Hypothyroidism: ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರುವ ಸಾಧ್ಯತೆ ಹೆಚ್ಚು
ಕನ್ನಡ ಸುದ್ದಿ  /  ಜೀವನಶೈಲಿ  /  Hypothyroidism: ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರುವ ಸಾಧ್ಯತೆ ಹೆಚ್ಚು

Hypothyroidism: ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರುವ ಸಾಧ್ಯತೆ ಹೆಚ್ಚು

Hypothyroidism Symptoms: ಥೈರಾಯ್ಡ್ ಸಮಸ್ಯೆಯು ಹೆಚ್ಚಿನ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಇದರಲ್ಲಿ ಎರಡು ವಿಧಗಳಿವೆ. ಅವುಗಳಲ್ಲಿ ಹೈಪೋಥೈರಾಯ್ಡಿಸಮ್ ಕೂಡಾ ಒಂದು. ಇದರ ರೋಗಲಕ್ಷಣಗಳು ಏನೇನು ಎಂಬುದನ್ನು ತಿಳಿಯಿರಿ.

ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರುವ ಸಾಧ್ಯತೆ ಹೆಚ್ಚು
ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರುವ ಸಾಧ್ಯತೆ ಹೆಚ್ಚು

ಆಧುನಿಕ ಜೀವನಶೈಲಿಯಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದರಲ್ಲಿ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚು. ಅದರಲ್ಲೂ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್‌ ಎಂಬ ಎರಡು ರೀತಿಯ ಥೈರಾಯ್ಡ್ ಸಮಸ್ಯೆಯು ಸ್ತ್ರೀಯರ ದೇಹಕ್ಕೆ ಹಲವು ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತವೆ. ಥೈರಾಯ್ಡ್ ಎಂಬುವುದು ಚಿಟ್ಟೆ ಆಕಾರದ ಗ್ರಂಥಿಯಾಗಿದೆ. ಇದು ನಮ್ಮ ದೇಹದ ಶಕ್ತಿಯ ಮಟ್ಟ, ಚಯಾಪಚಯ ಮತ್ತು ಸಾಮಾನ್ಯ ಆರೋಗ್ಯವನ್ನು ನಿಯಂತ್ರಿಸುತ್ತದೆ. ಹೀಗಾಗಿ ಥೈರಾಯ್ಡ್ ಸಮಸ್ಯೆ ಇದ್ದರೆ, ದೈನಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ.

ಥೈರಾಯ್ಡ್ ಸಮಸ್ಯೆಯು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಕಾಡುತ್ತಿದೆ. ಈ ಥೈರಾಯ್ಡ್ ಸಮಸ್ಯೆಗಳಲ್ಲಿ ಹೈಪೋಥೈರಾಯ್ಡಿಸಮ್ (Hypothyroidism) ಕೂಡಾ ಒಂದು. ಥೈರಾಯ್ಡ್ ಅಗತ್ಯಕ್ಕಿಂತ ಕಡಿಮೆ ಹಾರ್ಮೋನುಗಳನ್ನು ಉತ್ಪಾದಿಸಿದಾಗ ಉಂಟಾಗುವ ಆರೋಗ್ಯ ಸಮಸ್ಯೆ ಇದು. ಇದೇ ವೇಳೆ ಹೈಪರ್‌ಥೈರಾಯ್ಡಿಸಮ್‌ ಎಂದರೆ, ನಮ್ಮ ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಹಾರ್ಮೋನುಗಳ ಉತ್ಪಾದನೆಯಿಂದ ಸಮಸ್ಯೆಗಳು ಆರಂಭವಾಗುತ್ತದೆ. ಇವೆರಡಕ್ಕೂ ಪ್ರತಿದಿನ ಔಷಧಿಗಳ ಅಗತ್ಯವಿದೆ.

ಆಗಾಗ ಥೈರಾಯ್ಡ್‌ ಪರೀಕ್ಷೆ ಮಾಡಿಸಬೇಕು ಎನ್ನುವುದು ಇದೇ ಕಾರಣಕ್ಕೆ. ಕೆಲವೊಂದು ಲಕ್ಷಣಗಳು ಕಾಣಿಸಿಕೊಂಡರೆ, ಅಗತ್ಯವಾಗಿ ಅದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಾವು ಈಗ ಹೈಪೋಥೈರಾಯ್ಡಿಸಮ್‌ನ ಲಕ್ಷಣಗಳು ಯಾವುವು ಎಂಬುದನ್ನು ತಿಳಿಯೋಣ.

ಹೈಪೋಥೈರಾಯ್ಡಿಸಮ್ ಲಕ್ಷಣಗಳು

ಮಹಿಳೆಯರಿಗೆ ಋತುಸ್ರಾವ, ಗರ್ಭಾವಸ್ಥೆಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ ಸಾಮಾನ್ಯ. ಆ ಸಮಯದಲ್ಲಿ ಥೈರಾಯ್ಡ್ ಸಂಬಂಧಿಸಿದ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮಹಿಳೆಯರು ತಮ್ಮ ಥೈರಾಯ್ಡ್ ಆರೋಗ್ಯವನ್ನು ಆಗಾಗ್ಗೆ ಪರಿಶೀಲಿಸಬೇಕು. ಹೈಪೋಥೈರಾಯ್ಡಿಸಮ್ ಆರಂಭವಾದರೆ ಸೋಮಾರಿತನದ ಲಕ್ಷಣ ಹೆಚ್ಚುತ್ತದೆ. ದೇಹ ಮತ್ತು ಮನಸ್ಸು ದಣಿದ ಅನುಭವವಾಗುತ್ತದೆ. ಸಾಕಷ್ಟು ನಿದ್ರೆ ಮಾಡಿದ ನಂತರವೂ ದಣಿದಂತೆ ಭಾಸವಾಗುತ್ತದೆ. ಇದು ಅವರಿಗೆ ಆಲಸ್ಯವನ್ನುಂಟು ಮಾಡುತ್ತದೆ.

ದೀರ್ಘ ಋತುಚಕ್ರ

ಈ ಸಮಸ್ಯೆಯಿಂದ ಋತುಚಕ್ರವು ದೀರ್ಘವಾಗಿರುತ್ತದೆ. ಒಂದು ತಿಂಗಳಲ್ಲಿ ಋತುಚಕ್ರವು ಹೆಚ್ಚು ಸಮಯದವರೆಗೆ ಇರುತ್ತದೆ. ಥೈರಾಯ್ಡ್‌ನ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ, ಹಾರ್ಮೋನುಗಳ ಅಸಮತೋಲನವು ಈ ರೀತಿಯ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ತೂಕ ಹೆಚ್ಚಳವು ಹೈಪೋಥೈರಾಯ್ಡಿಸಮ್‌ನ ಸಾಮಾನ್ಯ ಲಕ್ಷಣ.

ತೂಕ ಹೆಚ್ಚಳ

ಥೈರಾಯ್ಡ್ ಗ್ರಂಥಿಯು ಚಯಾಪಚಯವನ್ನು ನಿಯಂತ್ರಿಸುತ್ತದೆ. ಹೀಗಾಗಿ ಕಡಿಮೆ ಹಾರ್ಮೋನುಗಳ ಉತ್ಪಾದನೆಯಾದಾಗ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ದೇಹದಲ್ಲಿ ಕೊಬ್ಬಿನ ಸಂಗ್ರಹವನ್ನು ಹೆಚ್ಚಿಸುತ್ತದೆ. ಹೀಗಾಗಿ ತೂಕ ಹೆಚ್ಚಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಕಡಿಮೆ ಉತ್ಪತ್ತಿಯಾದಾಗ, ಚರ್ಮ ಮತ್ತು ಕೂದಲು ಕೂಡಾ ಒಣಗುತ್ತದೆ. ಹುಬ್ಬುಗಳ ಬಳಿಯ ಕೂದಲು ಸಹ ಉದುರುತ್ತದೆ.

ಮಹಿಳೆಯರಲ್ಲಿ ಆಗಾಗ ಕೀಲು ನೋವು ಮತ್ತು ಸ್ನಾಯುಗಳಲ್ಲಿ ದೌರ್ಬಲ್ಯ ಕಂಡುಬಂದರೆ ಅದನ್ನು ಥೈರಾಯ್ಡ್ ಸಮಸ್ಯೆ ಎಂದು ಪರಿಗಣಿಸಬೇಕು. ಯಾವುದರ ಬಗ್ಗೆಯೂ ಗಮನ ಇಲ್ಲದಿರುವುದು, ಮಾನಸಿಕವಾಗಿ ಆಲಸ್ಯ, ಏನನ್ನೂ ಮಾಡಲು ಮನಸ್ಸು ಇಲ್ಲದಿರುವುದು, ಇವೆಲ್ಲವೂ ಥೈರಾಯ್ಡ್ ಗ್ರಂಥಿಯಲ್ಲಿನ ಸಮಸ್ಯೆಗಳ ಲಕ್ಷಣವಾಗಿದೆ. ಹೀಗಾಗಿ ಇಂಥಾ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಕಾಲಕಾಲಕ್ಕೆ ಥೈರಾಯ್ಡ್ ಪರೀಕ್ಷೆ ಮಾಡಿಸಬೇಕು.

Whats_app_banner