ಚಳಿಗಾಲದಲ್ಲಿ ಬಾಯಿಹುಣ್ಣು, ಹುಳುಕಿನಂತಹ ಹಲ್ಲಿನ ಸಮಸ್ಯೆ ಹೆಚ್ಚಲು ಕಾರಣವಿದು, ನೋವು ಬಾರದಂತೆ ತಡೆಯಲು ಹೀಗೆ ಮಾಡಿ; ತಜ್ಞರ ಸಲಹೆ
ಚಳಿಗಾಲದಲ್ಲಿ ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹಲ್ಲು ಹಾಗೂ ಬಾಯಿಯ ಸಮಸ್ಯೆ ಕೂಡ ಒಂದು. ಹಲ್ಲಿನ ಆರೋಗ್ಯ ಕೆಡಲು ತಾಪಮಾನ ಕಡಿಮೆಯಾಗುವುದು ಕಾರಣ. ಈ ಸಮಯದಲ್ಲಿ ಬಾಯಿಹುಣ್ಣು, ಹಲ್ಲಿನ ಹುಳುಕು, ದಂತ ಸಂವೇದನೆಯಂತಹ ಸಮಸ್ಯೆ ಹೆಚ್ಚಲು ಕಾರಣವೇನು, ಹಲ್ಲು ನೋವು ಬಾರದಂತೆ ತಡೆಯುವುದು ಹೇಗೆ ಎಂದು ವಿವರಿಸಿದ್ದಾರೆ ಡಾ. ಮುರಲೀ ಮೋಹನ ಚೂಂತಾರು.

ಚಳಿಗಾಲದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈ ಸಮಯದಲ್ಲಿ ತಾಪಮಾನ ಕಡಿಮೆ ಇರುವುದೇ ಹಲವು ತೊಂದರೆಗಳಿಗೆ ಮೂಲವಾಗುತ್ತದೆ. ಮನುಷ್ಯ ಉಷ್ಣಜೀವಿಯಾಗಿದ್ದು, ಬಾಹ್ಯ ವಾತಾವರಣಕ್ಕನುಗುಣವಾಗಿ ದೇಹದ ಉಷ್ಣತೆಯನ್ನು ಬದಲಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಆದರೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಸಹಜವಾಗಿ ಕಾಡುತ್ತವೆ.
ಅತಿ ಕಡಿಮೆ ಉಷ್ಣತೆಯಿಂದ ನಮ್ಮ ದೇಹದ ಬಾಹ್ಯ ಅಂಗವಾದ ಚರ್ಮ ಬಿರುಕು ಬಿಡುವುದು, ಒಣಗುವುದು, ತುಟಿಗಳು ಒಡೆದು ಬಿರಿಯುವುದು, ರಕ್ತ ಒಸರುವುದು ಇವೆಲ್ಲಾ ಸಾಮಾನ್ಯ. ಹೊರಗಿನ ತಾಪಮಾನ ಕಡಿಮೆಯಾದಂತೆ ಅದಕ್ಕೆ ಹೊಂದಿಕೊಳ್ಳಲು ಪೂರಕವಾಗುವಂತೆ ದೇಹದಲ್ಲಿ ಸ್ರವಿಸುವ ರಸದೂತಗಳಲ್ಲಿ ಏರುಪೇರಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹೊರಗಿನ ಉಷ್ಣತೆ ಕಡಿಮೆಯಾದಾಗ ದೇಹದಲ್ಲಿನ ರಕ್ತನಾಳಗಳು ಕುಗ್ಗಿಕೊಂಡು ಅಂಗಾಂಗಗಳಿಗೆ ರಕ್ತ ಪರಿಚಲನೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದಲೇ ಚಳಿಗಾಲದಲ್ಲಿ ಗಾಯ ಒಣಗುವುದು ಸ್ವಲ್ಪ ನಿಧಾನವಾಗುತ್ತದೆ. ಬೇಸಿಗೆಯಲ್ಲಿ ಬಾಹ್ಯ ಉಷ್ಣತೆಗೆ ರಕ್ತನಾಳಗಳು ಹಿಗ್ಗಿಕೊಂಡು ಗಾಯ ಬೇಗ ಗುಣವಾಗುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ.
ಸಾಮಾನ್ಯವಾಗಿ ಶರಧೃತು ಆರಂಭವಾಗುವಾಗ ಚಳಿಗಾಲದಲ್ಲಿ ಹಲವಾರು ದಂತ ಸಂಬಂಧಿ ರೋಗಗಳಾದ ದಂತ ಅತಿ ಸಂವೇದನೆ, ಬಾಯಿ ಒಣಗುವುದು, ಹಲ್ಲು ನೋವು ಜಾಸ್ತಿಯಾಗುವುದು, ತುಟಿ ಒಡೆಯುವುದು, ಬಾಯಿಯಲ್ಲಿ ಹುಣ್ಣಾಗುವುದು, ಹಲ್ಲು ಹುಳುಕಾಗುವುದು, ವಸಡುಗಳಲ್ಲಿ ಊರಿಯೂತದಿಂದ ರಕ್ತ ಜಿನುಗುವುದು, ಬಾಯಿ ವಾಸನೆ ಮತ್ತು ವಸಡುಗಳಲ್ಲಿ ಕೀವಾಗುವುದು ಇವೆಲ್ಲಾ ಸರ್ವೇ ಸಾಮಾನ್ಯ.
ದಂತ ಅತಿ ಸಂವೇದನೆ
ಚಳಿಗಾಲದಲ್ಲಿ ಅತಿ ಸಾಮಾನ್ಯವಾದ ದಂತ ಸಂಬಂಧಿ ರೋಗವೆಂದರೆ ದಂತ ಅತಿ ಸಂವೇದನೆ. ಸಾಮಾನ್ಯ ಆಡು ಭಾಷೆಯಲ್ಲಿ ಹಲ್ಲು ಜುಂ ಎನ್ನುವುದು ಎನ್ನುತ್ತಾರೆ. ಈ ಸಮಯದಲ್ಲಿ ದಂತ ವೈದ್ಯರ ಆದೇಶದಂತೆ ಅತಿ ಸಂವೇದನೆ ಕಡಿಮೆ ಮಾಡುವ ಟೂತ್‌ಪೇಸ್ಟ್‌ಗಳನ್ನು ಉಪಯೋಗಿಸತಕ್ಕದ್ದು. ಚಳಿಗಾಲ ಆರಂಭವಾಗುವ ಮೊದಲು ದಂತ ವೈದ್ಯರ ಬಳಿ ತೋರಿಸಿಕೊಂಡು ತುಂಡಾದ ಹಲ್ಲುಗಳು, ಹುಳುಕುಗಳನ್ನು ಫಿಲ್ಲಿಂಗ್‌ಗಳನ್ನು ಸರಿಪಡಿಸಿಕೊಳ್ಳತಕ್ಕದ್ದು. ಚಳಿಗಾಲದ ಆರಂಭದಲ್ಲಿ ಸಾಧ್ಯವಾಗಿಲ್ಲ ಎಂದರೆ ಈಗಲಾದರೂ ವೈದ್ಯರ ಬಳಿ ಹೋಗಿ ಸರಿಯಾದ ಕಾಳಜಿ ತೆಗೆದುಕೊಳ್ಳಿ.
ಬಾಯಿ ಒಣಗುವುದು
ಚಳಿಗಾಲದಲ್ಲಿ ಬಾಯಿ ಒಣಗುವುದು ಅತಿ ಸಾಮಾನ್ಯ ತೊಂದರೆ. ಬಾಯಿಯಿಂದ ಉಸಿರಾಡಲೇಬಾರದು ಮೂಗಿನಿಂದಲೇ ಉಸಿರಾಡತಕ್ಕದ್ದು. ಬಾಯಿಯಿಂದ ಉಸಿರಾಡಿದಲ್ಲಿ ತಂಪಗಿನ ಒಣಗಾಳಿ ಬಾಯಿಯಲ್ಲಿನ ನೀರಿನಾಂಶ ಹೀರಿಕೊಂಡು ಬಾಯಿ ಒಣಗಿಸಬಹುದು. ಹೀಗೆ ಬಾಯಿ ಒಣಗುವುದರಿಂದ ಹಲ್ಲಿನಲ್ಲಿ ಹುಳುತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಚಳಿಗಾಳದಲ್ಲಿ ದಂತ ವೈದ್ಯರು ಫೋರೈಡ್ ಇರುವ ಬಾಯಿ ಮುಕ್ಕಳಿಸುವ ಔಷಧಿಯನ್ನು ನೀಡುತ್ತಾರೆ. ಹೀಗೆ ಮಾಡಿದಲ್ಲಿ ಹಲ್ಲುಗಳು ಹುಳುಕಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅದೇ ರೀತಿ ಇಂಗಾಲ ಹಾಗೂ ಕೆಫಿನ್‌ಯುಕ್ತ ಪಾನೀಯಗಳಾದ ಕಾಫಿ, ಆಲ್ಕೊಹಾಲ್ ಅಂಶ ಇರುವ ಪೇಯಗಳನ್ನು ಸೇವಿಸಬಾರದು. ಇವುಗಳನ್ನು ಸೇವಿಸಿದಲ್ಲಿ ಮತ್ತಷ್ಟು ಬಾಯಿ ಒಣಗುವ ಸಾಧ್ಯತೆ ಇರುತ್ತದೆ. ಸಾಕಷ್ಟು ನೀರು ಕುಡಿಯತಕ್ಕದ್ದು. ಬಾಯಿಯಲ್ಲಿ ಜೊಲ್ಲುರಸ ಜಾಸ್ತಿ ಸೇವಿಸುವಂತೆ ಮಾಡುವ ಚ್ಯೂಯಿಂಗ್ ಗಮ್, ವಿಟಮಿನ್ - ಸಿ ಇರುವ ಹಣ್ಣು ಹಂಪಲುಗಳನ್ನು ಜಾಸ್ತಿ ಸೇವಿಸತಕ್ಕದ್ದು.
ವಸಡುಗಳ ಉರಿಯೂತ
ಚಳಿಗಾಲದಲ್ಲಿ ವಸಡುಗಳ ತೊಂದರೆ ಸ್ವಲ್ಪ ಜಾಸ್ತಿಯೇ ಇರುತ್ತದೆ. ವಸಡುಗಳಲ್ಲಿ ರಕ್ತ ಪರಿಚಲನೆ ಕಡಿಮೆಯಾದಾಗ ಉರಿಯೂತ ಉಂಟಾಗಿ ರಕ್ತದ ಬರಬಹುದು. ಬಾಯಿ ಒಣಗುವುದರಿಂದ, ಜೊಲ್ಲುರಸದ ಅಭಾವದಿಂದ ವಸಡುಗಳಲ್ಲಿ ರಕ್ತ ಒಸರಿಕೊಂಡು, ಬಾಯಿವಾಸನೆ ಇರುವ ಸಾಧ್ಯತೆಯೂ ಇರುತ್ತದೆ. ಈ ಕಾರಣಕ್ಕಾಗಿಯೇ ಸಾಕಷ್ಟು ದ್ರವಾಹಾರ, ವಿಟಮಿನ್-ಸಿ ಜಾಸ್ತಿ ಇರುವ ಕಿತ್ತಲೆ, ಮೊಸಂಬಿ ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಜಾಸ್ತಿ ಸೇವಿಸುವುದು ಉತ್ತಮ. ಚಳಿಗಾಲದಲ್ಲಿ ದೇಹದ ರಕ್ತ ಪರಿಚಲನೆ ಕಡಿಮೆಯಾಗುವುದರಿಂದ ವಸಡಿನ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಲ್ಲುಜ್ಜಿದ ಬಳಿಕ ವಸಡುಗಳನ್ನು ಕೈ ಬೆರಳಿನಿಂದ ದಿನಕ್ಕೆರಡು ಬಾರಿ ಚೆನ್ನಾಗಿ ಮಸಾಜ್ ಮಾಡತಕ್ಕದ್ದು. ಹೀಗೆ ಮಾಡಿದಾಗ ರಕ್ತ ಪರಿಚಲನೆ ಜಾಸ್ತಿಯಾಗಿ ವಸಡಿನ ಆರೋಗ್ಯ ವೃದ್ದಿಸುತ್ತದೆ.
ಹಲ್ಲು ಹುಳುಕಾಗುವುದು
ಚಳಿಗಾಲದಲ್ಲಿ ಜೊಲ್ಲುರಸದ ಸ್ರವಿಸುವಿಕೆ ಕಡಿಮೆಯಾಗುವುದರಿಂದ ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚಿರುತ್ತದೆ. ದಂತ ವೈದ್ಯರ ಸಲಹೆಯಂತೆ ಫ್ಲೋರೈಡ್ ಇರುವ ಬಾಯಿ ಮುಕ್ಕಳಿಸುವ ಔಷಧಿ ಬಳಸತಕ್ಕದ್ದು. ಅದೇ ರೀತಿ ಚಳಿಗಾಲದಲ್ಲಿ ಹಲ್ಲುನೋವು ಜಾಸ್ತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತ ಪರಿಚಲನೆ ಕಡಿಮೆಯಾಗುವುದು, ರಕ್ತನಾಳಗಳು ಕುಗ್ಗುವಿಕೆ ದೇಹದ ರಕ್ಷಣಾ ವ್ಯವಸ್ಥೆಯಲ್ಲಿನ ಏರುಪೇರು ಮುಂತಾದ ಕಾರಣದಿಂದಾಗಿ ಚಳಿಗಾಲದಲ್ಲಿ ದಂತ ವೈದ್ಯರ ಭೇಟಿ ಅತೀ ಅವಶ್ಯಕ. ಅದೇ ರೀತಿ ಹಲ್ಲಿನ ಸುತ್ತಲಿನ ವಸಡು, ಎಲುಬುಗಳು ಕೂಡಾ ಹೆಚ್ಚಿನ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ಅತೀ ಅವಶ್ಯಕ.
ಬಾಯಿ ಹುಣ್ಣು
ಚಳಿಗಾಲದಲ್ಲಿ ಬಾಯಿ ಹುಣ್ಣು ಸರ್ವೆ ಸಾಮಾನ್ಯ. ಬಾಯಿ ಒಳಗಿನ ತೆಳುವಾದ ಪದರ ಬಹಳ ಬೇಗನೆ ಘಾಸಿಯಾಗುವ ಸಾಧ್ಯತೆ ಚಳಿಗಾಲದಲ್ಲಿ ಜಾಸ್ತಿಯಾಗಿರುತ್ತದೆ. ಅದೇ ರೀತಿ ಗಾಯ ಒಣಗಲು ಬಹಳ ಸಮಯ ಹಿಡಿಯುವುದರಿಂದ ಬಾಯಿ ಹುಣ್ಣಾಗದಂತೆ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು. ಒತ್ತಡರಹಿತ ಜೀವನ, ಸಾಕಷ್ಟು ದ್ರವಾಹಾರ, ವಿಟಮಿನ್-ಸಿ ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆ ಮತ್ತು ದಿನಕ್ಕೆ 7ರಿಂದ 8ಗಂಟೆಗಳ ನಿದ್ರೆ ಇವುಗಳಿಗೆ ಹೆಚ್ಚಿನ ಗಮನ ನೀಡಿದಲ್ಲಿ ಬಾಯಿ ಹುಣ್ಣು ಬರದಂತೆ ತಡೆಗಟ್ಟಬಹುದು.
ಹಲ್ಲುನೋವು ತಡೆಯಲು ಹತ್ತು ಸರಳ ಸೂತ್ರಗಳು
- ಅನಗತ್ಯವಾಗಿ ಜಾಸ್ತಿ ಹಲ್ಲು ಉಜ್ಜಬಾರದು. ದಿನಕ್ಕೆರಡು ಬಾರಿ 2ರಿಂದ 3 ನಿಮಿಷ ಸರಿಯಾದ ಕ್ರಮದಲ್ಲಿ ಹಲ್ಲುಜ್ಜಬೇಕು. ಅತಿಯಾಗಿ ಹಲ್ಲುಜ್ಜುವುದರಿಂದ ಹಲ್ಲಿನ ಏನಾಮಲ್ ಕರಗಿ ಹೋಗಿ ಅತಿ ಸಂವೇದನೆ ಉಂಟಾಗಬಹುದು.
- ಪ್ಲೋರೈಡ್‍ಯುಕ್ತ ಟೂತ್‍ಪೇಸ್ಟನ್ನು ಉಪಯೋಗಿಸಿ. ಅತಿ ಸಂವೇದನೆ ಇದ್ದಲ್ಲಿ ದಂತ ವೈದ್ಯರ ಸಲಹೆಯಂತೆ ಅತಿ ಸಂವೇದನೆ ತಡೆಯುವ ದಂತ ಚೂರ್ಣವನ್ನು ಬಳಸಿ.
- ಇಂಗಾಲಯುಕ್ತ ಪಾನೀಯಗಳನ್ನು ತ್ಯಜಿಸಿ. ಆಹಾರದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡತಕ್ಕದ್ದು. ನೈಸರ್ಗಿಕ ಪೇಯಗಳಾದ ಹಣ್ಣಿನ ರಸ, ಎಳನೀರು, ಶುದ್ಧನೀರು ದೇಹಕ್ಕೆ ಮತ್ತು ಹಲ್ಲಿಗೆ ಅತೀ ಅವಶ್ಯಕ ಸಾಕಷ್ಟು ದ್ರವಾಹಾರ ಸೇವಿಸತಕ್ಕದ್ದು. ಚಳಿಗಾಲದಲ್ಲಿ ಜೊಲ್ಲುರಸದ ಸ್ರವಿಸುವಿಕೆ ಕಡಿಮೆಯಾಗಿ ಹುಳುಕಾಗುವ ಸಾಧ್ಯತೆ ಜಾಸ್ತಿರುವುದರಿಂದ ಸಿಹಿ ಪದಾರ್ಥಗಳನ್ನು ಕಡಿಮೆ ಸೇವಿಸಿ.
- ದಿನಕ್ಕೆರಡು ಬಾಯಿ ಪ್ಲೋರೈಡ್ ಇರುವ ಬಾಯಿ ಮುಕ್ಕಳಿಸುವ ಔಷಧಿಯನ್ನು ದಂತ ವೈದ್ಯರ ಸಲಹೆಯಂತೆ ಬಳಸಿ.
- ಬಾಯಿಯಿಂದ ಉಸಿರಾಡಬೇಡಿ. ಮೂಗಿನಿಂದಲೇ ಉಸಿರಾಡಿ. ಬಾಯಿಯಿಂದ ಉಸಿರಾಡಿದಲ್ಲಿ ಶುಷ್ಕ ಬಾಯಿ ಉಂಟಾಗಿ ವಸಡಿನ ಉರಿಯೂತ, ಹಲ್ಲುನೋವು, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ.
- ಚಳಿಗಾಲದಲ್ಲಿ ಸಾಕಷ್ಟು ಬಿಸಿ ದ್ರಾವಣಗಳನ್ನು ಹೆಚ್ಚು ಸೇವಿಸುವುದು ಬಾಯಿಯ ಮತ್ತು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಬಾಯಿಯಲ್ಲಿನ ಉಷ್ಣತೆ ಜಾಸ್ತಿಯಾದಾಗ ರಕ್ತ ಪರಿಚಲನೆ ಜಾಸ್ತಿಯಾಗಿ ರೋಗಮುಕ್ತ ಬಾಯಿಯಾಗಲು ಸಹಕಾರಿಯಾಗಬಲ್ಲದು.
- ನಿಮ್ಮ ದಂತ ಕುಂಚವನ್ನು (ಬ್ರಷ್) ಶುಚಿಯಾಗಿಸತಕ್ಕದ್ದು. ತಿಂಗಳಿಗೊಮ್ಮೆ ಅದನ್ನು ಬದಲಾಯಿಸಿ, ಹಲ್ಲುಜ್ಜಿದ ಬಳಿಕ ನಾಲಗೆಯನ್ನು ಶುಚಿಗೊಳಿಸಿ. ವಸಡಿನ ಮೋಲ್ಭಾಗವನ್ನು ಹಿತವಾದ ಒತ್ತಡದೊಂದಿಗೆ ಮಸಾಜ್ ಮಾಡಿದಲ್ಲಿ ರಕ್ತ ಪರಿಚಲನೆ ಜಾಸ್ತಿಯಾಗಿ ವಸಡಿನ ರೋಗವನ್ನು ತಡೆಗಟ್ಟಬಹುದು.
- ಚಳಿಗಾಲದಲ್ಲಿ ‘ಮೌತ್‍ಗಾರ್ಡ್’ ಎಂಬ ಸಾಧನವನ್ನು ಬಳಸಿದಲ್ಲಿ ಹಲ್ಲಿನ ಮೇಲೆ ಅನಗತ್ಯ ಒತ್ತಡ ಬೀಳದಂತೆ ತಡೆಯಬಹುದು. ಇದು ಬಾಹ್ಯ ಉಷ್ಣತೆ ಅತೀ ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಬಳಸತಕ್ಕದ್ದು.
- ಒತ್ತಡರಹಿತ ಜೀವನಶೈಲಿ, ಸಾಕಷ್ಟು ದ್ರವಾಹಾರ ಮತ್ತು 8 ಗಂಟೆಗಳ ಸುಖ ನಿದ್ರೆ ಬಾಯಿಯ ಆರೋಗ್ಯಕ್ಕೆ ಅತಿ ಅವಶ್ಯಕ
- ನಿಯಮಿತವಾಗಿ ನಿಮ್ಮ ದಂತ ವೈದ್ಯರ ಭೇಟಿ ಅತೀ ಅವಶ್ಯಕ. ಚಳಿಗಾಲದಲ್ಲಿ ಅತಿಯಾದ ದಂತ ಸಂವೇದನೆ, ನೋವು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳತಕ್ಕದ್ದು.
ಲೇಖನ: ಡಾ. ಮುರಲಿ ಮೋಹನ್ ಚೂಂತಾರು, ದಂತತಜ್ಞ, ಹೊಸಂಗಡಿ ಮಂಗಳೂರು (ಮೊ. 9845135786)
