Health Tips: ಹಲವು ಸಮಸ್ಯೆಗಳನ್ನ ನಿವಾರಿಸುತ್ತೆ ವಿಟಮಿನ್ ಕೆ; ಈ ಪೋಷಕಾಂಶವಿರುವ ಆಹಾರಗಳಿವು
ನಾವು ಸೇವಿಸುವ ಆಹಾರವು ಆರೋಗ್ಯಕರವಾಗಿದ್ದರೆ ಯಾವ ಆಸ್ಪತ್ರೆಯ ಸಹವಾಸವೂ ಬೇಕಾಗುವುದಿಲ್ಲ. ಹೀಗಾಗಿ ನಾವು ಸೇವಿಸುವ ಆಹಾರವನ್ನು ಜಾಣ್ಮೆಯಿಂದ ಆಯ್ಕೆ ಮಾಡಬೇಕು. ಎಲ್ಲಾ ರೀತಿಯ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವನೆಯು ಉತ್ತಮ ಆರೋಗ್ಯದ ಮೊದಲ ಗುಟ್ಟಾಗಿದೆ.ಅದರಲ್ಲೂ ವಿಟಾಮಿನ್ ಕೆ ಅಂಶವನ್ನೊಳಗೊಂಡ ಆಹಾರವು ನಮ್ಮ ದೇಹಕ್ಕೆ ಬಹಳ ಅವಶ್ಯ.
ನಮ್ಮ ದಿನನಿತ್ಯದ ಆಹಾರ ಸೇವನೆಯು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಬೇಕರಿ ತಿನಿಸುಗಳು, ಜಂಕ್ಫುಡ್ಗಳು, ತಂಪು ಪಾನೀಯಗಳು ನಾಲಿಗೆಗೆ ರುಚಿ ಎನಿಸಿದರು ಕೂಡ ಆರೋಗ್ಯಕ್ಕೆ ಅವು ಕಹಿಯೇ. ಈಗಂತೂ ಮಧುಮೇಹ, ಥೈರಾಯ್ಡ್ , ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚುತ್ತಿದ್ದು, ಇದರಿಂದ ನಮ್ಮ ಆಹಾರದ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಅದರಲ್ಲೂ ನೀವು ನಿತ್ಯ ಸೇವಿಸುವ ಆಹಾರದಲ್ಲಿ ವಿಟಮಿನ್ ಕೆ ಅಂಶ ಹೇರಳವಾಗಿ ಇದ್ದರೆ ಮಧುಮೇಹದ ಅಪಾಯದಿಂದ ಪಾರಾಗಬಹುದು. ಮಾತ್ರವಲ್ಲದೇ ವಿಟಮಿನ್ ಕೆ ಜೀವಸತ್ವವು ನಿಮ್ಮ ದೇಹದಲ್ಲಿ ಆಂಟಿಆಕ್ಸಿಡೆಂಟ್ಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಚರ್ಮದ ಸಮಸ್ಯೆಗಳನ್ನು ನಿವಾರಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ವಿಟಮಿನ್ ಕೆ ಅಂಶವುಗಳ್ಳ ಆಹಾರವನ್ನು ಸೇವಿಸುವುದು ತುಂಬಾನೇ ಮುಖ್ಯ. ಹಾಗಾದರೆ ವಿಟಮಿನ್ ಕೆ ಅಗಾಧ ಪ್ರಮಾಣದಲ್ಲಿ ಇರುವ ಆಹಾರ ಪದಾರ್ಥಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
ವಿಟಮಿನ್ ಕೆ ಅಗಾಧ ಪ್ರಮಾಣದಲ್ಲಿರುವ ಆಹಾರಗಳು
ಕೋಸುಗಡ್ಡೆ
ಕೋಸುಗಡ್ಡೆಯಲ್ಲಿ ವಿಟಮಿನ್ ಕೆ ಹಾಗೂ ಆಂಟಿಆಕ್ಸಿಡಂಟ್ ಪ್ರಮಾಣ ಹೇರಳವಾಗಿ ಇರುತ್ತದೆ. ಇದು ನಿಮಗೆ ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಈ ತರಕಾರಿ ನಿಮಗೆ ಕೊಂಚ ದುಬಾರಿ ಎನಿಸಿದರೂ ಸಹ ಆರೋಗ್ಯದ ದೃಷ್ಟಿಯಿಂದ ಇದರಿಂದ ಸೇವನೆಯಿಂದ ಬಹಳ ಲಾಭವಿದೆ.
ಬಸಳೆ ಸೊಪ್ಪು
ಬಸಳೆ ಸೊಪ್ಪಿನಲ್ಲಿ ವಿಟಮಿನ್ ಕೆ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಅಲ್ಲದೇ ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸುವಲ್ಲಿ ಬಸಳೆ ಸೊಪ್ಪು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬಸಳೆ ಸೊಪ್ಪು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಮೂಳೆಗಳನ್ನೂ ಬಲಪಡಿಸುವ ಕಾರ್ಯವನ್ನು ಮಾಡುತ್ತವೆ.
ಬ್ರೊಕೋಲಿ
ಬ್ರೊಕೋಲಿಯಲ್ಲೂ ವಿಟಮಿನ್ ಕೆ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಆಂಟಿಆಕ್ಸಿಡಂಟ್ಗಳನ್ನು ಪೂರೈಸುವಲ್ಲಿಯೂ ಬ್ರೊಕೋಲಿ ಸಹಕಾರಿ. ಇದು ಮಧುಮೇಹಿಗಳಿಗೆ, ಕ್ಯಾನ್ಸರ್ನಿಂದ ಬಳಲುತ್ತಿರುವವರ ಆರೋಗ್ಯ ಕಾಪಾಡಲು ಸಹಕರಿಸುತ್ತದೆ. ದೇಹದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸಲು ಸಹ ಬ್ರೊಕೋಲಿಯನ್ನು ಬಳಕೆ ಮಾಡಬಹುದಾಗಿದೆ.
ಬ್ರೂಸೆಲ್ಸ್ ಮೊಗ್ಗುಗಳು
ಇವುಗಳು ವ್ಯಾಪಕವಾಗಿ ಸಿಗುವ ತರಕಾರಿಗಳಲ್ಲ. ಆದರೂ ಸಹ ಈ ತರಕಾರಿಯಲ್ಲಿ ವಿಟಮಿನ್ ಕೆ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಫೈಬರ್ ಅಂಶ ಕೂಡ ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಇರುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಈ ತರಕಾರಿ ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಈ ತರಕಾರಿಯನ್ನು ತಮ್ಮ ಆಹಾರದಲ್ಲಿ ಬಳಸಿಕೊಳ್ಳುವುದು ಉತ್ತಮವಾಗಿದೆ.