ಮುಟ್ಟಿನ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ: ಅದು ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಿನ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ: ಅದು ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲಿದೆ ಮಾಹಿತಿ

ಮುಟ್ಟಿನ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ: ಅದು ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲಿದೆ ಮಾಹಿತಿ

ಬಹುತೇಕ ಮಂದಿ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಬಿಸಿಲಿದ್ದಾಗ ಅಥವಾ ಏನಾದರೂ ಆಹಾರ ಸೇವಿಸಿದರೆ ತಂಪು ಪಾನೀಯಗಳನ್ನು ಸೇವಿಸುವ ಅಭ್ಯಾಸ ಹೆಚ್ಚಾಗಿದೆ. ಆದರೆ, ವಿಶೇಷವಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ. ಅದು ಯಾಕೆ ಅಂತೀರಾ ಇಲ್ಲಿದೆ ಓದಿ.

ಮಹಿಳೆಯರು ಮುಟ್ಟಿನ ಸಮಯದಲ್ಲಿ ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ.
ಮಹಿಳೆಯರು ಮುಟ್ಟಿನ ಸಮಯದಲ್ಲಿ ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ. (PC: Canva)

ಮುಟ್ಟಿನ ಸಮಯದಲ್ಲಿ ಕೆಲವು ಮಹಿಳೆಯರು ಹೊಟ್ಟೆ ನೋವು ಅಥವಾ ಸೆಳೆತವನ್ನು ಅನುಭವಿಸುವುದು ಸಾಮಾನ್ಯ. ಮುಟ್ಟಿನ ಸಮಯದಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕೆಲವೊಮ್ಮೆ ತೀವ್ರವಾಗಬಹುದು. ಹೀಗಾಗಿ ಋತುಚಕ್ರದ ಸಮಯದಲ್ಲಿ ಕೆಲವು ರೀತಿಯ ಆಹಾರಗಳನ್ನು ತ್ಯಜಿಸಬೇಕು. ಪಿರಿಯಡ್ಸ್ ಸಮಯದಲ್ಲಿ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮುಟ್ಟಿನ ಸೆಳೆತದಿಂದ ಕೊಂಚ ಉಪಶಮನ ಪಡೆಯಬಹುದು. ಆದರೆ, ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ತೀವ್ರವಾದ ಹೊಟ್ಟೆನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಅಂತಹ ಆಹಾರಗಳನ್ನು ತಿನ್ನುವುದರಿಂದ ತೀವ್ರವಾದ ಹೊಟ್ಟೆನೋವು ಮತ್ತು ಅತಿಸಾರ ಉಂಟಾಗುತ್ತದೆ. ವಿಶೇಷವಾಗಿ ಮಹಿಳೆಯರು ಋತುಚಕ್ರದ ಸಮಯದಲ್ಲಿ ಮಸಾಲೆಯುಕ್ತ ಆಹಾರ ಮತ್ತು ತಂಪು ಪಾನೀಯಗಳನ್ನು ಸೇವಿಸಬಾರದು. ಅಧ್ಯಯನವೊಂದರ ಪ್ರಕಾರ, ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆನೋವಿನ ಅಪಾಯ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ.

ಹೊಟ್ಟೆ ನೋವು ಏಕೆ ಸಂಭವಿಸುತ್ತದೆ?

ಮುಟ್ಟಿನ ಸಮಯದಲ್ಲಿನ ಹೊಟ್ಟೆನೋವನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಇದು ಹೊಟ್ಟೆಯಲ್ಲಿ ನೋವಿನ ಭಾವನೆಯನ್ನು ಉಂಟು ಮಾಡುತ್ತದೆ. ಋತುಚಕ್ರದ ಸಮಯದಲ್ಲಿ ಗರ್ಭಾಶಯವು ತನ್ನ ಒಳಪದರವನ್ನು ಚೆಲ್ಲುತ್ತದೆ. ಆ ಸಮಯದಲ್ಲಿ ಹೊಟ್ಟೆನೋವು ಬರುವ ಸಾಧ್ಯತೆ ಇರುತ್ತದೆ. ಇದು ಪ್ರತಿ ತಿಂಗಳು ಸಂಭವಿಸುವ ಸಾಮಾನ್ಯ ಪ್ರಕ್ರಿಯೆ.

ಹೊಟ್ಟೆ ನೋವಿನ ಜೊತೆಗೆ, ಕೆಲವು ಮಹಿಳೆಯರು ತೊಡೆಯ ಕೆಳಭಾಗದಲ್ಲಿ ನೋವು ಅನುಭವಿಸುತ್ತಾರೆ. ಇನ್ನು ಕೆಲವರಿಗೆ ವಾಕರಿಕೆ ಮತ್ತು ವಾಂತಿಯ ಭಾವನೆಯೂ ಇರುತ್ತದೆ. ಅತಿಸಾರ, ಹೊಟ್ಟೆ ಉಬ್ಬರ, ಆಯಾಸ, ತಲೆನೋವು, ತಲೆತಿರುಗುವಿಕೆ, ಕಿರಿಕಿರಿ, ನಿದ್ರಾಹೀನತೆ ಸಹ ಸಾಮಾನ್ಯ ಲಕ್ಷಣಗಳಾಗಿವೆ. ಪಿರಿಯಡ್ ಸಮಯದಲ್ಲಿ ಇಂತಹ ಸಮಸ್ಯೆಗಳಿದ್ದರೆ ನೀವು ತುಂಬಾ ಜಾಗರೂಕರಾಗಿರಬೇಕು.

ಮೇಲೆ ತಿಳಿಸಿರುವ ರೋಗಲಕ್ಷಣಗಳನ್ನು ಹೊಂದಿರುವ ಜನರು ಮುಟ್ಟಿನ ಸಮಯದಲ್ಲಿ ತಂಪು ಪಾನೀಯಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಹೊಸ ಅಧ್ಯಯನವೊಂದು ಕಂಡುಹಿಡಿದಿದೆ. ಚೀನಾದಲ್ಲಿ 1800 ಕಾಲೇಜು ವಿದ್ಯಾರ್ಥಿನಿಯರ ಮೇಲೆ ಅಧ್ಯಯನ ನಡೆಸಲಾಗಿದೆ. ಅವರಿಗೆ ಋತುಸ್ರಾವ ಮತ್ತು ತಂಪು ಪಾನೀಯಗಳಿಗೆ ಸಂಬಂಧಿಸಿದ ಪ್ರಶ್ನಾವಳಿಗಳನ್ನು ನೀಡಲಾಯಿತು. ಅವರಲ್ಲಿ ಅರ್ಧದಷ್ಟು ಮಂದಿ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ತಂಪು ಪಾನೀಯಗಳನ್ನು ಸೇವಿಸಿದವರಿಗೆ ಹೊಟ್ಟೆ ನೋವಿನ ಅಪಾಯವು ಶೇಕಡಾ 24ರಷ್ಟು ಹೆಚ್ಚು ಎಂದು ಕಂಡುಬಂದಿದೆ.

ತಂಪು ಪಾನೀಯಗಳು ಪಿರಿಯಡ್ ನೋವುಗಳಿಗೆ ಮುಖ್ಯ ಕಾರಣವಲ್ಲ. ಆದರೆ, ಪ್ರತಿ ತಿಂಗಳು ಮುಟ್ಟಿನ ಅವಧಿಯಲ್ಲಿ ನಿಯಮಿತವಾಗಿ ಹೊಟ್ಟೆ ನೋವು ಬರುತ್ತಿದ್ದರೆ ತಂಪು ಪಾನೀಯಗಳನ್ನು ಸಂಪೂರ್ಣ ತ್ಯಜಿಸಬೇಕು. ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಉತ್ತಮವಲ್ಲ. ತಂಪು ಪಾನೀಯಗಳಲ್ಲಿ ಬಹಳಷ್ಟು ಸಕ್ಕರೆ ಅಂಶ ಇರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ಇನ್ಸುಲಿನ್ ಮಟ್ಟವು ಹೆಚ್ಚಾಗುತ್ತದೆ. ಇದು ತೀವ್ರವಾದ ಹೊಟ್ಟೆ ನೋವನ್ನು ಉಂಟುಮಾಡುತ್ತದೆ.

ಅಲ್ಲದೆ, ತಂಪು ಪಾನೀಯಗಳಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ತಲೆನೋವಿನಿಂದ ತಾತ್ಕಾಲಿಕ ಉಪಶಮನವನ್ನು ನೀಡುತ್ತದೆ. ಆದರೆ, ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಕಾರಣವಾಗುತ್ತದೆ. ಇದು ದೇಹದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆ ನೋವು ಕೂಡ ಪ್ರಾರಂಭವಾಗುತ್ತದೆ. ತಂಪು ಪಾನೀಯಗಳಲ್ಲಿನ ಕಾರ್ಬೊನೇಷನ್ ಸಹ ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಇದು ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಹೊಟ್ಟೆಯ ಊತವು ಗರ್ಭಾಶಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಹೊಟ್ಟೆನೋವು ಮತ್ತಷ್ಟು ಹೆಚ್ಚಾಗುತ್ತದೆ.

ತಂಪು ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದು ಮೂತ್ರ ವಿಸರ್ಜನೆಯ ಮೇಲೆ ಪರಿಣಾಮ ಬೀರುತ್ತದೆ. ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಗರ್ಭಾಶಯದ ಸ್ನಾಯುಗಳಿಗೆ ನೋವು ಉಂಟುಮಾಡುತ್ತದೆ. ಹಾಗಾಗಿ ತಂಪು ಪಾನೀಯಗಳನ್ನು ಆದಷ್ಟು ತ್ಯಜಿಸುವುದು ಉತ್ತಮ.