು ಶುರುವಾಗುತ್ತವೆ ಎಂದು ಡಾ. ಅಂಜಲಿ ಹೇಳುತ್ತಾರೆ.

ಅತೃಪ್ತ ಹೊಟ್ಟೆಯು ಹಾರ್ಮೋನುಗಳ ಅಸಹಜತೆಗಳು ಮತ್ತು ಮಲಬದ್ಧತೆಯಂತಹ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ನಿಯಮಿತವಾಗಿ ಕರುಳಿನ ಚಲನೆಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡಲು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

ಕರುಳಿನ ಆರೋಗ್ಯ ಅತ್ಯುತ್ತಮವಾಗಿರಲು ಪಾಲಿಸಬೇಕಾದ ಕ್ರಮಗಳಿವು

* ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಕಾಪಾಡಿಕೊಳ್ಳಲು ಆಗಾಗ ತಿನ್ನುವುದು ಕೂಡ ಮುಖ್ಯವಾಗುತ್ತದೆ. ಇದರೊಂದಿಗೆ ಪ್ರತಿದಿನ ಒಂದೇ ಸಮಯದಲ್ಲಿ ಊಟ ಮಾಡುವುದು, ತಿಂಡಿ ತಿನ್ನುವುದು ಮಾಡಬೇಕು. ಈ ದಿನಚರಿಯನ್ನು ಚಾಚು ತಪ್ಪದೇ ಪಾಲಿಸುವುದು ಕರುಳಿನ ಆರೋಗ್ಯಕ್ಕೆ ಉತ್ತಮ.

* ಆರೋಗ್ಯಕರ ಜೀರ್ಣಾಂಗವನ್ನು ಕಾಪಾಡಿಕೊಳ್ಳಲು, ಪ್ರತಿದಿನ ಮೂರು ಅಥವಾ ಹೆಚ್ಚು ಲೀಟರ್ ನೀರನ್ನು ಕುಡಿಯಬೇಕು. ಸಾಕಷ್ಟು ದ್ರವಹಾರಗಳನ್ನು ಸೇವಿಸುವ ಮೂಲಕ ಮಲಬದ್ಧತೆಯನ್ನು ತಪ್ಪಿಸಬಹುದು ಮತ್ತು ಮಲವನ್ನು ಮೃದುಗೊಳಿಸಬಹುದು.

* ನಿಮ್ಮ ದೈನಂದಿನ ಆಹಾರವು ಸಾಕಷ್ಟು ತರಕಾರಿಗಳನ್ನು ಒಳಗೊಂಡಿರಬೇಕು. ದಿನದಲ್ಲಿ ಕನಿಷ್ಠ ಎರಡು ಬಾರಿ ಹಣ್ಣುಗಳನ್ನು ಸೇವಿಸಿ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ನಾರಿನಾಂಶ, ಜೀವಸತ್ವಗಳು ಮತ್ತು ಖನಿಜಗಳು ನಿಯಮಿತ ಕರುಳಿನ ಚಲನೆಯನ್ನು ಮತ್ತು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸುತ್ತವೆ.

* ಉಪ್ಪಿನಕಾಯಿ, ಮೊಸರು, ಕೆಫೀರ್ ಮತ್ತು ಹುದುಗಿಸಿದ ಆಹಾರಗಳಂತಹ ಪ್ರೋಬಯಾಟಿಕ್‌ ಸಮೃದ್ಧ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಕರುಳಿನ ಬ್ಯಾಕ್ಟೀರಿಯಾದ ಸರಿಯಾದ ಸಮತೋಲನವನ್ನು ಕಾಪಾಡುವಲ್ಲಿ ಪ್ರೋಬಯಾಟಿಕ್‌ಗಳು ಸಹಾಯ ಮಾಡುತ್ತವೆ, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

* ಮಲಗುವ ಒಂದು ಗಂಟೆ ಮೊದಲು ಒಂದು ಲೋಟ ಅಂಜೂರದ ಹಾಲನ್ನು ಕುಡಿಯಿರಿ. ಹೆಚ್ಚಿನ ನಾರಿನಾಂಶ ಮತ್ತು ನೈಸರ್ಗಿಕ ಸಕ್ಕರೆ ಅಂಶದಿಂದಾಗಿ, ಅಂಜೂರವು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ, ಇದು ಶಾಂತ ನಿದ್ರೆಯನ್ನು ಉತ್ತೇಜಿಸುತ್ತದೆ.