ವೈಟ್‌ರೈಸ್ ಹೆಚ್ಚು ತಿನ್ನುವುದರಿಂದ ಈ 5 ಕಾಯಿಲೆಗಳ ‍ಅಪಾಯ ಹೆಚ್ಚಬಹುದು; ಪ್ರತಿದಿನ ಅನ್ನ ತಿನ್ನುವವರು ನೀವಾದ್ರೆ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವೈಟ್‌ರೈಸ್ ಹೆಚ್ಚು ತಿನ್ನುವುದರಿಂದ ಈ 5 ಕಾಯಿಲೆಗಳ ‍ಅಪಾಯ ಹೆಚ್ಚಬಹುದು; ಪ್ರತಿದಿನ ಅನ್ನ ತಿನ್ನುವವರು ನೀವಾದ್ರೆ ಗಮನಿಸಿ

ವೈಟ್‌ರೈಸ್ ಹೆಚ್ಚು ತಿನ್ನುವುದರಿಂದ ಈ 5 ಕಾಯಿಲೆಗಳ ‍ಅಪಾಯ ಹೆಚ್ಚಬಹುದು; ಪ್ರತಿದಿನ ಅನ್ನ ತಿನ್ನುವವರು ನೀವಾದ್ರೆ ಗಮನಿಸಿ

ಪ್ರತಿದಿನ ಅನ್ನ ತಿನ್ನುವ ಅಭ್ಯಾಸ ಹೊಂದಿರುವವರಲ್ಲಿ ನೀವೂ ಒಬ್ಬರಾಗಿದ್ದರೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರವಿರಲೇಬೇಕು. ಯಾಕೆಂದರೆ ಪ್ರತಿದಿನ ಅನ್ನ ತಿನ್ನುವುದು ಕೂಡ ಅಪಾಯ. ಇದರಿಂದ ಕೆಲವು ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಅನ್ನ ತಿನ್ನುವುದರಿಂದ ಯಾವ ಸಮಸ್ಯೆ ಎದುರಾಗುತ್ತದೆ ನೋಡಿ.

ವೈಟ್‌ರೈಸ್‌ನ ಅಡ್ಡಪರಿಣಾಮಗಳು
ವೈಟ್‌ರೈಸ್‌ನ ಅಡ್ಡಪರಿಣಾಮಗಳು (PC: Canva)

ಭಾರತೀಯರ ಆಹಾರಕ್ರಮದಲ್ಲಿ ಅಕ್ಕಿ ಹಾಗೂ ಗೋಧಿಗೆ ವಿಶೇಷ ಮಹತ್ವವಿದೆ. ಪ್ರತಿದಿನ ನಾವು ಈ ಎರಡರಿಂದ ಮಾಡಿದ ತಿನಿಸುಗಳನ್ನು ಹೆಚ್ಚು ಸೇವಿಸುತ್ತೇವೆ. ಸಾಮಾನ್ಯವಾಗಿ ನಮ್ಮ ಊಟದಲ್ಲಿ ಬಿಸಿ ರೊಟ್ಟಿ ಹಾಗೂ ಅನ್ನ ಇದ್ದೇ ಇರುತ್ತದೆ. ಕೆಲವರಿಗೆ ರೊಟ್ಟಿ ಇಷ್ಟವಾದರೆ ಇನ್ನೂ ಕೆಲವರಿಗೆ ಅನ್ನ ಇಲ್ಲದೇ ಊಟ ಪರಿಪೂರ್ಣವಾಗುವುದಿಲ್ಲ.

ಆದರೆ ಪ್ರತಿದಿನ ಅನ್ನ ತಿನ್ನುವುದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ನಿರಂತರವಾಗಿ ಅನ್ನ ಸೇವಿಸುವುದು ಅದರಲ್ಲೂ ವೈಟ್ ರೈಸ್ ತಿನ್ನುವುದು ಈ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಅನ್ನವನ್ನು ನಿರಂತರವಾಗಿ ತಿನ್ನುವುದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಪ್ರತಿದಿನ ಅನ್ನ ತಿನ್ನುವುದರಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ.

ಮಧುಮೇಹದ ಅಪಾಯ ಹೆಚ್ಚಾಗಬಹುದು

ಮಧುಮೇಹಿಗಳ ಆಹಾರದಲ್ಲಿ ಅನ್ನದ ಪ್ರಮಾಣ ಮಿತವಾಗಿರಬೇಕು. ಸಾಕಷ್ಟು ಬಾರಿ ಮಧುಮೇಹಿಗಳಿಗೆ ಅನ್ನ ತಿನ್ನಬಾರದು ಎಂಬ ಸಲಹೆ ನೀಡಲಾಗುತ್ತದೆ. ಏಕೆಂದರೆ ಅನ್ನದಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಹೆಚ್ಚಿರುತ್ತದೆ. ಇದರಿಂದಾಗಿ ಅನ್ನ ತಿಂದ ನಂತರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹ ರೋಗಿಗಳು ಮಾತ್ರವಲ್ಲದೆ ಸಾಮಾನ್ಯವಾಗಿ ಎಲ್ಲರೂ ಹೆಚ್ಚು ಅನ್ನ ಸೇವಿಸುವುದನ್ನು ತಪ್ಪಿಸಬೇಕು ಅಥವಾ ಅನ್ನವನ್ನು ಮಿತವಾಗಿ ಸೇವಿಸಬೇಕು.

ದೇಹದಲ್ಲಿ ಬೊಜ್ಜು ಹೆಚ್ಚಾಗಬಹುದು

ವೈಟ್‌ರೈಸ್‌ನಲ್ಲಿ ಕಾರ್ಬೋಹೈಡ್ರೇಟ್‌ ಪ್ರಮಾಣವು ತುಂಬಾ ಹೆಚ್ಚಾಗಿದೆ. ಹಾಗಾಗಿ ಪ್ರತಿನಿತ್ಯ ಅನ್ನ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ತೂಕ ಏರಿಕೆಗೂ ಮೂಲವಾಗುತ್ತದೆ. ಕೊಬ್ಬು ಇಳಿಸಿಕೊಂಡು ತೂಕ ಕಡಿಮೆ ಮಾಡಿಕೊಳ್ಳಲು ಅಥವಾ ತೂಕ ನಿಯಂತ್ರಿಸಿಕೊಳ್ಳಲು ಬಯಸಿದರೆ ನೀವು ವೈಟ್ ರೈಸ್ ಸೇವನೆಗೆ ಕಡಿವಾಣ ಹಾಕಬೇಕು ಅಥವಾ ಮಿತಿಗೊಳಿಸಬೇಕು.

ಹೃದಯ ಸಂಬಂಧಿ ಕಾಯಿಲೆಗಳ ಅಪಾಯ

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಅನ್ನ ತಿನ್ನುವುದು ನಿಮ್ಮ ಹೃದಯದ ಆರೋಗ್ಯಕ್ಕೂ ಅಪಾಯಕಾರಿ. ವಾಸ್ತವವಾಗಿ, ಬಿಳಿ ಅಕ್ಕಿಯಲ್ಲಿ ಯಾವುದೇ ಪೋಷಕಾಂಶಗಳಿಲ್ಲ, ಆದರೆ ನಾರಿನಾಂಶದ ಪ್ರಮಾಣವೂ ಕಡಿಮೆ ಇದೆ. ದೈನಂದಿನ ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ಟ್ರೈಗ್ಲಿಸರೈಡ್ ಮಟ್ಟ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು. ಇವೆಲ್ಲವೂ ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮಗೆ ಅನ್ನ ತಿನ್ನಲೇಬೇಕು ಅಂತಿದ್ದರೆ ಕಂದು ಅಥವಾ ಕೆಂಪು ಅಕ್ಕಿಯನ್ನು ನಿಮ್ಮ ಆಹಾರ ಭಾಗವಾಗಿ ಸೇರಿಸಿಕೊಳ್ಳಬಹುದು.

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ

ಪ್ರತಿನಿತ್ಯ ಅನ್ನವನ್ನು ತಿನ್ನುವುದರಿಂದ ಮೆಟಬಾಲಿಕ್ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸಬಹುದು ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಈ ಕಾರಣದಿಂದಾಗಿ, ಚಯಾಪಚಯವು ಕ್ರಮೇಣ ನಿಧಾನವಾಗಬಹುದು, ಇದರಿಂದಾಗಿ ಬೊಜ್ಜು ಮತ್ತು ಅನೇಕ ಜೀರ್ಣಕಾರಿ ಸಮಸ್ಯೆಗಳು ಸಹ ಸಂಭವಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಅನ್ನವನ್ನು ತಿನ್ನುವ ಬದಲು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಸಾಮಾನ್ಯ ಬಿಳಿ ಅಕ್ಕಿಯ ಬದಲಿಗೆ ಫೈಬರ್ ಭರಿತ ಕಂದು ಅಕ್ಕಿಯನ್ನು ನಿಮ್ಮ ಆಹಾರದ ಭಾಗವಾಗಿ ಮಾಡಲು ಪ್ರಯತ್ನಿಸಿ.

ಕೊಲೆಸ್ಟ್ರಾಲ್ ಹೆಚ್ಚುವ ಅಪಾಯ

ಅನ್ನವನ್ನು ನೇರವಾಗಿ ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಯಾವುದೇ ಅಧ್ಯಯನ ದೃಢಪಡಿಸಿಲ್ಲವಾದರೂ, ಪ್ರತಿದಿನ ಅನ್ನವನ್ನು ತಿನ್ನುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೊಂದಿದ್ದರೆ, ನೀವು ಅನ್ನವನ್ನು ತಿನ್ನುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner