Senna Tora Leaves: ಹಲವು ರೋಗಗಳಿಗೆ ರಾಮಬಾಣ ತಗತೆ ಸೊಪ್ಪು; ಇದರ ಆರೋಗ್ಯ ಪ್ರಯೋಜನಗಳು, ಪಲ್ಯ ಮಾಡುವ ವಿಧಾನ ತಿಳಿಯಿರಿ-health tips tagate leaves health benefits senna tora leaves benefits for rainy season senna tora palya ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Senna Tora Leaves: ಹಲವು ರೋಗಗಳಿಗೆ ರಾಮಬಾಣ ತಗತೆ ಸೊಪ್ಪು; ಇದರ ಆರೋಗ್ಯ ಪ್ರಯೋಜನಗಳು, ಪಲ್ಯ ಮಾಡುವ ವಿಧಾನ ತಿಳಿಯಿರಿ

Senna Tora Leaves: ಹಲವು ರೋಗಗಳಿಗೆ ರಾಮಬಾಣ ತಗತೆ ಸೊಪ್ಪು; ಇದರ ಆರೋಗ್ಯ ಪ್ರಯೋಜನಗಳು, ಪಲ್ಯ ಮಾಡುವ ವಿಧಾನ ತಿಳಿಯಿರಿ

ಮಳೆಗಾಲದಲ್ಲಿ ಬೆಳೆಯುವ ಕೆಲವು ಸೊಪ್ಪುಗಳು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ. ಇವುಗಳನ್ನು ಕಳೆ ಗಿಡಗಳು ಎಂದು ನಾವು ಕಡೆಗಣಿಸುತ್ತೇವೆ. ಅಂತಹ ಸೊಪ್ಪುಗಳಲ್ಲಿ ಚಗಟೆ ಸೊಪ್ಪು ಕೂಡ ಒಂದು. ಹಳ್ಳಿಗಳಲ್ಲಿ ಸಮೃದ್ಧವಾಗಿ ಬೆಳೆಯಲು ಈ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರ ಉಪಯೋಗಗಳು ಹಾಗೂ ಇದರ ಪಲ್ಯದ ರೆಸಿಪಿ ಇಲ್ಲಿದೆ.

ಹಲವು ರೋಗಗಳಿಗೆ ರಾಮಬಾಣ ತಗತೆ ಸೊಪ್ಪು; ಚಗಟೆ ಸೊಪ್ಪಿನ ಪಲ್ಯ ಮಾಡುವ ವಿಧಾನ, ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ
ಹಲವು ರೋಗಗಳಿಗೆ ರಾಮಬಾಣ ತಗತೆ ಸೊಪ್ಪು; ಚಗಟೆ ಸೊಪ್ಪಿನ ಪಲ್ಯ ಮಾಡುವ ವಿಧಾನ, ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ (PC: indiabiodiversity.org)

ಭಾರತದ ಬಹುತೇಕ ಕಡೆಗಳಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಬೆಳೆಯುವ ಸೊಪ್ಪು ಚಗಟೆ ಸೊಪ್ಪು. ಇದನ್ನು ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಚಗತೆ, ತಗತೆ, ತಗಟೆ ಎಂದೆಲ್ಲಾ ಹೆಸರಿನಿಂದ ಈ ಸೊಪ್ಪನ್ನು ಕರೆಯುತ್ತಾರೆ. ಸಾಮಾನ್ಯವಾಗಿ ತೋಟದ ಬದಿ, ಖಾಲಿ ಇರುವ ಜಾಗದಲ್ಲಿ ಬೆಳೆಯುವ ಈ ಗಿಡವು ಕಳೆ ಗಿಡಗಳ ಸಾಲಿಗೆ ಸೇರಿದೆ. ಆದರೆ ಇದು ಹಲವು ರೋಗಗಳಿಗೆ ರಾಮಬಾಣ ಎನ್ನುವುದು ಸುಳ್ಳಲ್ಲ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಹಸಿರು ಬಣ್ಣದ ಚಿಕ್ಕ ಚಿಕ್ಕ ಅಗಲ ಎಲೆಗಳು, ಹಳದಿ ಬಣ್ಣದ ಹೂವನ್ನು ಹೊಂದಿರುವ ಪುಟ್ಟ ಗಿಡ ಇದಾಗಿದೆ. ಇಂಗ್ಲಿಷ್‌ನಲ್ಲಿ ಇದನ್ನು ಸೆನ್ನಾ ತೊರಾ ಎಂದು ಕರೆಯುತ್ತಾರೆ. ಇದು ಆರೋಗ್ಯ ಉತ್ತಮ ಮಾತ್ರವಲ್ಲ, ಇದರಿಂದ ಸಾಕಷ್ಟು ಆಹಾರ ಖಾದ್ಯಗಳನ್ನೂ ತಯಾರಿಸಬಹುದು. ಆಯುರ್ವೇದದಲ್ಲಿ ಇದರ ಬಳಕೆಯ ಪ್ರಮಾಣ ಹೆಚ್ಚು. ಇದರ ಎಲೆ, ಹೂ, ಬೀಜಗಳು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ.

ತಗಟೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು

ಚರ್ಮದ ಸಮಸ್ಯೆಗಳು ನಿವಾರಣೆ: ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಚರ್ಮದ ಸಮಸ್ಯೆಗಳಿಗೆ ತಗಟೆ ಸೊಪ್ಪು ಮದ್ದು. ಎಕ್ಸಿಮಾ, ಎರಿಸಿಪೆಲಾಸ್‌ನಂತಹ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಚರ್ಮದ ಸೋಂಕುಗಳನ್ನು ಇದು ನಿವಾರಿಸುತ್ತದೆ. ಚರ್ಮದ ಸಮಸ್ಯೆಗಳಿಗೆ ತಗಟೆ ಸೊಪ್ಪಿನ ಎಲೆಯ ಪೇಸ್ಟ್‌ ಅಥವಾ ಬೇರಿನ ಪೇಸ್ಟ್‌ಗೆ ನಿಂಬೆರಸ ಸೇರಿಸಿ ಹಚ್ಚಬಹುದು.

ರಕ್ತಭೇದಿ ಹಾಗೂ ಅತಿಸರಾ: ರಕ್ತಭೇದಿ ಹಾಗೂ ಅತಿಸಾರದ ಸಮಸ್ಯೆ ಇರುವವರು ತಗಟೆ ಅಥವಾ ಚಗಟೆ ಸೊಪ್ಪಿನ ರಸಕ್ಕೆ ಉಪ್ಪು ಸೇರಿಸಿ ಕುಡಿಯಬೇಕು.

ತುರಿಕೆ: ಚರ್ಮದ ತುರಿಕೆ ಇದ್ದರೆ ಮಜ್ಜಿಗೆಯೊಂದಿಗೆ ಈ ಪೇಸ್ಟ್‌ ಅನ್ನು ರುಬ್ಬಿ ಅದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಬೇಕು ಅಥವಾ ತುರಿಕೆ ಇರುವ ಜಾಗವನ್ನು ತೊಳೆಯಲು ತಗಟೆ ಸೊಪ್ಪಿನ ಎಲೆಯ ಕಷಾಯ ಬಳಸಬಹುದು.

ರಿಂಗ್‌ ವರ್ಮ್‌: ಮಳೆಗಾಲದಲ್ಲಿ ಸೋಂಕಿನ ಕಾರಣದಿಂದ ರಿಂಗ್‌ವರ್ಮ್‌ ಸಮಸ್ಯೆ ಕಾಡುವುದು ಹೆಚ್ಚು, ಇದಕ್ಕಾಗಿ ನೀವು ಮಜ್ಜಿಗೆಯೊಂದಿಗೆ ತಗಟೆ ಬೀಜವನ್ನ ಪೇಸ್ಟ್‌ ಮಾಡಿ ಹಚ್ಚಬಹುದು.

ಜ್ವರ: ಜ್ವರದಿಂದ ಬಳಲುತ್ತಿರುವವರು ತಗಟೆ ಸೊಪ್ಪಿನ ಎಲೆಯಿಂದ ಕಷಾಯ ತಯಾರಿಸಿ ಕುಡಿದರೆ ಬೇಗನೆ ನಿವಾರಣೆಯಾಗುತ್ತದೆ. ಕೆಮ್ಮಿನ ನಿವಾರಣೆಗೂ ಇದೆ ಔಷಧಿ.

* ಮುಟ್ಟಿನ ಸಮಸ್ಯೆಗಳ ನಿವಾರಣೆಗೂ ತಗಟೆ ಗಿಡದ ಕಷಾಯ ಉತ್ತಮ.

ರಕ್ತ ಶುದ್ಧಿಕರಣ ಗುಣ: ತಗಟೆ ಸೊಪ್ಪಿನ ಒಣಬೇರು ರಕ್ತ ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಇದರ ಬೇರಿನ್ನು ಚೆನ್ನಾಗಿ ಪುಡಿ ಮಾಡಿ ಇದಕ್ಕೆ ತುಪ್ಪ ಹಾಗೂ ಸ್ವಲ್ಪ ಸಕ್ಕರೆ ಬೆರೆಸಿ ತಿನ್ನುವುದರಿಂದ ರಕ್ತಶುದ್ಧಿಯಾಗುತ್ತದೆ.

* ಲೈಂಗಿಕ ದೌರ್ಬಲ್ಯ ಹೊಂದಿರುವವರು ತಗಟೆ ಸೊಪ್ಪಿನ ಬೇರಿನ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ತಿನ್ನುವ ಅಥವಾ ಕಷಾಯದ ರೂಪದಲ್ಲಿ ಕುಡಿಯುವ ಅಭ್ಯಾಸ ಮಾಡಬೇಕು.

ತಗಟೆ ಸೊಪ್ಪಿನ ಪಲ್ಯ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ತಗಟೆ ಸೊಪ್ಪು – 2 ಕಪ್‌, ಈರುಳ್ಳಿ – 1, ಹಸಿಮೆಣಸು – 3, ಅರಿಸಿನ ಪುಡಿ – ಚಿಟಿಕೆ, ಸಾಸಿವೆ – 1ಚಮಚ, ಬೆಳ್ಳುಳ್ಳಿ– ಐದಾರು ಎಸಳು, ತೆಂಗಿನತುರಿ – ಮುಕ್ಕಾಲು ಕಪ್‌, ಅಡುಗೆ ಎಣ್ಣೆ – 2 ಚಮಚ, ಜೀರಿಗೆ – ಅರ್ಧ ಚಮಚ, ಉಪ್ಪು – ರುಚಿಗೆ, ನೀರು– ಅಗತ್ಯವಿರುವಷ್ಟು, ಖಾರದಪುಡಿ – ಅಗತ್ಯವಿದ್ದರೆ.

ತಯಾರಿಸುವ ವಿಧಾನ: ತಗಟೆ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಿ. ಎಲೆಯ ಎಲೆಗಳು ಹೆಚ್ಚು ರುಚಿಯಾಗಿರುತ್ತವೆ. ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ ಹಾಕಿ. ಅದಕ್ಕೆ ಹಸಿಮೆಣಸು ಸೇರಿಸಿ, ನಂತರ ಈರುಳ್ಳಿ ಸೇರಿಸಿ ಕೆಂಬಣ್ಣ ಬರುವವರಗೆ ಹುರಿದುಕೊಳ್ಳಿ. ಅದಕ್ಕೆ ಸೊಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಉಪ್ಪು ಹಾಗೂ ಅರಿಸಿನ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಅರ್ಧ ಬೆಂದ ನಂತರ ಖಾರದಪುಡಿ ಹಾಗೂ ತೆಂಗಿನತುರಿ ಹಾಕಿ ಮಿಶ್ರಣ ಮಾಡಿ. ನೀರು ಸೇರಿಸಿ ಬೇಯಲು ಬಿಡಿ. ಈಗ ನಿಮ್ಮ ಮುಂದೆ ರುಚಿಯಾದ ತಗಟೆ ಸೊಪ್ಪಿನ ಪಲ್ಯ ತಿನ್ನಲು ಸಿದ್ಧ.