ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾದ ಸಚಿನ್ ಆಪ್ತ ವಿನೋದ್ ಕಾಂಬ್ಳಿ; ಏನಿದು ಸಮಸ್ಯೆ, ಇದರ ಪರಿಣಾಮಗಳೇನು?
ಟೀಮ್ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿರುವ ಸಚಿನ್ ಆಪ್ತನಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗಿದೆ. ಏನಿದು ಸಮಸ್ಯೆ, ಈ ಸಮಸ್ಯೆಗೆ ಕಾರಣವೇನು, ಇದರ ಪರಿಣಾಮವೇನು ಎಂಬಿತ್ಯಾದಿ ವಿವರ ಇಲ್ಲಿದೆ.
ಕ್ರಿಕೆಟಿಗ ಸಚಿನ್ ತೆಂಡ್ಕೂಲರ್‌ಗೆ ಆಪ್ತರಾಗಿರುವ, ಭಾರತ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರದ್ದೇ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿ ಡಿಸಾರ್ಜ್ ಆಗಿದ್ದ ವಿನೋದ್ ಕಾಂಬ್ಳಿ, ಇದೀಗ ನಿನ್ನೆ (ಡಿಸೆಂಬರ್ 24) ಪುನಃ ಆಸ್ಪತ್ರೆ ಸೇರಿದ್ದಾರೆ. ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದ್ದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯಕೀಯ ವರದಿಗಳು ತಿಳಿಸಿದ್ದಾಗಿ ಪಿಟಿಐ ಹೇಳಿದೆ.
52 ವರ್ಷದ ಕಾಂಬ್ಳಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ವಿವೇಕ್ ತ್ರಿವೇದಿ ಅವರ ಪ್ರಕಾರ, ಆರಂಭದಲ್ಲಿ ಕಾಂಬ್ಳಿ ಅವರಿಗೆ ಮೂತ್ರದ ಸೋಂಕಿನ ಸಮಸ್ಯೆಯಾಗಿತ್ತು. ಇದೀಗ ಪುನಃ ಆಸ್ಪತ್ರೆಗೆ ದಾಖಲಾಗಿದ್ದು, ಸತತ ವೈದ್ಯಕೀಯ ಪರೀಕ್ಷೆಗಳ ನಂತರ ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ಈ ಸಂದರ್ಭ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು, ಏನಿದು ಸಮಸ್ಯೆ, ಇದರ ಪರಿಣಾಮವೇನು ಎಂಬುದನ್ನು ನಾವು ತಿಳಿದುಕೊಳ್ಳೋಣ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು?
ಸೋಡಿಯಂ ಮತ್ತು ಪೊಟ್ಯಾಸಿಯಂನಲ್ಲಿನ ಅಸಮತೋಲನವು ಸೆಳೆತ ಮತ್ತು ಚಲನಶೀಲತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕಾಂಬ್ಳಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುತ್ತಾರೆ.
ಹಿಂದಿನ ಸ್ಟ್ರೋಕ್ ಪರಿಣಾಮದಿಂದಾಗಿ ಅವರಿಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ನ್ಯೂರೋ ಡಿಜೆನೆರೇಟಿವ್ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದರಿಂದ ಅವರಿಗೆ ನೆನಪಿನ ಶಕ್ತಿಯ ಕೊರತೆ, ಕೊಆರ್ಡಿನೇಷನ್ ಸಮಸ್ಯೆ ಎದುರಾಗಬಹುದು.
ಪಾರ್ಶ್ವವಾಯು ಸೂಚಕ
ಮೆದುಳಿನಲ್ಲಿ ರಕ್ತಹೆಪ್ಪುಗಟ್ಟುವುದು ಪಾರ್ಶ್ವವಾಯುವನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್.
‘ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳೆಂದರೆ ಮುಖದ ಅರ್ಧದಷ್ಟು ದೌರ್ಬಲ್ಯ, ದೇಹದ ಅರ್ಧದಷ್ಟು ದೌರ್ಬಲ್ಯ, ಮಾತನಾಡುವಾಗ ತೊದಲುವುದು, ನಡೆಯುವಾಗ ಸಮತೋಲನವಿಲ್ಲದೇ ಇರುವುದು, ದೃಷ್ಟಿಹೀನತೆ ಮತ್ತು ತೀವ್ರ ತಲೆನೋವು‘ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಸುಧೀರ್.
ಸ್ಟ್ರೋಕ್‌ನಲ್ಲಿ ಇಸ್ಕೀಮಿಕ್ ಸ್ಟ್ರೋಕ್ ಹಾಗೂ ಹೆಮರಾಜಿಕ್ ಸ್ಟ್ರೋಕ್ ಎಂಬ ಎರಡು ವಿಧಗಳಿವೆ. ಇದರಲ್ಲಿ ಇಸ್ಕೀಮಿಕ್ ಸ್ಟ್ರೋಕ್ ಅಂದರೆ ರಕ್ತಕೊರತೆಯ ಪಾರ್ಶ್ವವಾಯು (ಸಾಮಾನ್ಯವಾಗಿ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ) ಮತ್ತು ಹೆಮರಾಜಿಕ್ ಸ್ಟ್ರೋಕ್‌ಗಳು (ಹೆಚ್ಚಾಗಿ ಅಧಿಕ ರಕ್ತಸ್ರಾವದಿಂದ ಉಂಟಾಗುತ್ತದೆ).
ಎಲೆಕ್ಟ್ರೋಲೈಟ್ ಅಸಮತೋಲನಗಳು, ಅದರಲ್ಲೂ ವಿಶೇಷವಾಗಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಅಸಮತೋಲನದಿಂದ ಹೃದಯದ ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು.
ಈ ಅಸಮತೋಲನಗಳು ಅರೆಥ್ಮಿಯಾ ಅಥವಾ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು. ಇದು ಜೀವಕ್ಕೆ ಅಪಾಯವನ್ನು ಉಂಟುಮಾಡಬಹುದು‘ ಎಂದು ಹೈದ್ರಾಬಾದ್‌ನ ವೈದ್ಯರಾದ ಡಾ. ಎಂ. ಸಾಯಿ ಸುಧಾಕರ್ ಹೇಳುತ್ತಾರೆ.
ಸೋಡಿಯಂ, ಪೊಟ್ಯಾಸಿಯಂ ಕೊರತೆಯ ಪರಿಣಾಮಗಳು
ಸೋಡಿಯಂ ಪ್ರಮಾಣ ಕಡಿಮೆಯಾದರೆ (ಹೈಪೋನಾಟ್ರೀಮಿಯಾ) ದೌರ್ಬಲ್ಯ, ಆಯಾಸ, ವಾಕರಿಕೆ, ದಿಗ್ಭ್ರಮೆ, ಗೊಂದಲ ಇಂತಹ ಪರಿಸ್ಥಿತಿಗಳು ಎದುರಾಗಬಹುದು. ಕಡಿಮೆ ಪೊಟ್ಯಾಸಿಯಮ್ ಮಟ್ಟಗಳು (ಹೈಪೋಕಲೆಮಿಯಾ) ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು. ಮತ್ತೊಂದೆಡೆ, ಹೆಚ್ಚಿನ ಸೋಡಿಯಂ ಮಟ್ಟಗಳು ಅರೆನಿದ್ರಾವಸ್ಥೆ ಮತ್ತು ಕೋಮಾಗೆ ಕಾರಣವಾಗಬಹುದು. ಹೆಚ್ಚಿನ ಪೊಟ್ಯಾಸಿಯಮ್ ಮಟ್ಟಗಳು ಹೃದಯ ಬಡಿತದ ಮೇಲೆ ಪರಿಣಾಮ ಬೀರಬಹುದು ಎಂದು ಡಾ ಕುಮಾರ್ ಹೇಳುತ್ತಾರೆ.
ಪಾರ್ಶ್ವವಾಯುವಿಗೆ ಕಾರಣವಾಗುವ ಅಂಶಗಳು
ಪಾರ್ಶ್ವವಾಯುವಿಗೆ ಕಾರಣವಾಗುವ ಪ್ರಮುಖ ಅಪಾಯಕಾರಿ ಅಂಶಗಳೆಂದರೆ ಮಧುಮೇಹ, ಅಧಿಕ ರಕ್ತದೊತ್ತಡ, ಅಸಹಜ ಲಿಪಿಡ್ ಮಟ್ಟಗಳು, ಹೃತ್ಕರ್ಣದ ಕಂಪನ, ಧೂಮಪಾನ, ಮದ್ಯಪಾನ, ಜಡ ಜೀವನಶೈಲಿ, ಸ್ಥೂಲಕಾಯತೆ ಮತ್ತು ಒತ್ತಡದಂತಹ ಸಮಸ್ಯೆಗಳು. ವಯಸ್ಸಾದ ಮೇಲೆ ಕಾಣಿಸುವ ಹಾಗೂ ಸ್ಟ್ರೋಕ್‌ನ ಕೌಟುಂಬಿಕ ಇತಿಹಾಸ ಇದ್ದರೆ ಇದು ಗುಣಪಡಿಸಲಾಗದ ಅಪಾಯಕಾರಿ ಸ್ಥಿತಿಯನ್ನು ತಲುಪಬಹುದು ಎಂದು ವೈದ್ಯರು ಹೇಳುತ್ತಾರೆ.
ಡಾ ಕುಮಾರ್ ಅವರ ಪ್ರಕಾರ, ಮೆದುಳಿಗೆ ರಕ್ತದ ಹರಿವಿನ ಅಡಚಣೆಯಿಂದ ಪಾರ್ಶ್ವವಾಯು ಉಂಟಾದರೆ, ರೋಗಲಕ್ಷಣ ಪ್ರಾರಂಭದ ನಾಲ್ಕೂವರೆ ಗಂಟೆಗಳ ಒಳಗೆ ಹೆಪ್ಪುಗಟ್ಟುವಿಕೆ-ಬಸ್ಟರ್ ಔಷಧಿಗಳ ಮೂಲಕ ಚಿಕಿತ್ಸೆ ನೀಡಬಹುದು. ರೋಗನಿರ್ಣಯವು ವಿಳಂಬವಾಗಿದ್ದರೆ, ಮೆದುಳಿನಲ್ಲಿ ಹೊಸ ಹೆಪ್ಪುಗಟ್ಟುವಿಕೆ ರಚನೆಯನ್ನು ತಡೆಗಟ್ಟುವಲ್ಲಿ ಗಮನವು ಬದಲಾಗುತ್ತದೆ. ಅದಕ್ಕಾಗಿ ಆಸ್ಪಿರಿನ್ ಅಥವಾ ಕ್ಲೋಪಿಡೋಗ್ರೆಲ್ ಮತ್ತು ಸ್ಟ್ಯಾಟಿನ್‌ಗಳಂತಹ ರಕ್ತ ತೆಳುವಾಗಿಸುವ ಔಷಧಗಳನ್ನು ಪ್ರಾರಂಭಿಸಲಾಗುತ್ತದೆ. ಪಾರ್ಶ್ವವಾಯುವಿಗೆ ಅಪಾಯಕಾರಿ ಅಂಶಗಳನ್ನು ನಿರ್ಣಯಿಸಬೇಕು ಎಂದು ಅವರು ಹೇಳುತ್ತಾರೆ.
ಸ್ಟ್ರೋಕ್ ಚೇತರಿಕೆಯ ಅವಧಿ
‘ಸ್ಟ್ರೋಕ್ ತೀವ್ರತೆಯನ್ನು ಅವಲಂಬಿಸಿ, ಚೇತರಿಕೆಗೆ ತೆಗೆದುಕೊಳ್ಳುವ ಸಮಯ ಬದಲಾಗುತ್ತದೆ. ಸಣ್ಣ ಮಟ್ಟದ ಪಾರ್ಶ್ವವಾಯುಗಳಲ್ಲಿ ಚೇತರಿಕೆಯು ದಿನಗಳಿಂದ ವಾರಗಳಲ್ಲಿ ಸಂಭವಿಸಬಹುದು. ದೊಡ್ಡ ಮಟ್ಟದ ಮೆದುಳಿನ ಸ್ಟ್ರೋಕ್‌ಗಳಲ್ಲಿ ಚೇತರಿಸಿಕೊಳ್ಳಲು ತಿಂಗಳುಗಳಿಂದ ವರ್ಷಗಳವರೆಗೆ ತೆಗೆದುಕೊಳ್ಳಬಹುದು‘ಎಂದು ಡಾ ಕುಮಾರ್ ಹೇಳುತ್ತಾರೆ.
ಚೇತರಿಕೆಯ ಅವಧಿಯು ಎಲ್ಲರಿಗೂ ವಿಭಿನ್ನವಾಗಿರಬಹುದು. ಕೆಲವರು ಸುಲಭವಾಗಿ ತಮ್ಮ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ. ಆದರೆ ಇತರರು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು ಅಥವಾ ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ಒಳಗೊಂಡಿರುವ ನಿರಂತರ ರಿಹೆಬಿಲಿಟೇಷನ್ ಅಗತ್ಯವಿರುತ್ತದೆ. ಈ ಸ್ಥಿತಿಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದರಿಂದ ದೀರ್ಘಕಾಲೀನ ತೊಡಕುಗಳನ್ನು ಕಡಿಮೆ ಮಾಡುವ ಜೊತೆಗೆ ಚಿಕಿತ್ಸಾ ವಿಧಾನದ ಪರಿಣಾಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ”ಎಂದು ಗ್ಲೆನೆಗಲ್ಸ್ ಆಸ್ಪತ್ರೆ ಪರೇಲ್ ಮುಂಬೈನ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಂಕಜ್ ಅಗರ್ವಾಲ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)