ಮಾವಿನ ಹಣ್ಣಿನ ಕುರಿತು ಹಲವರಿಗೆ ತಿಳಿದಿರದ 6 ಅದ್ಭುತ ಪ್ರಯೋಜನಗಳಿವು; ಶಾಖಾಘಾತ ತಡೆಯುವುದರಿಂದ ಮನಸ್ಥಿತಿ ಸುಧಾರಣೆವರೆಗೆ
ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಅಗ್ರಸ್ಥಾನ. ಆದರೆ ಈ ಹಣ್ಣಿನ ಕುರಿತು ಕೆಲವು ಅಪವಾದಗಳಿವೆ. ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಇಂತಹ 6 ಪ್ರಮುಖ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹಣ್ಣುಗಳ ರಾಜ ಮಾವಿನಹಣ್ಣು ಬೇಸಿಗೆಯಲ್ಲಿ ಹೇರಳವಾಗಿ ಸಿಗುತ್ತದೆ. ಈ ಹಣ್ಣು ಹಲವರಿಗೆ ಫೇವರಿಟ್. ಮಾವಿನ ಹಣ್ಣಿನ ರುಚಿಗೆ ಸಾಟಿ ಇಲ್ಲ ಎನ್ನಬಹುದು. ಆದರೆ ಈ ಹಣ್ಣಿನ ಬಗ್ಗೆ ಕೆಲವರಲ್ಲಿ ಅಪನಂಬಿಕೆ ಇದೆ. ಮಾವಿನಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಏರಿಕೆಯಾಗುತ್ತದೆ ಎಂಬೆಲ್ಲಾ ತಪ್ಪುಕಲ್ಪನೆಗಳಿವೆ. ಇಂತಹ ಅಡ್ಡಪರಿಣಾಮಗಳ ಭಯದಿಂದ ಇಷ್ಟವಿದ್ದರೂ ಹಲವರು ಮಾವಿನ ಹಣ್ಣು ತಿನ್ನದೇ ಇರುತ್ತಾರೆ. ಆದರೆ ನಾವು ಅಂದುಕೊಂಡಿರುವಷ್ಟು ಮಾವಿನ ಹಣ್ಣು ಅಪಾಯಕಾರಿಯಲ್ಲ.
ಆಹಾರ ತಜ್ಞೆ ಮತ್ತು ತೂಕ ನಿರ್ವಹಣಾ ತಜ್ಞೆ ಡಾ. ಪ್ರತ್ಯಕ್ಷ ಭಾರದ್ವಾಜ್ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಮಾವಿನ ಹಣ್ಣಿನ ಬಗ್ಗೆ ಹಲವರಿಗೆ ತಿಳಿದಿರದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.
ಮಿತವಾಗಿ ತಿನ್ನೋದು ಮರಿಬೇಡಿ
ಡಾ. ಪ್ರತ್ಯಕ್ಷ ಅವರು ಹೇಳಿರುವಂತೆ ಮಾವಿನಹಣ್ಣಿನಲ್ಲಿ ಸಾಕಷ್ಟು ಪ್ರಯೋಜನಗಳಿದ್ದರೂ ಇದನ್ನು ಮಿತವಾಗಿ ಸೇವಿಸುವುದನ್ನು ಮರೆಯಬಾರದು. ಅವರ ಪ್ರಕಾರ ಮಾವಿನಹಣ್ಣನ್ನು ಮಿತವಾಗಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹೆಚ್ಚು ಮಾವಿನಹಣ್ಣು ತಿನ್ನುವುದರಿಂದ ಜ್ವರ ಬರುವ ಸಾಧ್ಯತೆ ಇದೆ. ಹೆಚ್ಚು ಮಾವಿನಹಣ್ಣು ತಿನ್ನುವುದರಿಂದ ಸಕ್ಕರೆಯ ಮಟ್ಟ ಏರಿಕೆಯಾಗಬಹುದು, ಅದರಲ್ಲೂ ವಿಶೇಷವಾಗಿ ಮಧುಮೇಹದ ಸಮಸ್ಯೆ ಇರುವವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಂಸ್ಕರಿಸಿದ ಮಾವಿನ ಹಣ್ಣುಗಳಿಗಿಂತ ತಾಜಾ ಮಾವಿನಹಣ್ಣಿನ ಸೇವನೆ ಉತ್ತಮ ಎಂದು ಆಕೆ ಸಲಹೆ ನೀಡುತ್ತಾರೆ. ಇದಲ್ಲದೇ ಎಣ್ಣೆಯಂಶ ಹೆಚ್ಚಿರುವ ಊಟ ಅಥವಾ ಆಹಾರ ಸೇವಿಸಿದ ಸಮಯದಲ್ಲಿ ಮಾವಿನ ಹಣ್ಣು ತಿನ್ನಲೇಬಾರದು ಎಂಬುದು ಅವರ ಸಲಹೆ. ಡಾ. ಪ್ರತ್ಯಕ್ಷ ಅವರು ಹೇಳಿದ, ಹಲವರಿಗೆ ತಿಳಿದಿರದ ಮಾವಿನ ಹಣ್ಣಿನ 6 ಪ್ರಯೋಜನಗಳು ಹೀಗಿವೆ.
ಶಾಖ ನಿರೋಧಕ ಶಕ್ತಿ
ಬೇಸಿಗೆಯಲ್ಲಿ ಶಾಖದ ಹೊಡೆತವು ಒಂದು ಪ್ರಮುಖ ಸಮಸ್ಯೆಯಾಗಿದೆ. ಬೆವರು ದೇಹದಿಂದ ಹೊರ ಹೋದಾಗ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಾಂಶಗಳು ದೇಹದಿಂದ ಹೊರ ಹೋಗುತ್ತವೆ. ಇದು ನಿರ್ಜಲೀಕರಣ, ಆಯಾಸ ಹಾಗೂ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಮಾವಿನಕಾಯಿ ಎಲೆಕ್ಟ್ರೋಲೈಟ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಬೆವರಿನಿಂದ ಕಳೆದುಹೋದ ಲವಣಗಳನ್ನು ಮರುಪೂರಣಗೊಳಿಸುವ ಮೂಲಕ ನಿರ್ಜಲೀಕರಣವಾಗುವುದನ್ನು ತಪ್ಪಿಸುತ್ತದೆ.
ಜರ್ನಲ್ ಆಫ್ ಎನ್ವಿರಾನ್‌ಮೆಂಟಲ್ ಹೆಲ್ತ್ ರಿಸರ್ಚ್‌ನಲ್ಲಿ ನಡೆದ ಅಧ್ಯಯನವು, ಹೀಟ್ ಸ್ಟ್ರೋಕ್ ಉಂಟಾದ ಸಮಯದಲ್ಲಿ ಮಾವಿನ ಕಾಯಿ ಸೇವಿಸುವುದರಿಂದ ಶೇ 68 ರಷ್ಟು ಜನರಲ್ಲಿ ತಲೆತಿರುಗುವಿಕೆ, ಸೆಳೆತ ಮತ್ತು ಆಯಾಸದಂತಹ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಿದೆ.
ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೆಚ್ಚಳ
ಹಠಾತ್ ತಾಪಮಾನ ಬದಲಾವಣೆಯು ಬೇಸಿಗೆಯ ಜ್ವರ, ಕೆಮ್ಮು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಕಾಲೋಚಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾವಿನಹಣ್ಣುಗಳು ಚರ್ಮಕ್ಕೆ ಹೊಳಪು ನೀಡುವ ಪೋಷಕಾಂಶವನ್ನು ಸಹ ಒಳಗೊಂಡಿರುತ್ತವೆ. ವಿಟಮಿನ್ ಎ, ಇದು ರೋಗನಿರೋಧಕ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ರೋಗಕಾರಕಗಳ ವಿರುದ್ಧ ಹೋರಾಡುವ ಮೊದಲ ಸಾಲಿನ ಲೋಳೆಯ ಪೊರೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಚರ್ಮದ ಕಾಂತಿ ಹೆಚ್ಚಿಸುತ್ತದೆ
ಮಾವಿನ ಹಣ್ಣಿನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ವಿಟಮಿನ್ ಎ ಆಗಿ ರೂಪಾಂತರಗೊಳ್ಳುತ್ತದೆ. ಚರ್ಮದ ದುರಸ್ತಿ ಮತ್ತು ಪುನರುತ್ಪಾದನೆ ಪ್ರಕ್ರಿಯೆಗೆ ಇದು ಅಗತ್ಯವಾಗಿರುತ್ತದೆ. ವಿಟಮಿನ್ ಎ ಕೊರತೆಯು ಒಣ ಚರ್ಮ, ಫ್ಲೇಕಿಂಗ್ ಚರ್ಮ ಮತ್ತು ಮೊಡವೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳ ಜೊತೆಗೆ, ಇದು ವಯಸ್ಸಾದ ಅಕಾಲಿಕ ಚಿಹ್ನೆಗಳನ್ನು ತಡೆಗಟ್ಟಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಫ್ರಿ ರಾಡಿಕಲ್‌ಗಳನ್ನು ನಿವಾರಿಸುತ್ತದೆ.
ಕರುಳಿನ ಆರೋಗ್ಯಕ್ಕೆ ಒಳ್ಳೆಯದು
ಭಾರತದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿದ್ದು ಅತಿಯಾದ ಬಿಸಿಲು ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಆಸಿಡಿಟಿಯಂತಹ ಸಮಸ್ಯೆಗಳು ಹೆಚ್ಚಲು ಕಾರಣವಾಗಬಹುದು.
ಮಾವಿನಹಣ್ಣುಗಳು ಅಮೈಲೇಸ್‌ನಂತಹ ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು, ಇದು ಕಾರ್ಬೋಹೈಡ್ರೇಟ್‌ಗಳನ್ನು ಪರಿಣಾಮಕಾರಿಯಾಗಿ ಪಡೆಯುವ ಕ್ರಿಯೆಯನ್ನು ಬೆಂಬಲಿಸುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ಕರುಳಿನ ನಿಯಮಿತ ಚಲನೆಗೆ ನೆರವಾಗುತ್ತದೆ. ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಇರುವವರಿಗೆ, ಮಾಗಿದ ಮಾವಿನಹಣ್ಣುಗಳು ಯಾವುದೇ ರಾಸಾಯನಿಕಗಳು ಅಥವಾ ಹಾನಿಕಾರಕ ಅಡ್ಡಪರಿಣಾಮಗಳಿಲ್ಲದೆ ಸೌಮ್ಯವಾದ ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತವೆ.
5. ಕಣ್ಣಿನ ಆರೋಗ್ಯವನ್ನು ಬೆಂಬಲಿಸುತ್ತದೆ
ಕಣ್ಣಿನ ಆರೋಗ್ಯವು ಹೆಚ್ಚಾಗಿ ಕ್ಯಾರೆಟ್‌ನೊಂದಿಗೆ ಸಂಬಂಧಿಸಿದೆ, ಮಾವಿನಹಣ್ಣಿನಲ್ಲಿ ಈ ಅಂಶ ಅಧಿಕವಾಗಿದೆ. ಒಂದು ಮಾವಿನಹಣ್ಣಿನಲ್ಲಿ ನೀವು ಪ್ರತಿನಿತ್ಯ ತಿನ್ನುವ ಆಹಾರಗಳಲ್ಲಿ ವಿಟಮಿನ್‌ಗಿಂತ ಶೇ 25 ರಷ್ಟು ಅಧಿಕ ಮೌಲ್ಯದ ವಿಟಮಿನ್ ಎ ಅಂಶವಿದೆ. ಇರುಳು ಕುರುಡುತನ, ಕಣ್ಣುಗಳು ಒಣಗುವುದು ಮತ್ತು ರೆಟಿನಾದ ಒಟ್ಟಾರೆ ಆರೋಗ್ಯವನ್ನು ಗುಣಪಡಿಸುವಲ್ಲಿ ವಿಟಮಿನ್ ಎ ಅತ್ಯಗತ್ಯ. ಸ್ಕ್ರೀನ್ ಮುಂದೆ ಹೆಚ್ಚಿನ ಸಮಯ ಕಳೆಯುವವರಿಗೆ ಇದು ಅವಶ್ಯ.
ಮನಸ್ಥಿತಿಯನ್ನು ಸುಧಾರಿಸುತ್ತದೆ
ಮಾವಿನಹಣ್ಣು ತಿನ್ನುವುದರಿಂದ ಆ ಕ್ಷಣದಲ್ಲೇ ನಮ್ಮ ಮನಸ್ಥಿತಿ ಸುಧಾರಿಸುತ್ತದೆ. ವಿಟಮಿನ್ ಬಿ6 ಅಂಶ ಇದರಲ್ಲಿ ಹೆಚ್ಚಿರುವ ಕಾರಣ, ಮಾವಿನಹಣ್ಣು ಹ್ಯಾಪಿ ಹಾರ್ಮೋನ್ ಎಂದೂ ಕರೆಯಲ್ಪಡುವ ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮಾವಿನಹಣ್ಣುಗಳು ಪಿತ್ತ ದೋಷವನ್ನು ಸಮತೋಲನಗೊಳಿಸುತ್ತವೆ ಮತ್ತು ಬಿಸಿ ತಿಂಗಳುಗಳಲ್ಲಿ ಭಾವನೆಗಳನ್ನು ಶಾಂತಗೊಳಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)