Motherhood: ತಾಯ್ತನದ ವೇಳೆ ಎದುರಾಗುವ ಪ್ರಮುಖ 5 ತಪ್ಪು ಕಲ್ಪನೆಗಳಿವು; ಮಹಿಳೆಯರು ತಿಳಿದಿರಬೇಕಾದ ವಿಚಾರಗಳು ಇಲ್ಲಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Motherhood: ತಾಯ್ತನದ ವೇಳೆ ಎದುರಾಗುವ ಪ್ರಮುಖ 5 ತಪ್ಪು ಕಲ್ಪನೆಗಳಿವು; ಮಹಿಳೆಯರು ತಿಳಿದಿರಬೇಕಾದ ವಿಚಾರಗಳು ಇಲ್ಲಿವೆ

Motherhood: ತಾಯ್ತನದ ವೇಳೆ ಎದುರಾಗುವ ಪ್ರಮುಖ 5 ತಪ್ಪು ಕಲ್ಪನೆಗಳಿವು; ಮಹಿಳೆಯರು ತಿಳಿದಿರಬೇಕಾದ ವಿಚಾರಗಳು ಇಲ್ಲಿವೆ

ಪ್ರತಿಯೊಬ್ಬ ಮಹಿಳೆಗೆ ತಾಯ್ತನ ಎಂಬುದು ತುಂಬಾ ಮಹತ್ವದ ಘಟ್ಟವಾಗಿರುತ್ತದೆ. ಇಂದಿಗೂ ಕೆಲವರಲ್ಲಿ ಇದರ ಬಗ್ಗೆ ತಪ್ಪು ಕಲ್ಪನೆಗಳಿವೆ. ಮಹಿಳೆಯರು ತಿಳಿದಿರಬೇಕಾದ ವಿಚಾರಗಳ ಕುರಿತು ಸ್ತ್ರೀರೋಗ ತಜ್ಞರಾದ ಡಾ ಶ್ರೀಜಾ ರಾಣಿ ಮಾಹಿತಿ ನೀಡಿದ್ದಾರೆ.

ತಾಯ್ತನದ ವೇಳೆ ಎದುರಾಗುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ (Pixabay)
ತಾಯ್ತನದ ವೇಳೆ ಎದುರಾಗುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ (Pixabay)

ಹೆಣ್ಣಿಗೆ ತಾಯ್ತನ ಎಂದರೆ ಎಷ್ಟೋ ಜನ್ಮದ ಪುಣ್ಯದ ಫಲ ಎಂಬ ನಂಬಿಕೆ ಗಾಢವಾಗಿದೆ. ಈ ತಾಯ್ತನದ ಅವಧಿಯಲ್ಲಿ ಆರೋಗ್ಯದ ಬಗೆಗೆ ಕಾಳಜಿ ವಹಿಸುವುದು ತುಂಬಾನೆ ಮುಖ್ಯ. ಈ ಹಿನ್ನೆಲೆಯಲ್ಲಿ ಜನರಲ್ಲಿ ತಾಯ್ತನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಎಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಧಾರಣೆ, ಹೆರಿಗೆ ಮತ್ತು ತಾಯಿಯ ಯೋಗಕ್ಷೇಮದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕುರಿತು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ ಶ್ರೀಜಾ ರಾಣಿ ವಿ ಆರ್ ವಿವರಿಸಿದ್ದಾರೆ.

ತಪ್ಪು ಕಲ್ಪನೆ 1 - ಗರ್ಭಿಣಿಯರು ವ್ಯಾಯಾಮ ಮಾಡಬಾರದು

ಸತ್ಯಾಂಶ: "ಗರ್ಭಾವಸ್ಥೆಯಲ್ಲಿ ನೀವು ಹೆಚ್ಚು ಸಕ್ರಿಯ ಮತ್ತು ಫಿಟ್ ಆಗಿದ್ದರೆ, ಬದಲಾವಣೆಗೊಳ್ಳುತ್ತಿರುವ ನಿಮ್ಮ ದೇಹದ ಆಕಾರ ಮತ್ತು ತೂಕ ಹೆಚ್ಚಳಕ್ಕೆ ಹೊಂದಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ನಿತ್ಯ ವ್ಯಾಯಾಮ ಮಾಡುವುದರಿಂದ ನಿಮಗೆ ಹೆರಿಗೆ ಸಮಯದಲ್ಲೂ ಸಹಾಯವಾಗುತ್ತದೆ. ಗರ್ಭಿಣಿಯರು ಪ್ರತಿದಿನ ಸಾಧ್ಯವಾದಷ್ಟು ನಿಮ್ಮ ಸಾಮಾನ್ಯ ದೈನಂದಿನ ದೈಹಿಕ ಚಟುವಟಿಕೆ ಅಥವಾ ನಿರ್ದಿಷ್ಟ ವ್ಯಾಯಾಮವನ್ನು ಮಾಡಬಹುದು. ಇದರಿಂದ ನಿಮ್ಮ ಗರ್ಭದಲ್ಲಿರುವ ಮಗುವಿನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವಾಗುವುದಿಲ್ಲ. ಈ ರೀತಿ ಸಕ್ರಿಯರಾಗಿರುವ ಮಹಿಳೆಯರು ಗರ್ಭಧಾರಣೆ ನಂತರ ಮತ್ತು ಹೆರಿಗೆ ಸಮಯದಲ್ಲಿ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಕಡಿಮೆ ಇದೆ ಎಂಬುದಕ್ಕೆ ಪುರಾವೆಗಳಿವೆ" ಎನ್ನುತ್ತಾರೆ ಡಾ.ಶ್ರೀಜಾ.

ತಪ್ಪು ಕಲ್ಪನೆ 2 - ಗರ್ಭದಲ್ಲಿರುವ ಶಿಶು ಗಂಡು ಅಥವಾ ಹೆಣ್ಣು ಎಂದು ಚಟುವಟಿಕೆಗಳ ಮೂಲಕ ತಿಳಿಯಬಹುದು

ಸತ್ಯಾಂಶ: "ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಸ್ಥಾನ, ಮಗು ಯಾವ ದಿಕ್ಕಿಗೆ ತಿರುಗುತ್ತದೆ ಅಥವಾ ಮಗು ಎಷ್ಟು ಸಕ್ರಿಯವಾಗಿದೆ ಎಂದು ಚಟುವಟಿಕೆಗಳ ಮೂಲಕ ಮಗು ಗಂಡು ಅಥವಾ ಹೆಣ್ಣು ಎಂದು ಪರಿಶೀಲಿಸಲು ಮಾರ್ಗಗಳಿವೆ ಎಂದು ಹೇಳುತ್ತಾರೆ. ಆದರೆ ಇದ್ಯಾವುದೂ ಸಾಧ್ಯವಿಲ್ಲ, ಇವೆಲ್ಲ ಕೇವಲ ನಂಬಿಕೆಗಳಷ್ಟೇ ಎನ್ನುತ್ತಾರೆ ವೈದ್ಯೆ ಶ್ರೀಜಾ.

ತಪ್ಪು ಕಲ್ಪನೆ 3: ಗರ್ಭಾವಸ್ಥೆಯಲ್ಲಿ ಮಾಂಸವನ್ನು ತಿನ್ನುವಂತಿಲ್ಲ

ಸತ್ಯಾಂಶ: "ಗರ್ಭಿಣಿಯರು ಮಾಂಸವನ್ನು ಸೇವಿಸಬಹುದು, ಆದರೆ ಮಾಂಸವನ್ನು ಯಾವುದೇ ರಕ್ತದ ಅಂಶವಿಲ್ಲದೆ ಸ್ವಚ್ಚಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ. ಅದಾಗ್ಯೂ ಪ್ಯಾಕ್ ಮಾಡಲಾದ ಮಾಂಸ ಆಹಾರಗಳ ಸೇವನೆ ಕುರಿತಾಗಿ ವೈದ್ಯರು ಎಚ್ಚರಿಸುತ್ತಾರೆ. ಮುಖ್ಯವಾಗಿ ಹಸಿಯಾದ ಅಥವಾ ಅರ್ಧ ಬೇಯಿಸಿದ ಮಾಂಸದ ಸೇವನೆ, ಸಸ್ಯಹಾರ ಒಳಗೊಂಡಂತೆ ಎಲ್ಲಾ ರೀತಿಯ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸುವುದು ಒಳಿತು. ಈ ರೀತಿ ಹಸಿಯಾದ ಅಥವಾ ಅರ್ಧ ಬೇಯಿಸಿದ ಮಾಂಸ ಸೇವನೆಯಿಂದ ಟಾಕ್ಸೊಪ್ಲಾಸ್ಮಾಸಿಸ್(toxoplasmosis) ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಗರ್ಭಪಾತಕ್ಕೆ ಕಾರಣವಾಗಬಹುದು. ಸಂಸ್ಕರಿಸಿದ ಅಥವಾ ಬೇಯಿಸದಿರುವ ಮಾಂಸಗಳು ಪರಾವಲಂಬಿ ಟಾಕ್ಸೊಪ್ಲಾಸ್ಮಾಸಿಸ್‍ಗೆ ಕಾರಣವಾಗುತ್ತವೆ. ಯಕೃತ್ತು ಮತ್ತು ಯಕೃತ್ತಿನ ಉತ್ಪನ್ನಗಳು ಹೆಚ್ಚಿನ ಮಟ್ಟದ ವಿಟಮಿನ್ ಎ ಅನ್ನು ಹೊಂದಿರುತ್ತವೆ, ಇದು ಬೆಳವಣಿಗೆ ಹಂತದಲ್ಲಿರುವ ಭ್ರೂಣಕ್ಕೆ ಹಾನಿಕಾರಕವಾಗಿದೆ" ಎಂದು ವೈದ್ಯೆ ಶ್ರೀಜಾ ಹೇಳಿದ್ದಾರೆ.

ತಪ್ಪು ಕಲ್ಪನೆ 4: ಗರ್ಭಾವಸ್ಥೆಯಲ್ಲಿ ವಿಮಾನ ಪ್ರಯಾಣ ಸುರಕ್ಷಿತವಲ್ಲ

ಸತ್ಯಾಂಶ: "ಗರ್ಭಿಣಿಯರಿಗೆ ವಿಮಾನ ಪ್ರಯಾಣ ಹಾನಿಕಾರಕವಲ್ಲ. ಆದರೆ ವಿಮಾನದಲ್ಲಿ ಪ್ರಯಾಣಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳಿತು. ಏಕೆಂದರೆ ಗರ್ಭಿಣಿಯರಿಗೆ 37 (ನೀವು ಅವಳಿ ಮಕ್ಕಳನ್ನು ಹೊಂದಿದ್ದರೆ ಸುಮಾರು 32 ವಾರಗಳ ವರೆಗೆ) ವಾರಗಳ ಬಳಿಕ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆಲವು ಏರ್‍ಲೈನ್ ಸಂಸ್ಥೆಗಳು ನಿಮ್ಮ ಪ್ರಯಾಣಕ್ಕೆ ಅನುಮತಿ ನೀಡುವ ಸಾಧ್ಯತೆ ಇರುವುದಿಲ್ಲ. ಏರ್‍ಲೈನ್‍ನ ನೀತಿಗಳನ್ನು ತಿಳಿಯಲು ಅವರೊಂದಿಗೆ ಚರ್ಚಿಸುವುದು ಅಗತ್ಯ.

ಒಂದು ವೇಳೆ ಗರ್ಭಿಣಿಯು 28 ವಾರಗಳನ್ನು ಪೂರೈಸಿದ್ದರೆ ಹೆರಿಗೆ ದಿನಾಂಕ ದೃಢೀಕರಣ ಪತ್ರ ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರದ ಮಾಹಿತಿಯನ್ನು ವೈದ್ಯರಿಂದ ಕೇಳಿ ಪಡೆಯಬೇಕು. ಸಾಮಾನ್ಯವಾಗಿ ಗರ್ಭಿಣಿಯರಿಗೆ ದೂರದ ಪ್ರಯಾಣದಲ್ಲಿ (ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ) ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ವಿಮಾನ ಪ್ರಯಾಣ ಕೈಗೊಳ್ಳುವುದಿದ್ದಲ್ಲಿ ಸಾಕಷ್ಟು ನೀರು ಕುಡಿಯಿರಿ. ಅದಲ್ಲದೆ ವೈದ್ಯರ ಸಲಹೆಯ ಮೇರೆಗೆ ಕಂಪ್ರೆಷನ್ ಅಥವಾ ಸಹಾಯಕವಾಗುವ ಸ್ಟಾಕಿಂಗ್ಸ್ ಅನ್ನು ಖರೀದಿಸಿ, ಇದರಿಂದ ಕಾಲಿನ ಊತ ಕಡಿಮೆಯಾಗಲು ಸಾಧ್ಯವಾಗುತ್ತದೆ" ಎಂದು ತಜ್ಞರು ಸಲಹೆ ನೀಡಿದ್ದಾರೆ.

ತಪ್ಪು ಕಲ್ಪನೆ 5: ಗರ್ಭಾವಸ್ಥೆಯಲ್ಲಿ ಹೆಚ್ಚು ಆಯಾಸಗೊಂಡ ಭಾವನೆ ಎದುರಾಗುವುದು ಅಸಹಜ

ಸತ್ಯಾಂಶ: "ಗರ್ಭಧಾರಣೆಯ ಸಮಯದಲ್ಲಿ, ವಿಶೇಷವಾಗಿ ಮೊದಲ 12 ವಾರಗಳಲ್ಲಿ ದಣಿವು ಅಥವಾ ಆಯಾಸಗೊಂಡಂತೆ ಅನುಭವವಾಗುವುದು ಸಾಮಾನ್ಯ. ಈ ಸಮಯದಲ್ಲಿ ಹಾರ್ಮೋನ್‍ಗಳ ಬದಲಾವಣೆಯಾಗುತ್ತಿರುತ್ತದೆ, ಹೀಗಾಗಿ ದಣಿವು, ವಾಕರಿಕೆ ಮತ್ತು ಹೆಚ್ಚು ಭಾವುಕರಾಗುವುದು ಸಾಮಾನ್ಯ. ಇದೆಲ್ಲದಕ್ಕೂ ಪರಿಹಾರವಾಗಿ ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಿ. ಗರ್ಭಿಣಿಯರು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಹಾಗೆಯೇ ಉತ್ತಮ ನಿದ್ರೆ ಮಾಡಿ. ಗರ್ಭಾವಸ್ಥೆಯಲ್ಲಿ ನೀವು ಹೆಚ್ಚುವರಿ ತೂಕವನ್ನು ಹೊಂದುತ್ತೀರಿ. ಹೀಗಾಗಿ ದಣಿದಂತೆ ಭಾಸವಾಗುತ್ತದೆ. ಅದಕ್ಕೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಸಲಹೆ ನೀಡುತ್ತಾರೆ ಕಿಂಡರ್ ಆಸ್ಪತ್ರೆಯ ಡಾ ಶ್ರೀಜಾ ರಾಣಿ.

Whats_app_banner