ದೀರ್ಘಾಯಸ್ಸು ನಿಮ್ಮದಾಗಬೇಕಾ, ಪ್ರತಿದಿನ 5 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ, ಆರೋಗ್ಯದಲ್ಲೂ ಗಮನಾರ್ಹ ಬದಲಾವಣೆಯಾಗುತ್ತೆ
ದೀರ್ಘಾಯಸ್ಸು ನಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇತ್ತೀಚಿನ ಜಡ ಜೀವನಶೈಲಿಯು ನಮ್ಮ ದೇಹವನ್ನು ಕಾಯಿಲೆಯ ಗೂಡಾಗಿಸುತ್ತಿದೆ. ಆದರೆ ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲ ಈ ವ್ಯಾಯಾಮಗಳನ್ನು ಮಾಡುವುದರಿಂದ ದೀರ್ಘಕಾಲ ಬದುಕಬಹುದಂತೆ.

ಇತ್ತೀಚಿನ ದಿನಗಳಲ್ಲಿ ದೀರ್ಘಾಯಸ್ಸು ಅನ್ನೋದು ಕನಸಾಗಿದೆ, ಎಳೆ ವಯಸ್ಸಿನಲ್ಲೇ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಜಡ ಜೀವನಶೈಲಿಯು ಮನುಷ್ಯನ ಆಯಸ್ಸು ಕುಂಠಿತವಾಗಲು ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ದೈಹಿಕ ಚಟುವಟಿಕೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಲಾಗುತ್ತದೆ.
ಆದರೆ ಹಲವರಿಗೆ ಈ ಒತ್ತಡದ ಜೀವನಶೈಲಿಯ ನಡುವೆ ಜಿಮ್‌ಗೆ ಹೋಗಿ ಬೆವರಿಳಿಸೋದು, ತೀವ್ರತರದ ವ್ಯಾಯಾಮ ಮಾಡುವುದು ಕಷ್ಟಸಾಧ್ಯವಾಗಿದೆ. ಆದರೆ ದಿನದಲ್ಲಿ ಕೇವಲ 5 ನಿಮಿಷ ಮೀಸಲಿರಿಸುವುದರಿಂದ ನಾವು ದೀರ್ಘಕಾಲ ಬದುಕಬಹುದು, ಹೇಗೆ ಎಂದು ಮುಂದೆ ಓದಿ.
ಎಡಿತ್ ಕೋವನ್ ವಿಶ್ವವಿದ್ಯಾಲಯದ (ECU) ಸಂಶೋಧಕರು ಕೇವಲ ಐದು ನಿಮಿಷಗಳ ಕಾಲ ಮನೆಯಲ್ಲಿ ವ್ಯಾಯಾಮ ಮಾಡುವುದರಿಂದ ಜಡ ವ್ಯಕ್ತಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ECU ನ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ಶಾಲೆಯ ಡಾ. ಬೆಂಜಮಿನ್ ಕಿರ್ಕ್ ಮತ್ತು ಪ್ರೊಫೆಸರ್ ಕೆನ್ ನೊಸಾಕಾ ನೇತೃತ್ವದ ಅಧ್ಯಯನವು ದೈಹಿಕ ಸಾಮರ್ಥ್ಯ, ದೇಹದ ಸಂಯೋಜನೆ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ಈ 5 ನಿಮಿಷದ ವ್ಯಾಯಾಮವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.
ಈ ಅಧ್ಯಯನವು 4 ವಾರಗಳ ಕಾಲ ನಡೆದಿದ್ದು, ಇದರಲ್ಲಿ ಭಾಗವಹಿಸಿದವರು ಪ್ರತಿದಿನ ಕೆಲವು ಸರಳ ವ್ಯಾಯಾಮಗಳನ್ನು ಮಾಡಿದ್ದಾರೆ. ಕುರ್ಚಿ ಸ್ಕ್ವಾಟ್‌ಗಳು, ಕುರ್ಚಿ ಒರಗುವಿಕೆಗಳು, ಗೋಡೆಯ ಪುಷ್-ಅಪ್‌ಗಳು ಮತ್ತು ಹೀಲ್ ಡ್ರಾಪ್‌ಗಳ ಇಂತಹ ಸರಳ ವ್ಯಾಯಾಮಗಳನ್ನು ಮಾಡಬೇಕಿತ್ತು. ECU ವೆಬ್‌ಸೈಟ್ ಉಲ್ಲೇಖಿಸಿದಂತೆ, ಪ್ರೊಫೆಸರ್ ಕೆನ್ ನೊಸಾಕಾ, ‘ಸ್ನಾಯು ಶಕ್ತಿ, ನಮ್ಯತೆ, ಶಕ್ತಿ ಸಹಿಷ್ಣುತೆ ಮತ್ತು ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ನಾವು ಕಂಡುಕೊಂಡಿದ್ದೇವೆ. ಸಣ್ಣ ಪ್ರಮಾಣದ ದೈನಂದಿನ ವ್ಯಾಯಾಮವು ಕೂಡ ಜಡ ವ್ಯಕ್ತಿಗಳಿಗೆ ಸುಸ್ಥಿರ ಹಾಗೂ ಪರಿಣಾಮಕಾರಿ ಪ್ರಯೋಜನಗಳನ್ನು ನೀಡುತ್ತದೆ‘ ಎಂಬುದನ್ನು ಈ ಸಂಶೋಧನೆಯ ಮೂಲಕ ಕಂಡುಕೊಳ್ಳಲಾಗಿದೆ ಎಂದಿದ್ದಾರೆ.
ಇಂತಹ ಸರಳ ದೈನಂದಿನ ಅಭ್ಯಾಸಗಳು ಜಿಮ್‌ಗೆ ತೆರಬಹುದಾದ ದುಬಾರಿ ಹಣವನ್ನು ಉಳಿಸುತ್ತದೆ. ಸಮಯ ಕೊರತೆ ಇದ್ದವರಿಗೂ ಇದು ಉತ್ತಮ ಎಂದು ಅವರು ಹೇಳುತ್ತಾರೆ.
ವೈದ್ಯರ ಪ್ರಕಾರ ದೇಹ, ಆಹಾರ ಮತ್ತು ಮನಸ್ಸನ್ನು ನೋಡಿಕೊಳ್ಳುವುದನ್ನು ಹೊರತುಪಡಿಸಿ ದೀರ್ಘಕಾಲ ಬದುಕಲು ಯಾವುದೇ ರಹಸ್ಯ ಸೂತ್ರವಿಲ್ಲ, ದೀರ್ಘಾಯಸ್ಸಿಗಾಗಿ ನಾವು ಅನುಸರಿಸಬೇಕಾದ ಇತರ ಸರಳ ಅಭ್ಯಾಸಗಳಿವು. 5 ನಿಮಿಷಗಳ ಕಾಲ ಮಾಡಬಹುದಾದ ಇಂತಹ ವ್ಯಾಯಾಮಗಳ ಜೊತೆಗೆ ಈ ಕೆಲವು ವಿಚಾರಗಳ ಮೇಲೂ ಗಮನ ಹರಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.
ಆಹಾರ ಪದ್ಧತಿ
ಆಹಾರ ಪದ್ಧತಿ ಅಥವಾ ಡಯೆಟ್ ವಿಚಾರಕ್ಕೆ ಬಂದಾಗ 80–20 ನಿಯಮವನ್ನು ಪಾಲಿಸುವುದು ಅವಶ್ಯ. ಇದರ ಪ್ರಕಾರ ನೀವು ಹೆಚ್ಚಿನ ಸಮಯ ಆರೋಗ್ಯಕರವಾದ ಹಾಗೂ ಸಾಂದರ್ಭಿಕವಾಗಿ ತಿನ್ನುವುದರತ್ತ ಗಮನ ಕೊಡಬೇಕು. ಆಹಾರದ ವಿಷಯಕ್ಕೆ ಬಂದಾಗ, ಸ್ಥಳೀಯ, ಕಾಲೋಚಿತ ಮತ್ತು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಅಂಟಿಕೊಳ್ಳಿ.ಸಾಕಷ್ಟು ತರಕಾರಿಗಳು, ಹಣ್ಣುಗಳು, ನೀವು ಮಾಂಸಾಹಾರಿಗಳಾಗಿದ್ದರೆ ಕಡಿಮೆ ಕೊಬ್ಬಿನ ಮಾಂಸ, ಮೊಟ್ಟೆ ಇತ್ಯಾದಿಯನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಸಕ್ಕರೆ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು. ಸಾಕಷ್ಟು ಪ್ರೊಟೀನ್ ಸಮೃದ್ಧ ಆಹಾರ ಸೇವಿಸಬೇಕು.
ವ್ಯಾಯಾಮ
ನೀವು ತೂಕ ಇಳಿಸಿಕೊಳ್ಳಲು ಅಥವಾ ಸ್ನಾಯುಗಳನ್ನು ಬಲಗೊಳಿಸಲು ಪ್ರಯತ್ನಿಸದೇ ಇದ್ದರೆ ನೀವು ಇಷ್ಟಪಡುವ ಯಾವುದೇ ರೀತಿಯ ದೈಹಿಕ ಚಟುವಟಿಕೆಯನ್ನು ನೀವು ಆರಿಸಿಕೊಳ್ಳಬಹುದು - ಜಿಮ್, ಚುರುಕಾದ ನಡಿಗೆ, ಓಟ, ಈಜು ಅಥವಾ ಏರೋಬಿಕ್ಸ್/ಪೈಲೇಟ್ಸ್, ಆದರೆ ದಿನಕ್ಕೆ 30 ನಿಮಿಷ ಇದಕ್ಕಾಗಿ ಮೀಸಲಿಡಬೇಕು. ಅಂತಿಮವಾಗಿ ಒತ್ತಡ-ಮುಕ್ತವಾಗಿರುವುದು ಮುಖ್ಯ. ಯೋಗ, ಧ್ಯಾನ ಅಥವಾ ಮೈಂಡ್‌ಫುಲ್‌ನೆಸ್ ಅನ್ನು ತಮ್ಮ ದೈನಂದಿನ ಅಭ್ಯಾಸಗಳಿಗೆ ಸೇರಿಸಿಕೊಳ್ಳಬೇಕು.
ಇವೂ ಅವಶ್ಯ
ಇವುಗಳ ಜೊತೆಗೆ, ದೇಹದಲ್ಲಿ ನೀರಿನಂಶ ಹೆಚ್ಚಿರುವುದು ಮತ್ತು ಸಾಕಷ್ಟು ನಿದ್ರೆ ಪಡೆಯುವುದು (ದಿನಕ್ಕೆ ಕನಿಷ್ಠ 7 ಗಂಟೆಗಳು) ಮುಖ್ಯ. ಅಲ್ಲದೆ, ನಿಮ್ಮ ದೇಹದಲ್ಲಿನ ಯಾವುದೇ ಅಸಹಜತೆಯನ್ನು ಪತ್ತೆಹಚ್ಚಲು ಮತ್ತು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಲು ನಿಯಮಿತ ವೈದ್ಯಕೀಯ ತಪಾಸಣೆಗಳು ಅತ್ಯಗತ್ಯ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ