Thyroid Problem: ಥೈರಾಯಿಡ್ ಸಮಸ್ಯೆ ಇರುವವರು ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು; ಇಲ್ಲಿದೆ ಸಂಪೂರ್ಣ ವಿವರ
ಇತ್ತೀಚೆಗೆ ಥೈರಾಯಿಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾದರೆ ಥೈರಾಯಿಡ್ ಇರುವವರು ಯಾವ ಆಹಾರ ಸೇವಿಸಬೇಕು, ಯಾವ ಆಹಾರವನ್ನು ತಿನ್ನಬಾರದು ನೋಡಿ.

ನಮ್ಮ ದೇಹ ಆರೋಗ್ಯವಾಗಿ, ಸಮತೋಲನದಲ್ಲಿರಲು ಥೈರಾಯಿಡ್ ಗ್ರಂಥಿಯು ಆರೋಗ್ಯದಿಂದಿರಬೇಕು. ಥೈರಾಯ್ಡ್ ಗ್ರಂಥಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಶಕ್ತಿಯ ಮಟ್ಟವು ಸ್ಥಿರವಾಗಿರುತ್ತದೆ. ಥೈರಾಯಿಡ್ ಎಂದರೆ ನಮ್ಮ ಕುತ್ತಿಗೆಯ ಭಾಗದಲ್ಲಿರುವ ಒಂದು ಚಿಟ್ಟೆಯಾಕಾರದ ಗ್ರಂಥಿ. ಈ ಗ್ರಂಥಿಯು ದೇಹದ ವಿವಿಧ ಕಾರ್ಯಗಳಿಗೆ ನೆರವಾಗುತ್ತದೆ. ಥೈರಾಯಿಡ್ ಹಾರ್ಮೋನ್ ಸ್ರವಿಸುವಿಕೆಯಲ್ಲಿ ವ್ಯತ್ಯಾಸವಾದರೆ ಥೈರಾಯಿಡ್ ಸಮಸ್ಯೆ ಉಂಟಾಗುತ್ತದೆ. ಥೈರಾಯಿಡ್‌ನಲ್ಲಿ ಎರಡು ವಿಧಗಳಿವೆ. ಒಂದು ಹೈಪೋಥೈರಾಯಿಡಿಸಮ್, ಇನ್ನೊಂದು ಹೈಪರ್ ಥೈರಾಯಿಡಿಸಮ್.
ಹೈಪೋಥೈರಾಯ್ಡಿಸಮ್
ಥೈರಾಯ್ಡ್ ಗ್ರಂಥಿಯು ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು (T3, T4) ಉತ್ಪಾದಿಸಲು ಸಾಧ್ಯವಾಗದಿದ್ದಾಗ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ. ಪರಿಣಾಮವಾಗಿ, ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಬಹುತೇಕ ಎಲ್ಲಾ ದೇಹದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಲಕ್ಷಣಗಳು ದೌರ್ಬಲ್ಯ, ಆಯಾಸ, ಆಲಸ್ಯ, ದಣಿದ ಭಾವನೆ, ತೂಕ ಹೆಚ್ಚಾಗುವುದು, ಅಸಹನೆ, ಮನಸ್ಥಿತಿಯಲ್ಲಿ ಏರುಪೇರುಗಳು, ಖಿನ್ನತೆ ಮತ್ತು ಮುಟ್ಟಿನ ವ್ಯತ್ಯಾಸ ಮುಂತಾದ ಸಮಸ್ಯೆಗಳು ಎದುರಾಗಬಹುದು.
ಹೈಪರ್ ಥೈರಾಯ್ಡಿಸಮ್
ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ಹಾರ್ಮೋನುಗಳಾದ T3 ಮತ್ತು T4 ಗಳನ್ನು ಹೆಚ್ಚು ಉತ್ಪಾದಿಸಿದಾಗ ಹೈಪರ್ ಥೈರಾಯಡಿಸಮ್ ಸಂಭವಿಸುತ್ತದೆ. ಹೃದಯ ಬಡಿತದ ಏರಿಳಿತ, ತೂಕ ನಷ್ಟ, ಆತಂಕ, ಚಡಪಡಿಕೆ, ಅತಿಯಾಗಿ ಬೆವರುವುದು, ದೌರ್ಬಲ್ಯ ಮತ್ತು ಸ್ನಾಯುಗಳ ಸೆಳೆತದಂತಹ ಲಕ್ಷಣಗಳು ಇದರಲ್ಲಿ ಕಂಡು ಬರುತ್ತದೆ.
ಥೈರಾಯಿಡ್ ಇರುವವರು ಏನು ತಿನ್ನಬೇಕು
ಥೈರಾಯ್ಡ್ ಸಮಸ್ಯೆ ಇದ್ದಾಗ ಕೆಲವು ನಿರ್ದಿಷ್ಟ ರೀತಿಯ ಆಹಾರಗಳನ್ನು ಸೇವಿಸಬೇಕು. ಚಿಪ್ಪುಮೀನುಗಳು, ಮೀನು, ಸಿಗಡಿ, ಹಾಲು, ಮೊಸರು ಮತ್ತು ಮೊಟ್ಟೆಯ ಹಳದಿ ಭಾಗ ಮುಂತಾದವನ್ನು ನಿಯಮಿತವಾಗಿ ಸೇವಿಸಬೇಕು. ಸಾಕಷ್ಟು ಧಾನ್ಯಗಳು, ಕೋಳಿ, ಮೊಟ್ಟೆ, ಸಾಲ್ಮನ್, ಸಾರ್ಡೀನ್, ಟ್ಯೂನದಂತಹ ಮೀನುಗಳನ್ನು ತಿನ್ನಬೇಕು. ವಾಲ್‌ನಟ್, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳಂತಹವುಗಳನ್ನು ಸಹ ತಿನ್ನಬೇಕು. ಕಂದು ಅಕ್ಕಿ, ಕ್ವಿನೋವಾ, ಓಟ್ಸ್, ಸಿಹಿ ಗೆಣಸು, ಪಾಲಕ್, ಕ್ಯಾರೆಟ್, ಕಿತ್ತಳೆ, ಸೇಬು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಬೀನ್‌ನಂತಹ ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ನಾರಿನಾಂಶ ದೊರೆಯುತ್ತದೆ.
ಥೈರಾಯಿಡ್ ಇರುವವರು ಏನು ತಿನ್ನಬಾರದು?
ಕೆಲವು ಆಹಾರಗಳು ಗಾಯ್ಟ್ರೋಜೆನ್ ಎಂಬ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಥೈರಾಯಿಡ್ ಗ್ರಂಥಿಯ ಹಾರ್ಮೋನುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತವೆ. ತೋಫು, ಸೋಯಾ ಹಾಲು ಮತ್ತು ಸೋಯಾ ಬೀನ್ಸ್ ಸೇರಿದಂತೆ ಹೆಚ್ಚು ಸೋಯಾ ಉತ್ಪನ್ನಗಳನ್ನು ಸೇವಿಸಬೇಡಿ. ಹೂಕೋಸು, ಬ್ರೊಕೊಲಿ, ಎಲೆಕೋಸು, ಪಾಲಕ್ ಮತ್ತು ಕೇಲ್‌ನಂತಹ ಕ್ರೂಸಿಫೆರಸ್ ತರಕಾರಿಗಳನ್ನು ತಿನ್ನಬಾರದು. ಸಕ್ಕರೆ ಅಂಶ ಅತಿಯಾಗಿರುವ ಪಾನೀಯಗಳು, ತಿಂಡಿಗಳು, ಕುಕೀಸ್, ಚಿಪ್ಸ್, ಪೇಸ್ಟ್ರಿಗಳು, ಚಾಕೊಲೇಟ್‌ಗಳು, ಸೋಡಾವನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು. ಕೆಫೀನ್ ಅಧಿಕವಾಗಿರುವ ಆಹಾರಗಳನ್ನು ಸಹ ಕಡಿಮೆ ಮಾಡಬೇಕು. ಇವು ಆತಂಕ, ಹೃದಯ ಬಡಿತ ಮತ್ತು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
