ಕಪ್ಪು ಉಪ್ಪಿನಿಂದ ಗುಲಾಬಿ ಬಣ್ಣದ ಉಪ್ಪಿನವರೆಗೆ, ಆರೋಗ್ಯಕ್ಕೆ ಯಾವುದು ಉತ್ತಮ? ಉಪ್ಪಿನ ಕುರಿತು ತಿಳಿಯಬೇಕಾದ ಮಾಹಿತಿಯಿದು
ಖಾದ್ಯವನ್ನು ಎಷ್ಟೇ ರುಚಿಯಾಗಿ ತಯಾರಿಸಿದರು ಅದಕ್ಕೆ ಚಿಟಿಕೆ ಉಪ್ಪು ಕಡಿಮೆಯಾದರೆ ಆ ಭಕ್ಷ್ಯ ರುಚಿಯೆನಿಸುವುದಿಲ್ಲ. ಸಿಹಿ ಅಡುಗೆ ಹೊರತುಪಡಿಸಿ ಎಲ್ಲಾ ಖಾದ್ಯಗಳಿಗೂ ಉಪ್ಪು ಬೇಕೇ ಬೇಕು. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ರೀತಿಯ ಉಪ್ಪು ಲಭ್ಯವಿದ್ದು, ಇದರಿಂದ ಯಾವೆಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬೇರೆ ಬಂಧುವಿಲ್ಲ ಎಂಬ ಗಾದೆ ಮಾತಿದೆ. ಭಾರತೀಯರು ಉಪ್ಪು ಇಲ್ಲದ ಖಾದ್ಯವನ್ನು ತಿನ್ನುವುದು ತೀರಾ ಕಡಿಮೆ. ಸಿಹಿ ಅಡುಗೆ ಬಿಟ್ಟು ಬೇರೆ ಯಾವುದೇ ಅಡುಗೆ ಮಾಡಬೇಕಾದರೂ ಉಪ್ಪು ಬೇಕೇ ಬೇಕಾಗುತ್ತದೆ. ಉಪ್ಪಿಲ್ಲದ ಅಡುಗೆ ರುಚಿಯೂ ಇರುವುದಿಲ್ಲ. ಅಡುಗೆ ಎಷ್ಟೇ ಚೆನ್ನಾಗಿ ತಯಾರಾದರೂ ಒಂದು ಚಿಟಿಕೆ ಉಪ್ಪು ಹಾಕದಿದ್ದರೆ ಆ ಅಡುಗೆ ರುಚಿಸುವುದೇ ಇಲ್ಲ. ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉತ್ತಮ ಚಯಾಪಚಯವನ್ನು ನಿರ್ವಹಿಸಲು ಮನುಷ್ಯನ ಆರೋಗ್ಯಕ್ಕೆ ಖನಿಜವು ಅವಶ್ಯಕವಾಗಿದೆ. ಇದು ದೇಹದ ನೀರಿನ ಅಂಶ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ನಿಯಂತ್ರಿಸುತ್ತದೆ.
ಉಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದರೂ, ಕೆಡುಕೂ ಇವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಉಪ್ಪಿನ ಸೇವನೆ ಅತಿಯಾದರೆ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಇಂದು, ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಪ್ಪು ಲಭ್ಯವಿವೆ. ಈ ಉಪ್ಪುಗಳು ವಿಭಿನ್ನ ಬಣ್ಣ ಮತ್ತು ವಿನ್ಯಾಸಗಳಲ್ಲಿ ಕಂಡು ಬರುತ್ತದೆ. ಪ್ರತಿಯೊಂದೂ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಗುಲಾಬಿ ಉಪ್ಪಿನಿಂದ ಕಪ್ಪು ಉಪ್ಪಿನವರೆಗೆ, ಯಾವ ಉಪ್ಪು ಉತ್ತಮ ಎಂದು ಇಲ್ಲಿ ತಿಳಿದುಕೊಳ್ಳಿ.
ಸೆಲ್ಟಿಕ್ ಉಪ್ಪು: ಸಮುದ್ರದ ಉಪ್ಪು (Sea Salt) ಎಂದು ಕರೆಯಲ್ಪಡುವ ಸೆಲ್ಟಿಕ್ ಉಪ್ಪು ಬೂದು ಬಣ್ಣವನ್ನು ಹೊಂದಿದೆ. ಹೀಗಾಗಿ ಇದನ್ನು ಸೆಲ್ ಗ್ರಿಸ್ ಅಥವಾ ಬೂದು ಉಪ್ಪು ಎಂದೂ ಕರೆಯುತ್ತಾರೆ. ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣಗಳಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ಸಾಮಾನ್ಯಕ್ಕಿಂತ ಕಡಿಮೆ ಸೋಡಿಯಂ ಅನ್ನು ಹೊಂದಿರುತ್ತದೆ.
ಕಪ್ಪು ಉಪ್ಪು: ಇದು ಪುಡಿ ಉಪ್ಪುಗಿಂತ ಕಡಿಮೆ ಸೋಡಿಯಂ ಅಂಶವನ್ನು ಹೊಂದಿದೆ. ಹೊಟ್ಟೆ ಉಬ್ಬರ, ಅಜೀರ್ಣ, ಹೊಟ್ಟೆ ನೋವು, ವಾಕರಿಕೆ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳಿಗೆ ಸಹಕಾರಿಯಾಗಿದೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ.
ಕೋಷರ್ ಉಪ್ಪು: ಈ ಉಪ್ಪು ಸ್ವಲ್ಪ ದೊಡ್ಡದಾಗಿದ್ದು, ಒರಟಾಗಿದೆ. ಇದು ತೀಕ್ಷ್ಣವಾದ ಉಪ್ಪು ರುಚಿಯನ್ನು ಹೊಂದಿರುವುದಿಲ್ಲ. ಆದರೆ, ಇದರಲ್ಲಿ ಅಯೋಡಿನ್ ಅಂಶ ಇರುವುದಿಲ್ಲ. ಸಾಮಾನ್ಯ ಪುಡಿ ಉಪ್ಪಿಗಿಂತ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತದೆ. ಒಂದು ಟೀ ಚಮಚ ಕೋಷರ್ ಉಪ್ಪು ಸುಮಾರು 1,120 ಮಿಲಿಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ.
ಪಿಂಕ್ ಸಾಲ್ಟ್: ಗುಲಾಬಿ ಬಣ್ಣದ ಉಪ್ಪು (Pink Salt) ನಿರ್ವಿಶೀಕರಣದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದಿಂದ ಟಾಕ್ಸಿನ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೀಕರಿಸಿದಂತೆ ಮಾಡುತ್ತದೆ. ಹೆಚ್ಚಿನ ಖನಿಜಾಂಶಗಳು ಇರುವುದರಿಂದ, ಇದರ ಸೇವನೆಯು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗುಲಾಬಿ ಉಪ್ಪಿನ ನಿಯಮಿತ ಸೇವನೆಯು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
ಸಮುದ್ರದ ಉಪ್ಪು (Sea Salt): ಸಮುದ್ರದ ಉಪ್ಪಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಚರ್ಮದ ಕಿರಿಕಿರಿ ಇತ್ಯಾದಿ ಸಮಸ್ಯೆಗಳನ್ನು ಸರಿಪಡಿಸಲು ಸಹಕಾರಿಯಾಗಿದೆ. ಹೆಚ್ಚಿನ ಮಟ್ಟದ ಮೆಗ್ನೀಸಿಯಮ್ ಹೊಂದಿರುವ ಸಮುದ್ರದ ಉಪ್ಪು ದೇಹವನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಣ ಚರ್ಮ ಹೊಂದಿರುವ ಜನರಲ್ಲಿ ಚರ್ಮದ ಒರಟುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯ ಸಂಬಂಧಿ ಸಮಸ್ಯೆಗಳು ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಪಿಂಕ್ ಸಾಲ್ಟ್ ಬಳಸಿದರೆ ಉತ್ತಮ. ಕಡಿಮೆ ರಕ್ತದೊತ್ತಡ ಮತ್ತು ಥೈರಾಯ್ಡ್ ಸಮಸ್ಯೆಗಳಿರುವ ಜನರು ಸಾಮಾನ್ಯ ಉಪ್ಪನ್ನು (ಅಯೋಡಿನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ), ಜೊತೆಗೆ ಸೆಲ್ಟಿಕ್ ಉಪ್ಪನ್ನೂ ಬಳಸಬಹುದು.
ವಿಭಾಗ