ಕನ್ನಡ ಸುದ್ದಿ  /  ಜೀವನಶೈಲಿ  /  ಬಿರುಬಿಸಿಲಿನ ಕಾರಣ ಕಣ್ಣು ಒಣಗಿದಂತಾಗಿ ತುರಿಕೆ, ಮಂಜಾಗೋದು ಇಂತಹ ಸಮಸ್ಯೆ ಕಾಡ್ತಿದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಬಿರುಬಿಸಿಲಿನ ಕಾರಣ ಕಣ್ಣು ಒಣಗಿದಂತಾಗಿ ತುರಿಕೆ, ಮಂಜಾಗೋದು ಇಂತಹ ಸಮಸ್ಯೆ ಕಾಡ್ತಿದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಅತಿಯಾದ ಬಿಸಿಲು, ಧೂಳು, ಮಾಲಿನ್ಯದ ಕಾರಣದಿಂದ ಕಣ್ಣುಗಳು ಒಣಗುವುದು ಸಹಜ. ಇದರಿಂದ ಕಣ್ಣಿನ ಕಿರಿಕಿರಿ, ಕಣ್ಣು ಮಂಜಾದಂತಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ಸೂಕ್ತ ಕಾಳಜಿ ಅಗತ್ಯ. ಬೇಸಿಗೆಯಲ್ಲಿ ನೀವು ಡ್ರೈ ಐ ಸಮಸ್ಯೆ ಎದುರಿಸುತ್ತಿದ್ದರೆ ಅದರ ನಿವಾರಣೆಗೆ ಈ ಸುಲಭ ಪರಿಹಾರಗಳನ್ನು ಟ್ರೈ ಮಾಡಿ.

ಬಿಸಿಲಿನ ಕಾರಣಕ್ಕೆ ಕಣ್ಣು ಒಣಗಿದಂತಾಗಿ ತುರಿಕೆ, ಕಣ್ಣು ಮಂಜಾಗೋದು ಇಂತಹ ಸಮಸ್ಯೆ ಕಾಡ್ತಾ ಇದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ
ಬಿಸಿಲಿನ ಕಾರಣಕ್ಕೆ ಕಣ್ಣು ಒಣಗಿದಂತಾಗಿ ತುರಿಕೆ, ಕಣ್ಣು ಮಂಜಾಗೋದು ಇಂತಹ ಸಮಸ್ಯೆ ಕಾಡ್ತಾ ಇದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಬೇಸಿಗೆ ಬಂದಾಕ್ಷಣ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಎದುರಾಗುವುದು ಸಹಜ. ಅದರಲ್ಲೂ ಈ ವರ್ಷ ಬಿಸಿಲಿನ ತಾಪ ಬಲು ಜೋರಾಗಿಯೇ ಇದೆ. ಅತಿಯಾದ ಬಿಸಿಲು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನು ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣು ಬಿಸಿಲಿನ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಣ್ಣುಗಳು ಒಣಗಿದಂತಾಗಿ ಕಿರಿಕಿರಿ, ಮಂಜಾಗುವುದು ಇಂತಹ ತೊಂದರೆಗಳು ಎದುರಾಗುತ್ತಿವೆ. ಇದರಿಂದ ದೈನಂದಿನ ಕೆಲಸಗಳಿಗೂ ತೊಂದರೆ ಉಂಟಾಗುತ್ತಿದೆ. ಈ ತೊಂದರೆಗೆ ಪ್ರಮುಖ ಕಾರಣ ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಸದೇ ಇರುವುದು ಅಥವಾ ಕಣ್ಣೀರು ಬೇಗನೆ ಆವಿಯಾಗುವುದು. ಕಣ್ಣುಗಳು ಸರಿಯಾಗಿ ನಯವಾಗದೇ ಇದ್ದಾಗ ಡ್ರೈ ಐ ಸಿಂಡ್ರೋಮ್‌ ಕಾಣಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಮೊದಲೇ ಹೇಳಿದಂತೆ ಇದರಿಂದ ಕಣ್ಣಿನಲ್ಲಿ ಕಿರಿಕಿರಿ, ಕಣ್ಣು ಕೆಂಪಾಗುವುದು, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದೇ ಇರುವುದು ಇಂತಹ ಹಲವು ಸಮಸ್ಯೆಗಳು ಎದುರಾಗಬಹುದು. ಪರಿಸರದ ಕಾರಣದಿಂದ, ದೀರ್ಘವಧಿಯವರೆಗೆ ಸ್ಕ್ರೀನ್‌ ನೋಡುವುದು ಇನ್ನಿತರ ಸಮಸ್ಯೆಗಳ ನಡುವೆ ಕಣ್ಣು ಒಣಗುವ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಬಹಳ ಮುಖ್ಯ ಎನ್ನಿಸುತ್ತದೆ.

ಕಣ್ಣು ಒಣಗುವುದನ್ನು ತಪ್ಪಿಸಲು ಏನು ಮಾಡಬೇಕು, ಇಲ್ಲಿದೆ ಟಿಪ್ಸ್‌

ಹೈಡ್ರೇಟ್‌ ಆಗಿರಿ: ಬೇಸಿಗೆಯಲ್ಲಿ ಒಟ್ಟಾರೆ ದೈಹಿಕ ಯೋಗಕ್ಷೇಮಕ್ಕೆ ದೇಹ ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ, ಇದರಲ್ಲಿ ಕಣ್ಣಿನ ಆರೋಗ್ಯವೂ ಸೇರುತ್ತದೆ. ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಸಾಕಷ್ಟು ಉತ್ಪತ್ತಿಯಾಗುತ್ತದೆ ಹಾಗೂ ಕಣ್ಣುಗಳ ಒಣಗುವುದು ನಿಲ್ಲುತ್ತದೆ.

ಕಣ್ಣಿನ ಡ್ರಾಪ್‌: ಕಣ್ಣು ಪದೇ ಪದೇ ಒಣಗುವ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಲು ಟಿಯರ್‌ ಡ್ರಾಪ್‌ ಅಥವಾ ಐ ಡ್ರಾಪ್‌ ಬಳಸಿ. ಇದು ಕಣ್ಣಿನ ಶುಷ್ಕತೆಯನ್ನು ನಿವಾರಿಸುತ್ತದೆ. ಕಣ್ಣುಗಳನ್ನು ನಯವಾಗಿಸಿ ಕಿರಿಕಿರಿ ಉಂಟಾಗುವುದನ್ನು ತಡೆಯುತ್ತದೆ.

ನಿಯಮಿತವಾಗಿ ಕಣ್ಣು ಮಿಟುಕಿಸಿ: ದೀರ್ಘಾವಧಿಯವರೆಗೆ ಸ್ಕ್ರೀನ್‌ ನೋಡುವುದರಿಂದ ಕಣ್ಣು ಮಿಟುಕಿಸದೇ ಇರಬಹುದು, ಇದು ಕೂಡ ಕಣ್ಣು ಒಣಗಲು ಕಾರಣವಾಗಬಹುದು. ಹಾಗಾಗಿ ಕಂಪ್ಯೂಟರ್‌, ಮೊಬೈಲ್‌, ಸ್ಮಾರ್ಟ್‌ಫೋನ್‌ಗಳಂತ ಡಿಜಿಟಲ್‌ ಸಾಧನಗಳನ್ನು ಬಳಸುವಾಗ ನಿಯಮಿತವಾಗಿ ಕಣ್ಣು ಮಿಟುಕಿಸುತ್ತಿರಿ.

ಸ್ಕ್ರೀನ್‌ನಿಂದ ವಿರಾಮ ಪಡೆಯಿರಿ: ದೀರ್ಘಾವಧಿಯ ಸ್ಕ್ರೀನ್‌ ಟೈಮ್‌ನಿಂದ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಇದರಿಂದ ಕಣ್ಣು ಒಣಗುವುದು ಸಹಜ. ಕಣ್ಣಿನ ಶುಷ್ಕತೆ ಕಡಿಮೆ ಮಾಡಲು 20-20-20 ನಿಯಮ ಪಾಲಿಸಿ. 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ ವಿರಾಮ ಪಡೆಯಿರಿ. ನೀವು ಕುಳಿತ ಜಾಗದಿಂದ 20 ಅಡಿ ದೂರದಲ್ಲಿರುವ ವಸ್ತುಗಳನ್ನು ನೋಡಿ.

ಆರ್ದ್ರಕವನ್ನು ಬಳಸಿ: ಮನೆಯೊಳಗಿನ ಒಣ ಗಾಳಿಯು ಕಣ್ಣು ಒಣಗುವಂತೆ ಮಾಡಬಹುದು. ಮನೆಯಲ್ಲಿ ಆರ್ದ್ರಕ ಅಥವಾ ಹ್ಯೂಮಿಡಿಫೈಯರ್‌ ಅನ್ನು ಬಳಸುವುದರಿಂದ ಗಾಳಿಗೆ ತೇವಾಂಶವನ್ನು ಸೇರಿಸಬಹುದು. ಇದರಿಂದ ಕಣ್ಣು ಸಹಜವಾಗಿರುತ್ತದೆ.

ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ: ಗಾಳಿ, ಧೂಳು ಮತ್ತು ಶುಷ್ಕತೆಯನ್ನು ಉಲ್ಬಣಗೊಳಿಸಬಹುದಾದ ಇತರ ಪರಿಸರದ ಉದ್ರೇಕಕಾರಿ ಅಂಶಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಹೊರಗಡೆ ಹೋಗುವಾಗ ತಪ್ಪದೇ ಸನ್‌ಗ್ಲಾಸ್‌ ಅಥವಾ ನಾರ್ಮಲ್‌ ಕನ್ನಡಕ ಬಳಸಿ.

ಆರೋಗ್ಯಕರ ಆಹಾರ ಸೇವನೆ: ಸಾಲ್ಮನ್‌, ಅಗಸೆಬೀಜ, ವಾಲ್‌ನಟ್‌ನಂತಹ ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಆಹಾರವನು ಸೇವಿಸುವ ಅಭ್ಯಾಸ ಮಾಡಿ. ಇದರಿಂದ ಕಣ್ಣಿನ ಉರಿಯೂತ ಕಡಿಮೆಯಾಗುತ್ತದೆ. ಕಣ್ಣೀರಿನ ಗುಣಮಟ್ಟ ಸುಧಾರಿಸಲು ಕೂಡ ಇದು ಸಹಕಾರಿ. ಇದರೊಂದಿಗೆ ವಿಟಮಿನ್‌ ಎ, ಸಿ ಮತ್ತು ಇಯಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುವುದು ಕೂಡ ಒಟ್ಟಾರೆ ಕಣ್ಣಿನ ಆರೋಗ್ಯಕ್ಕೆ ಉತ್ತಮ.

ಕಣ್ಣಿನ ವೈದ್ಯರನ್ನು ಸಂಪರ್ಕಿಸಿ: ಸ್ವಯಂ ಆರೈಕೆಯ ಹೊರತಾಗಿಯೂ ಕಣ್ಣು ಒಣಗುವ ಸಮಸ್ಯೆ ಮುಂದುವರಿದರೆ ಕಣ್ಣಿನ ಆರೈಕೆಯ ಬಗ್ಗೆ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

ಆರ್ಬಿಸ್‌ ಇಂಡಿಯಾದ ನಿರ್ದೇಶಕ ಡಾ. ರಿಷಿ ರಾಜ್‌ ಭೋರಾಹ್‌ ಅವರು ಐಎಎಸ್‌ಗೆ ನೀಡಿದ ಸಂದರ್ಶನದಲ್ಲಿ ʼಕಣ್ಣುಗಳು ಒಣಗುವುದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಜೀವನಶೈಲಿಯ ಬದಲಾವಣೆಗಳು, ಪಾರಿಸರಿಕ ಹೊಂದಾಣಿಕೆಗಳು ಹಾಗೂ ಸರಿಯಾದ ಕಣ್ಣಿನ ಆರೈಕೆ ಅಭ್ಯಾಸಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಒಟ್ಟಾರೆ ಈ ಎಲ್ಲವೂ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.