ಪದೇ ಪದೇ ಕಾಫಿ ಕುಡಿತೀರಾ, ಹೃದಯಕ್ಕೆ ಅಪಾಯವಾಗಬಹುದು ಎಚ್ಚರ; ಆರೋಗ್ಯದ ಹಿತಕ್ಕೆ ದಿನಕ್ಕೆಷ್ಟು ಕಪ್ ಕಾಫಿ ಕುಡಿಯಬಹುದು?
ನಮ್ಮಲ್ಲಿ ಹಲವರು ಊಟ ತಿಂಡಿ ಬಿಟ್ರು ಕಾಫಿ, ಟೀ ಬಿಡೊಲ್ಲ. ಕಾಫಿ ಇಷ್ಟಪಡೋರು ದಿನಕ್ಕೆ ಮೂರ್ನ್ಕಾಲು ಬಾರಿ ಕುಡಿತಾರೆ. ಆದರೆ ಹೆಚ್ಚು ಕಾಫಿ ಕುಡಿಯೋದ್ರಿಂದ ದೇಹದಲ್ಲಿ ಕೆಫಿನ್ ಅಂಶದ ಪ್ರಮಾಣ ಹೆಚ್ಚುತ್ತೆ, ಇದ್ರಿಂದ ಹೃದಯಕ್ಕೂ ಅಪಾಯ, ಹಾಗಾದ್ರೆ ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಬೇಕು, ಕಾಫಿ ಕುಡಿದು ಕೂಡ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು ನೋಡಿ.
ನೀವು ಕಾಫಿ ಪ್ರೇಮಿನಾ, ಬೆಳಗೆದ್ದ ತಕ್ಷಣ ಕಾಫಿ ಕುಡಿದಿಲ್ಲ ಅಂದ್ರೆ ನಿಮಗೆ ದಿನ ಸಾಗೋದೇ ಇಲ್ವಾ? ದಿನಕ್ಕೆ ಮೂರ್ನ್ಕಾಲು ಬಾರಿ ಆದ್ರೂ ಕಾಫಿ ಕುಡಿತೀರಾ, ಹಾಗಿದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು. ಒಂದು ಕಪ್ ಕಾಫಿ ನಿಮ್ಮನ್ನು ದಿನವಿಡೀ ಆಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತದೆ. ಹಾಗಂತ ಮೂರ್ನ್ಕಾಲು ಕಪ್ ಕಾಫಿ ಕುಡದ್ರೆ ಖಂಡಿತ ನಿಮ್ಮ ಹೃದಯಕ್ಕೆ ಅಪಾಯ ತಪ್ಪಿದ್ದಲ್ಲ.
ಹಲವರಿಗೆ ಕಾಫಿಯ ಅತಿಯಾಗಿ ಕುಡಿಯುವುದರ ಪರಿಣಾಮ ತಿಳಿದಿಲ್ಲ. ಕಚೇರಿಯಲ್ಲೂ ವೆಂಡಿಂಗ್ ಮಷಿನ್ ಬಳಿ ಹೋಗಿ ಕಾಫಿ ಹಿಡಿದು ಕುಡಿಯುತ್ತಿರುತ್ತಾರೆ, ಕೆಲವರು ಟೈಮ್ ಪಾಸ್ ಮಾಡಲು ಕೂಡ ಕಾಫಿ ಕುಡಿಯುವವರಿದ್ದಾರೆ. ಅದೇ ಹೆಚ್ಚು ಹೆಚ್ಚು ಕಾಫಿ ಕುಡಿದಂತೆ ಹೃದಯ ದುರ್ಬಲವಾಗುತ್ತಾ ಹೋಗುತ್ತದೆ ಎನ್ನುತ್ತಾರೆ ತಜ್ಞರು.
ಭಾರತದಲ್ಲೇ ನಡೆದ ಅಧ್ಯಯನವೊಂದು ಕೇಫಿನ್ ಅತಿಯಾದ ಸೇವನೆಯ ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದೆ. ದಿನಕ್ಕೆ 400 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸುವುದು ಹೃದಯಕ್ಕೆ ತುಂಬಾ ಅಪಾಯಕಾರಿ. 400 ಮಿಗ್ರಾಂ ಕೆಫೀನ್ ಸುಮಾರು ನಾಲ್ಕು ಕಪ್ ಕಾಫಿಗೆ ಸಮನಾಗಿರುತ್ತದೆ.ಅಥವಾ ಎರಡು ಎನರ್ಜಿ ಡ್ರಿಂಕ್ಸ್ ಕುಡಿಯುವುದಕ್ಕೆ ಸಮ. ನಿಯಮಿತವಾಗಿ ಕಾಫಿ ಕುಡಿಯುವುದರಿಂದ ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಕಾಫಿ ಮಾತ್ರವಲ್ಲದೆ ಸೋಡಾ ಮತ್ತು ಎನರ್ಜಿ ಡ್ರಿಂಕ್ಸ್‌ಗಳಂತಹ ಇತರ ಕೆಫೀನ್ ಉತ್ಪನ್ನಗಳು ಸಹ ಹೃದಯದ ಆರೋಗ್ಯವನ್ನು ಕೆಡಿಸುತ್ತವೆ.
ಹೃದಯದ ಆರೋಗ್ಯದ ಮೇಲೆ ಕೆಫಿನ್ ಪರಿಣಾಮ
ಕಾಫಿ ದೇಹದ ಪ್ಯಾರಾಸಿಂಪಥೆಟಿಕ್ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ಈ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ಹೃದಯ ಬಡಿತವನ್ನು ಶಾಂತಗೊಳಿಸುತ್ತದೆ. ಉಸಿರಾಟವನ್ನು ನಿಧಾನಗೊಳಿಸುತ್ತದೆ. ಆದರೆ ಕಾಫಿ ಕುಡಿದ ನಂತರ ಪರಿಸ್ಥಿತಿ ಬದಲಾಗುತ್ತದೆ. ಕಾಫಿ ಒಂದು ಉತ್ತೇಜಕ. ಇದು ಪ್ಯಾರಾಸಿಂಪಥೆಟಿಕ್ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
ಕಾಫಿಯಿಂದ ಪ್ಯಾರಾಸಿಂಪಥೆಟಿಕ್ ವ್ಯವಸ್ಥೆಯು ಅಡ್ಡಿಪಡಿಸಿದರೆ, ಅದು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು. ಹೃದಯದಲ್ಲಿ ಅಧಿಕ ಒತ್ತಡವು ಸೈಲೆಂಟ್ ಕಿಲ್ಲರ್ ಆಗಬಹುದು. ಇದು ನಿಧಾನವಾಗಿ ಪರಿಧಮನಿಯ ಕಾಯಿಲೆ, ಹೃದಯ ವೈಫಲ್ಯ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಕಾಯಿಲೆಗಳಾಗಿ ಬದಲಾಗುತ್ತದೆ.
ಯಾರಿಗೆ ಹೆಚ್ಚು ಅಪಾಯ?
ಮಹಿಳೆಯರು, ವ್ಯಾಪಾರಸ್ಥರು ಮತ್ತು ವೃತ್ತಿಪರರು ಹೆಚ್ಚು ಕಾಫಿ ಕುಡಿಯುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ದೀರ್ಘ ಹೊತ್ತಿನ ತನಕ ಕಚೇರಿ ಕೆಲಸ ಮಾಡುವವರು, ಒತ್ತಡದ ಕೆಲಸದಲ್ಲಿ ಕೆಲಸ ಮಾಡುವವರು, ಅತಿಯಾಗಿ ಕಾಫಿ ಕುಡಿಯುತ್ತಾರೆ. ಇವೆಲ್ಲವೂ ಹೆಚ್ಚು ಕಾಫಿ ಕುಡಿಯಲು ಕಾರಣವಾಗುತ್ತದೆ. ಕೆಲವು ಜನರಿಗೆ, ಒಂದು ದಿನದಲ್ಲಿ 600 ಮಿಗ್ರಾಂಗಿಂತ ಹೆಚ್ಚು ಕೆಫಿನ್ ಹೃದಯದ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ.
ನಿಮ್ಮ ನೆಚ್ಚಿನ ಕಾಫಿಯನ್ನು ತ್ಯಜಿಸಲು ನಾವು ನಿಮಗೆ ಹೇಳುತ್ತಿಲ್ಲ. ಆದರೆ ಖಂಡಿತವಾಗಿಯೂ ಕಾಫಿಯನ್ನು ಮಿತವಾಗಿ ಕುಡಿಯಿರಿ. ಕಾಫಿ ಕಡುಬಯಕೆಗಳನ್ನು ತೊಡೆದುಹಾಕಲು ಸಾಕಷ್ಟು ನೀರು ಕುಡಿಯಿರಿ. ಜೊತೆಗೆ ಸಾಕಷ್ಟು ನಿದ್ರೆ ಬೇಕು. ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಕಡುಬಯಕೆಗಳನ್ನು ಕಡಿಮೆ ಮಾಡಬಹುದು.
ನೀವು ಕಾಫಿಪ್ರೇಮಿ ಆಗಿದ್ದರೆ ಇಂದಿನಿಂದಲೇ ಕಾಫಿ ಕುಡಿಯುವುದನ್ನ ಕಡಿಮೆ ಮಾಡಿ. ಒಮ್ಮೆಲೇ ಕಾಫಿ ಕುಡಿಯುವುದು ನಿಲ್ಲಿಸುವುದು ಕೂಡ ತಪ್ಪು, ಹಾಗಾಗಿ ಮಿತ ಸೇವನೆಗೆ ಆದ್ಯತೆ ನೀಡಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ.
ವಿಭಾಗ