ಕನ್ನಡ ಸುದ್ದಿ  /  Lifestyle  /  Health Tips Skin Problem Main Reasons For Itching In Summer Simple Remedies Of Control Itching And Skin Issues Rst

Itching in Summer: ಬೇಸಿಗೆಯಲ್ಲಿ ಅಂಗಾಂಗಗಳ ತುರಿಕೆಗೆ ಇವೇ ಪ್ರಮುಖ ಕಾರಣ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಹತ್ತಾರು ಚರ್ಮದ ಸಮಸ್ಯೆಗಳು ಕಾಡುವುದು ಸಹಜ. ಬೆವರು, ಧೂಳಿನ ಕಾರಣದಿಂದ ಚರ್ಮದ ತುರಿಕೆಯೂ ಹೆಚ್ಚುತ್ತದೆ. ಅದರಲ್ಲೂ ಗುಪ್ತಾಂಗಗಳ ಭಾಗದಲ್ಲಿ ತುರಿಕೆಯ ಪ್ರಮಾಣ ಹೆಚ್ಚು. ಇದಕ್ಕೆ ಕಾರಣ, ಪರಿಹಾರ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಅಂಗಾಂಗಗಳ ತುರಿಕೆ ಇವೇ ಪ್ರಮುಖ ಕಾರಣ; ಇದರ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ
ಬೇಸಿಗೆಯಲ್ಲಿ ಅಂಗಾಂಗಗಳ ತುರಿಕೆ ಇವೇ ಪ್ರಮುಖ ಕಾರಣ; ಇದರ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯರ ಮುಂದೆ ಅಸಭ್ಯವಾಗಿ ತುರಿಸಿಕೊಂಡರು ಎಂಬ ಕಾರಣಕ್ಕೆ ನಮ್ಮ ಮೆಟ್ರೊದ ಭದ್ರತಾ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಯಿತು. ಈ ಘಟನೆ ನೋಡಿದಾಗ ತುರಿಕೆ ಅಂಜಿಕೆ ಪಟ್ಟುಕೊಳ್ಳುವಂತಾಗಿದೆ. ಅದೇನೇ ಇರಲಿ, ಬೇಸಿಗೆಯಲ್ಲಿ ತುರಿಕೆ ಸಾಮಾನ್ಯ. ಅದರಲ್ಲೂ ಬೆವರು ನಿಲ್ಲುವ ಕಾರಣದಿಂದ ಗುಪ್ತಾಂಗಗಳ ಭಾಗದಲ್ಲಿ ಹೆಚ್ಚು ತುರಿಸುತ್ತದೆ. ಕೆಲವೊಮ್ಮೆ ಚರ್ಮದ ಸಮಸ್ಯೆಯು ತುರಿಕೆ ಕಾರಣವಾಗುತ್ತದೆ. ಮಾತ್ರವಲ್ಲ, ಇಂತಹ ಸಮಸ್ಯೆಗಳು ಬೇಸಿಗೆಯಲ್ಲೇ ಹೆಚ್ಚು ಕಾಡುತ್ತವೆ. ಅದಕ್ಕೆ ಪ್ರಮುಖ ಕಾರಣ ಚರ್ಮದ ಅಲರ್ಜಿ. ಅತಿಯಾದ ಬೆವರು ಚರ್ಮದಲ್ಲಿ ದದ್ದು, ರಿಂಗ್‌ವರ್ಮ್‌ನಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಕೂಡ ತುರಿಕೆಗೆ ಕಾರಣವಾಗಬಹುದು. ಚರ್ಮದ ತುರಿಕೆಗೆ ಪ್ರಮುಖ ಕಾರಣಗಳು ಏನು ಹಾಗೂ ಇದಕ್ಕೆ ಪರಿಹಾರವೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಚರ್ಮದ ತುರಿಕೆ ಕಾರಣಗಳಿವು

ಒಣಚರ್ಮ: ಒಣಚರ್ಮದ ಸಮಸ್ಯೆ ಇರುವವರಿಗೆ ತುರಿಕೆ ಸಹಜ. ಅದರಲ್ಲೂ ಚಳಿಗಾಲ ಹಾಗೂ ಬೇಸಿಗೆಯಲ್ಲಿ ತುರಿಕೆಯ ಪ್ರಮಾಣ ಹೆಚ್ಚುತ್ತದೆ.

ದದ್ದು: ಬೇಸಿಗೆ ಬಂತೆಂದರೆ ಚರ್ಮದಲ್ಲಿ ದದ್ದು ಕಾಣಿಸುವುದು ಸಹಜ. ದದ್ದು ಎಂದರೆ ಅಲ್ಲಲ್ಲಿ ಚರ್ಮ ಕೆಂಪಾಗುವುದು. ಇದು ಕೂಡ ತುರಿಕೆ ಕಾರಣವಾಗುತ್ತದೆ.

ಬೆವರುಸಾಲೆ: ಬೇಸಿಗೆಯಲ್ಲಿ ದೇಹವು ಅತಿಯಾಗಿ ಬೆವರುವ ಕಾರಣ ಬೆನ್ನು, ತೊಡೆ ಸಂಧಿ, ಎದೆಭಾಗ, ಕಂಕುಳಿನ ಭಾಗದಲ್ಲಿ ಬೆವರು ನಿಲ್ಲುತ್ತದೆ. ಇದರಿಂದ ಬೆವರುಸಾಲೆಯಂತಹ ಸಮಸ್ಯೆಗಳು ಹೆಚ್ಚಬಹುದು.

ಸನ್‌ ರಾಶ್‌: ಕೆಲವರಿಗೆ ಸೂರ್ಯ ಅತಿಯಾದ ಶಾಖದಲ್ಲಿ ಓಡಾಡಿದಾಗ ಸನ್‌ ರಾಶ್‌ ಉಂಟಾಗುವುದು ಸಹಜ. ಇದು ತುರಿಕೆಗೂ ಕಾರಣವಾಗುತ್ತದೆ.

ಅಲರ್ಜಿ: ಕೆಲವರಿಗೆ ಸುಗಂಧ ದ್ರವ್ಯಗಳು, ಸಿಂಥೆಟಿಕ್‌ ಬಟ್ಟೆ, ಬಣ್ಣಗಳು ಇವೆಲ್ಲವೂ ಅಲರ್ಜಿ ಉಂಟು ಮಾಡಬಹುದು. ಇದರಿಂದಲೂ ಚರ್ಮಕ್ಕೆ ಅಲರ್ಜಿ ಉಂಟಾಗುತ್ತದೆ.

ಮುಖ್ಯವಾಗಿ ಬೇಸಿಗೆಯಲ್ಲಿ ತುರಿಕೆ ಹೆಚ್ಚಲು ಕಾರಣ ಬೆವರು ನಿಲ್ಲುವುದು. ಇದು ತಲೆಯಿಂದ ಆರಂಭವಾಗಿ ಉಗುರಿನ ತುದಿವರೆಗೆ ತುರಿಕೆಯ ಅನುಭವ ನೀಡುತ್ತದೆ. ಇದರ ಪರಿಹಾರಕ್ಕೆ ಕೆಲವು ಕ್ರಮಗಳನ್ನು ಪಾಲಿಸಬೇಕು. ಇದರಿಂದ ಬೇಸಿಗೆಯಲ್ಲಿ ತುರಿಕೆ ಸಮಸ್ಯೆ ನಿವಾರಿಸಬಹುದು.

ತುರಿಕೆ ನಿವಾರಿಸುವುದು ಹೇಗೆ?

ದಿನದಲ್ಲಿ 2 ಬಾರಿ ಸ್ನಾನ ಮಾಡುವುದು: ಬೇಸಿಗೆಯಲ್ಲಿ ಬೆವರು ನಿಲ್ಲುವುದನ್ನು ತಡೆಯಲು ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವುದು ಬಹಳ ಅವಶ್ಯ. ಇದರಿಂದ ದೇಹದಲ್ಲಿ ತುರಿಕೆ ಪ್ರಮಾಣ ಕಡಿಮೆಯಾಗುತ್ತದೆ.

ಕಾಟನ್‌ ಬಟ್ಟೆ ಧರಿಸುವುದು: ಬೇಸಿಗೆಯಲ್ಲಿ ಹತ್ತಿ ಬಟ್ಟೆ ಧರಿಸುವುದು ಉತ್ತಮ. ಇದು ಬೆವರು ಹೀರಿಕೊಳ್ಳುತ್ತದೆ ಮಾತ್ರವಲ್ಲ, ಚರ್ಮಕ್ಕೂ ಒಳ್ಳೆಯದು. ಸಿಂಥೆಟಿಕ್‌, ನೈಲಾನ್‌ ಬಟ್ಟೆಗಳು ಚರ್ಮದ ತುರಿಕೆಯನ್ನು ಹೆಚ್ಚು ಮಾಡಬಹುದು. ಒಳಉಡುಪುಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಧರಿಸಿ: ಬೇಸಿಗೆಯಲ್ಲಿ ಪ್ರತಿದಿನ ಒಳ ಉಡುಪುಗಳನ್ನು ಬದಲಿಸುವುದು ಬಹಳ ಮುಖ್ಯ. ಅಲ್ಲದೇ ಇವುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ನಂತರ ಧರಿಸಬೇಕು.

ಪುದಿನಾ ರಸ: ಬೇಸಿಗೆಯಲ್ಲಿ ಪುದಿನಾ ರಸ ಹಚ್ಚಿ ಸ್ನಾನ ಮಾಡುವುದರಿಂದಲೂ ತುರಿಕೆ ಕಡಿಮೆಯಾಗುತ್ತದೆ. ಇದು ಚರ್ಮದ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ.

ಮಾಯಿಶ್ಚರೈಸರ್‌ ಬಳಕೆ: ಮಾಯಿಶ್ಚರೈಸರ್‌ ಕೇವಲ ಚಳಿಗಾಲಕ್ಕೆ ಮಾತ್ರವಲ್ಲ, ಬೇಸಿಗೆಗೂ ಬಹಳ ಅವಶ್ಯ. ಬೇಸಿಗೆಯಲ್ಲಿ ಮಾಯಿಶ್ಚರೈಸರ್‌ ಬಳಕೆಯಿಂದ ಚರ್ಮದ ತುರಿಕೆ ಕಡಿಮೆಯಾಗುತ್ತದೆ. ಇದು ಒಣ ಚರ್ಮ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಕೆಲವೊಂದು ಆಹಾರ ಪದಾರ್ಥಗಳು ಚರ್ಮದ ತುರಿಕೆಗೆ ಕಾರಣವಾಗಬಹುದು. ಇವು ಚರ್ಮದ ತುರಿಕೆಯನ್ನು ಹೆಚ್ಚು ಮಾಡಬಹುದು. ಆ ಕಾರಣಕ್ಕೆ ಇಂತಹ ಆಹಾರಗಳಿಂದ ದೂರವಿರುವುದು ಮುಖ್ಯ.

ಮೈ ತುರಿಕೆ ಯಾವಾಗ ಹೇಗೆ ಯಾವ ಸಂದರ್ಭದಲ್ಲಿ ಕಾಣಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಒಂದಿಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಮನೆಮದ್ದುಗಳು ಪ್ರಯೋಜನಕ್ಕೆ ಬಂದಿಲ್ಲ ಎಂದಾದರೆ ತಜ್ಞ ವೈದ್ಯರ ಬಳಿ ಸೂಕ್ತ ಸಲಹೆ ಪಡೆಯಬೇಕು. ಚರ್ಮದ ಯಾವುದೇ ಸಮಸ್ಯೆ ಅತಿಯಾದರೂ ವೈದ್ಯರನ್ನು ಸಂರ್ಪಕಿಸುವುದು ಉತ್ತಮ. ಚರ್ಮದ ಸೂಕ್ಷ್ಮವಾದ ಕಾರಣ ಸಿಕ್ಕ ಸಿಕ್ಕ ಉತ್ಪನ್ನಗಳನ್ನ ಬಳಸುವುದು ಕೂಡ ಒಳಿತಲ್ಲ.