ಎಷ್ಟು ದಿನಕ್ಕೊಮ್ಮೆ ನೀರಿನ ಬಾಟಲಿ ತೊಳೆಯಬೇಕು, ಸ್ವಚ್ಛ ಮಾಡುವ ವಿಧಾನ ಹೇಗೆ? ಬಾಟಲಿಯಲ್ಲಿ ನೀರು ಕುಡಿಯುವವರು ಗಮನಿಸಿ
ಇತ್ತೀಚಿನ ದಿನಗಳಲ್ಲಿ ಹೈಡ್ರೇಶನ್ ಮಹತ್ವದ ಬಗ್ಗೆ ಸಾಕಷ್ಟು ಕೇಳಿರುತ್ತವೆ. ಆ ಕಾರಣಕ್ಕೆ ನಾವು ಹೆಚ್ಚು ಹೆಚ್ಚು ನೀರು ಕುಡಿಯುತ್ತೇವೆ. ನೀವು ಬಾಟಲಿಯಲ್ಲಿ ನೀರು ತುಂಬಿಸಿಟ್ಟುಕೊಂಡು ಕುಡಿಯುತ್ತೀರಾ, ಹಾಗಾದ್ರೆ ಎಷ್ಟು ದಿನಕ್ಕೊಮ್ಮೆ ಬಾಟಲಿ ತೊಳೆಯಬೇಕು, ಸ್ವಚ್ಛ ಮಾಡುವ ವಿಧಾನ ಹೇಗೆ ಎಂಬ ವಿವರ ಇಲ್ಲಿದೆ.
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಅತಿ ಅವಶ್ಯ. ಆರೋಗ್ಯವಂತ ಮನುಷ್ಯ ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು. ವೈದ್ಯರು ಕೂಡ ನೀರು ಕುಡಿಯುವ ಮಹತ್ವವನ್ನು ಒತ್ತಿ ಹೇಳುತ್ತಾರೆ. ಹಾಗಾಗಿ ಹೈಡ್ರೇಶನ್ ತತ್ವ ಪಾಲಿಸುವವರ ಸಂಖ್ಯೆ ಇತ್ತೀಚೆಗೆ ದುಪ್ಪಟ್ಟಾಗಿದೆ. ನೀರು ಕುಡಿಯಲು ಹೆಚ್ಚಿನವರು ಬಾಟಲಿಯನ್ನು ಅವಲಂಬಿಸಿರುತ್ತಾರೆ. ಆದರೆ ಬಾಟಲಿಯಲ್ಲಿ ನೀವು ಕುಡಿಯುವವರು ಈ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು.
ನೀರು ಕುಡಿಯುಲು ಪದೇ ಪದೇ ಎದ್ದು ಹೋಗುವುದು ಕಷ್ಟ, ಎಲ್ಲಾದ್ರೂ ಹೋಗದಾಗ ನೀರು ಸಿಗದೇ ಇರಬಹುದು, ನೀರಿನ ಗುಣಮಟ್ಟ ಚೆನ್ನಾಗಿ ಇರದೇ ಇರಬಹುದು ಈ ಹಲವು ಕಾರಣಗಳಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟು ಕುಡಿಯುತ್ತೇವೆ. ಆದರೆ ಹಲವರು ಬಾಟಲಿಯ ನೈಮರ್ಲ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಉತ್ತಮ ಆರೋಗ್ಯಕ್ಕೆ ನೀರು ಕುಡಿಯವುದಷ್ಟೇ ಅಲ್ಲ ಬಾಟಲಿಯನ್ನು ಆಗಾಗ ಸ್ವಚ್ಚ ಮಾಡುವುದು ಕೂಡ ಅತಿ ಅಗತ್ಯ. ಸಾಕಷ್ಟು ಜನರು ಬಾಟಲಿಯನ್ನು ಸ್ವಚ್ಛ ಮಾಡುವ ವಿಚಾರದಲ್ಲಿ ಅಸಡ್ಡೆ ತೋರುತ್ತಾರೆ. ಆದರೆ ತೊಳೆಯದೇ ಇರುವ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು.
ಗ್ರೇಟರ್ ನೋಯ್ಡಾದ ಯಥಾರ್ಥ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಲಹೆಗಾರ ಮಕ್ಕಳ ವೈದ್ಯರಾದ ಡಾ. ಪ್ರಶಾಂತ್ ಅವರ ಪ್ರಕಾರ, ನೀರಿನ ಬಾಟಲಿಯನ್ನು ಬಹಳ ದಿನಗಳವರೆಗೆ ಸ್ವಚ್ಛಗೊಳಿಸದಿರುವುದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನೀರಿನ ಬಾಟಲಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೂಕ್ಷ್ಮಾಣು ಜೀವಿಗಳು ಬಹಳ ಬೇಗನೆ ಬೆಳೆಸುವ ಸಾಧ್ಯತೆ ಇದೆ. ಸಾಲ್ಮೊನೆಲ್ಲಾ ಮತ್ತು ಇ.ಕೋಲಿಯಂತಹ ನೀರಿನ ಬಾಟಲಿಗಳಲ್ಲಿ ಬೆಳೆಯುವ ಈ ಕೆಲವು ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ತುಂಬಾ ಹಾನಿಕಾರ. ಅವು ಫಂಗಸ್‌ಗಳ ಬೆಳವಣಿಗೆಯನ್ನು ಉತ್ತೇಜಿಸಬಹುದು‘ ಎಂದು ಹೇಳುತ್ತಾರೆ.
ಪ್ಲಾಸ್ಟಿಕ್ ಬಾಟಲಿಗಳನ್ನು ಆಗಾಗ ಸ್ವಚ್ಛ ಮಾಡದೇ ನೀರು ಕುಡಿಯುವುದರಿಂದ ಕೆಟ್ಟ ವಾಸನೆ ಉಂಟಾಗಬಹುದು. ಇದು ಸಾಮಾನ್ಯವಾಗಿ ಬಾಟಲಿಗಳ ಮೇಲ್ಮೈಯಲ್ಲಿ ಜೈವಿಕ ಫಿಲ್ಮ್ ಅನ್ನು ಅಭಿವೃದ್ಧಿಪಡಿಸುವ ಬ್ಯಾಕ್ಟೀರಿಯಾದ ಪರಿಣಾಮವಾಗಿದೆ. ಈ ರೀತಿ ವಾಸನೆ ಬರಲು ಆರಂಭಿಸಿದ ಮೇಲೆ ಬಾಟಲಿಯನ್ನು ಸ್ವಚ್ಛಗೊಳಿಸುವುದು ಕಷ್ಟವಾಗುತ್ತದೆ.
ನೀರಿನ ಬಾಟಲಿಯನ್ನು ಸ್ವಚ್ಛ ಮಾಡುವ ವಿಧಾನ
ಬಾಟಲಿಗೆ ನೀರು ಹಾಕಿ ಅಲುಗಾಡಿಸಿ ಬಿಟ್ಟರೆ ಬಾಟಲಿ ತೊಳೆದಂತೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಇದು ಖಂಡಿತ ಉತ್ತಮ ವಿಧಾನವಲ್ಲ. ನೀರಿನ ಬಾಟಲಿಯನ್ನು ಸೋಪ್‌ನಿಂದ ತೊಳೆಯುವುದು ಉತ್ತಮ ವಿಧಾನ ಎಂದು ಡಾ. ಪ್ರಶಾಂತ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನೀರು ಮಾತ್ರವಲ್ಲ ನೀವು ಯಾವುದೇ ಪಾನೀಯವನ್ನು ಕುಡಿಯಲು ಬಾಟಲಿ ಬಳಸುತ್ತಿದ್ದರೆ ಪ್ರತಿ ಬಾರಿ ಸೋಪ್ ಅಥವಾ ಸೋಪ್ ವಾಟರ್‌ನಿಂದ ಸಂಪೂರ್ಣ ಸ್ವಚ್ಛ ಮಾಡುವುದನ್ನು ಮರೆಯಬಾರದು. ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ವಾರಕ್ಕೊಮ್ಮೆ ಆಟೋಕ್ಲೇವ್ ಯಂತ್ರವನ್ನು ಬಳಸಿ ಎಂದು ಅವರು ಸಲಹೆ ನೀಡುತ್ತಾರೆ.
ಪ್ಲಾಸ್ಟಿಕ್ ಬಾಟಲಿಗಳ ವಿಷಯಕ್ಕೆ ಬಂದಾಗ, ಬಿಸಿನೀರು ಅಥವಾ ರಾಸಾಯನಿಕ ಅಂಶ ಇರುವ ಸೋಪ್‌ಗಳ ಸಂಪರ್ಕಕ್ಕೆ ಬಂದಾಗ ಪ್ಲಾಸ್ಟಿಕ್ ಬಾಟಲಿಗಳು ಹಾನಿಗೊಳಗಾಗುತ್ತವೆ ಎಂಬುದು ಕೂಡ ಗಮನಿಸಬೇಕಾದ ಅಂಶ. ಮತ್ತೊಂದೆಡೆ ಗಾಜಿನ ಬಾಟಲಿಗಳು ಸ್ವಲ್ಪ ಮಟ್ಟಿಗೆ ಶಾಖವನ್ನು ತಡೆದುಕೊಳ್ಳಬಲ್ಲವು. ಆದಾಗ್ಯೂ, ಸ್ಟೇನ್‌ಲೆಸ್ ಸ್ಟೀಲ್ ಕೆಲವೊಮ್ಮೆ ಬ್ಲೀಚ್ ಮತ್ತು ಕ್ಲೋರಿನ್‌ನಂತಹ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ಬಾಟಲಿಯ ಒಳಭಾಗಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಬಾಟಲಿಗಳನ್ನು ತೊಳೆಯುವಾಗ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಹಾಗಾಗಿ ಬಾಟಲಿ ತೊಳೆಯುವ ಮುನ್ನ ಎಚ್ಚರ ವಹಿಸಿ.
ಬಾಟಲಿಯನ್ನು ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು
ಪ್ರತಿದಿನ ನಾವು ಬಳಸುವ ನೀರಿನ ಬಾಟಲಿಯನ್ನು ತೊಳೆಯಬೇಕು. ಆದರೆ ವಾರಕ್ಕೊಮ್ಮೆ ಒಳಗಿನಿಂದ ಹೊರಗಿನಿಂದ ಚೆನ್ನಾಗಿ ಸ್ವಚ್ಛ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನೀರಿನ ಬಾಟಲಿ ಕ್ಲೀನ್ ಮಾಡುವ ವಿನೇಗರ್, ಅಡುಗೆ ಸೋಡಾ ಕೂಡ ಬಳಸಬಹುದು, ಇದರಿಂದ ಬ್ಯಾಕ್ಟೀರಿಯಾಗಳು ಬಾಟಲಿಯೊಳಗೆ ಸೇರಿಕೊಳ್ಳದಂತೆ ನೋಡಿಕೊಳ್ಳಬಹುದು.