ಎಷ್ಟು ಒದ್ದಾಡಿದ್ರೂ ಸರಿಯಾಗಿ ನಿದ್ದೆ ಬರುತ್ತಿಲ್ವಾ: ಇದಕ್ಕೇನು ಕಾರಣ? ನಿದ್ರೆ ಸರಿಪಡಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಮಾತಿದೆ. ಇಂದು ಬಹುತೇಕರು ನಿದ್ದೆಯ ಕೊರತೆಯಿಂದ ಬಳಲುತ್ತಿದ್ದಾರೆ. ಇಂದಿನ ಜಮಾನದಲ್ಲಿ ಹೇಳುವುದಾದರೆ, ನಿಜವಾದ ಸಿರಿವಂತ ಅಂದ್ರೆ ಚೆನ್ನಾಗಿ ನಿದ್ದೆ ಮಾಡುವವನು ಎಂದು ಹೇಳಬಹುದು. ಯಾಕೆಂದರೆ ಇಂದು ಬಹುತೇಕ ಮಂದಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ನಿದ್ರಾಹೀನತೆಯು ಬಹಳ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಹಿರಿಯರಿಗೆ ಮಾತ್ರವಲ್ಲ ಮಕ್ಕಳಿಗೂ ನಿದ್ರಾಹೀನತೆ ಸಮಸ್ಯೆ ಕಾಡುತ್ತಿರುವುದು ತೀವ್ರ ಕಳವಳ ಮೂಡಿಸಿದೆ. ಅಂದಹಾಗೆ, ನಿದ್ದೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು ರೀತಿಯ ಜನರು ಮಲಗಿದ ಕೂಡಲೇ ನಿದ್ದೆ ಬಾರದೆ ಆಚೆ-ಈಚೆ ಒದ್ದಾಡಿ ಮಲಗುತ್ತಾರೆ. ಇನ್ನೊಂದು ರೀತಿಯ ಜನರಿಗೆ, ತಲೆದಿಂಬಿಗೆ ತಲೆಕೊಟ್ಟ ಕೂಡಲೇ ನಿದ್ರಿಸಲಾರಂಭಿಸುತ್ತಾರೆ.
ನಿಜವಾದ ಶ್ರೀಮಂತ ಯಾರು ಅಂತಾ ಕೇಳಿದ್ರೆ, ಚೆನ್ನಾಗಿ ನಿದ್ದೆ ಮಾಡುವವನೇ ಸಿರಿವಂತ ಅಂತಾ ಹೇಳಬಹುದು. ಭಾರತದಲ್ಲಿ ನಿದ್ರಾಹೀನತೆ ಸಮಸ್ಯೆಯು ಹೆಚ್ಚುತ್ತಿದೆ. ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿದ್ದೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ..
ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಪ್ರತಿ ನಾಲ್ವರಲ್ಲಿ ಒಬ್ಬರು
ಪ್ರತಿ ದಿನ ದೇಹಕ್ಕೆ 7 ರಿಂದ ಎಂಟು ಗಂಟೆಗಳ ನಿದ್ದೆ ಅಗತ್ಯವಿದೆ. ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಅರ್ಧಕ್ಕಿಂತ (ಶೇ.52) ಹೆಚ್ಚು ಜನರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಸಮೀಕ್ಷೆಯಲ್ಲಿ ಭಾಗವಹಿಸುವವರಲ್ಲಿ ಶೇ. 69.8ರಷ್ಟು ಜನರು ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ಕಾಲ ನಿದ್ರಿಸುತ್ತಿದರೆ, ಶೇ. 51.68 ರಷ್ಟು ಜನರು ಉತ್ತಮ ನಿದ್ದೆಯನ್ನು ಪಡೆಯಲು ಹೆಣಗಾಡುತ್ತಿರುವುದಾಗಿ ವರದಿ ತಿಳಿಸಿದೆ.
ಕೇವಲ ಒಂದೆರಡು ಸಮೀಕ್ಷೆಯಲ್ಲ, ಹಲವಾರು ಅಧ್ಯಯನಗಳಿಂದ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬಂದಿದೆ. 2023ರಲ್ಲಿ ನಡೆಸಿದ ಇನ್ನೊಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನಸಂಖ್ಯೆಯ ಅರ್ಧದಷ್ಟು ಜನರು ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
2024ರಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಭಾರತದ 309 ಜಿಲ್ಲೆಗಳಿಂದ 41,000 ಮಂದಿ ಭಾಗವಹಿಸಿದ್ದರು. ಇದರಲ್ಲಿ ಶೇ.61ರಷ್ಟು ಜನು ಆರು ಗಂಟೆಗಳಿಗಿಂತ ಕಡಿಮೆ ನಿದ್ರಿಸುತ್ತಿರುವುದಾಗಿ ತಿಳಿದುಬಂದಿದೆ.
ನಿದ್ರಿಸದಿರಲು ಕಾರಣವೇನು?
ದೈಹಿಕ, ಮಾನಸಿಕ, ಉತ್ತಮ ಆರೋಗ್ಯಕ್ಕೆ ನಿದ್ದೆ ಅಗತ್ಯವಾಗಿ ಬೇಕೇ ಬೇಕು. ಇದೊಂದು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ನಿದ್ದೆಯ ಸಮಸ್ಯೆಗೆ ಹಲವಾರು ಕಾರಣಗಳಿವೆ. ಮೊದಲಿಗೆ ನಿದ್ದೆಗೆ ಅಡ್ಡಿಯಾಗುತ್ತಿರುವುದು ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕಾರಣ ಏನು ಎಂಬುದನ್ನು ತಿಳಿದುಕೊಂಡರೆ, ಅದು ನಿಮ್ಮ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಇಲ್ಲಿ ಅಂತಹ ಕೆಲವೊಂದು ಕಾರಣಗಳಿವೆ, ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ:
ಅತಿಯಾದ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಬಳಕೆ: ಮಲಗುವ ವೇಳೆ ಬಹುತೇಕ ಮಂದಿ ಮೊಬೈಲ್ ನೋಡುತ್ತಾ ಮಲಗುತ್ತಾರೆ. ಇದು ನಿಮ್ಮ ನಿದ್ದೆಗೆ ಅಡ್ಡಿಪಡಿಸುತ್ತದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್‍ಟಾಪ್‍ಗಳು ನೀಲಿ ಬೆಳಕನ್ನು ಹೊರಸೂಸುತ್ತದೆ. ಇದು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಮಲಗುವ ಮುನ್ನ ಫೋನ್ ಇತ್ಯಾದಿ ಗ್ಯಾಜೆಟ್‍ಗಳನ್ನು ಬಳಸುವುದರಿಂದ ನಿಮ್ಮ ಮೆದುಳು ಇನ್ನೂ ಹಗಲು ಎಂದು ಭಾವಿಸುವಂತೆ ಮಾಡುತ್ತದೆ.
ಒತ್ತಡ ಮತ್ತು ಆತಂಕ: ಹೆಚ್ಚಿನ ಮಟ್ಟದ ಒತ್ತಡ ಮತ್ತು ಆತಂಕದಿಂದಾಗಿ ದೇಹವು ವಿಶ್ರಾಂತಿ ಪಡೆಯಲು ಮತ್ತು ನಿದ್ರಿಸಲು ಕಷ್ಟವಾಗಬಹುದು. ಉದ್ಯೋಗದ ಸ್ಥಳದಲ್ಲಿ ಸಮಸ್ಯೆ ಅಥವಾ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಅಥವಾ ವೈಯಕ್ತಿಕ ಸಂಬಂಧಗಳ ಬಗ್ಗೆ ಚಿಂತೆಯೂ ಇದಕ್ಕೆ ಕಾರಣವಾಗಿರಬಹುದು.
ಅನಿಯಮಿತ ನಿದ್ದೆಯ ವೇಳಾಪಟ್ಟಿ: ಪ್ರತಿ ದಿನ ಸರಿಯಾದ ಸಮಯಕ್ಕೆ ಮಲಗಿದರೆ ನಿದ್ದೆಯ ಸಮಸ್ಯೆ ಬರುವುದಿಲ್ಲ. ಆದರೆ, ನಿದ್ದೆಯ ವೇಳಾಪಟ್ಟಿ ಬದಲಾದರೆ ನಿಮ್ಮ ನಿದ್ದೆಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ನೀವು ರಾತ್ರಿ 11ಕ್ಕೆ ಮಲಗಿದ್ರೆ, ಇನ್ನೂ ಕೆಲವೊಮ್ಮೆ 10 ಗಂಟೆ, ಇಲ್ಲದಿದ್ದರೆ 12 ಗಂಟೆ ಹೀಗೆ ಅದಲು ಬದಲಾಗುತ್ತದೆ. ಇದರಿಂದ ನಿಮ್ಮ ದೇಹಕ್ಕೆ ನಿದ್ದೆಯ ಚಕ್ರವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೂ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಹೀಗಾಗಿ ಮಲಗುವ ಸಮಯ ಹಾಗೂ ಬೆಳಗ್ಗೆ ಏಳುವ ಸಮಯವನ್ನು ನಿಗದಿಪಡಿಸಿ, ರೂಢಿ ಮಾಡಿಕೊಳ್ಳಿ.
ಅತಿಯಾದ ಕೆಫೀನ್ ಸೇವನೆ: ಕೆಫೀನ್ ಸೇವನೆಯು ಆರೋಗ್ಯಕ್ಕೆ ಉತ್ತಮವಲ್ಲ. ಇದರಿಂದ ನಿದ್ದೆಯ ಸಮಸ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಕೆಲವರು ನಿದ್ದೆ ಬರುತ್ತದೆ ಎಂದು ಆಗಾಗ್ಗೆ ಟೀ ಅಥವಾ ಕಾಫಿ ಕುಡಿಯುತ್ತಾರೆ. ಇದನ್ನು ಸೇವಿಸುವುದರಿಂದ ನಿದ್ರಿಸುವ ನಿಮ್ಮ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ಅಧ್ಯಯನವೊಂದರ ಪ್ರಕಾರ, ಕೆಫೀನ್ ಸೇವನೆಯು ಒಟ್ಟು ನಿದ್ದೆಯ ಸಮಯವನ್ನು 45 ನಿಮಿಷಗಳು ಮತ್ತು ನಿದ್ದೆಯ ದಕ್ಷತೆಯನ್ನು ಶೇ. 7 ರಷ್ಟು ಕಡಿಮೆಗೊಳಿಸಿದೆ ಎಂದು ತಿಳಿದುಬಂದಿದೆ.
ಮಲಗುವ ಪರಿಸರ ಕಳಪೆಯಾಗಿದ್ದರೂ ಉಂಟಾಗುತ್ತದೆ ಸಮಸ್ಯೆ: ನೀವು ಮಲಗುವ ಸ್ಥಳ ಸೂಕ್ತವಾಗಿಲ್ಲದಿದ್ದರೆ ನಿದ್ದೆ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀಳುತ್ತದೆ. ಅನಾನುಕೂಲ ಹಾಸಿಗೆ, ಅತಿಯಾದ ಶಬ್ದ, ಅಥವಾ ಸೂಕ್ತವಲ್ಲದ ಕೋಣೆಯ ಉಷ್ಣತೆಯಂತಹ ಅಂಶಗಳು ನಿದ್ರಾಹೀನತೆಗೆ ಕಾರಣವಾಗುತ್ತದೆ.
ದೈಹಿಕ ಚಟುವಟಿಕೆಯ ಕೊರತೆ: ವ್ಯಾಯಾಮ, ವಾಕಿಂಗ್ ಮುಂತಾದ ದೈಹಿಕ ಚಟುವಟಿಕೆಯನ್ನು ಮಾಡದೆ ಸೋಮಾರಿಗಳಾಗಿದ್ದರೆ, ನಿದ್ರಿಸಲು ಕಷ್ಟವಾಗಬಹುದು. ದೇಹ ದಣಿಯದಿದ್ದರೂ ನಿದ್ದೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅಧ್ಯಯನವೊಂದರ ಪ್ರಕಾರ, ದೈಹಿಕ ವ್ಯಾಯಾಮವು ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ.
ಆಹಾರ ಪದ್ಧತಿ: ಇನ್ನೇನು ಮಲಗಬೇಕು ಅನ್ನೋವಷ್ಟರಲ್ಲಿ ಊಟ ಮಾಡಿ ಮಲಗಿದರೂ ನಿದ್ದೆಯ ಸಮಸ್ಯೆಗೆ ಕಾರಣವಾಗುತ್ತದೆ. ಮಲಗುವ ಮುನ್ನ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದರೆ, ಅದು ಸರಿಯಾಗಿ ಜೀರ್ಣವಾಗದೆ ಅಜೀರ್ಣ ಸಮಸ್ಯೆ ತಲೆದೋರಬಹುದು. ಹೀಗಾಗಿ ಮಲಗಲು 1-2 ಗಂಟೆಗಳ ಮುಂಚಿತವಾಗಿ ಊಟ ಮಾಡುವುದು ಉತ್ತಮ.
ಮಾನಸಿಕ ಆರೋಗ್ಯ ಸಮಸ್ಯೆಗಳು: ಖಿನ್ನತೆ ಮತ್ತು ಆತಂಕ ಇಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಇವು ಕೂಡ ನಿದ್ದೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಅಥವಾ ನಿದ್ರಿಸಲು ತೊಂದರೆ ಇತ್ಯಾದಿ ಮೆದುಳಿನ ಆರೋಗ್ಯದ ಲಕ್ಷಣಗಳಾಗಿವೆ. ಅತಿಯಾಗಿ ಆಲೋಚಿಸುವಂತಹ ಅಸಮರ್ಪಕ ಮೆದುಳಿನ ಪ್ರಕ್ರಿಯೆಗಳಿಂದ ಇದು ಸಂಭವಿಸಬಹುದು.
ಹೀಗೆ ನಿದ್ರಾಹೀನತೆಯ ಹಲವು ಕಾರಣಗಳೇನು ಎಂಬುದನ್ನು ನೀವು ಓದಿದ್ದೀರಿ. ಇದನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ರಿಸಿ. ಸ್ವಲ್ಪ ದಿನದಲ್ಲೇ ಈ ಸಮಸ್ಯೆ ದೂರವಾಗಬಹುದು. ನಿದ್ದೆಯು ಸತತವಾಗಿ ಅಸಮರ್ಪಕವಾಗಿದ್ದರೆ ಅದು ಅರಿವಿನ ದುರ್ಬಲತೆಗೂ ಕಾರಣವಾಗಬಹುದು. ಇದರಿಂದ ಏಕಾಗ್ರತೆ, ಕಲಿಯಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು. ಅಲ್ಲದೆ, ಹಾರ್ಮೋನಿನ ಅಸಮತೋಲನಗಳು ಸಹ ಸಂಭವಿಸಬಹುದು.
ಕಾಲಾನಂತರದಲ್ಲಿ, ದೀರ್ಘಕಾಲದ ನಿದ್ರಾಹೀನತೆಯು ಮಧುಮೇಹ, ಸ್ಥೂಲಕಾಯತೆ, ಆಲ್ಝೈಮರ್ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಿದ್ದೆಯು ನಿರ್ಣಾಯಕ ಪಾತ್ರವನ್ನು ವಹಿಸಿದೆ.
ವಿಭಾಗ