Thyroid Cancer: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ಥೈರಾಯಿಡ್ ಕ್ಯಾನ್ಸರ್; ಕಾರಣ, ರೋಗಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ನಿಮಗೂ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Thyroid Cancer: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ಥೈರಾಯಿಡ್ ಕ್ಯಾನ್ಸರ್; ಕಾರಣ, ರೋಗಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ನಿಮಗೂ ತಿಳಿದಿರಲಿ

Thyroid Cancer: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ಥೈರಾಯಿಡ್ ಕ್ಯಾನ್ಸರ್; ಕಾರಣ, ರೋಗಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ನಿಮಗೂ ತಿಳಿದಿರಲಿ

ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಹಲವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ. ಲಕ್ಷಾಂತರ ಜನರು ಥೈರಾಯಿಡ್ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಥೈರಾಯಿಡ್ ಕ್ಯಾನ್ಸರ್ ಪ್ರಮಾಣ ಕೂಡ ಹೆಚ್ಚುತ್ತಿದೆ. ಇದಕ್ಕೆ ಕಾರಣ, ರೋಗಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ.

ಥೈರಾಯಿಡ್ ಕ್ಯಾನ್ಸರ್
ಥೈರಾಯಿಡ್ ಕ್ಯಾನ್ಸರ್

ಭಾರತದಲ್ಲಿ ಅಂದಾಜು 42 ಮಿಲಿಯನ್ ಜನರು ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಆಟೊ ಇಮ್ಯೂನ್‌ (ಸ್ವಯಂ ನಿರೋಧಕ) ಸ್ಥಿತಿಯು ಬಹಳ ಸಹಜ ಸಮಸ್ಯೆ ಎಂಬಂತೆ ಬೆಳೆಯುತ್ತಿದೆ. ಸರಿಯಾದ ಆಹಾರ ಸೇವಿಸದೇ ಇರುವುದು ಅಯೋಡಿನ್ ಕೊರತೆಗೆ ಕಾರಣವಾಗುತ್ತದೆ, ಇದು ಥೈರಾಯಿಡ್ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತದೆ. ಇದು ಗಾಯಿಟರ್ ಮತ್ತು ಹೈಪೋಥೈರಾಯ್ಡಿಸಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುತ್ತದೆ. ಇದೊಂದು ಅಂತಃಸ್ರಾವಕ ಅಸ್ವಸ್ಥತೆಯೂ ಆಗಿದೆ.

ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರ ನಿರ್ದೇಶಕ ಡಾ. ಮಂಜುನಾಥ ಮಾಳಿಗೆ ಅವರು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ‘ಥೈರಾಕ್ಸಿನ್ (T4) ಮತ್ತು ಟ್ರಯೋಡೋಥೈರೋನಿನ್ (T3) ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯಾದ ಥೈರಾಯಿಡ್‌ನಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ. ಈ ಹಾರ್ಮೋನುಗಳು ಜೀರ್ಣಕ್ರಿಯೆ, ಮನಸ್ಥಿತಿ ಮತ್ತು ಉತ್ಸಾಹ, ದೇಹದ ಉಷ್ಣತೆ, ನಾಡಿ ಮತ್ತು ಹೃದಯ ಬಡಿತ ಮತ್ತು ಚಯಾಪಚಯ ಕ್ರಿಯೆಯಂತಹ ಅನೇಕ ಜೈವಿಕ ಪ್ರಕ್ರಿಯೆಗಳಿಗೆ ನಿರ್ಣಾಯಕವಾಗಿವೆ. ಥೈರಾಯಿಡ್ ಸಮಸ್ಯೆ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಕ್ಯಾನ್ಸರ್ ಹಾಗೂ ಥೈರಾಯಿಡ್ ಗಂಟಿನ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾದರೆ ಈ ಎಲ್ಲ ಸಮಸ್ಯೆಗಳು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ನೋಡೋಣ.

ಸಂಶೋಧನೆಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಥೈರಾಯಿಡ್ ಕ್ಯಾನ್ಸರ್ ಪ್ರಕರಣದಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ಆದರೆ ಸಾವಿನ ಪ್ರಮಾಣ ಕಡಿಮೆ. ಡಾ. ಮಂಜುನಾಥ ಮಾಳಿಗೆ ಅವರು ಹೇಳುವಂತೆ ‘ಭಾರತದಲ್ಲಿ, ಪ್ರತಿ ಲಕ್ಷ ಜನರಲ್ಲಿ 5,4 ಥೈರಾಯಿಡ್‌ ಕ್ಯಾನ್ಸರ್ ಪ್ರಕರಣಗಳಿವೆ. ಇವು ಥೈರಾಯಿಡ್‌ ಗ್ರಂಥಿಗಳ ಮೇಲಿನ ಸಣ್ಣ ಗಡ್ಡೆಗಳ ಬೆಳವಣಿಗೆಗಳಾಗಿವೆ. ಥೈರಾಯಿಡ್‌ ಗಡ್ಡೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ: ಒಂಟಿ (ಒಂದೇ ಗಡ್ಡೆ), ಬಹು (ಒಂದಕ್ಕಿಂತ ಹೆಚ್ಚು ಗಡ್ಡೆ), ಸಿಸ್ಟಿಕ್ (ದ್ರವ ತುಂಬಿದ) ಮತ್ತು ಘನ.

ಥೈರಾಯಿಡ್‌ ಗಂಟುಗಳಿಗೆ ಕಾರಣ

‘ಥೈರಾಯಿಡ್‌ ಗಂಟುಗಳ ಅಪಾಯವನ್ನು ಹೆಚ್ಚಿಸುವ ಅಂಶಗಳು ಈ ಕೆಳಗಿನಂತಿವೆ: ತಲೆ ಮತ್ತು ಕುತ್ತಿಗೆಯ ವಿಕಿರಣದ ಇತಿಹಾಸ, ಥೈರಾಯಿಡ್‌ ಗಂಟುಗಳು ಅಥವಾ ಥೈರಾಯಿಡ್‌ ಕ್ಯಾನ್ಸರ್‌ನಂತಹ ಅನುವಂಶಿಕ ಪ್ರವೃತ್ತಿ, ವಯಸ್ಸಾಗುವುದು, ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದಾಗುವ ರಕ್ತಹೀನತೆ, ಧೂಮಪಾನ, ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್, ಆಲ್ಕೋಹಾಲ್ ಬಳಕೆ, ಇನ್ಸುಲಿನ್ ತರಹದ ಬೆಳವಣಿಗೆಯ ಹಾರ್ಮೋನ್‌ನ ಮಟ್ಟದಲ್ಲಿ ಹೆಚ್ಚಳವಾಗುವುದು, ಗರ್ಭಾಶಯದ ಫೈಬ್ರಾಯ್ಡ್‌ಗಳು. ಥೈರಾಯಿಡ್‌ ಗಂಟುಗಳ ಬಗ್ಗೆ ಸಾಮಾನ್ಯವಾಗಿ ಹೆದರುವ ಅವಶ್ಯಕತೆ ಇರುವುದಿಲ್ಲ. ಥೈರಾಯಿಡ್‌ ಕ್ಯಾನ್ಸರ್ ಕೆಲವು ಥೈರಾಯಿಡ್‌ ಗಂಟುಗಳಲ್ಲಿ ಕಂಡುಬರುತ್ತದೆ, ಆದಾಗ್ಯೂ ಹೆಚ್ಚಿನ ಥೈರಾಯಿಡ್‌ ಗಂಟುಗಳು ಸೌಮ್ಯವಾಗಿರುತ್ತವೆ‘ ಎನ್ನುತ್ತಾರೆ ಡಾ. ಮಂಜುನಾಥ್‌.

ಕೆಲವೊಮ್ಮೆ ಥೈರಾಯಿಡ್ ಗಂಟುಗಳು ಕಾರಣವಿಲ್ಲದೇ ಬೆಳೆಯುತ್ತವೆ. ಕೆಲವೊಮ್ಮೆ ಈ ಕಾರಣಗಳಿಂದಾಗಿ ಥೈರಾಯಿಡ್ ಗಂಟುಗಳು ಬೆಳೆಯಬಹುದು.

  • ಒಂದು ಅಥವಾ ಹೆಚ್ಚಿನ ಥೈರಾಯ್ಡ್ ಅಂಗಾಂಶದ ಅತಿಯಾದ ಬೆಳವಣಿಗೆಯನ್ನು ಕೊಲಾಯ್ಡ್ ಗಂಟುಗಳು ಎಂದು ಕರೆಯಲಾಗುತ್ತದೆ. ಈ ಬೆಳವಣಿಗೆಗಳು ಹಾನಿಕರವಲ್ಲ ಮತ್ತು ಮಾರಕವಲ್ಲ. ಅವು ದೊಡ್ಡದಾಗಬಹುದಾದರೂ ಅವು ನಿಮ್ಮ ಥೈರಾಯ್ಡ್ ಗ್ರಂಥಿಯನ್ನು ಮೀರಿ ಹರಡುವುದಿಲ್ಲ. ಈ ಥೈರಾಯ್ಡ್ ಗಂಟುಗಳು ಹೆಚ್ಚು ಪ್ರಚಲಿತವಾಗಿವೆ.
  • ಭಾಗಶಃ ಘನವಾಗಿರುವ ಮತ್ತು ಭಾಗಶಃ ದ್ರವದಿಂದ ತುಂಬಿರುವ ಬೆಳವಣಿಗೆಗಳನ್ನು ಥೈರಾಯ್ಡ್ ಚೀಲಗಳು ಎಂದು ಕರೆಯಲಾಗುತ್ತದೆ. ಸಿಸ್ಟಿಕ್ ಗಂಟುಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ.
  • ನಿಮ್ಮ ಥೈರಾಯ್ಡ್ ಗ್ರಂಥಿಯ ನಿರಂತರ ಊತ (ಉರಿಯೂತ) ಉರಿಯೂತದ ಗಂಟುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬೆಳವಣಿಗೆಗಳು ನೋವನ್ನು ಉಂಟು ಮಾಡದೇ ಇರಬಹುದು.
  • ವಿಸ್ತರಿಸಿದ ಥೈರಾಯ್ಡ್ ಅಥವಾ ಮಲ್ಟಿನೊಡ್ಯುಲರ್ ಗಾಯಿಟರ್ ಹಲವಾರು ಗಂಟುಗಳಿಂದ ಕೂಡಿದೆ, ಅವುಗಳಲ್ಲಿ ಹೆಚ್ಚಿನವು ಹಾನಿಕರವಲ್ಲ.
  • ಹೈಪರ್ ಥೈರಾಯ್ಡಿಸಮ್‌ನ ಬೆಳವಣಿಗೆಯು ಈ ಗಂಟುಗಳಿಂದ ಉತ್ಪತ್ತಿಯಾಗುವ ಹೆಚ್ಚುವರಿ ಥೈರಾಯ್ಡ್ ಹಾರ್ಮೋನ್‌ನಿಂದ ಉಂಟಾಗಬಹುದು.
  • ಥೈರಾಯ್ಡ್ ಕ್ಯಾನ್ಸರ್ ಶೇ 6.5 ಕ್ಕಿಂತ ಕಡಿಮೆ ಥೈರಾಯ್ಡ್ ಗಂಟುಗಳಲ್ಲಿ ಕಂಡುಬರುತ್ತದೆ, ಇದು ಅತ್ಯಂತ ಅಸಾಮಾನ್ಯವಾಗಿಸುತ್ತದೆ.

    ಇದನ್ನೂ ಓದಿ: ಥೈರಾಯಿಡ್‌ ಸಮಸ್ಯೆಯಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಕಾಳಿನ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು

ಥೈರಾಯಿಡ್‌ ಗಂಟುಗಳ ಲಕ್ಷಣಗಳು

ಥೈರಾಯಿಡ್‌ ಗಂಟುಗಳು ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದಾಗ್ಯೂ, ನಿಮ್ಮಲ್ಲಿ ಅವು ಬಹಳಷ್ಟು ಇದ್ದರೆ ಅಥವಾ ಅವು ದೊಡ್ಡದಾಗಿದ್ದರೆ ನೀವು ಅವುಗಳನ್ನು ಗಮನಿಸಲು ಸಾಧ್ಯವಾಗಬಹುದು. ಅಪರೂಪವಾಗಿ, ಗಂಟುಗಳು ವಿಸ್ತರಿಸಿ ಮಾತನಾಡಲು ತೊಂದರೆ ಆಗುವುದು ಅಥವಾ ಧ್ವನಿಯಲ್ಲಿ ಒರಟುತನ, ನುಂಗಲು ಅಥವಾ ಉಸಿರಾಡಲು ತೊಂದರೆ, ಕುತ್ತಿಗೆ ನೋವು ಮತ್ತು ಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆಯಾದ ಗಾಯಿಟರ್ ಅನ್ನು ಉಂಟುಮಾಡಬಹುದು.

ರೋಗ ಗುರುತಿಸುವುದು ಹೇಗೆ?

‘ವೈದ್ಯರು ದೈಹಿಕ ಪರೀಕ್ಷೆಯ ಸಮಯದಲ್ಲಿ ಥೈರಾಯ್ಡ್‌ನಲ್ಲಿ ಯಾವುದೇ ಗೆಡ್ಡೆಗಳು ಅಥವಾ ವೈಪರೀತ್ಯಗಳು ಕಂಡುಬಂದರೆ ರೋಗನಿರ್ಣಯ ಮಾಡಲು ಅಲ್ಟ್ರಾಸೌಂಡ್ ಅನ್ನು ಶಿಫಾರಸು ಮಾಡಬಹುದು. ಗಂಟು ಘನವಾಗಿದೆಯೇ ಅಥವಾ ದ್ರವದಿಂದ ತುಂಬಿದೆಯೇ ಎಂದು ಕಂಡುಹಿಡಿಯಲು ಈ ಇಮೇಜಿಂಗ್ ತಂತ್ರವು ಸಹಾಯ ಮಾಡುತ್ತದೆ. ರಕ್ತ ಪರೀಕ್ಷೆಯ ಮೂಲಕ ಥೈರಾಯ್ಡ್ ಸ್ಥಿತಿಯನ್ನು ನಿರ್ಧರಿಸಬಹುದು‘ ಎಂದು ಹೇಳುತ್ತಾರೆ ಡಾ. ಮಂಜುನಾಥ್ ಮಾಳಿಗೆ.

ತಡೆಗಟ್ಟುವಿಕೆ ಮತ್ತು ನಿಯಮಿತ ತಪಾಸಣೆ

‘ಥೈರಾಯಿಡ್‌ ಗಂಟುಗಳು ಮತ್ತು ಕ್ಯಾನ್ಸರ್ ಅನ್ನು ಯಾವಾಗಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಅಯೋಡಿನ್ ಅಧಿಕವಾಗಿರುವ ಆಹಾರವನ್ನು ಸೇವಿಸುವ ಮೂಲಕ, ಅನಗತ್ಯ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುವ ಮೂಲಕ ಮತ್ತು ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸೆಗೆ ಮಾಡಬಹುದು. ಬಿಳಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಅಯೋಡಿನ್ ಕೊರತೆಯಿರುವ ಗುಲಾಬಿ ಮುಂತಾದ ಪರ್ಯಾಯ ಲವಣಗಳಿಗೆ ಆದ್ಯತೆ ನೀಡುವುದು ಥೈರಾಯ್ಡ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗುವ ಅಂಶಗಳಲ್ಲಿ ಸೇರಿವೆ" ಎಂದು ಡಾ. ಮಂಜುನಾಥ ಮಾಳಿಗೆ ಹೇಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner