Weight Control: ಚಳಿಗಾಲದಲ್ಲಿ ನಾಲಿಗೆ ಚಪಲವನ್ನೂ ತಣಿಸಿ, ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾ, ಹಾಗಿದ್ರೆ ಇವುಗಳನ್ನು ಸೇವಿಸಿ
ಚಳಿಗಾಲ ಬಂತು ಎಂದರೆ ಸಾಕು ಬೆಚ್ಚಗೆ ಮಲಗಿ ಬಿಡೋಣ ಎನಿಸುತ್ತೆ. ಸಂಜೆಯಾಗುತ್ತಿದ್ದಂತೆಯೇ ಮಸಾಲೆಯುಕ್ತ ಸ್ನ್ಯಾಕ್ ಸೇವಿಸುವ ಆಸೆಯಾಗುತ್ತದೆ. ದೇಹತೂಕ ಕೇಳ್ಬೇಕಲ್ಲ. ಆದ್ರೆ ಚಳಿಗಾಲದಲ್ಲಿ ಈ ಸ್ನ್ಯಾಕ್ಸ್ ತಿಂದ್ರೆ ಖಂಡಿತ ನಿಮ್ಮ ತೂಕ ಹೆಚ್ಚಲ್ಲ. ಬಾಯಿ ಚಪಲವೂ ತಣಿಯುತ್ತದೆ.

ಚಳಿಗಾಲದಲ್ಲಿ ವಾತಾವರಣ ಶೀತಗಾಳಿಯಿಂದ ಕೂಡಿರೋದ್ರಿಂದ ನಾವು ಸೋಮಾರಿಗಳಾಗಿ ಬಿಡುತ್ತೇವೆ. ಬೆಳಗ್ಗೆ ಹಾಸಿಗೆಯಿಂದ ಕಾಲು ಕೆಳಗೆ ಇಡಲು ಮನಸ್ಸಾಗದ ಕಾರಣ ವಾಕಿಂಗ್, ವ್ಯಾಯಾಮಗಳನ್ನೆಲ್ಲ ಬಿಟ್ಟು ಬಿಡುತ್ತೇವೆ. ಅಲ್ಲದೇ ಚಳಿಗಾಲದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಮಾಡಲು ಹಿತ ಎನಿಸುತ್ತದೆ. ಇವೆಲ್ಲವೂ ನಿಮ್ಮ ತೂಕ ಏರಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆ ಕಡಿಮೆ ಮಾಡುವುದು ಹಾಗೂ ಅತಿಯಾದ ಮಸಾಲೆಯುಕ್ತ ಆಹಾರ ಸೇವನೆಯಿಂದಾಗಿ ನಮಗೆ ಗೊತ್ತಿಲ್ಲದಂತೆ ತೂಕ ಏರಿಕೆ ಆಗುತ್ತಲೇ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಬಾಯಿ ರುಚಿಗೂ ಹಿತ ಎನಿಸುವ ಹಾಗೂ ಕ್ಯಾಲರಿ ಅಂಶ ಕಡಿಮೆಯುಳ್ಳ ಕೆಲವು ತಿಂಡಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: Winter Health: ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಶೀತಜ್ವರ; ಚಳಿಗಾಲದಲ್ಲಿ ಆರೋಗ್ಯದ ನಿರ್ಲಕ್ಷ್ಯ ಸಲ್ಲ
ಹುರಿದ ಕಡಲೆ: ಕಡಲೆಕಾಯಿಗಳಲ್ಲಿ ನಾರಿನಾಂಶ ಹಾಗೂ ಪ್ರೊಟೀನ್ ಅಂಶ ಸಮೃದ್ಧವಾಗಿ ಇರುತ್ತದೆ. ಅಲ್ಲದೇ ಕಡಲೆಕಾಯಿಗಳು ನಿಮಗೆ ಬೇಗನೆ ಹೊಟ್ಟೆ ತುಂಬಿದಂತಹ ಅನುಭವವನ್ನು ನೀಡುತ್ತವೆ. ಹೀಗಾಗಿ ಕಡಲೆಕಾಯಿಯನ್ನು ಹುರಿದುಕೊಂಡು ಬಳಕೆ ಇದಕ್ಕೆ ಆಲಿವ್ ಎಣ್ಣೆ, ಮೆಣಸು, ಜೀರಿಗೆಯಂತಹ ಪದಾರ್ಥಗಳಿಂದ ಒಗ್ಗರಣೆ ಕೊಟ್ಟು ಸೇವಿಸಬಹುದಾಗಿದೆ.
ತರಕಾರಿ ಸೂಪ್: ಚಳಿಗಾಲದಲ್ಲಿ ತೂಕನಷ್ಟ ಮಾಡಿಕೊಳ್ಳಲು ಬೆಚ್ಚಗಿನ ತರಕಾರಿ ಸೂಪ್ಗಳು ಉತ್ತಮ ಆಯ್ಕೆ. ಕ್ಯಾರೆಟ್, ಗೆಡ್ಡೆಕೋಸು, ಮೆಣಸು, ಪಾಲಾಕ್ ಸೊಪ್ಪು ಸೇರಿದಂತೆ ವಿವಿಧ ತರಕಾರಿಗಳನ್ನು ಬಳಸಿ ಸೂಪ್ ತಯಾರಿಸಿಕೊಳ್ಳಬಹುದು. ಇವುಗಳು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ನಿಮ್ಮ ತೂಕನಷ್ಟದ ಪಯಣಕ್ಕೆ ಸಾಥ್ ನೀಡಲಿವೆ.
ಸೇಬು ಹಣ್ಣನ್ನು ಈ ರೀತಿ ತಿನ್ನಬಹುದು: ಸೇಬುಹಣ್ಣು ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಖಾಲಿ ಹಣ್ಣು ಸೇವನೆ ನಿಮಗೆ ಬೇಸರ ಮೂಡಿಸಿದ್ದರೆ ನೀವು ಸೇಬು ಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿ ಅವುಗಳನ್ನು ಸ್ವಲ್ಪ ಹೊತ್ತು ಒಲೆಯಲ್ಲಿ ಬೇಯಿಸಿಕೊಂಡು ಬಳಿಕ ಇದಕ್ಕೆ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಇವುಗಳಲ್ಲಿ ಹೆಚ್ಚಿನ ನಾರಿನಾಂಶ ಹಾಗೂ ಕಡಿಮೆ ಕ್ಯಾಲೋರಿ ಇರುತ್ತದೆ. ದಾಲ್ಚಿನ್ನಿ ಒಳ್ಳೆಯ ಪರಿಮಳವನ್ನು ನೀಡುತ್ತದೆ ಹಾಗೂ ಸೇಬು ಹಣ್ಣಿನಲ್ಲಿರುವ ಸಿಹಿ ಅಂಶದಿಂದಾಗಿ ನೀವು ಸಕ್ಕರೆ ಸೇವನೆ ಮಾಡಬೇಕೆಂದು ಇರುವುದಿಲ್ಲ. ಹೀಗಾಗಿ ಇದು ಕೂಡ ಉತ್ತಮ ಆರೋಗ್ಯದಾಯಕ ತಿನಿಸಾಗಿದೆ.
ಹುರಿದ ಮಖಾನಾ: ಮಖಾನಾದ ಬಗ್ಗೆ ನೀವು ಕೇಳಿದ್ದಿರಬಹುದು. ಆರೋಗ್ಯದ ದೃಷ್ಟಿಯಿಂದ ಇದು ಕೂಡ ಉತ್ತಮ ಆಯ್ಕೆಯಾಗಿದೆ. ಹುರಿದ ಮಖಾನಾಗಳು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಇವುಗಳಲ್ಲಿ ಪ್ರೋಟಿನ್ ಹಾಗೂ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ತೂಕ ನಷ್ಟ ಮಾಡಬೇಕು ಎಂದುಕೊಂಡವರು ಮಖಾನಾ ಬೀಜವನ್ನು ಹುರಿದು ಸೇವನೆ ಮಾಡಿ.
ಡಾರ್ಕ್ ಚಾಕಲೇಟ್: ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ ನೀವು 70 ಪ್ರತಿಶತಕ್ಕೂ ಅಧಿಕ ಚಾಕಲೇಟ್ ಅಂಶವನ್ನು ಹೊಂದಿರುವ ಚಾಕಲೇಟ್ಗಳನ್ನೇ ಸೇವಿಸಬೇಕು. ಇದು ನಿಮಗೆ ಚಾಕಲೇಟ್ ತಿನ್ನಬೇಕೆಂಬ ಬಯಕೆಯನ್ನು ಕಡಿಮೆ ಮಾಡುವುದರ ಜೊತೆಯಲ್ಲಿ ತೂಕ ಇಳಿಕೆಗೂ ಸಹಾಯ ಮಾಡುತ್ತವೆ.
ತೂಕ ನಷ್ಟಕ್ಕೆ ಲಘು ಆಹಾರ ಸೇವನೆ ಹಾಗೂ ಆಹಾರದಲ್ಲಿ ನಿಯಂತ್ರಣ ಮಾಡುವುದೇ ಮುಖ್ಯ. ನೀವು ಎಷ್ಟು ಸೇವಿಸುತ್ತೀರಿ ಹಾಗೂ ಏನನ್ನೂ ಸೇವಿಸುತ್ತೀರಿ ಎನ್ನುವುದು ನಿಮ್ಮ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರ ಸೇವನೆಯಿಂದ ಯಾವುದೇ ನಷ್ಟವಿಲ್ಲ. ಪ್ರೊಟೀನ್ ಹಾಗೂ ನಾರಿನಾಂಶ ಸಮೃದ್ಧ ಆಹಾರ ಮತ್ತು ಸೂಕ್ತವಾದ ದೈಹಿಕ ಚಟುವಟಿಕೆಯು ಚಳಿಗಾಲದಲ್ಲಿಯೂ ನಿಮ್ಮ ತೂಕ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ.
