ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ

ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ

ಈಗ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ ಡಯಾಬಿಟಿಸ್‌. ಸೂಕ್ತ ಚಿಕಿತ್ಸೆ ಸಿಗದಿದ್ದರೆ ದಿನೇದಿನೇ ಉಲ್ಭಣಿಸುತ್ತದೆ. ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೂ ಡಯಾಬಿಟಿಸ್‌ ನಿಯಂತ್ರಣದಲ್ಲಿಲ್ಲದಿದ್ದರೆ ಚಿಕಿತ್ಸೆ ಬದಲಿಸಲು ಸಲಹೆ ನೀಡಲಾಗುತ್ತದೆ. ಹೊಸ ಚಿಕಿತ್ಸೆ ಪ್ರಾರಂಭಿಸುವ ಮುನ್ನ ನಿಮ್ಮ ವೈದ್ಯರ ಬಳಿ ಕೇಳಬೇಕಾದ ಪ್ರಶ್ನೆಗಳೇನು?(ಬರಹ: ಅರ್ಚನಾ ವಿ. ಭಟ್‌)

ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ. (ಸಾಂದರ್ಭಿಕ ಚಿತ್ರ)
ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ. (ಸಾಂದರ್ಭಿಕ ಚಿತ್ರ)

ಡಯಾಬಿಟಿಸ್‌ ಅಥವಾ ಮಧುಮೇಹವು (Diabetes) ಇದು ದೀರ್ಘ ಸಮಯದ ಕಾಯಿಲೆಯಾಗಿದೆ. ವ್ಯಕ್ತಿಯ ಮೇದೋಜೀರಕ ಗ್ರಂಥಿಯು ಪೂರ್ಣ ಪ್ರಮಾಣದ ಇನ್‌ಸುಲಿನ್‌ ಅನ್ನು ಉತ್ಪಾದಿಸಲು ವಿಫಲವಾದಾಗ ಮಧುಮೇಹವುಂಟಾಗುತ್ತದೆ. ಮಧುಮೇಹವು ವ್ಯಕ್ತಿಯ ನರ ಮಂಡಲ ಮತ್ತು ರಕ್ತನಾಳಗಳನ್ನು ಘಾಸಿಗೊಳಿಸುತ್ತದೆ. ಹಾಗಾಗಿ ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದೆ. ಮಧುಮೇಹದಲ್ಲಿ ಮೂರು ಪ್ರಕಾರಗಳಿವೆ. ಅದರಲ್ಲಿ ಟೈಪ್‌–2 ಮಧುಮೇಹ ಸಾಮಾನ್ಯವಾಗಿದೆ. ಇದನ್ನು ಧ್ಯಾನ ಮತ್ತು ಆಹಾರ ಪದ್ಧಿತಿಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ಟೈಪ್‌–2 ಮಧುಮೇಹವು ರೋಗಿಯನ್ನು ಗಂಭೀರವಾಗಿ ಕಾಡುತ್ತದೆ. ಆಗ ರೋಗಿಯು ಮಧುಮೇಹದ ಚಿಕಿತ್ಸೆಯನ್ನು ಬದಲಿಸಿಕೊಳ್ಳಲು ಮುಂದಾಗುತ್ತಾರೆ. ನಿಮ್ಮಲ್ಲಿ ಯಾರಾದರೂ ಹೀಗೆ ಯೋಚಿಸುತ್ತಿದ್ದರೆ ಮೊದಲು ನಿಮ್ಮ ವೈದ್ಯರ ಹತ್ತಿರ ಈ ಪ್ರಶ್ನೆಗಳನ್ನು ಖಂಡಿತ ಕೇಳಿ ಉತ್ತರ ಪಡೆದುಕೊಳ್ಳಿ.

ಟೈಪ್‌ 2 ಡಯಾಬಿಟಿಸ್‌ನ ಲಕ್ಷಣಗಳೇನು?

* ಅತಿಯಾದ ಬಾಯಿರಿಕೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು.

* ತೂಕದಲ್ಲಿ ಇಳಿಕೆ.

* ಅತಿಯಾದ ಸುಸ್ತು.

* ಮಂದ ದೃಷ್ಟಿ.

* ಗುಣಮುಖವಾಗದ ಗಾಯಗಳು.

* ಚರ್ಮದ ಮೇಲೆ ಕಪ್ಪು ಕಲೆ. ಹೆಚ್ಚಾಗಿ ಕುತ್ತಿಗೆ ಮತ್ತು ಕಂಕುಳು ಭಾಗದಲ್ಲಿ.

ಟೈಪ್‌ 2 ಡಯಾಬಿಟಿಸ್‌ಗೆ ಚಿಕಿತ್ಸೆ ಏನು?

ಜೀವನ ಶೈಲಿಯಲ್ಲಿ ಬದಲಾವಣೆ

ಟೈಪ್‌ 2 ಡಯಾಬಿಟಿಸ್‌ ಪತ್ತೆಯಾದ ಪ್ರತಿಯೊಬ್ಬರಿಗೂ ನೀಡುವ ಪ್ರಮುಖ ಸಲಹೆಯೆಂದರೆ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಿ ಎಂಬುದಾಗಿದೆ. ಆರೋಗ್ಯಕ ಆಹಾರ ಸೇವನೆ ಮತ್ತು ನಿಯಮಿತವಾದ ವ್ಯಾಯಾಮ ಮಾಡುವುದು, ಆಹಾರಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ ಸೇವಿಸುವುದು ಮತ್ತು ತರಕಾರಿ, ಪ್ರೊಟೀನ್‌ಯುಕ್ತ ಆಹಾರ ಸೇವನೆ, ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಮುಂತಾದ ಸಲಹೆಗಳನ್ನು ನೀಡಲಾಗುತ್ತದೆ.

ಆರೋಗ್ಯದ ಬಗ್ಗೆ ಕಾಳಜಿವಹಿಸುವುದು

ಡಯಾಬಿಟಿಸ್‌ ಬಹು ಅಂಗಾಗಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಪ್ರಮುಖವಾಗಿ ಯಕೃತ್ತು, ಸ್ನಾಯು, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡ, ಮತ್ತು ಕರಳು. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುವ ಔಷಧಗಳನ್ನು ತಜ್ಞರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ಇನ್ಸುಲಿನ್‌ ಚಿಕಿತ್ಸೆ

ಕೆಲವರಿಗೆ ಮಾತ್ರೆಗಳು ಸಾಕಾಗುವುದಿಲ್ಲ. ಅಂತಹವರು ಇನ್ಸುಲಿನ್‌ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಬಹುದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಡಯಾಬಿಟಿಸ್‌ಗೆ ಹೊಸ ಔಷಧ ಪ್ರಾರಂಭಿಸುವ ಮೊದಲು ವೈದ್ಯರಿಗೆ ಕೇಳಬೇಕಾದ 10 ಪ್ರಶ್ನೆಗಳು

1) ಹೊಸ ಔಷಧಿಯಿಂದ ಸಿಗುವ ಪ್ರಯೋಜನಗಳೇನು?

ಈ ಪ್ರಶ್ನೆ ಕೇಳುವುದರಿಂದ ಈ ಹೊಸ ಔಷಧದಿಂದ ಏನೇನು ನಿರೀಕ್ಷಿಸಬಹುದು ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು, ರೋಗಲಕ್ಷಣ ಕಡಿಮೆ ಮಾಡಲು, ತೊಂದರೆಗಳನ್ನು ನಿಭಾಯಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

2) ಹೊಸ ಔಷಧದಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳೇನು?

ಪ್ರತಿಯೊಂದು ಔಷಧವು ಒಂದಿಲ್ಲೊಂದು ಅಡ್ಡ ಪರಿಣಾಮವನ್ನು ಉಂಟುಮಾಡಬಹುದು. ಈ ಪ್ರಶ್ನೆಯು ಹೊಸ ಔಷಧದಿಂದ ಉಂಟಾಗಬಹುದಾದ ಅಡ್ಡ ಪರಿಣಾಮವನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಡ್ಡಪರಿಣಾಮವಾದರೆ ಏನು ಮಾಡಬೇಕು ಎಂಬುದನ್ನು ಅರ್ಥ ಮಾಡಿಸುತ್ತದೆ. ಇದು ಸಣ್ಣ ಸಮಸ್ಯೆಯು ದೊಡ್ಡ ಸಮಸ್ಯೆಯಾಗುವುದನ್ನು ತಡೆಯುತ್ತದೆ.

3) ಈಗಾಗಲೇ ತೆಗೆದುಕೊಳ್ಳುತ್ತಿರುವ ಇತರೆ ಔಷಧಗಳ ಮೇಲೆ ಪ್ರಭಾವ ಬೀರುತ್ತದೆಯೇ?

ಕೆಲವು ಔಷಧಗಳು ಇತರೆ ಔಷಧಿಗಳೊಂದಿಗೆ ಸೇರಿದಾಗಲೂ ಕೆಲವು ಅಡ್ಡಪರಿಣಾಮ ಬೀರಬಹುದು. ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಇತರೆ ಔಷಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವುದನ್ನು ತಡೆಯಲು ಸಹಾಯ ಮಾಡುತ್ತದೆ.

4) ಈ ಔಷಧಿಯು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡುತ್ತದೆಯೇ?

ಸಲ್ಫೋನಿಲ್ಯೂರಿಯಾಸ್ ಮತ್ತು ಇನ್ಸುಲಿನ್‌ನಂತಹ ಕೆಲವು ಔಷಧಿಗಳು ಇತರ ಔಷಧಿಗಳೊಂದಿಗೆ ತೆಗೆದುಕೊಂಡಾಗ ಅದು ರಕ್ತದಲ್ಲಿನ ಸಕ್ಕರೆಯನ್ನು ತುಂಬಾ ಕಡಿಮೆ ಮಾಡಬಹುದು. ಇದನ್ನು ತಿಳಿದುಕೊಳ್ಳುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅತಿಯಾಗಿ ಕಡಿಮೆಯಾಗುವುದನ್ನು ಗಮನಿಸಬಹುದು ಮತ್ತು ಮುಂಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.

5) ಈ ಹೊಸ ಔಷಧಿಯನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು?

ಔಷಧವು ಸರಿಯಾಗಿ ಕೆಲಸ ಮಾಡಲು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಸರಿಯಾದ ಡೋಸ್‌, ಸಮಯ ಮತ್ತು ಆಹಾರ ಈ ಮೂರರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಆದ್ದರಿಂದ ಈ ಪ್ರಶ್ನೆ ಖಂಡಿತ ಕೇಳಿ.

6) ಡೋಸ್‌ ತಪ್ಪಿದೆರೆ ಏನು ಮಾಡಬೇಕು?

ಡೋಸ್‌ ತಪ್ಪಿದರೆ ಏನು ಮಾಡಬೇಕು ಅದರಿಂದ ಏನೆಲ್ಲಾ ಹಾನಿಗಳಾಗಬಹುದು ಎಂಬುದನ್ನು ತಿಳಿದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಎಂಬುದನ್ನು ತಿಳಿಯಬಹುದಾಗಿದೆ. ಒಂದುವೇಳೆ ಡೋಸ್‌ ತಪ್ಪಿದರೆ ನಿಮ್ಮ ವೈದ್ಯರನ್ನು ಖಂಡಿತ ಕೇಳಬಹುದು.

7) ಈ ಹೊಸ ಔಷಧವನ್ನು ಪ್ರಾರಂಭಿಸಿದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮನೆಯಲ್ಲಿಯೇ ಪರಿಶೀಲಿಸುತ್ತಿರಬೇಕೇ?

ಯಾವಾಗಲೂ ಔಷಧವು ಎಷ್ಟು ಚೆನ್ನಾಗಿ ಕೆಲಸಮಾಡುತ್ತಿದೆ ಎಂದು ತಿಳಿಯಲು ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಲು ನಿಯಮಿತವಾಗಿ ಪರೀಕ್ಷೆ ನಡೆಸುವುದು ಮುಖ್ಯವಾಗಿದೆ. ಹಾಗಾಗಿ ಈ ಪ್ರಶ್ನೆಯನ್ನು ಖಂಡಿತ ಕೇಳಿ.

8) ಹೊಸ ಔಷಧವನ್ನು ಹೇಗೆ ಇರಿಸಬೇಕು?

ಕೆಲವು ಔಷಧಿಗಳನ್ನು ನಿರ್ದಿಷ್ಟ ತಾಪಮಾನದಲ್ಲಿ ಇರಿಸುವುದು ಅಗತ್ಯವಾಗಿರುತ್ತದೆ. ಅದಕ್ಕಾಗಿ ನಿಮ್ಮ ವೈದ್ಯರ ಹತ್ತಿರ ಈ ಪ್ರಶ್ನೆಯನ್ನು ಕೇಳಿ. ನೀವು ಪ್ರಯಾಣದಲ್ಲಿದ್ದಾಗ ಔಷಧವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ತಿಳಿಯಲು ಈ ಪ್ರಶ್ನೆ ಸಹಾಯ ಮಾಡುತ್ತದೆ.

9) ಯಾವ ರೋಗಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗಬೇಕು?

ಔಷಧದಿಂದ ಉಂಟಾಗುವ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅದಕ್ಕೆ ತ್ರರಿತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗ ಲಕ್ಷಣದ ಜ್ಞಾನವು ನಿಮ್ಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುತ್ತದೆ.

10) ನನಗೆ ಸರಿಹೊಂದುವ ಯಾವುದಾದರೂ ಹೊಸ ಚಿಕಿತ್ಸೆ ಇದೆಯೇ?‌‌

ಡಯಾಬಿಟಿಸ್‌ಗೆ ಹೊಸಹೊಸ ಔಷಧಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ. ಆದ್ದರಿಂದ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆ ಖಂಡಿತ ಕೇಳಿ. ಇದರಿಂದ ಡಯಾಬಿಟಿಸ್‌ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಬಹುದು. ಇದನ್ನು ಚರ್ಚಿಸುವುದರಿಂದ ಯಾವ ಹೊಸ ಚಿಕಿತ್ಸೆ ಸೂಕ್ತವೆಂದು ನಿರ್ಧರಿಸಲು ಸಹಾಯವಾಗುತ್ತದೆ.

ಇಂದಿನ ದಿನಗಳಲ್ಲಿ ಟೈಪ್‌ 2 ಡಯಾಬಿಟಿಸ್‌ ಸಾಮಾನ್ಯವಾಗಿದೆ. ಅದಕ್ಕೆ ಹಲವಾರು ಔಷಧಗಳ ಆಯ್ಕೆಗಳಿವೆ. ಔಷಧಗಳನ್ನು ಬದಲಾಯಿಸುವ ಮೊದಲು ಅದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಡಯಾಬಿಟಿಸ್‌ ಅನ್ನು ಸುಲಭವಾಗಿ ಮ್ಯಾನೇಜ್‌ ಮಾಡಿ.

Whats_app_banner