ಹತ್ತಾರು ರೋಗಗಳಿಗೆ ಅರಿಶಿನವೇ ಮನೆಮದ್ದು; ಅರಿಶಿನವನ್ನು ಹೇಗೆಲ್ಲ ಬಳಸಬಹುದು? ಸರಿಯಾದ ಕ್ರಮ ತಿಳಿಯೋಣ-health tips turmeric health benefits what is the right way to use turmeric in food and medicine home remedies arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹತ್ತಾರು ರೋಗಗಳಿಗೆ ಅರಿಶಿನವೇ ಮನೆಮದ್ದು; ಅರಿಶಿನವನ್ನು ಹೇಗೆಲ್ಲ ಬಳಸಬಹುದು? ಸರಿಯಾದ ಕ್ರಮ ತಿಳಿಯೋಣ

ಹತ್ತಾರು ರೋಗಗಳಿಗೆ ಅರಿಶಿನವೇ ಮನೆಮದ್ದು; ಅರಿಶಿನವನ್ನು ಹೇಗೆಲ್ಲ ಬಳಸಬಹುದು? ಸರಿಯಾದ ಕ್ರಮ ತಿಳಿಯೋಣ

ನಾವು ಆಹಾರವನ್ನು ಬಾಯಿಯಿಂದ ತಿನ್ನುವ ಮೊದಲು ಕಣ್ಣಿನಿಂದ ನೋಡಿಯೇ ಆಸ್ವಾದಿಸುತ್ತೇವೆ. ಅಡುಗೆಗೆ ಬಳಸುವ ಅರಿಶಿನ, ಆಹಾರಕ್ಕೆ ಚೆಂದದ ಬಣ್ಣ ನೀಡುವ ಜೊತೆಗೆ ಆರೋಗ್ಯಕ್ಕೂ ಉತ್ತಮ. ಉತ್ತಮ ಆಂಟಿಸೆಪ್ಟಿಕ್‌ ಆಗಿರುವ ಇದನ್ನು ಆಹಾರದಲ್ಲಿ ಹೇಗೆಲ್ಲಾ ಸೇರಿಸಿಕೊಳ್ಳಬಹುದು ಎಂದು ನೋಡೋಣ.

ಹತ್ತಾರು ರೋಗಗಳಿಗೆ ಅರಿಶಿನವೇ ಮನೆಮದ್ದು.
ಹತ್ತಾರು ರೋಗಗಳಿಗೆ ಅರಿಶಿನವೇ ಮನೆಮದ್ದು. (PC: Freepik)

ಭಾರತೀಯ ಪಾಕಪದ್ಧತಿ ಜಗತ್ಪ್ರಸಿದ್ಧಿ ಪಡೆದುಕೊಂಡಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಇಲ್ಲಿನ ಆಹಾರಗಳಲ್ಲಿ ಸಾಂಬಾರ ಪದಾರ್ಥಗಳನ್ನು ಹದವಾಗಿ ಬೆರೆಸಿರುತ್ತಾರೆ. ಅವು ಆಹಾರಕ್ಕೆ ರುಚಿ ನೀಡುವುದರ ಜೊತೆಗೆ ಆಕರ್ಷಕ ಬಣ್ಣವನ್ನು ಸಹ ನೀಡುತ್ತವೆ. ನೀವು ಅರಿಶಿನವಿಲ್ಲದ ಅಡುಗೆ ಹೇಗಿರಬಹುದೆಂದು ಊಹಿಸಿಕೊಳ್ಳಬಲ್ಲಿರಾ? ಸಾಧ್ಯವೇ ಇಲ್ಲ. ನೋಡಿದ ತಕ್ಷಣ ಅದು ಸಪ್ಪೆ ಎನಿಸಬಹುದು. ಏಕೆಂದರೆ ಚಿಕ್ಕಂದಿನಿಂದಲೇ ನಮಗೆ ಅರಿಶಿನದ ಪರಿಚಯವಿರುತ್ತದೆ. ಶೀತ, ಕೆಮ್ಮು ಬಂದರೆ ಮೊದಲು ನೀಡುವ ಮನೆಮದ್ದು ಅರಿಶಿನದ ಹಾಲು, ಗಾಯವಾದರೆ ಮೊದಲು ಹಚ್ಚುವುದು ಅರಿಶಿನದ ಪೇಸ್ಟ್‌. ಆರೋಗ್ಯದ ಕಾಳಜಿಯಿಂದ ಹಿಡಿದು ಆಹಾರಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವವರೆಗೆ ಅರಿಶಿನವನ್ನು ಬಳಸಲಾಗುತ್ತದೆ. ತರಕಾರಿಗಳ ಪಲ್ಯದಿಂದ ಹಿಡಿದು ಉಪ್ಪಿನಕಾಯಿಯವರೆಗೂ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 

ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಆಹಾರ ಪದ್ಧತಿಗಳಲ್ಲಿ ಇದನ್ನು ಬಳಸುತ್ತಾರೆ. ಇದರ ಅದ್ಭುತ ಹಳದಿ ಬಣ್ಣದಿಂದಾಗಿ ಇದನ್ನು ಭಾರತದ ಕೇಸರಿ ಎಂದೂ ಕರೆಯುತ್ತಾರೆ. ಅರಿಶಿನವನ್ನು ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಮಾತ್ರವಲ್ಲದೆ, ಶುಭ ಕಾರ್ಯಗಳಲ್ಲೂ ಬಳಸಲಾಗುತ್ತದೆ. ಅರಿಶಿನದ ಮೇಲೆ ನಡೆಸಿದ ನಿರಂತರ ಸಂಶೋಧನೆಗಳ ಪರಿಣಾಮವಾಗಿ ಇದನ್ನು ಸೂಪರ್‌ ಫುಡ್‌ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅಗಾಧ ಪೌಷ್ಠಿಕಾಂಶಗಳನ್ನು ಹೊಂದಿದೆ. ಅರಿಶಿನದಲ್ಲಿ ಸುಮಾರು 300ಕ್ಕೂ ಹೆಚ್ಚು ಪೋಷಕಾಂಶಗಳಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Honey: ಜೇನುತುಪ್ಪದಲ್ಲಿ ಕಲಬೆರಕೆ ಪತ್ತೆಹಚ್ಚುವುದು ಹೇಗೆ; ಈ ಸರಳ ಪರೀಕ್ಷೆಗಳ ಮೂಲಕ ಶುದ್ಧ ಜೇನುತುಪ್ಪ ಮನೆಗೆ ತನ್ನಿ

ಅರಿಶಿನದ ವಿಧಗಳು

ಅರಿಶಿನದಲ್ಲಿ ಹಲವು ವಿಧಗಳಿವೆ. ಪ್ರಮುಖವಾಗಿ ಮೂರು ರೀತಿಯ ಅರಿಶಿನ ಕಂಡುಬರುತ್ತದೆ. ಮೊದಲನೆಯದ್ದು ಅಂಬೆ ಅರಿಶಿನ. ಇದನ್ನು ಮ್ಯಾಂಗೋ ಅದ್ರಕ್‌ ಎಂದೂ ಕರೆಯುತ್ತಾರೆ. ಎರಡನೆಯದ್ದು ಕರ್ಕುಮಾ ಲಾಂಗ್‌. ಇದನ್ನು ಭಾರತದ ಅಡುಗೆಗಳಲ್ಲಿ ಬಳಸುತ್ತಾರೆ. ಮೂರನೆಯದ್ದು ಹಸಿ ಅರಿಶಿನ. ಇದನ್ನು ಹೆಚ್ಚಾಗಿ ಚಳಿಗಾಲದ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಬಳಸಲಾಗುತ್ತದೆ.

ಅರಿಶಿನವನ್ನು ಈ ರೀತಿಯಾಗಿ ಬಳಸಿ

1) ಅರಿಶಿನವನ್ನು ಎಲ್ಲಾ ರೀತಿಯ ಬೇಳೆಗಳನ್ನು ಬೇಯಿಸಲು ಬಳಸಲಾಗುತ್ತದೆ. ಬೇಳೆಗಳನ್ನು ಬೇಯಿಸಲು ಒಂದು ಚಿಟಿಕೆ ಉಪ್ಪು ಮತ್ತು ಅರಿಶಿನ ಸೇರಿಸಿ. ಇದರಿಂದ ನೀವು ತಯಾರಿಸುವ ಬೇಳೆಸಾರು ಅಥವಾ ದಾಲ್‌ ಒಳ್ಳೆಯ ಬಣ್ಣದಿಂದ ಕೂಡಿರುತ್ತದೆ.

2) ಪಲ್ಯಗಳನ್ನು ಮಾಡುವಾಗ, ತರಕಾರಿಗೆ ಒಗ್ಗರಣೆ ಹಾಕಿದ ನಂತರ ಇಂಗು ಮತ್ತು ಅರಿಶಿನದ ಪುಡಿ ಹಾಕಿ. ಇದರಿಂದ ನಿಮ್ಮ ಪಲ್ಯದ ಬಣ್ಣ ಚೆನ್ನಾಗಿ ಬರುತ್ತದೆ. ಸೊಪ್ಪುಗಳನ್ನು ಬೇಯಿಸಲು ಅರಿಶಿನವನ್ನು ಹಾಕುವುದರಿಂದ ಅದು ಹಸಿರು ಬಣ್ಣವನ್ನು ಕಳೆದುಕೊಂಡು ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.

3) ಶೀತಿ, ನೆಗಡಿ ಬಂದಾಗ, ಹಸಿ ಅರಿಶಿನವನ್ನು ತುರಿದು ಹಾಲಿಗೆ ಹಾಕಿ ಕುದಿಸಿ. ಅದರ ಜೊತೆಗೆ ಶುಂಠಿ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು ಅದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಕುಡಿಯಿರಿ. ಹಸಿ ಅರಿಶಿನ ಇಲ್ಲವಾದರೆ ಅರಿಶಿನದ ಪುಡಿಯನ್ನು ಸಹ ಬಳಸಬಹುದು.

4) ಖೀರ್‌ ಅಥವಾ ಬರ್ಫಿ ತಯಾರಿಸುವಾಗ ಮನೆಯಲ್ಲಿ ಕೇಸರಿ ಇಲ್ಲದಿದ್ದರೆ ಸ್ವಲ್ಪ ತುಪ್ಪಕ್ಕೆ ಅರಿಶಿನ ಸೇರಿಸಿ ಹಾಕಿ. ಸುಂದರವಾದ ಹಳದಿ ಬಣ್ಣ ಬರುತ್ತದೆ.

5) ಗೋಲ್ಡನ್‌ ಟೀ ಆರೋಗ್ಯಕ್ಕೆ ಉತ್ತಮ. ಪ್ಲೇನ್‌ ಟೀಯಲ್ಲಿ ಚಿಟಿಕೆ ಅರಿಶಿನದ ಪುಡಿ ಹಾಕಿ. ಆಂಟಿಆಕ್ಸಿಡೆಂಟ್‌ನಿಂದ ಕೂಡಿರುವ ಚಹಾ ತಯಾರಾಗುತ್ತದೆ. ಇದೇ ರೀತಿ ಬಿಸಿ ನೀರಿಗೆ ಕಾಲು ಚಮಚ ಅರಿಶಿನದ ಪುಡಿ, ಲಿಂಬೆ ರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.

6) ಮಾರ್ಚ್‌–ಏಪ್ರಿಲ್‌ ತಿಂಗಳಿನಲ್ಲಿ ಹಸಿ ಅರಿಶಿನವನ್ನು ತುರಿದು ಅದಕ್ಕೆ ಸ್ವಲ್ಪ ಮಾವಿನಕಾಯಿ, ಉಪ್ಪು ಮತ್ತು ಮಸಾಲೆ ವಸ್ತುಗಳನ್ನು ಹಾಕಿ ಸ್ವಾದಿಷ್ಟವಾದ ಉಪ್ಪಿನಕಾಯಿ ತಯಾರಿಸಬಹುದು.

ಇದನ್ನೂ ಓದಿ: Healthy Recipe: ಅನ್ನ ಅಥವಾ ಚಪಾತಿ ಯಾವುದರ ಜೊತೆ ಬೇಕಾದರೂ ತಿನ್ನಿ ಈ ಮೊಳಕೆ ಕಾಳಿನ ಕರಿ, ಆರೋಗ್ಯಕ್ಕೂ ಸೈ - ರುಚಿಗೂ ಸೈ

ಅರಿಶಿನವನ್ನು ಶೇಖರಿಸಿಡುವುದು ಹೇಗೆ?

ಅರಿಶಿನವನ್ನು ಗಾಳಿಯಾಡದ ಡಬ್ಬದಲ್ಲಿ ಇಡಿ. ದಿನಬಳಕೆಗೆ ಸ್ವಲ್ಪ ಪ್ರಮಾಣದ ಅರಿಶಿನವನ್ನು ಮತ್ತೊಂದು ಚಿಕ್ಕ ಡಬ್ಬದಲ್ಲಿ ತೆಗೆದಿಟ್ಟುಕೊಳ್ಳಿ. ನೀವು ಮನೆಯಲ್ಲೇ ಅರಿಶಿನವನ್ನು ತಯಾರಿಸುತ್ತಿದ್ದರೆ, ಅರಿಶಿನದ ಕೊಂಬಿನಿಂದ ಸ್ವಲ್ಪ ಸ್ವಲ್ಪವೇ ತಯಾರಿಸಿಕೊಳ್ಳಿ. ಇಲ್ಲವಾದರೆ ಬಹಳ ದಿನಗಳ ನಂತರ ಅರಿಶಿನ ಅದರ ಬಣ್ಣ ಕಳೆದುಕೊಳ್ಳುತ್ತದೆ. ಹಾಗಾಗಿ ನಿಮಗೆಷ್ಟು ಅವಶ್ಯಕತೆಯಿದೆಯೋ ಅಷ್ಟನ್ನು ಮಾತ್ರ ತಯಾರಿಸಿಕೊಳ್ಳಿ. ಒಮ್ಮೆಲೆ ಎಲ್ಲವನ್ನು ತಯಾರಿಸಿಡಬೇಡಿ. ಅರಿಶಿನವನ್ನು ಆದಷ್ಟು ಗಾಜಿನ ಡಬ್ಬದಲ್ಲಿ ಶೇಖರಿಸಿ. ಏಕೆಂದರೆ ಪ್ಲಾಸ್ಟಿಕ್‌ ಡಬ್ಬಗಳು ಆರೋಗ್ಯಕ್ಕೆ ಉತ್ತಮವಲ್ಲ.

ಆರೋಗ್ಯಕ್ಕೆ ಅರಿಶಿನ

1) ಅರಿಶಿನವು ಉರಿಯೂತ ಶಮನಕಾರಿಯಾಗಿದೆ. ಹೀಗಾಗಿ ಇದು ಊತ ಮತ್ತು ಗಾಯಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅರಿಶಿನವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಭೇದಿ, ಮಲಬದ್ಧತೆ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.

2) ಗಾಯಗಳು ಮತ್ತು ಉಳುಕುಗಳ ಮೇಲೆ ಅರಿಶಿನದ ಪೇಸ್ಟ್ ಹಚ್ಚಲಾಗುತ್ತದೆ. ಇದು ಕೀಲು ನೋವಿನಿಂದಲೂ ಪರಿಹಾರ ನೀಡುತ್ತದೆ. ಅರಿಶಿನದ ಪೇಸ್ಟ್‌ ಊತವನ್ನು ಕಡಿಮೆ ಮಾಡುತ್ತದೆ.

3) ನೀವು ಮೈಗ್ರೇನ್‌ನಿಂದ ಬಳಲುತ್ತಿದ್ದರೆ ಅರಿಶಿನವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತಕ್ಷಣದ ಪರಿಹಾರ ದೊರೆಯುತ್ತದೆ. ಉರಿಯೂತ ಶಮನ ಗುಣಲಕ್ಷಣಗಳು ಅರಿಶಿನದಲ್ಲಿ ಕಂಡುಬರುತ್ತವೆ.

4) ಹಸಿ ಅರಿಶಿನ ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಕೊಬ್ಬು ಕರಗುತ್ತದೆ.

5) ಇದು ಮಧುಮೇಹ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ.

6) ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿರುವುದರಿಂದ ಇದು ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

mysore-dasara_Entry_Point