ಕನ್ನಡ ಸುದ್ದಿ  /  ಜೀವನಶೈಲಿ  /  Heart Attack: ನೀವು ಆಸಿಡಿಟಿ ಎಂದು ನಿರ್ಲ್ಯಕ್ಷಿಸಿದ ಲಕ್ಷಣವು ಹೃದಯಾಘಾತದ ಸಿಂಪ್ಟಮ್​ ಕೂಡ ಆಗಿರಬಹುದು

Heart Attack: ನೀವು ಆಸಿಡಿಟಿ ಎಂದು ನಿರ್ಲ್ಯಕ್ಷಿಸಿದ ಲಕ್ಷಣವು ಹೃದಯಾಘಾತದ ಸಿಂಪ್ಟಮ್​ ಕೂಡ ಆಗಿರಬಹುದು

ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಯುವಜನತೆಯನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುತ್ತಾರೆ. ಕೆಲವೊಮ್ಮೆ ನಾವು ಹೃದಯಾಘಾತದ ಲಕ್ಷಣಗಳನ್ನು ಪತ್ತೆಮಾಡಲು ವಿಫಲರಾದ ಕಾರಣ ಅಪಾಯಕ್ಕೆ ಸಿಲುಕಿಬಿಡುತ್ತೇವೆ .

ಹೃದಯಾಘಾತ (ಪ್ರಾತಿನಿಧಿಕ ಚಿತ್ರ)
ಹೃದಯಾಘಾತ (ಪ್ರಾತಿನಿಧಿಕ ಚಿತ್ರ)

ಹೃದಯಾಘಾತವೆಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ . ಅನೇಕರಿಗೆ ಹೃದಯಾಘಾತದ ಆರಂಭಿಕ ಲಕ್ಷಣಗಳು ಗೋಚರಿಸಿದರೂ ಸಹ ಇನ್ನೂ ಕೆಲವರಿಗೆ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸದೇ ಹೃದಯಾಘಾತ ಸಂಭವಿಸಿಬಿಡುತ್ತದೆ.ಸಣ್ಣ ಎದೆ ನೋವು , ಉಸಿರಾಟದ ಸಮಸ್ಯೆ ಹೀಗೆ ಯಾವುದೇ ಲಕ್ಷಣಗಳು ಇಂಥವರಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಈಗಂತೂ ಅನೇಕ ಯುವಜನತೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೈಲೆಂಟ್​ ಹಾರ್ಟ್​ ಅಟ್ಯಾಕ್​​ ಪ್ರಕರಣಗಳು ಒಟ್ಟು ಹೃದಯಾಘಾತ ಪ್ರಕರಣದ 45 ಪ್ರತಿಶತದಷ್ಟಿವೆ. ಇವುಗಳು ಮಹಿಳೆಯರಿಗಿಂತ ಪುರುಷರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಈ ವಿಧದ ಹೃದಯಾಘಾತಗಳಲ್ಲಿ ನಿಮಗೆ ಲಕ್ಷಣಗಳು ಎಷ್ಟು ಚಿಕ್ಕದಾಗಿ ಇರುತ್ತದೆ ಎಂದರೆ ನೀವು ಅದನ್ನು ಆಸಿಡಿಟಿ ಎಂದುಕೊಂಡು ನಿರ್ಲಕ್ಷ್ಯ ಮಾಡಿಬಿಡುತ್ತೀರಿ..!

ಅನೇಕರು ಆರೋಗ್ಯದ ಬಗ್ಗೆ ಎಷ್ಟು ನಿಷ್ಕಾಳಜಿ ಹೊಂದಿರುತ್ತಾರೆ ಎಂದರೆ ಅವರು ಎದೆಯುರಿ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡರೂ ಸಹ ಆಸ್ಪತ್ರೆಗೆ ಭೇಟಿ ನೀಡುವ ಗೋಜಿಗೆ ಹೋಗುವುದೇ ಇಲ್ಲ. ಇಂಥ ನಿಷ್ಕಾಳಜಿಯಿಂದ ವಿಶ್ವದಲ್ಲಿ 18 ಮಿಲಿಯನ್​ ಜನರು ಹೃದಯಾಘಾತದಿಂದ ಸಾಯುತ್ತಾರೆ ಎಂದು ವರದಿ ಹೇಳಿದೆ.

ಹೃದಯಾಘಾತದ ಲಕ್ಷಣಗಳು ಆಸಿಡಿಟಿ ಸಮಸ್ಯೆಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ..?

ಆಸಿಡಿಟಿ ಸಮಸ್ಯೆ ಹಾಗೂ ಹೃದಯಾಘಾತ ಈ ಎರಡೂ ಸಂದರ್ಭಗಳಲ್ಲಿಯೂ ಎದೆಯುರಿ ಉಂಟಾಗುವುದರಿಂದ ನಿಮಗೆ ಇವುಗಳನ್ನು ಬೇರ್ಪಡಿಸಿ ನೋಡುವುದು ತುಸು ಕಷ್ಟವೇ ಎನಿಸಬಹುದು. ಆದರೂ ಕೂಡ ಕೆಲವೊಂದು ಸೂಕ್ಷ್ಮ ಗ್ರಹಿಕೆಗಳನ್ನು ಮಾಡುವ ಮೂಲಕ ನೀವು ಇವೆರಡರ ನಡುವಿನ ವ್ಯತ್ಯಾಸವನ್ನು ಕಂಡು ಹಿಡಿಯಬಹುದು ಎಂದು ವೈದ್ಯರು ಹೇಳುತ್ತಾರೆ.

ಆಸಿಡಿಟಿ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಎದೆಯ ಮೇಲ್ಭಾಗದಲ್ಲಿ ನಿಮಗೆ ಉರಿ ಜಾಸ್ತಿ ಇರುತ್ತದೆ. ಅಲ್ಲದೇ ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ ಬರುತ್ತಿರಬಹುದು. ಅಲ್ಲದೇ ನೀವು ಸೇವಿಸಿದ ಆಹಾರ ಸ್ವಲ್ಪ ಪ್ರಮಾಣದಲ್ಲಿ ಬಾಯಿಗೆ ಬರಲೂಬಹುದು. ಆದರೆ ಹೃದಯಾಘಾತದಲ್ಲಿ ನಿಮಗೆ ಎದೆಯುರಿ ಈ ರೀತಿ ಇರುವುದಿಲ್ಲ. ಇಲ್ಲಿ ನಿಮಗೆ ಇನ್ನೇನು ನಿಮ್ಮ ಹೃದಯ ಬ್ಲಾಸ್ಟ್​ ಆಗಿಬಿಡಬಹುದು ಎಂಬ ಅನುಭವವಾಗುತ್ತಿರುತ್ತದೆ. ನೋವು ಮೇಲೆ ಮೇಲೆ ಹೋದಂತೆ ನಿಮಗೆ ಭಾಸವಾಗುತ್ತಿರುತ್ತದೆ. ಎದೆಯಿಂದ ಕುತ್ತಿಗೆಗೆ, ದವಡೆಗಳಿಗೆ ಹಾಗೂ ಬೆನ್ನಿಗೆಲ್ಲ ನೋವು ಹರಡಿದಂತೆ ಭಾಸವಾಗುತ್ತದೆ. ನಿಮಗೆ ಹೃದಯಾಘಾತ ಸಂಭವಿಸಿದ್ದೇ ಹೌದಾದಲ್ಲಿ ನಿಮಗೆ ಉಸಿರಾಡಲು ಕಷ್ಟವಾಗುತ್ತದೆ. ಹಾಗೂ ನೀವು ಕೂಡಲೇ ಬೆವರಲು ಆರಂಭಿಸುತ್ತೀರಿ..ಅಲ್ಲದೇ ನಿಮ್ಮ ಎದೆಯಲ್ಲಿ ತೀಕ್ಷ್ಣವಾದ ಉರಿ ಅನುಭವ ನಿಮಗೆ ಉಂಟಾಗಲಿದೆ.

ಈ ರೀತಿಯಾದಾಗ ಏನು ಮಾಡಬೇಕು ?

ನೀವು ಸಿಕ್ಕಾಪಟ್ಟೆ ದೇಹದಂಡನೆ ಮಾಡಿದ ಕೂಡಲೇ ನಿಮಗೆ ಇವುಗಳ ಪೈಕಿ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಸಹ ಸೀದಾ ತಡಮಾಡದೇ ಹತ್ತಿರದ ವೈದ್ಯರನ್ನು ಭೇಟಿಯಾಗಿ ಸಿಟಿ ಸ್ಕ್ಯಾನ್​ ಮಾಡಿಸಿಬಿಡಬೇಕು. ಯಾವಾಗ ನಿಮಗೆ ಶುರುವಾದ ಎದೆ ನೋವು ಕುತ್ತಿಗೆ, ಗಂಟಲು ಭಾಗ ಹಾಗೂ ಬೆನ್ನಿನ ಭಾಗಕ್ಕೆ ಹರಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆಯೋ ಆಗ ನೀವು ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವುದು ಒಳ್ಳೆಯದು. ಏಕೆಂದರೆ ಸಾಮಾನ್ಯ ಆಸಿಡಿಟಿ ಸಮಸ್ಯೆಯಲ್ಲಿ ಕುತ್ತಿಗೆ ಭಾಗಕ್ಕೆಲ್ಲ ನೋವು ಬರುವುದೇ ಇಲ್ಲ. ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಮಾತ್ರ ನಿಮ್ಮ ಅಥವಾ ನಿಮ್ಮ ಪ್ರೀತಿಪಾತ್ರರ ಜೀವವನ್ನು ಕಾಪಾಡಿಕೊಳ್ಳಬಹುದಾಗಿದೆ.