ಮಕ್ಕಳು ಸೇರಿದಂತೆ ಮನೆಯವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರಾ, ಅರಿವಿಲ್ಲದೇ ನೀವು ಮಾಡುವ ಈ ತಪ್ಪುಗಳೇ ಕಾರಣ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳು ಸೇರಿದಂತೆ ಮನೆಯವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರಾ, ಅರಿವಿಲ್ಲದೇ ನೀವು ಮಾಡುವ ಈ ತಪ್ಪುಗಳೇ ಕಾರಣ

ಮಕ್ಕಳು ಸೇರಿದಂತೆ ಮನೆಯವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರಾ, ಅರಿವಿಲ್ಲದೇ ನೀವು ಮಾಡುವ ಈ ತಪ್ಪುಗಳೇ ಕಾರಣ

ಮನೆಯಲ್ಲಿ ಎಷ್ಟೇ ಜಾಗರೂಕರಾಗಿದ್ದರೂ, ಎಷ್ಟೇ ಸ್ವಚ್ಛವಾಗಿದ್ದರೂ ಮಕ್ಕಳು ಸೇರಿ ಮನೆಯವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರಾ, ಹಾಗಾದರೆ ನಿಮಗೆ ಅರಿವಿಲ್ಲದೇ ನೀವು ಮಾಡುವ ಈ ತಪ್ಪುಗಳೇ ಕಾರಣ.

ಪದೇ ಪದೇ ಅನಾರೋಗ್ಯ ಎದುರಾಗಲು ಕಾರಣವೇನು
ಪದೇ ಪದೇ ಅನಾರೋಗ್ಯ ಎದುರಾಗಲು ಕಾರಣವೇನು

ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗಲು ಪರಿಸರದ ಅಂಶಗಳು ಹಾಗೂ ಆಹಾರಗಳು ಮಾತ್ರ ಕಾರಣವಲ್ಲ. ತಜ್ಞರ ಪ್ರಕಾರ ನಾವು ಅನುಸರಿಸುವ ಈ ಸಣ್ಣ ಪುಟ್ಟ ತಪ್ಪುಗಳೂ ಕಾರಣವಾಗಬಹುದು. ಮನೆಯಲ್ಲಿ ನಮಗೆ ಅರಿವಿಲ್ಲದೇ ನಾವು ಮಾಡುವ ಈ ತಪ್ಪುಗಳು ಮಕ್ಕಳಿಂದ ಹಿಡಿದು ವಯಸ್ಸಾದವರೆಗೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ.

ವಿಶೇಷವಾಗಿ ಕಚೇರಿಯಿಂದ ಹೊರಡುವಾಗ ಅಥವಾ ಕೆಲಸಕ್ಕೆ ಹೊರಗೆ ಹೋದಾಗ, ನೀವು ಮಾಡುವ ಸಣ್ಣ ತಪ್ಪುಗಳು ನಿಮ್ಮ ಕುಟುಂಬ ಸದಸ್ಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಆಹಾರ ಪದ್ಧತಿ ಎಷ್ಟೇ ಉತ್ತಮವಾಗಿದ್ದರೂ, ನಿಮ್ಮ ತಪ್ಪುಗಳಿಂದ ನಿಮ್ಮ ಮನೆಗೆ ಪ್ರವೇಶಿಸಿದ ಕೆಟ್ಟ ಬ್ಯಾಕ್ಟೀರಿಯಾಗಳು ರೋಗಗಳು ಹರಡಲು ಕಾರಣವಾಗಬಹುದು. ಆ ಕಾರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದನ್ನು ಮರೆಯಬೇಡಿ. ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಈ ತಪ್ಪುಗಳನ್ನು ಮಾಡುತ್ತಿದ್ದರೆ ಈ ಅಭ್ಯಾಸಗಳ‌ನ್ನು ಇಂದೇ ಬದಲಿಸಿಕೊಳ್ಳಿ.

ಅನಾರೋಗ್ಯಕ್ಕೆ ಕಾರಣವಾಗುವ ದೈನಂದಿನ ಅಭ್ಯಾಸಗಳು

1. ಮನೆಯೊಳಗೆ ಹೊರಗಿನ ಚಪ್ಪಲಿ ಧರಿಸುವುದು

ಇಂದಿನ ಪೀಳಿಗೆ ಮಾಡುವ ದೊಡ್ಡ ತಪ್ಪು ಏನೆಂದರೆ, ಮನೆಯಿಂದ ಹೊರಗೆ ಇಡಲು ಜಾಗವಿಲ್ಲದ ಕಾರಣ ಅಥವಾ ಕಳೆದುಹೋಗುವ ಭಯದಿಂದ ಧರಿಸಿದ್ದ ಚಪ್ಪಲಿಗಳನ್ನು ಮನೆಯೊಳಗೂ ಹಾಕಿಕೊಂಡು ಹೋಗುತ್ತಾರೆ. ಅದು ಎಷ್ಟು ಅಪಾಯಕಾರಿ ಎಂದು ಅವರಿಗೆ ತಿಳಿದಿದ್ದರೆ, ಅವರು ಈ ತಪ್ಪನ್ನು ಖಂಡಿತ ಮಾಡುವುದಿಲ್ಲ. ಹೊರಗಿನ ರಸ್ತೆಗಳಲ್ಲಿ ಸಾಕಷ್ಟು ಕೊಳಕು ಮತ್ತು ಬ್ಯಾಕ್ಟೀರಿಯಾಗಳಿರುತ್ತವೆ. ನೀವು ಅವುಗಳನ್ನು ಎಷ್ಟೇ ಚೆನ್ನಾಗಿ ತೊಳೆದರೂ, ಅವುಗಳಿಗೆ ಸಂಬಂಧಿಸಿದ ರೋಗಕಾರಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ. ಈ ರೀತಿ ಮನೆಯೊಳಗೆ ಚಪ್ಪಲಿಗಳನ್ನು ತರುವುದರಿಂದ ಅವು ಗಾಳಿಯ ಮೂಲಕ ಮನೆಯೊಳಗೆ ಪ್ರವೇಶಿಸುತ್ತವೆ. ಚಿಕ್ಕ ಮಕ್ಕಳಿರುವ ಮನೆಯಲ್ಲಿ ಚಪ್ಪಲಿಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಮಕ್ಕಳು ಹೆಚ್ಚಾಗಿ ನೆಲವನ್ನು ಮುಟ್ಟುವುದರಿಂದ ನೆಲದಿಂದ ಕ್ರಿಮಿಗಳು ಅವರ ದೇಹ ಸೇರುವ ಸಾಧ್ಯತೆ ಹೆಚ್ಚು. ಆದ್ದರಿಂದ ರೋಗಗಳನ್ನು ತಪ್ಪಿಸಲು, ಮನೆಯೊಳಗೆ ಎಂದಿಗೂ ಚಪ್ಪಲಿಗಳನ್ನು ಹಾಕಿಕೊಂಡು ಹೋಗಬೇಡಿ.

2. ಹೊರಗಿನಿಂದ ಬಂದ ನಂತರ ಕೈ ಕಾಲುಗಳನ್ನು ತೊಳೆಯದಿರುವುದು

ನೀವು ಹೊರಗೆ ಇರುವಾಗ, ನಿಮ್ಮ ಕೈಗಳಿಂದ ಅನೇಕ ರೀತಿಯ ವಸ್ತುಗಳನ್ನು ಮುಟ್ಟುತ್ತೀರಿ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರಲಿ ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರಲಿ, ಕೈ ಮತ್ತು ಕಾಲುಗಳಲ್ಲಿ ವಿವಿಧ ರೀತಿಯ ಬ್ಯಾಕ್ಟೀರಿಯಾಗಳು ಸೇರಿಕೊಳ್ಳಬಹುದು. ಅಂತಹ ಸಮಯದಲ್ಲಿ, ಮನೆಗೆ ಬಂದಾಗ ನಿಮ್ಮ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮೊದಲು ಕೈಕಾಲುಗಳನ್ನು ಚೆನ್ನಾಗಿ ತೊಳೆಯಬೇಕು. ನಂತರವಷ್ಟೇ ಉಳಿದ ವಸ್ತುಗಳನ್ನು ಬಳಸಬೇಕು. ಹೊರಗಿನಿಂದ ಬಂದಾಗ ಸ್ಯಾನಿಟೈಸರ್‌ಗಳಿಂದ ಕೈ ತೊಳೆಯುವುದು ಉತ್ತಮ ಅಭ್ಯಾಸ.

3. ಹೊರಗಿನಿಂದ ತಂದ ಸೂಟ್‌ಕೇಸ್, ಬ್ಯಾಗ್ ಹಾಸಿಗೆಗೆ ಮೇಲಿರಿಸುವುದು

ಹಲವರು ಪ್ರಯಾಣ ಮಾಡುವಾಗ ಬಳಸುವ ಸೂಟ್‌ಕೇಸ್ ಅಥವಾ ಬ್ಯಾಗ್‌ ಅನ್ನು ಮಲಗುವ ಕೋಣೆಗೆ ತರುತ್ತಾರೆ, ಅಲ್ಲದೇ ಹಾಸಿಗೆ ಮೇಲೆ ಬ್ಯಾಗ್ ಇರಿಸುತ್ತಾರೆ. ಈ ಸೂಟ್‌ಕೇಸ್ ಜೊತೆಗೆ ರೋಗಗಳನ್ನು ಹರಡುವ ಹಲವು ಸೂಕ್ಷ್ಮಜೀವಿಗಳೂ ಇರುತ್ತವೆ. ಹಾಸಿಗೆಯನ್ನು ತಲುಪಿದ ಸೂಕ್ಷ್ಮಜೀವಿಗಳು ಕ್ರಮೇಣ ಹಾಸಿಗೆಯಿಂದ ನಿಮ್ಮ ದೇಹವನ್ನು ತಲುಪುತ್ತವೆ ಎಂಬುದನ್ನು ಪುನಃ ಹೇಳಬೇಕಾಗಿಲ್ಲ.

4. ಹೊರಗೆ ಧರಿಸಿದ ಬಟ್ಟೆಗಳಲ್ಲೇ ಬಂದು ಹಾಸಿಗೆ ಮೇಲೆ ಮಲಗುವುದು

ಬೆಳಿಗ್ಗೆ ನೀವು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಮನೆಯಿಂದ ಹೊರಡುತ್ತೀರಿ. ನಂತರ ದೈನಂದಿನ ಕೆಲಸಗಳಿಗಾಗಿ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತೀರಿ. ಪರಿಸರದಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಕ್ರಿಮಿಗಳು ಬಟ್ಟೆಗಳಲ್ಲಿ ಸೇರಿರಬಹುದು. ನೀವು ಸಂಜೆ ಮನೆಗೆ ಬಂದಾಗ, ಅವುಗಳನ್ನು ತೆಗೆದು ಕೈಕಾಲು ತೊಳೆದು ಬೇರೆ ಬಟ್ಟೆ ಧರಿಸಬೇಕು. ನೀವು ಹೀಗೆ ಮಾಡದಿದ್ದರೆ, ಹಾಸಿಗೆಯನ್ನು ತಲುಪಿದ ಬ್ಯಾಕ್ಟೀರಿಯಾಗಳು ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡುತ್ತವೆ. ಬೆಡ್‌ಶೀಟ್‌ಗಳಲ್ಲಿ ಇವು ಉಳಿದು ಹೋಗಬಹುದು.

5. ಶೌಚಾಲಯ ಬಳಸಿದ ನಂತರ ಹ್ಯಾಂಡ್‌ವಾಶ್‌, ಸೋಪ್ ಬಳಸಿ ಕೈ ತೊಳೆಯದೇ ಇರುವುದು

ಇದು ಹಲವುರು ನಿರ್ಲಕ್ಷಿಸುವ ಅಂಶವಾಗಿದೆ. ಕೆಲವರು ನೀರಿನಿಂದ ಕೈ ತೊಳೆದರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಖಂಡಿತ ತಪ್ಪು ಗ್ರಹಿಕೆ. ಶೌಚಾಲಯಕ್ಕೆ ಹೋದ ನಂತರ ಅಥವಾ ಬಾಗಿಲನ್ನು ಮುಟ್ಟಿದ ನಂತರ ನಿಮ್ಮ ಕೈಗಳನ್ನು ಸೋಪಿನಿಂದ ತೊಳೆಯಲು ಮರೆಯದಿರಿ. ಸ್ನಾನಗೃಹದ ಬಾಗಿಲು, ಸ್ನಾನಗೃಹದ ನಳ್ಳಿ ಅಥವಾ ಶೌಚಾಲಯದ ಕಮೋಡ್ ಸೇರಿದಂತೆ ಯಾವುದನ್ನಾದರೂ ಮುಟ್ಟಿದ ನಂತರ ನಿಮ್ಮ ಕೈಗಳನ್ನು ಸೋಪ್ ಅಥವಾ ಹ್ಯಾಂಡ್‌ವಾಶ್ ಬಳಸಿ ತೊಳೆಯಲು ಮರೆಯದಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner