ಕಲ್ಲಂಗಡಿ ರುಚಿಯಾಗಿದೆ, ತಂಪಾಗುತ್ತೆ ಎಂದು ಅತಿಯಾಗಿ ತಿನ್ನಬೇಡಿ; ಈ ಅಡ್ಡಪರಿಣಾಮಗಳು ಉಂಟಾಗಬಹುದು
ಕಲ್ಲಂಗಡಿ ಬೇಸಿಗೆಯಲ್ಲಿ ತಂಪಾಗಿಸುವ ಹಣ್ಣು. ಇದರಲ್ಲಿ ನೀರಿನಂಶ ಹೆಚ್ಚಿರುವುದರಿಂದ ಕೆಲವರು ಅತಿಯಾಗಿ ತಿನ್ನುತ್ತಾರೆ. ಆದರೆ, ಕಲ್ಲಂಗಡಿ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಕಲ್ಲಂಗಡಿ ಬೇಸಿಗೆಯ ಹಣ್ಣು. ಇದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕಲ್ಲಂಗಡಿಯಲ್ಲಿರುವ ನೀರಿನ ಅಂಶವು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು ಮಾತ್ರವಲ್ಲದೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಹೆಚ್ಚು ಕಲ್ಲಂಗಡಿ ತಿನ್ನುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು.
ಕಲ್ಲಂಗಡಿಯನ್ನು ಹೆಚ್ಚಾಗಿ ಬೇಸಿಗೆಯಲ್ಲಿ ತಿನ್ನಲಾಗುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಅಂಶವಿದೆ ಮತ್ತು ಅದನ್ನು ಹೆಚ್ಚು ತಿನ್ನುವುದು ದೇಹವನ್ನು ತಂಪಾಗಿಸುತ್ತದೆ. ದೇಹವನ್ನು ನಿರ್ವಿಷಗೊಳಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಕಲ್ಲಂಗಡಿ ತಿಂದರೆ, ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಹೆಚ್ಚು ಕಲ್ಲಂಗಡಿ ತಿನ್ನುವುದು ಒಳ್ಳೆಯದಲ್ಲ. ಹೆಚ್ಚು ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಏನು ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹೆಚ್ಚು ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು
ಪದೇ ಪದೇ ಮೂತ್ರವಿಸರ್ಜನೆ: ಕಲ್ಲಂಗಡಿಯಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ. ಕಲ್ಲಂಗಡಿ ಹೆಚ್ಚಿನ ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಹೆಚ್ಚು ಕಲ್ಲಂಗಡಿ ಹಣ್ಣು ಸೇವಿಸಿದರೆ, ಆಗಾಗ ಮೂತ್ರ ವಿಸರ್ಜನೆ ಮಾಡಬೇಕಾಗಬಹುದು. ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಎಲೆಕ್ಟ್ರೋಲೈಟ್‌ಗಳ ಕೊರತೆ ಇರಬಹುದು. ಇದು ನಿಮ್ಮನ್ನು ದುರ್ಬಲ, ತಲೆತಿರುಗುವಿಕೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿ ಆದಷ್ಟು ಮಿತವಾಗಿ ತಿನ್ನುವುದು ಉತ್ತಮ.
ಜೀರ್ಣಕಾರಿ ಅಸ್ವಸ್ಥತೆಗಳು: ಕಲ್ಲಂಗಡಿಯಲ್ಲಿ ನೀರು ಮತ್ತು ಫ್ರಕ್ಟೋಸ್ ಸಮೃದ್ಧವಾಗಿದೆ. ಅಂತಹ ಸಂದರ್ಭಗಳಲ್ಲಿ, ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೆ, ಅದು ಗ್ಯಾಸ್, ಹೊಟ್ಟೆಯುಬ್ಬರ, ಆಮ್ಲೀಯತೆ, ಅತಿಸಾರ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹಿಗಳು ತಿನ್ನುವುದು ಉತ್ತಮವಲ್ಲ: ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಿಹಿಕಾರಕವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೆ, ಇದರ ಗ್ಲೈಸಮಿಕ್ ಸೂಚ್ಯಂಕ ತುಂಬಾ ಹೆಚ್ಚಿರುವುದರಿಂದ ಇದು ಮಧುಮೇಹಿಗಳಿಗೆ ಸೂಕ್ತವಲ್ಲ. ಆದ್ದರಿಂದ ಮಧುಮೇಹ ಇರುವವರು ಕಲ್ಲಂಗಡಿ ತಿನ್ನುವುದು ಒಳ್ಳೆಯದಲ್ಲ.
ಹೈಪರ್ಕಲೇಮಿಯಾ ಉಂಟಾಗುವ ಅಪಾಯ: ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಪೊಟ್ಯಾಸಿಯಮ್ ದೇಹಕ್ಕೆ ಒಳ್ಳೆಯದು. ಆದರೆ, ಪೊಟ್ಯಾಸಿಯಮ್‌ನ ಹೆಚ್ಚಿನ ಸೇವನೆಯು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೈಪರ್ಕಲೇಮಿಯಾ ಉಂಟಾಗುವ ಅಪಾಯವಿದೆ. ಈ ಸ್ಥಿತಿಯಲ್ಲಿ, ದೇಹದಲ್ಲಿನ ಸ್ನಾಯುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ದಿನಕ್ಕೆ ಒಂದು ಬಾರಿ ಕಲ್ಲಂಗಡಿ ತಿನ್ನಬಹುದು.
ಗಂಟಲು ನೋವು: ಬೇಸಿಗೆ ಎಂದು ಕೆಲವರು ಕಲ್ಲಂಗಡಿಯನ್ನು ಫ್ರಿಜ್‌ನಲ್ಲಿರಿಸಿ ತಿನ್ನುತ್ತಾರೆ. ಫ್ರಿಜ್‌ನಲ್ಲಿ ಇಟ್ಟಿರುವ ಕಲ್ಲಂಗಡಿಯನ್ನು ಹೆಚ್ಚು ತಿನ್ನುವುದರಿಂದ ಗಂಟಲು ನೋವು ಮತ್ತು ಶೀತದಂತಹ ಸಮಸ್ಯೆಗಳು ಉಂಟಾಗಬಹುದು. ಫ್ರಿಜ್‍ನಲ್ಲಿ ಇರಿಸಲಾದ ಕಲ್ಲಂಗಡಿಯನ್ನು ಹೆಚ್ಚು ತಿನ್ನಬಾರದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).
